ಬೆಂಗಳೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ನಮಗೆಲ್ಲರಿಗೂ ಗೌರವ, ಅಭಿಮಾನವಿದೆ. ಅವರ ಯಾವುದೇ ನಡೆಗೆ ನಮ್ಮ ಬೆಂಬಲ ಇದೆ. ಆದರೆ, ಚುನಾವಣೆಗೂ ಮೊದಲು ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸುವ ಸಂಪ್ರದಾಯ ಕಾಂಗ್ರೆಸ್‌ನಲ್ಲಿಲ್ಲ’ ಎಂದು ಕೇಂದ್ರದ ಮಾಜಿ ಸಚಿವ ಶಶಿ ತರೂರು ತಿಳಿಸಿದರು.
ಕಾಂಗ್ರೆಸ್‌ನಲ್ಲಿ ನಾಯಕನಿಂದ ಹಿಡಿದು ಕಾರ್ಯಕರ್ತನವರೆಗೂ ಎಲ್ಲರೂ ಚುನಾವಣೆಯಲ್ಲಿ ಗೆಲುವಿಗಾಗಿ ಶ್ರಮಿಸುತ್ತಾರೆ. ಅನಂತರ ಮುಖ್ಯಮಂತ್ರಿ ಯಾರು ಎಂಬುದರ ಬಗ್ಗೆ ಚರ್ಚೆ ಮಾಡಲಾಗುತ್ತದೆ. ಕರ್ನಾಟಕದ ವಿಧಾನಸಭಾ ಚುನಾವಣೆಯೂ ಇದಕ್ಕೆ ಹೊರತಾಗಿಲ್ಲ. ಇದು ಒಳ್ಳೆಯ ಸಂಪ್ರದಾಯ ಕೂಡ ಎಂದವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡುವಿನ ಮುಸುಕಿನ ಗುದ್ದಾಟದ ಬಗ್ಗೆ ಕೇಳಿದಾಗ, ಎಲ್ಲ ಪಕ್ಷದಲ್ಲೂ ನಾಯಕರ ಸಾಮರ್ಥ್ಯಗಳು ಮತ್ತು ಆಕಾಂಕ್ಷೆಗಳ ಮಧ್ಯೆ ಸ್ಪರ್ಧೆ ಸಹಜ. ಪಕ್ಷ ಅಧಿಕಾರಕ್ಕೆ ಬಂದ ಅನಂತರ ಯಾರಾದರೂ ಮುಖ್ಯಮಂತ್ರಿ ಆಗುತ್ತಾರೆ. ಈಗ ಒಟ್ಟಾಗಿ ಹೋರಾಡುವುದಕ್ಕೆ ಆದ್ಯತೆ. ಅಷ್ಟಕ್ಕೂ ಅವರಿಬ್ಬರೂ (ಸಿದ್ದರಾಮಯ್ಯ ಮತ್ತು ಡಿ.ಕೆ.ಶಿ.) ಒಟ್ಟಾಗಿ ಚುನಾವಣೆ ಎದುರಿಸುವುದಾಗಿ ಈಗಾಗಲೇ ಸ್ಪಷ್ಟವಾಗಿ ಹೇಳಿದ್ದಾರೆ. ಹಾಗಾಗಿ, ಸಂಘರ್ಷದ ಪ್ರಶ್ನೆ ಉದ್ಭವಿಸದು’ ಎಂದು ಸಮಜಾಯಿಷಿ ನೀಡಿದರು.
ಸಿದ್ಧಾಂತಕ್ಕೆ ತದ್ವಿರುದ್ಧ ಪಕ್ಷಕ್ಕೆ
ಹೋಗುವವರ ಬಗ್ಗೆ ಬೇಸರ
ಪಕ್ಷಾಂತರಕ್ಕೆ ನನ್ನ ವಿರೋಧ ಇಲ್ಲ; ಆದರೆ, ತಾವು ಅನುಸರಿಸಿಕೊಂಡು ಬಂದ ಸಿದ್ಧಾಂತಗಳಿಗೆ ವಿರುದ್ಧವಾದ ಪಕ್ಷಕ್ಕೆ ಹೋಗುವ ಬಗ್ಗೆ ನನ್ನ ಆಕ್ಷೇಪ ಮತ್ತು ಬೇಸರ ಇದೆ ಎಂದು ಶಶಿ ತರೂರು ಹೇಳಿದರು.