ನವದೆಹಲಿ: ದೇಶದ ಗಡಿಯನ್ನು ಕಾಯುವ ಭಾರತೀಯ ಯೋಧರ ಕಾರ್ಯವನ್ನು ಶ್ಲಾಘಿಸಿರುವ ಪ್ರಧಾನಿ ನರೇಂದ್ರ ಮೋದಿ, ದೇಶವನ್ನು ಕಾಪಾಡುವ ಸುರಕ್ಷಾ ಕವಚ ಎಂಬುದಾಗಿ ಬಣ್ಣಿಸಿದ್ದಾರೆ. ದೇಶದ ಜನರು ಶಾಂತಿಯುತವಾಗಿ ನಿದ್ದೆ ಮಾಡುತ್ತಿದ್ದಾರೆಂದರೆ ಅದಕ್ಕೆ ಕಾರಣ ಭಾರತೀಯ ಯೋಧರು ಎಂಬುದಾಗಿ ಹೇಳಿದರು.
ಇದನ್ನೂ ಓದಿ:ಹಿಮ್ಮುಖವಾಗಿ ಚಲಿಸಿದ ಟ್ರಾಕ್ಟರ್ ಚಕ್ರದಡಿ ಬಿದ್ದು ತಾಯಿ -ಮಗು ಸಾವು
ನಮ್ಮ ಯೋಧರು ಭಾರತ ಮಾತೆಯನ್ನು ಕಾಪಾಡುವ ಸುರಕ್ಷಾ ಕವಚಗಳು. ಅವರಿಂದಾಗಿಯೇ ನಾವು ನೆಮ್ಮದಿಯಿಂದ ನಿದ್ದೆ ಮಾಡುತ್ತಿದ್ದೇವೆ. ಅವರಿಗೆ ದೀಪಾವಳಿ ಹಬ್ಬದ ಶುಭಾಶಯಗಳು ಎಂದು ಪ್ರಧಾನಿ ಮೋದಿ ಜಮ್ಮು-ಕಾಶ್ಮೀರದ ರಾಜೌರಿ ಜಿಲ್ಲೆಯ ನೌಶೇರಾ ಸೆಕ್ಟರ್ ನಲ್ಲಿ ಯೋಧರನ್ನು ಉದ್ದೇಶಿಸಿ ಮಾತನಾಡಿದರು.
ನಮ್ಮ ದೇಶದ ಗಡಿ ಕಾಯುತ್ತಿರುವ ಯೋಧರ ಜತೆಗೆ ನಾನು ಪ್ರತಿ ವರ್ಷದ ದೀಪಾವಳಿಯನ್ನು ಆಚರಿಸುತ್ತಿದ್ದೇನೆ. ಇಂದು ನಾನು ಕೋಟ್ಯಂತರ ಭಾರತೀಯರ ಆಶೀರ್ವಾದೊಂದಿಗೆ ಇಲ್ಲಿಗೆ ಆಗಮಿಸಿದ್ದೇನೆ ಎಂದು ತಿಳಿಸಿದರು.
ತಮ್ಮ ಭಾಷಣದಲ್ಲಿ ಪ್ರಧಾನಿ ಮೋದಿ ಅವರು, ಗಡಿಯಲ್ಲಿನ ಆಧುನಿಕ ಮೂಲಭೂತ ಸೌಕರ್ಯಗಳ ಕುರಿತು ತಿಳಿಸಿದ್ದು, ಇದರಿಂದಾಗಿ ಗಡಿಯಲ್ಲಿ ನಮ್ಮ ಸೇನೆ ಬಲಿಷ್ಠಗೊಂಡಿದೆ. ಅಷ್ಟೇ ಅಲ್ಲ ಸೇನಾ ಸಾಮರ್ಥ್ಯ ಕೂಡಾ ಬದಲಾಗಿದೆ ಎಂದರು.
ಸರ್ಜಿಕಲ್ ದಾಳಿ ಸಂದರ್ಭದಲ್ಲಿನ ಯೋಧರ ಸಾಮರ್ಥ್ಯವನ್ನು ಕೊಂಡಾಡಿದ ಪ್ರಧಾನಿ ಮೋದಿ ಅವರು, ಭಯೋತ್ಪಾದಕರ ದಾಳಿಗೆ 2016ರ ಸೆಪ್ಟೆಂಬರ್ 29ರಂದು ನಮ್ಮ ಯೋಧರು ನಡೆಸಿದ ಸರ್ಜಿಕಲ್ ದಾಳಿ ತಕ್ಕ ಪ್ರತ್ಯುತ್ತರವಾಗಿದೆ ಎಂದು ಈ ಸಂದರ್ಭದಲ್ಲಿ ಹೇಳಿದರು.