Advertisement

ನಮ್ಮ ಗ್ರಾಮ ನಮ್ಮೆಲ್ಲರ ಹೆಮ್ಮೆ

01:20 AM Jan 13, 2021 | Team Udayavani |

ಗ್ರಾಮ ಪಂಚಾಯತ್‌ ಚುನಾವಣೆಗಳು ಮುಗಿದು ಶೀಘ್ರದಲ್ಲಿಯೇ ಹೊಸ ಆಡಳಿತ ಕಾರ್ಯಾರಂಭಿಸಲಿದೆ. ಇನ್ನೇನಿದ್ದರೂ ಚರ್ಚೆಯಾಗಬೇಕಿರುವುದು ಗ್ರಾಮಗಳ ಅಭಿವೃದ್ಧಿ. ಗ್ರಾಮದವರಿಂದಲೇ ಗ್ರಾಮದ ಸುಧಾರಣೆ.

Advertisement

ಒಂದರ್ಥದಲ್ಲಿ ಇದು ಗ್ರಾಮ ಸರಕಾರ. ಇಲ್ಲಿ ಪಕ್ಷದ ಧ್ವಜ ಅಥವಾ ಲಾಂಛನವಿಲ್ಲದಿದ್ದರೂ ಹೆಚ್ಚಿನ ಅಭ್ಯರ್ಥಿಗಳು ಯಾವುದಾದರೂ ರಾಷ್ಟ್ರೀಯ ಪಕ್ಷದ ಬೆಂಬಲಿತರಾಗಿರುತ್ತಾರೆ. ಗ್ರಾಮ ಪಂಚಾಯತ್‌ನಲ್ಲೂ ವಿಪಕ್ಷವಿರುತ್ತದೆ. ಹೀಗೆ ಗ್ರಾಮ ಪಂಚಾಯತ್‌ ಒಂದು ಮಿನಿ ಸಂಸತ್‌ ಎನ್ನಲಡ್ಡಿಯಿಲ್ಲ. ಕೇಂದ್ರ ಸರಕಾರದಿಂದ ಪ್ರತಿಯೊಂದೂ ಪಂಚಾಯತ್‌ಗೆ 7-9 ಕೋ.ರೂ. ಮೀಸಲಿಡಲಾಗಿದೆ. ಈ ಹಣವನ್ನು ಗ್ರಾಮದ ಅಭಿವೃದ್ಧಿ ಗಾಗಿ ವಿನಿಯೋಗಿಸುವಂಥ  ಯೋಜನೆಗಳನ್ನು ಚುನಾಯಿತ ಸದಸ್ಯರು ರೂಪಿಸಿ ಅಗತ್ಯ ಅನುದಾನವನ್ನು ಕೇಂದ್ರದಿಂದ ಮಂಜೂರು ಮಾಡಿಸಿಕೊಳ್ಳಬೇಕಾಗುತ್ತದೆ. ಈ ಹಣದ ಜತೆಗೆ ಗ್ರಾಮಗಳಲ್ಲೇ ವಸೂಲಿ ಮಾಡಲಾದ ಮನೆತೆರಿಗೆ ಹಾಗೂ ಇತರ ತೆರಿಗೆಗಳ ಆದಾಯವೂ ಇರುತ್ತದೆ. ಈ ಹಣವನ್ನು ಸದ್ಬಳಕೆ ಮಾಡಿದಲ್ಲಿ ಗ್ರಾಮಗಳ ಸುಧಾರಣೆ ಕಷ್ಟವಲ್ಲ.

ಸ್ವಚ್ಛತೆ, ಸ್ವಾಸ್ಥ್ಯಕ್ಕೆ ಇರಲಿ ಆದ್ಯತೆ: ಮಾದರಿ ಗ್ರಾಮದ ನಿರ್ಮಾಣಕ್ಕಾಗಿ ಮೊದಲ ಆದ್ಯತೆ ಸ್ವತ್ಛತೆ ಮತ್ತು ಸ್ವಾಸ್ಥಕ್ಕೆ ಕೊಡಬೇಕು. ಗ್ರಾಮ ಸ್ವಚ್ಛವಾದರೆ ದೇಶ ಸ್ವಚ್ಛವಾಗುತ್ತದೆ. ಹಾಗೆಯೇ ಗ್ರಾಮದ ಜನರ ಆರೋಗ್ಯ ಸುಧಾರಿಸಿದರೆ ದೇಶ ಸ್ವಸ್ಥವಾಗುತ್ತದೆ. ಪ್ರತೀ ಗ್ರಾಮದಲ್ಲಿನ ಜನರಿಗೆ ತ್ಯಾಜ್ಯ ವಿಲೇವಾರಿಯ ಬಗ್ಗೆ ಮಾಹಿತಿ ಕಾರ್ಯಾಗಾರ ಹಮ್ಮಿಕೊಳ್ಳ ಬೇಕು. ಇದರಲ್ಲಿ ಕಾಗದ, ಪ್ಲಾಸ್ಟಿಕ್‌, ಕಬ್ಬಿಣ, ಬಲ್ಬ್ ಇತ್ಯಾದಿ ಗಳನ್ನು ಬೇರ್ಪಡಿಸಿ ಬೇರೆಬೇರೆ ಕಡೆ ವಿಸರ್ಜಿಸುವ ತರಬೇತಿ ಅಥವಾ ಮಾಹಿತಿಯನ್ನು ಕೊಡಬೇಕು. ಇದಕ್ಕಾಗಿ ಹತ್ತು ಮನೆಗಳಿಗೊಬ್ಬರಂತೆ ಸ್ವಯಂಸೇವಕರನ್ನು ಅಥವಾ ಅವರ ಮೂಲ ಪಕ್ಷದ ಕಾರ್ಯಕರ್ತರನ್ನು ನಿಯೋಜಿಸಬೇಕು. ಪ್ರತೀ ಹತ್ತು ಮನೆಗಳಿಗೊಂದರಂತೆ ಮನೆಗಳಿಗೆ ಹತ್ತಿರವಿರುವಂತೆ ಮೂರು ಬಣ್ಣದ ತೊಟ್ಟಿಗಳನ್ನು ಇರಿಸಬೇಕು. ಈ ತೊಟ್ಟಿಗಳ ಬಣ್ಣದಿಂದಲೇ ಯಾವ ಕಸ ಯಾವ ತೊಟ್ಟಿಗೆ ಎಂದು ಅವಿದ್ಯಾವಂತರಿಗೂ ತಿಳಿಯುತ್ತದೆ. ವಾರಕ್ಕೊಮ್ಮೆ ಈ ತೊಟ್ಟಿ ಗಳನ್ನು ಖಾಲಿ ಮಾಡಿ ವಿಲೇವಾರಿ ಮಾಡುವ ಜವಾಬ್ದಾರಿ ಯನ್ನು ಪಂಚಾಯತ್‌ ವಹಿಸಿಕೊಳ್ಳಬೇಕು. ಊರಿನ ರಸ್ತೆ ಪಕ್ಕದಲ್ಲಿ ಹಾಗೂ ಬಸ್‌ ನಿಲ್ದಾಣಗಳಲ್ಲೂ ಕಸದ ತೊಟ್ಟಿಗಳನ್ನು ಇರಿಸಬೇಕು. ಒಮ್ಮೆ ಕಸವನ್ನು ತೊಟ್ಟಿಯ ಒಳಗೆ ಹಾಕಿ ಅಭ್ಯಾಸವಾದರೆ ಅನಂತರ ರಸ್ತೆಯಲ್ಲಿ, ಬಸ್‌ ನಿಲ್ದಾಣದಲ್ಲಿ, ತೋಡು, ಹೊಳೆಗಳಲ್ಲಿ ಕಸ ಎಸೆಯುವ ಜನರ ಅಭ್ಯಾಸ ನಿಲ್ಲುತ್ತದೆ. “ಸ್ವತ್ಛ ಗ್ರಾಮ -ಸ್ವತ್ಛ ಭಾರತ’ದ ಪರಿಕಲ್ಪನೆ ಸಾಕಾರ ವಾಗುತ್ತದೆ. ಈಗ ಜನರು ತ್ಯಾಜ್ಯಗಳನ್ನು ಹತ್ತಿರದ ತೋಡಿಗೋ ಹೊಳೆಗೋ ಸುರಿಯುತ್ತಾರೆ. ಮನೆಯ ಪಕ್ಕದಲ್ಲಿ ಇಲ್ಲದಿದ್ದರೆ ವಾಹನದಲ್ಲಿ ಹೋಗಿಯಾದರೂ ಹತ್ತಿರದ ಹೊಳೆಗೆ ಎಸೆಯು ತ್ತಾರೆ. ಇದೇ ಕಸ ದೊಡ್ಡ ನದಿಗಳಿಗೋ ಸಮುದ್ರಕ್ಕೋ ಸೇರು ತ್ತದೆ. ಗ್ರಾಮದ ಕಸ ಗ್ರಾಮದಲ್ಲೇ ವಿಲೇವಾರಿಯಾದರೆ ಗಂಗೆಯ ಶುದ್ಧೀಕರಣ, ಸಮುದ್ರ/ಬೀಚ್‌ ಸ್ವತ್ಛಗೊಳಿಸುವ ಅಗತ್ಯವೇ ಇಲ್ಲ. ತ್ಯಾಜ್ಯ ವಿಲೇವಾರಿ ಚೆನ್ನಾಗಿದ್ದರೆ ನೀರು ಶುದ್ಧವಾಗಿದ್ದು ಜನರ ಸ್ವಾಸ್ಥ್ಯವೂ ಚೆನ್ನಾಗಿರುತ್ತದೆಯಲ್ಲವೇ?

ಅಂತರ್ಜಲ ರಕ್ಷಣೆ: ಗ್ರಾಮದ ಆಡಳಿತ ಮಾಡಬೇಕಿರುವ ಇನ್ನೊಂದು ಪ್ರಮುಖ ಕೆಲಸವೆಂದರೆ ಅಂತರ್ಜಲದ ರಕ್ಷಣೆ. ಊರುಗಳಲ್ಲಿ ಭತ್ತ ಹಾಗೂ ಧಾನ್ಯಗಳನ್ನು ಬೆಳೆಸುತ್ತಿದ್ದ ಕಾಲದಲ್ಲಿ ಅಂತರ್ಜಲ ಉತ್ತಮ ಮಟ್ಟದಲ್ಲಿತ್ತು. ಕಾರ್ತಿ, ಸುಗ್ಗಿ ಹಾಗೂ ಕೆಲವೆಡೆ ಕೊಳಕೆ ಎಂಬ ಮೂರು ಬೆಳೆಗಳನ್ನು ಬೆಳೆಸುತ್ತಿದ್ದರು. ಇವುಗಳ ನಡುವೆ ಇತರ ಧಾನ್ಯ, ತರಕಾರಿಗಳನ್ನೂ ಬೆಳೆಸುತ್ತಿ ದ್ದರು. ಆ ಕಾಲದಲ್ಲಿ ಅಲ್ಲಲ್ಲಿ ಒಡ್ಡುಗಳನ್ನು ಕಟ್ಟಿ ನೀರಾವರಿ ವ್ಯವಸ್ಥೆಯನ್ನು ಊರ ಜನರೇ ಮಾಡಿಕೊಳ್ಳುತ್ತಿದ್ದರು. ಆ ಕಾಲದಲ್ಲಿ ವರ್ಷದ ಯಾವ ಕಾಲದಲ್ಲೂ ಕುಡಿಯುವ ನೀರಿನ ಕೊರತೆಯಿರಲಿಲ್ಲ. ಇತ್ತೀಚೆಗಿನ 2-3 ದಶಕಗಳ ಅವಧಿಯಲ್ಲಿ ಹೆಚ್ಚಿನವರು ಕೃಷಿ ಭೂಮಿಯನ್ನು ಹಡಿಲು ಬಿಟ್ಟಿದ್ದರಿಂದ ಕಟ್ಟಗಳನ್ನು ಕಟ್ಟುತ್ತಿಲ್ಲ. ಇದರಿಂದ ನೀರು ಹರಿದು ಸಮುದ್ರ ಸೇರುತ್ತಿದೆ. ಹೀಗಾಗಿ ಅಂತರ್ಜಲದ ಮಟ್ಟ ತೀರಾ ಕುಸಿದಿದೆ. ಈಗ ಮಾಡಬಹುದಾದ ಕೆಲಸವೆಂದರೆ ಗ್ರಾಮದ ಎಲ್ಲ ತೋಡುಗಳನ್ನು ಗ್ರಾಮಸ್ಥರ ಸಹಾಯದಿಂದ ಸ್ವತ್ಛಗೊಳಿಸಿ ಹೂಳೆತ್ತಿ ಅಲ್ಲಲ್ಲಿ ಕಟ್ಟಗಳ ನಿರ್ಮಾಣವಾಗಬೇಕು. ಗ್ರಾಮದ ನೀರನ್ನು ಗ್ರಾಮದಲ್ಲೇಇಂಗುವಂತೆ ಮಾಡಬೇಕು. ಇದರಿಂದ ಅಂತರ್ಜಲ ಹೆಚ್ಚುವುದಷ್ಟೇ ಅಲ್ಲದೆ ಬದಲಾಗಿ ಕೆಲವರಾದರೂ ಆಹಾರ ಧಾನ್ಯಗಳನ್ನು ಬೆಳೆದರೆ ಈ ವಿಚಾರದಲ್ಲಾದರೂ ಗ್ರಾಮಗಳು ಸ್ವಾವಲಂಬಿಯಾಗಲು ಸಾಧ್ಯವಾದೀತು. ಈ ನಿಟ್ಟಿನಲ್ಲಿ ಚುನಾಯಿತ ಅಭ್ಯರ್ಥಿಗಳು ಗ್ರಾಮದ ಜನರಲ್ಲಿ ಜಾಗೃತಿಯನ್ನು ಮೂಡಿಸಬೇಕು. ಈ ಎಲ್ಲ ವಿಚಾರಗಳಲ್ಲಿ ಗ್ರಾಮದ ಪ್ರತಿಯೋರ್ವನೂ ಗ್ರಾ.ಪಂ. ನೊಂದಿಗೆ ಕೈ ಜೋಡಿಸಿ ನಮ್ಮ ಗ್ರಾಮವನ್ನು ಮಾದರಿ ಗ್ರಾಮವಾಗಿಸೋಣವೇ? ನಮ್ಮ ಗ್ರಾಮ ನಮ್ಮ ಹೆಮ್ಮೆ!

ಸದಸ್ಯರು ಗ್ರಾಮಯಾತ್ರೆ ಕೈಗೊಳ್ಳಲಿ :

Advertisement

ಚುನಾಯಿತ ಅಭ್ಯರ್ಥಿಗಳು ಆಗೊಮ್ಮೆ ಈಗೊಮ್ಮೆ ಗ್ರಾಮಸಭೆಗಳನ್ನು ನಡೆಸುತ್ತಾರೆ. ಆದರೆ ಈ ಸಭೆಗಳಿಗೆ ಎಲ್ಲರೂ ಹಾಜರಾಗುವುದಿಲ್ಲ. ಇಡೀ ಗ್ರಾಮದ ಜನರು ಹಾಜರಾಗಲು ಸಾಧ್ಯವೂ ಇಲ್ಲ. ಆದುದ ರಿಂದ ಚುನಾಯಿತ ಅಭ್ಯರ್ಥಿಗಳು ಮತಯಾಚನೆಗೆ ಹೋದ ರೀತಿಯಲ್ಲೇ ತಿಂಗಳಿಗೊಮ್ಮೆ ಗ್ರಾಮಯಾತ್ರೆ ಯನ್ನು ಹಮ್ಮಿಕೊಳ್ಳಬೇಕು. ಇಲ್ಲಿ ಮನೆಮನೆಗಳಿಂದ ಬರುವ ಸಲಹೆ, ದೂರುಗಳನ್ನು ತಾಳ್ಮೆಯಿಂದ ಆಲಿಸಿ, ಸ್ಪಂದಿಸಬೇಕು. ಈ ರೀತಿ ಗ್ರಾಮಸ್ಥರ ವಿಶ್ವಾಸ ಗಳಿಸಿ ದರೆ ಗ್ರಾಮಸ್ಥರೂ ತುಂಬು ಹೃದಯದಿಂದ ಅಭಿವೃದ್ಧಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬಹುದು.

 

-ಡಾ| ಸತೀಶ್‌ ನಾಯಕ್‌  ಆಲಂಬಿ ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next