ಕೋಲಾರ: ತಾಲೂಕಿನ ಕುರುಬರಹಳ್ಳಿ ಗ್ರಾಮದಲ್ಲಿ ಜನತೆ ಸಾಮೂಹಿಕವಾಗಿ ವರ್ತೂರು ಪ್ರಕಾಶ್‌ರನ್ನು ಕರೆಸಿ ಸನ್ಮಾನಿಸಿ, ನಮ್ಮ ಗ್ರಾಮದ ಒಂದು ಮತವೂ ಮಾಜಿ ಸಿಎಂ ಸಿದ್ದರಾಮಯ್ಯರಿಗೆ ಹಾಕುವುದಿಲ್ಲ ಎಂದು ಬಹಿರಂಗವಾಗಿ ಘೋಷಿಸುವ ಮೂಲಕ ಕಾಂಗ್ರೆಸ್‌ಗೆ ತಿರುಗೇಟು ನೀಡಿದ್ದಾರೆ.
ಇತ್ತೀಚೆಗಷ್ಟೇ ತಮ್ಮದೇ ಸಮುದಾಯ ಹೆಚ್ಚಿರುವ ಕುರುಬರಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಹೋಗಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಾವು ಮತ ಹಾಕಲ್ಲ, ನಮ್ಮ ನಾಯಕ ವರ್ತೂರು ಪ್ರಕಾಶ್ ಎಂದು ಹೇಳುವ ಮೂಲಕ ಗ್ರಾಮಸ್ಥರು ನಮ್ಮೂರಿನ ಪ್ರತಿಮತವೂ ವರ್ತೂರ್ ಗೆ ಎಂದು ಘೋಷಣೆ ಮಾಡಿದರು. ಕೋಲಾರಕ್ಕೆ 3-4 ಬಾರಿ ಬಂದು ಇಲ್ಲಿ ತಮ್ಮ ಪರವಾದ ಹವಾ ಇದೆ ಎಂದು ಬಹಿರಂಗ ಭಾಷಣ ಮಾಡಿ ಹೋಗಿದ್ದ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡುವಂತೆ ಮಾಡಿರುವ ವರ್ತೂರು ಪ್ರಕಾಶ್, ಕ್ಷೇತ್ರಕ್ಕೆ ಬಂದರೆ ಸೋಲು ಖಚಿತ ಎಂಬ ಸಂದೇಶ ರವಾನಿಸಿದಂತಾಗಿದೆ. ಈ ವೇಳೆ ಮಾತನಾಡಿದ ಗ್ರಾಮಸ್ಥರು, ನಮ್ಮ ಗ್ರಾಮದಿಂದ ಒಂದು ಮತವನ್ನೂ ಸಿದ್ದರಾಮಯ್ಯನವರಿಗೆ ಹಾಕುವುದಿಲ್ಲ. ಸತತ 15 ವರ್ಷಗಳಿಂದ ವರ್ತೂರ್ ಪ್ರಕಾಶ್ ರವರೇ ನಮಗೆ ದೇವರು ನಮ್ಮ ಕಷ್ಟ ಸುಖಗಳಲ್ಲಿ ಭಾಗಿಯಾಗಿ ಸದಾ ನಮ್ಮೊಂದಿಗಿದ್ದಾರೆ. ಇಂಥ ಅಭಿವೃದ್ಧಿಗೆ ಶ್ರಮಿಸಿರುವ ನಾಯಕನನ್ನು ಕಳೆದುಕೊಳ್ಳುವುದಕ್ಕೆ ನಾವು ಒಪ್ಪಿಕೊಳ್ಳುವುದಿಲ್ಲ ಎಂದು ಸಾರಿದರು.
ಈ ವೇಳೆ ಮಾತನಾಡಿದ ವರ್ತೂರ್ ಪ್ರಕಾಶ್, ನಾನು 10 ವರ್ಷ ಶಾಸಕನಾಗಿದ್ದ ವೇಳೆ ಕೋಲಾರ ವಿಧಾನಸಭಾ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾರ್ಪಾಡು ಮಾಡಿದ್ದೆ. ಕ್ಷೇತ್ರದ ಪ್ರತಿ ಗ್ರಾಮದಲ್ಲೂ ಸಿಸಿ ರಸ್ತೆಗಳು ಕೊಳವೆ ಬಾವಿಗಳು ಶುದ್ಧ ಕುಡಿವ ನೀರಿನ ಘಟಕಗಳು ಅನೇಕ ಬಡ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಆರ್ಥಿಕ ಸಹಾಯ ಮಾಡಿದ್ದೇನೆ. ಕ್ಷೇತ್ರದಲ್ಲಿ 24 ಗಂಟೆ ಕಾರ್ಯ ನಿರ್ವಹಿಸುತ್ತಿದ್ದೇನೆ. ಕ್ಷೇತ್ರದ ಜನತೆಗೆ ಸದಾ ಕೈಗೆ ಸಿಗುತ್ತಿದ್ದೇನೆ ಯಾರೇ ಕಷ್ಟ ಎಂದು ಬಂದರೂ ನನಗೆ ಅಧಿಕಾರ ಇಲ್ಲದಿದ್ದರೂ ಸಹ ಸ್ಪಂದಿಸಿದ್ದೇನೆ ಎಂದರು.
ಸಿದ್ದರಾಮಯ್ಯನವರು ಬಂದರೂ ಅವರಿಗೆ ಬೆಂಬಲ ಕೊಡುವುದಿಲ್ಲ, ನನಗೆ ಬೆಂಬಲ ಕೊಡುತ್ತೇನೆ ಎಂದು ಹೇಳುತ್ತಿರುವುದು ಸಂತಸ ತಂದಿದೆ. ನಿಮ್ಮ ಈ ಅಭಿಮಾನಕ್ಕೆ ಈ ನಂಬಿಕೆಗೆ ಎಂದು ದ್ರೋಹ ಬಗೆಯಲಾರೆ ಕುರುಬರಹಳ್ಳಿ ಗ್ರಾಮದ ಸಿಸಿ ರಸ್ತೆ ಶುದ್ಧ ಕುಡಿವ ನೀರಿನ ಘಟಕ ಬೀದಿ ದೀಪಗಳ ವ್ಯವಸ್ಥೆ ಸ್ಮಶಾನಕ್ಕೆ ಹೋಗುವ ರಸ್ತೆಯನ್ನು ಆದಷ್ಟು ಬೇಗ ನಿರ್ಮಾಣ ಮಾಡಿಸುತ್ತೇನೆ ಎಂದರು.
ಬೆಗ್ಲಿ ಸೂರ್ಯ ಪ್ರಕಾಶ್, ಜಿಪಂ ಮಾಜಿ ಅಧ್ಯಕ್ಷ ಸಿ.ಎಸ್.ವೆಂಕಟೇಶ್, ಮಾಜಿ ಸದಸ್ಯ ಅರುಣ್ ಪ್ರಸಾದ್, ಬಿಜೆಪಿ ತಾಲೂಕು ಅಧ್ಯಕ್ಷ ಸಿ.ಡಿ.ರಾಮಚಂದ್ರಗೌಡ, ಪೊಲೀಸ್ ಚಲಪತಿ, ಸೂಲೂರು ಆಂಜಿನಪ್ಪ, ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ನವೀನ್ ಕುಮಾರ್, ಕುರುಬರಹಳ್ಳಿ ಗ್ರಾಮದ ಮುಖಂಡ ಮುರಳಿ, ವಿಜಯ್‌ಕುಮಾರ್, ನಾಗೇಂದ್ರ, ಕೆ.ಎಸ್.ಮಂಜುನಾಥ್, ಸುಬ್ರಮಣಿ, ಮೇಸ್ತ್ರಿ ಕುಮಾರ್, ರಾಮ್ ಮೂರ್ತಿ, ನಟರಾಜು, ಆಟೋ ಸುಬ್ಬಣ್ಣ, ಶ್ರೀಕಾಂತ್, ಕೆ.ಸಿ.ಮಂಜುನಾಥ್, ಗಂಗಾಧರ್, ಕಿರಣ್, ವಿನೋದ್, ಆಟೋ ನಟರಾಜ್, ಕೆ.ಆರ್.ಸತೀಶ್, ನಾರಾಯಣಮೂರ್ತಿ, ರಾಜಕಲ್ಲಳ್ಳಿ ನಿವೃತ್ತ ಶಿಕ್ಷಕ ಶಿವಾರೆಡ್ಡಿ ಉಪಸ್ಥಿತರಿದ್ದರು.