ಇದು ನಮ್ಮೂರಿನ ಸರಕಾರಿ ಬಾವಿಕಟ್ಟೆ. ಮುಂಜಾನೆಯಿಂದ ಮಂಕಾಗಿರುವ ಈ ಬಾವಿಕಟ್ಟೆಗೆ ಕಳೆ ಬರುವುದೇ ಮುಸ್ಸಂಜೆ ಆರರ ಹೊತ್ತು. ಮುಂಜಾನೆಯಿಂದ ಹಿಡಿದು ಮಟಮಟ ಮಧ್ಯಾಹ್ನದವರೆಗೂ ಅಲ್ಲಿಗೆ ಯಾರೂ ಸುಳಿಯದಿದ್ದರೂ ರವಿಯು ಆಗಸದಿಂದ ಜಾರಿ, ಚಿಲಿಪಿಲಿ ಹಕ್ಕಿಗಳು ತಮ್ಮ ಗೂಡನ್ನು ಸೇರುವ ಹೊತ್ತಿನಲ್ಲಿ ಅಲ್ಲಿಗೆ ಒಂದಿಷ್ಟು ಮಂದಿಯಾದರೂ ಬಂದು ಸೇರುತ್ತಾರೆ. ಹಾಗಂತ ನಮ್ಮದು ಪಕ್ಕಾ ಹಳ್ಳಿಯೇನೂ ಅಲ್ಲ. ಆದರೆ, ಹಳ್ಳಿಯ ವಾತಾವರಣದಂತಹ ಬಾವಿಕಟ್ಟೆಯಿರುವುದು ಒಂದು ವಿಶೇಷ.
ಮೊದಲೆಲ್ಲ ಹರಟೆ ಹೊಡೆಯಲು, ಸ್ನಾನ ಮಾಡಲು, ಬಟ್ಟೆ ತೊಳೆಯಲು, ದಿನನಿತ್ಯದ ಕೆಲಸಕ್ಕೆ ನೀರನ್ನು ಉಪಯೋಗಿಸಲು ಊರಜನ ಆ ಬಾವಿಕಟ್ಟೆಗೆ ಬಂದೇ ಬರುತ್ತಿದ್ದರು. ಆದರೆ, ಈಗ ಪ್ರತಿಯೊಂದು ಮನೆಯಲ್ಲಿ ಬಾವಿ, ನಳ್ಳಿಯ ವ್ಯವಸ್ಥೆಯಿರುವುದರಿಂದ ಊರಿನಲ್ಲಿರುವ ಸರ್ಕಾರಿ ಬಾವಿಕಟ್ಟೆಗೆ ತಲೆ ಹಾಕೋದೆ ಕಡಿಮೆಯಾಗಿದೆ.
ಹಿಂದೆ “ಬಾವಿಕಟ್ಟೆ’ ಎಂದರೆ ಹರಟೆ ಹೊಡೆಯಲು ಸೂಕ್ತವಾದ ಜಾಗ. ಅದೊಂದು ಎಲ್ಲರನ್ನೂ ಸೇರಿಸುವ ಒಂದು ಸ್ಥಳ. ಊರಿನ ಸುದ್ದಿ, ಪರವೂರಿನ ಸುದ್ದಿ, ಪ್ರತಿಯೊಂದು ಮನೆಮನೆಯ ಸುದ್ದಿ ಎಲ್ಲವೂ ಅಲ್ಲಿ ಬಿತ್ತರವಾಗುತ್ತದೆ. ಪ್ರತಿ ಮನೆಯ ಮಹಿಳೆಯರೂ ಸಂಜೆಯ ಹೊತ್ತಿಗೆ ನೀರಿಗೆ ಅಲ್ಲಿಗೆ ಹೋಗಿ ತಮ್ಮ ಕಷ್ಟಸುಖವನ್ನು ಅಲ್ಲೇ ಹಂಚಿಕೊಳ್ಳುತ್ತಿದ್ದರು. ಊರಿನಲ್ಲಿ ಏನೇ ನಡೆದರೂ ಆ ವಿಚಾರ ಎಲ್ಲ ಮನೆ ಮನೆಗೂ ಗೊತ್ತಾಗುತ್ತಿದ್ದದ್ದು ಈ ಬಾವಿಕಟ್ಟೆಯ ಪಕ್ಕ ನಡೆಯುವ ಮಾತುಕತೆಯಿಂದಲೇ.
ಆದರೆ, ಈಗ ಹಾಗಲ್ಲ. ಮನೆಯ ಮಹಿಳೆಯರು ಹೊರಗಡೆ ಬಾವಿನೀರು ತರಲು ಹೋಗುವುದಿಲ್ಲ. ಮನೆಯೊಳಗೇ ನಳ್ಳಿ ತಿರುಗಿಸಿದರೆ ನೀರು ಬರುತ್ತದೆ. ಹೊರಗಡೆ ಹೋಗಬೇಕಾಗಿಲ್ಲ. ನ್ಯೂಸ್‌ಪೇಪರ್, ಟಿವಿ, ಮೊಬೈಲ್ ಮೂಲಕ ಪ್ರಪಂಚದಾದ್ಯಂತ ಎಲ್ಲಾ ಆಗುಹೋಗುಗಳ ವಿಚಾರ ತಿಳಿಯುತ್ತದೆ. ಸಂಜೆಯ ಹೊತ್ತಿಗೆ ಬಾವಿಕಟ್ಟೆಯ ಬಳಿ ಸೇರುತ್ತಿದ್ದ ಮಹಿಳೆಯರು ಈಗ ಟಿವಿಯೆದುರು ಕುಳಿತುಕೊಳ್ಳುತ್ತಾರೆ.
ಬಾವಿಕಟ್ಟೆಯ ಬಳಿ ಅನಾವರಣಗೊಳ್ಳುತ್ತಿದ್ದ ಬೇರೆ ಬೇರೆ ವಿಷಯಗಳು ಈಗ ಇಲ್ಲವೆಂದೇ ಹೇಳಬಹುದು. ಒಂದೇ ಮನಸ್ಸಿನ ಹತ್ತುಮುಖಗಳ ಮಾತುಗಳಿಗೆ ಅಲ್ಲಿ ಆಸ್ಪದವಿತ್ತು. ಪರಸ್ಪರ ಒಬ್ಬರ ತೊಂದರೆಯನ್ನು ಇನ್ನೊಬ್ಬರ ಹತ್ತಿರ ಹೇಳಿಕೊಂಡು ಮನಸ್ಸು ಹಗುರವಾಗುತ್ತಿದ್ದುದು, ಒಬ್ಬರ ಸಂತೋಷದಲ್ಲಿ ಮತ್ತೂಬ್ಬರು ಸಂತೋಷ ಪಡುತ್ತಿದ್ದುದು, ಒಂದು ವಿಷಯದಲ್ಲಿ ಆರಂಭವಾದ ಮಾತು ಇನ್ಯಾವುದೋ ವಿಷಯದಲ್ಲಿ ಮುಕ್ತಾಯಗೊಂಡು ತಮ್ಮ ಸಮಯವನ್ನು ಕಳೆಯಲು ನೆರವಾಗುತ್ತಿದ್ದುದು ಬಾವಿಕಟ್ಟೆ ಎಂದರೆ ಸುಳ್ಳಲ್ಲ.
ನೀತಾ ರವೀಂದ್ರ
ಪ್ರಥಮ ಪತ್ರಿಕೋದ್ಯಮ, ವಿವೇಕಾನಂದ ಕಾಲೇಜು, ಪುತ್ತೂರು