ಮಾನ್ವಿ: ವಿಧಾನಸಭಾ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಯ ಗುರಿಯನ್ನು ಹೊಂದಲಾಗಿದ್ದು, ಇದಕ್ಕೆ ಸಮಯಾವಕಾಶ ಹಾಗೂ ಕ್ಷೇತ್ರದ ಜನತೆಯ ಸಹಕಾರ ಅಗತ್ಯ ಎಂದು ಶಾಸಕ ರಾಜಾವೆಂಕಟಪ್ಪ ನಾಯಕ ಹೇಳಿದರು.
ತಾಲೂಕಿನ ಅಡವಿ ಅಮರೇಶ್ವರ ಗ್ರಾಮದಲ್ಲಿ 110 ಕೆವಿ ವಿದ್ಯುತ್ ವಿತರಣಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ತಾಲೂಕಿನ ಅಭಿವೃದ್ಧಿಗೆ ಅತ್ಯಂತ ಪ್ರಾಮಾಣಿಕ ಮತ್ತು ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಸಿಸಿ ರಸ್ತೆಗಳು, ಗ್ರಾಮಗಳ ಮುಖ್ಯರಸ್ತೆ ಕಾಮಗಾರಿಗಳು, ಕುಡಿಯುವ ನೀರು, ಶಾಲಾ ಕಟ್ಟಡಗಳ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದರು.
ಅಡವಿ ಅಮರೇಶ್ವರದಲ್ಲಿ ಅನೇಕ ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ನಲ್ಗಂದಿನ್ನಿ ರಸ್ತೆಯನ್ನು 10 ಕೋಟಿ ರೂ. ವೆಚ್ಚದಲ್ಲಿ ಪೂರ್ಣಗೊಳಿಸಲಾಗಿದೆ. 20 ಕೋಟಿ ರೂ. ವೆಚ್ಚದಲ್ಲಿ ಚಿಕಲಪರ್ವಿ ರಸ್ತೆ ಮಾಡಲಾಗಿದೆ. ಅದೆ ರೀತಿ 5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ವಿದ್ಯುತ್ ವಿತರಣಾ ಘಟಕದಿಂದ ಸುಮಾರು 24 ಗ್ರಾಮಗಳಿಗೆ ವಿದ್ಯುತ್ ಪೂರೈಕೆಯಾಗಲಿದೆ. ರೈತರ ಪಂಪ್ ಸೆಟ್‌ಗಳಿಗೆ, ಮನೆಗಳಿಗೆ ಅನುಕೂಲವಾಗಲಿದೆ ಎಂದರು.
ಅಡವಿ ಅಮರೇಶ್ವರ ಗ್ರಾಮದಲ್ಲಿ ಶಾಸಕ ರಾಜಾವೆಂಕಟಪ್ಪ ನಾಯಕ 5 ಕೋಟಿ ವೆಚ್ಚದ ವಿದ್ಯುತ್ ವಿತರಣಾ ಕೇಂದ್ರ, 72 ಲಕ್ಷ ವೆಚ್ಚದ ಕುಡಿಯುವ ನೀರಿನ ಪೈಪ್‌ಲೈನ್ ಕಾಮಗಾರಿ ಹಾಗೂ 40 ಲಕ್ಷ ವೆಚ್ಚದ ಮೂರು ಶಾಲಾ ಕೊಠಡಿಗಳ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ವಿದ್ಯುತ್ ವಿತರಣಾ ಘಟಕಕ್ಕೆ ಭೂಮಿ ದಾನ ನೀಡಿರುವ ಎನ್.ಬಸನಗೌಡ ಕೊಕ್ಲೃಕಲ್ ಮತ್ತು ಜಗದೀಶರನ್ನು ಸನ್ಮಾನಿಸಲಾಯಿತು. ಅಡವಿ ಅಮರೇಶ್ವರ ಮಠದ ಶಾಂತಮಲ್ಲ ಶಿವಾಚಾರ್ಯರು, ಜೆಡಿಎಸ್ ರಾಜ್ಯ ಯುವ ಉಪಾಧ್ಯಕ್ಷರಾದ ರಾಜಾರಾಮಚಂದ್ರ ನಾಯಕ, ಎಸ್.ತಿಮ್ಮಾರಡ್ಡಿ ಭೋಗಾವತಿ, ಮಲ್ಲಿಕಾರ್ಜುನ್‌ಗೌಡ ಬಲ್ಲಟಗಿ, ವೀರಭದ್ರಗೌಡ, ವಿರೂಪಾಕ್ಷಗೌಡ, ಅಮರೇಶ ಖರಾಬದಿನ್ನಿ, ತಿಮ್ಮನಗೌಡ ಮದ್ಲಾಪುರ, ಜೆಸ್ಕಾಂ ಜೆಇಇ ಚಂದ್ರಶೇಖರ್
ಇದ್ದರು.