1969-70ರಲ್ಲಿ ನವಭಾರತ ಪತ್ರಿಕೆ ಬರುತಿದ್ದ ಕಾಲ. ಈಗೊಮ್ಮೆ ಆಗೊಮ್ಮೆ ದಕ್ಕುತಿದ್ದ ಮಂಗಳೂರು ಸಮಾಚಾರ ಪತ್ರಿಕೆ. ಮಂಗಳೂರಿಗೆ ಯಾರಾದರೂ ಹೋಗಿದ್ದರೆ ತರುತ್ತಿದ್ದ, ಅಜ್ಜ ,ಅಪ್ಪನಿಗೆ ಸೀಮಿತವಾಗುತಿದ್ದ ದ ಹಿಂದೂ ಪತ್ರಿಕೆಯನ್ನು ಮನೆ ಇತಿಹಾಸದ ಕಾಲಗರ್ಭದಲ್ಲಿ ಹುದುಗಿಸಿ, ಉದಯವಾಣಿ ಮನೆಗೆ ಹೊಕ್ಕಿತು. ಸುಂದರ ಸ್ಪುಟ ಅಕ್ಷರಗಳು, ಉನ್ನತ ಮಟ್ಟದ ವಾಕ್ಯಗಳ ಜೋಡಣೆ, ಧರ್ಮ, ರಾಜಕೀಯ ಇನ್ನಿತರ ಮೇಲಾಟಗಳಲ್ಲೂ ಈವರೆಗೆ ಯಾರ ಮನಸನ್ನೂ ನೋಯಿಸದೆ ಅವಶ್ಯ ಇರುವಷ್ಟು ಮಾತ್ರ ತನ್ನ ಇರವನ್ನು ತೋರಿಸುತ್ತಾ ಮನಸಿಗೆ ಹತ್ತಿರವಾದುದು ಮಾತ್ರ ಅಕ್ಷರಶಃ ಸತ್ಯ.
ಲಾದೀನ ಡಿ’ಸೋಜರು ಯಾನೇ ಪೇಪರ್ ಡಿ’ಸೋಜರು ನಮ್ಮ ಪತ್ರಿಕಾ ಏಜೆಂಟರು. ಈಗ ಅನಾರೋಗ್ಯ ನಿಮಿತ್ತ ಹಾಸಿಗೆ ಹಿಡಿದಿದ್ದರೂ, ಹಲವು ದಶಕಗಳ ಕಾಲ ನಮಗೆ ಪತ್ರಿಕೆ ಯನ್ನು ಎಂತಹ ಮಳೆ ,ಚಳಿ, ಬಿಸಿಲು, ಹರತಾಳ ಯಾವ ತಡೆಯಿದ್ದರೂ ಜತನವಾಗಿ ತಲುಪಿಸುತಿದ್ದರು. ವೃತ್ತಿಯಲ್ಲಿ ಟೈಲರ್.
ನಮಗೆ ಸಾಧಾರಣ ಐದು ವರ್ಷ ಆಗುವಾಗ ಪೇಪರ್ ಓದುವ ಕಂಡೀಶನ್ ಶುರುವಾಯಿತು. ಓದುತ್ತಾ ಓದುತ್ತಾ ಬೆಳೆದವರಿಗೆ ಹತ್ತಿರವಾಗುತಿದ್ದದು ಸಿನಿಮಾ ಚಿತ್ರಗಳು ಅದರ ಬರಹಗಳು. ಆದರೆ ಅಪ್ರತಿಮ ವಿರೋಧದ ನಡುವೆ ರಾತ್ರಿ ಅರ್ಧ ಗಂಟೆ ಕಾಲ, ಪೇಪರ್ ಓದಿದ ಮಾಹಿತಿಯನ್ನು ಪ್ರಪಂಚದ ಆಗುಹೋಗುಗಳ ಬಗ್ಗೆ ಪ್ರಶ್ನೆಯನ್ನೂ ಅಜ್ಜನಿಂದ ಓದುವ ಪ್ರಮೇಯವೂ ಇತ್ತು.
ಗ್ಯಾಸ್ ಲೈಟ್, ಚಿಮಿಣಿ ಬೆಳಕಿನಲ್ಲೂ ಜತೆಯಾಗಿದ್ದ ಉದಯವಾಣಿ ಈಗ ಐವತ್ತರ ಹೊಸ್ತಿಲಲ್ಲಿ ವರ್ಣಮಯವಾಗಿ ಹೊಸ ರೀತಿಯ ಜಾಜ್ವಲ್ಯಮಾನವಾದ ಬೆಳಕಲ್ಲಿ ಅಷ್ಟೇ ಸುಂದ ರವಾಗಿ ಕಂಗೊಳಿಸುತ್ತಿದೆ. ಇನ್ನಷ್ಟು ಕಾಲ ಬೆಳಗಲಿ. ಅಕ್ಷರ ಪ್ರೇಮ, ಪತ್ರಿಕಾ ವಾಚನ ಆಸ್ಥೆಯನ್ನು ಬೆಳೆಸಲು ಮುನ್ನುಡಿ ಹಾಡಿದ ಉದಯವಾಣಿಗೆ ನಾನಂತೂ ಜೀವನ ಪರ್ಯಂತ ಚಿರ ಋಣಿ. ವೃತ್ತಿಗೋಸ್ಕರ ಬೆಂಗಳೂರಿಗೆ ಹೋದಾಗ, ಬಲು ವಾಗಿ ಕಾಡಿದ್ದು ಉದಯವಾಣಿಯೇ. ಅಲ್ಲಿ ಬೆಳಗ್ಗೆ ದೊರಕದ ಊರಿನ ಉದಯವಾಣಿ..ಒಂದು ರೀತಿಯ ಮ್ಲಾನವತೆ ಬೆಳಗ್ಗೆಯೇ ಆವರಿಸಿ ಮಾನಸಿಕ ಖನ್ನತೆ ಆವರಿಸುವಷ್ಟು ಕಾಡಿ ತೆಂದರೆ! ಅಕ್ಷರ ಶಕ್ತಿ ಮತ್ತು ಬಾಲ್ಯದಿಂದಲೂ ಜತೆಯಾಗಿ ಮರೆಯಾದ ಶೂನ್ಯಭಾವದ ಮನವರಿಕೆಯಾಯಿತು.
ಬೆಳಗ್ಗೆ ಮೀನು ತರುವ ಅಂಬಾಸಿಡರ್ ಕಾರಲ್ಲಿ ಐದು ಗಂಟೆಗೆ ಊರಿಂದ ಹೊರಡುತಿದ್ದ ಡಿ’ಸೋಜರು, ತಲಪಾ ಡಿಯಿಂದ ಬಸ್ಸಲ್ಲಿ ಪೇಪರನ್ನು ತಂದು, ನಂತರ ನಮ್ಮೂರಿನ ಏರುತಗ್ಗಿನ, ಮಣ್ಣಿನ ದಾರಿಯೆಲ್ಲೆಲ್ಲ ಕ್ರಮಿಸಿ, ಬೆವರು ಸುರಿ ಸುತ್ತ ಹಂಚುವ ಚಿತ್ರಣ ಮಸ್ತಕದಲ್ಲಿ ಸುಸ್ಪಷ್ಟ. ಮನೆಯಲ್ಲಿ ಮಜ್ಜಿಗೆ ಹೆಚ್ಚುವರಿ ಉಳಿದಿದ್ದರೆ ದೊಡ್ಡ ಪಾತ್ರೆಯಲ್ಲಿ ಕೊಡುತಿದ್ದೆವು.
ಆದರೆ ಅದೊಂದು ದಿನ, ಪೇಪರ್ ಒಂದು ತಪ್ಪಿಹೋಗಿ ಮನೆಯಲ್ಲಿ ಅಲ್ಲೋಲ ಕಲ್ಲೋಲ ಆಗಿತ್ತು. ಆ ದಿವಸವೇ ಪ್ರಧಾನಿ ಇಂದಿರಾಗಾಂಧಿ ಹತ್ಯೆಯಾದ ಸಮಯ. ಬೆಳಗಿನ ಪತ್ರಿಕೆ ಬರುವ ಸಮಯ ದಾಟಿ, ಅರ್ಧ ಗಂಟೆ ಕಳೆಯುವಾಗ ಅಜ್ಜನ ಕೋಪ ನೆತ್ತಿಗೇರಿತು. ಏನು ತಾಪತ್ರಯವೋ ಏನೋ ಗಡಿಬಿಡಿ ಡಿ ಸೋಜರಿಗೆ ಗ್ರಹಚಾರಕ್ಕೆ ಸರಿಯಾಗಿ ಅಸಹನೆ ತಾಳಿದ ಅಜ್ಜ. ಪೇಟೆಗೆ ಹೊರಟ ಅಜ್ಜನಿಗೆ ದಾರಿಯಲ್ಲೇ ಡಿಸೋಜರು ಸಿಕ್ಕಿದಾಗ ಹೆದರಿ ..ನೀವು ಮನೆಗೆ ಹೋಗಿ ಸಾರ್, ಅರ್ಧ ಗಂಟೆಯೊಳಗೆ ತಲುಪಿಸುತ್ತೇನೆ ಎಂದ ಡಿಸೋಜರು, ತಲುಪಿಸಿದರು ಸಹಾ.
ಮತ್ತೆ ಗೊತ್ತಾದುದೇನೆಂದರೆ.. ಇನ್ನೊಬ್ಬರ ಮನೆಯ ಪೇಪರಿಗೆ ಇಸ್ತ್ರಿ ಹಾಕಿ ನಮ್ಮ ಮನೆಗೆ ತಲುಪಿಸಿಕೊಟ್ಟವರಿಗೆ ಮರಳಿ ಕೊಡಲು ಪುನಃ 15 ಕಿ.ಮೀ ಹೋಗಿದ್ದರೆಂದು. ಎಂತಹಾ ಕಾರ್ಯಕ್ಷಮತೆ! ನೆನಪಿಂದ ಮರೆಯಾಗದ ಈ ಘಟನೆ ನಮಗೆ ಮತ್ತಷ್ಟು ಡಿ’ಸೋಜರ ಮೇಲೆ ದಯ ಕರುಣಿಸಿದ್ದು ಮಾತ್ರವಲ್ಲದೆ ಉದಯವಾಣಿ ಇಲ್ಲದ ಬದುಕಿನ ಅಸಹನೆ, ಚಡಪಡಿಕೆಯ ದರ್ಶನವೂ ಮಾಡಿಸಿತು.
ಮುಗಿಯದ ಕತೆಗಳನ್ನು ಹೊಂದಿರುವ ಉದಯವಾಣಿ ಮತ್ತೆ ಮನೆಯ ಅನ್ಯೋನ್ಯ ಭಾಂಧವ್ಯ ಚಿರನೂತನ. ನೂರ್ಕಾಲ ಬದುಕಲಿ ಈ ಪತ್ರಿಕೆ, ಹಳೆ ಓದುಗರ ಹೊಸ ಪೀಳಿಗೆಗೂ ಹತ್ತಿರವಾಗಲಿ.
ಉದಯವಾಣಿ 50 ವರ್ಷಗಳಿಂದ ಓದುಗರೇ ಬೆಳೆಸಿದ ಪತ್ರಿಕೆ. ನಿಮ್ಮ ಬದುಕಿನ ಶ್ರೇಯಸ್ಸಿನಲ್ಲಿ ಪತ್ರಿಕೆಯ ಪಾಲೂ ಇದ್ದರೆ ಈ ಅಂಕಣಕ್ಕೆ ಬರೆಯಿರಿ. ನಮ್ಮ ವಾಟ್ಸಾಪ್ ಸಂಖ್ಯೆ 8095192817
ದೇವರಾಜ್ ರಾವ್ ಕೊಡ್ಲಮೊಗರು