ದಾವಣಗೆರೆ: ಕೋಮು ಸಾಮರಸ್ಯ, ಸೌಹಾರ್ದತೆ, ಏಕತೆ, ಸಮಾನತೆ, ಭ್ರಾತೃತ್ವದ ಬಗ್ಗೆ ಅರಿವು ಮೂಡಿಸಲು ಸಮಾನ ಮನಸ್ಕರು ಸೇರಿಕೊಂಡು ಜಿಲ್ಲಾದ್ಯಂತ ಸಂವಿಧಾನ ಶಿಲ್ಪಿ ಡಾ| ಬಿ.ಆರ್. ಅಂಬೇಡ್ಕರ್ ಜನ್ಮದಿನವಾದ ಏ. 14ರಿಂದ “ನಮ್ಮ ನಡೆ ಸಾಮರಸ್ಯದ ಕಡೆ’’ ಜನ ಜಾಗೃತಿ ಜಾಥಾ ನಡೆಸಲಿದ್ದೇವೆ ಎಂದು ನ್ಯಾಯವಾದಿ ಅನೀಷ್ ಪಾಷಾ ತಿಳಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವಣ್ಣ, ಶಿಶುನಾಳ ಷರೀಫ, ಕನಕದಾಸ, ಕುವೆಂಪು ಜನಿಸಿದ ನಾಡಿನಲ್ಲಿಂದು ಯುವಜನರು ಸಾಮಾಜಿಕ ಜಾಲತಾಣಗಳಲ್ಲಿ ಬಂದ ವಿಷಯಗಳನ್ನು ಪರಾಮರ್ಶಿಸದೆ ಒಪ್ಪಿಕೊಂಡು ತಪ್ಪು ನಿರ್ಧಾರ ಕೈಗೊಳ್ಳುತ್ತಿದ್ದಾರೆ. ಇದರಿಂದ ಕೋಮು ಸೌಹಾರ್ದತೆಗೆ ಧಕ್ಕೆಯಾಗುತ್ತಿದೆ. ಕುವೆಂಪು ಹೇಳಿದಂತೆ ಸರ್ವ ಜನಾಂಗದ ಶಾಂತಿಯ ತೋಟದಲ್ಲಿ ಅಶಾಂತಿಗೆ ಆಸ್ಪದ ನೀಡಬಾರದು ಎಂದು ಜಾಗೃತಿ ಮೂಡಿಸಲು ಜಾಥಾ ಹಮ್ಮಿಕೊಳ್ಳಲಾಗಿದೆ ಎಂದರು.
ಏ. 14ರಂದು ಬೆಳಿಗ್ಗೆ 11 ಗಂಟೆಗೆ ನಗರದ ಅಂಬೇಡ್ಕರ್ ವೃತ್ತದಿಂದ ಆರಂಭವಾಗುವ ಜಾಥಾ ಅಣಜಿ, ಬಿಳಿಚೋಡು ಬಳಿಕ ಜಗಳೂರು ತಲುಪಲಿದೆ. ಏ. 15ರಂದು ಛಲವಾದಿ ಗುರುಪೀಠದ ಶ್ರೀ ಬಸವನಾಗಿದೇವ ಸ್ವಾಮೀಜಿ, ಮುಸ್ಲಿಂ ಮತ್ತು ಕ್ರೈಸ್ತ ಧರ್ಮಗುರುಗಳ ನೇತೃತ್ವದಲ್ಲಿ ಆನಗೋಡು, ಮಾಯಕೊಂಡ, ಸಂತೇಬೆನ್ನೂರು ಮೂಲಕ ಚನ್ನಗಿರಿ ತಲುಪಲಿದ್ದು, ರಾತ್ರಿ ಪಾಂಡೋಮಟ್ಟಿ ಮಠದಲ್ಲಿ ವಾಸ್ತವ್ಯ ಮಾಡಲಿದೆ. ಏ. 16ರಂದು ಪಾಂಡೋಮಟ್ಟಿ ವಿರಕ್ತಮಠದ ಶ್ರೀ ಗುರುಬಸವ ಸ್ವಾಮೀಜಿಯವರೊಂದಿಗೆ ಜಾಥಾ ನಲ್ಲೂರು, ಕೆರೆಬಿಳಚಿ, ಬಸವಪಟ್ಟಣ, ಸಾಸ್ವೆಹಳ್ಳಿ ಮೂಲಕ ಹೊನ್ನಾಳಿ ತಲುಪಲಿದೆ. ಏ.17ರಂದು ಹೊನ್ನಾಳಿ ಹಿರೇಕಲ್ಮಠದ ಸ್ವಾಮೀಜಿ ಸಮ್ಮುಖದಲ್ಲಿ ಹೊರಡುವ ಜಾಥಾ ಮಲೇಬೆನ್ನೂರು ಮೂಲಕ ಹರಿಹರ ತಲುಪಲಿದೆ. ಅಂದು ಗಾಂಧಿ ಮೈದಾನದಲ್ಲಿ ಬೃಹತ್ ಮಾನವ ಸರಪಳಿ ರಚಿಸಿ ಜಾಥಾದ ಸಮಾರೋಪ ಸಮಾರಂಭ ನಡೆಸಲಾಗುವುದು. ಈ ಕಾರ್ಯಕ್ರಮದಲ್ಲಿ ಮೈಸೂರಿನ ಉರಿಲಿಂಗಪೆದ್ದಿ ಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಭಾಗವಹಿಸಲಿದ್ದಾರೆ. ಜಾಥಾ ಸಂದರ್ಭದಲ್ಲಿ ಮಠ, ಮಸೀದಿ, ಚರ್ಚ್‌ಗಳಿಗೆ ಭೇಟಿ ನೀಡಲುದ್ದು, ಎಲ್ಲ ಧರ್ಮಗಳ ಧರ್ಮಗುರುಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ವಿವಿಧ ಸಂಘಟನೆಗಳ ಮುಖಂಡರಾದ ಎಚ್. ಮಲ್ಲೇಶಿ, ಮಾಲತೇಶ್ ಟಿ.ಜಿ., ವೆಂಕಟೇಶ್‌ಬಾಬು, ರಾಜು ಎನ್. ಎಚ್., ಮಲ್ಲಪ್ಪ, ರಾಜಶೇಖರ್, ಚನ್ನಬಸಪ್ಪ, ಮುಸ್ತಾಪ್ ಇತರರು ಸುದ್ದಿಗೋಷ್ಠಿಯಲ್ಲಿದ್ದರು.