Advertisement

ನಮ್ಮವರು ಮುಳುಗುವ ಹಡಗು ಹತ್ತಿದ್ದಾರೆ, ಬಿಜೆಪಿಗೆ ಯಾವುದೇ ನಷ್ಟವಿಲ್ಲ: CM Bommai

04:54 PM Apr 20, 2023 | Team Udayavani |

ಬೀದರ್: ದೇಶದ ಎಲ್ಲ ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷ ಮುಳುಗಿ ಹೋಗಿದ್ದು, ಈಗ ಕರ್ನಾಟಕದಲ್ಲಿಯೂ ಕಾಂಗ್ರೆಸ್‌ನ ಹಡಗು ಮುಳುಗಿ ಹೋಗಲಿದೆ. ಕಾಂಗ್ರೆಸ್ಸಿಗರ ಮಾತಿಗೆ ಮರಳಾಗಿ ನಮ್ಮವರು (ಶೆಟ್ಟರ್ ಮತ್ತು ಸವದಿ) ಆ ಮುಳುಗುತ್ತಿರುವ ಹಡಗು ಹತ್ತಿದ್ದಾರೆ. ಆದರೆ ಇದರಿಂದ ಬಿಜೆಪಿಗೆ ಯಾವುದೇ ನಷ್ಟ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ಜಿಲ್ಲೆಯ ಭಾಲ್ಕಿಯಲ್ಲಿ ಗುರುವಾರ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು, ಚುನಾವಣೆ ಪೂರ್ವದಲ್ಲಿ ಸುಳ್ಳು ಭರವಸೆಗಳನ್ನು ನೀಡುವ ಕಾಂಗ್ರೆಸ್ ಪಕ್ಷದ ಮಾತಿನ ಮೇಲೆ ಜನರಿಗೆ ವಿಶ್ವಾಸ ಇಲ್ಲ. ಹೀಗಾಗಿ ಗ್ಯಾರಂಟಿ ಕಾರ್ಡ್‌ಗಳನ್ನು ನೀಡುತ್ತಿದೆ. ಆದರೆ, ಅದು ಮನೆಯಲ್ಲಿ ಕಸದ ಬುಟ್ಟಿಗೆ ಹಾಕುವ, ಯಾವುದೇ ಪ್ರಯೋಜನಕ್ಕೆ ಬಾರದ ‘ವಿಸಿಟಿಂಗ್ ಕಾರ್ಡ್’ ಆಗಿದೆ. ಅದು ಯಾವುದೇ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಸಹ ಅಲ್ಲ, ಅದರಲ್ಲಿ ಹಣವೂ ಇಲ್ಲ ಎಂದು ವ್ಯಂಗ್ಯವಾಡಿದರು.

ಪ್ರತಿ ಕುಟುಂಬಕ್ಕೆ 2 ಸಾವಿರ ನೀಡುವುದಾಗಿ ಹೇಳಿರುವ ಕಾಂಗ್ರೆಸ್, ಇದಕ್ಕೆ ವೆಚ್ಚವಾಗಲಿರುವ ತಿಂಗಳಿಗೆ 24 ಸಾವಿರ ಕೋಟಿ ರೂ. ಹೇಗೆ ಹೊಂದಿಸಲು ಸಾಧ್ಯ ಎಂದು ಪ್ರಶ್ನಿಸಿದ ಸಿಎಂ, ಯಾವ ಕುಟುಂಬವೂ ತಿಂಗಳಿಗೆ 200 ಯೂನಿಟ್ ವಿದ್ಯುತ್ ಬಳಸುವುದಿಲ್ಲ. ತಿಂಗಳಿಗೆ 80-85 ಯೂನಿಟ್ ಬಳಸಿದರೆ ಹೆಚ್ಚು. ಖರ್ಚು ಮಾಡದ ಇನ್ನುಳಿದ ವಿದಯುತ್‌ನ್ನು ಉಚಿತವಾಗಿ ನೀಡುತ್ತಾರಂತೆ ಎಂದು ಲೇವಡಿ ಮಾಡಿದರು.

ಇನ್ನೂ ಕಾಂಗ್ರೆಸ್ ಸರ್ಕಾರ ಪ್ರತಿ ಬಡ ಕುಟುಂಬಕ್ಕೆ 10 ಕೆ.ಜಿ ಉಚಿತ ಅಕ್ಕಿ ನೀಡುವುದಾಗಿ ಮಾಜಿ ಸಿಎಂ ಸಿದ್ಧರಾಮಯ್ಯ ಹೇಳುತ್ತಿದ್ದಾರೆ. ಆದರೆ, ಕಾಂಗ್ರೆಸ್ ಸರ್ಕಾರ ಬರುವ ಮುನ್ನ 2013ರಲ್ಲಿ ಬಿಜೆಪಿ ಸರ್ಕಾರ 10 ಕೆಜಿ ಅಕ್ಕಿಯನ್ನು ನೀಡುತ್ತಿತ್ತು. ಆದರೆ, ಸಿದ್ಧರಾಮಯ್ಯ ಸರ್ಕಾರ ಅದನ್ನು 5 ಕೆಜಿಗೆ ಇಳಿಸಿ, ನಂತರ ಚುನಾವಣೆ ವೇಳೆಗೆ 7 ಕೆ.ಜಿಗೆ ಹೆಚ್ಚಿಸಲಾಯಿತು. ಈ ಉಚಿತ ಅಕ್ಕಿಯನ್ನು 30 ಕೆಜಿಯಂತೆ ಕೇಂದ್ರದ ಮೋದಿ ಸರ್ಕಾರ ನೀಡುತ್ತಿದೆ. ಗೋಳಿ ಚೀಲದಲ್ಲಿನ ಅಕ್ಕಿ ಕೇಂದ್ರ ಸರ್ಕಾರದ್ದಾಗಿದ್ದರೆ, 3 ರೂ. ಚೀಲದ ಮೇಲೆ ಸಿದ್ಧರಾಮಣ್ಣನ ಫೋಟೋ. ಹೀಗೆ ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ ಎಂಬಂತಿತ್ತು. ಅಧಿಕಾರದಲ್ಲಿದ್ದಾಗ 10 ಕೆಜಿ ಅಕ್ಕಿ ನೀಡದ ಕಾಂಗ್ರೆಸ್ ಈಗ ಆ ಬಗ್ಗೆ ಗ್ಯಾರಂಟಿ ನೀಡುತ್ತಿದೆ ಎಂದು ಹೇಳಿದರು.

ಇದನ್ನೂ ಓದಿ:ರಾಜ್ಯದಲ್ಲಿ BJP ಅಧಿಕಾರ ಹಿಡಿಯುವುದು ನಿಶ್ಚಿತ- ಕೇಂದ್ರ ಸಚಿವ ಪ್ರಲ್ಹಾದ ಜೋಶಿ

Advertisement

ಬಿಜೆಪಿ ಸರ್ಕಾರ ಪರಿಶಿಷ್ಟರಿಗೆ ಮೀಸಲಾತಿ ಹೆಚ್ಚಿಸಿ ಐತಿಹಾಸಿಕ ಕೆಲಸ ಮಾಡಿದೆ. ಆದರೆ, ಸಾಮಾಜಿಕ ನ್ಯಾಯದ ಬಗ್ಗೆ ಭಾಷಣ ಮಾಡುವ ಕಾಂಗ್ರೆಸ್‌ಗೆ ಐದು ವರ್ಷದ ಅಧಿಕಾರದ ಅವಧಿಯಲ್ಲಿ ಇದು ಯಾಕೆ ನೆನಪಾಗಲಿಲ್ಲ? ಈಗ ನಮ್ಮ ಸರ್ಕಾರ ಮಾಡಿರುವ ಕೆಲಸಕ್ಕೆ ಅಡ್ಡಿಪಡಿಸಲಾಗುತ್ತಿದೆ. ಮೀಸಲಾತಿ ಮತ್ತು ಒಳ ಮೀಸಲಾತಿ ವಿಷಯದಲ್ಲಿ ಕಾಂಗ್ರೆಸ್ ಪರ ಅಥವಾ ವಿರೋಧವೇ ಎಂಬ ನಿಲುವನ್ನು ಸ್ಪಷ್ಟಪಡಿಸಬೇಕು. ಕೇವಲ ಭಾಷಣದಿಂದ ಹೊಟ್ಟೆ ತುಂಬುವುದಿಲ್ಲ, ದಶಕಗಳನ್ನು ಈಡೇರಿಸುವ ಮೂಲಕ ಆ ಸಮುದಾಯದ ಜನರಲ್ಲಿ ವಿಶ್ವಾಸ ಮೂಡಿಸುವ ಕೆಲಸ ನಮ್ಮ ಸರ್ಕಾರ ಮಾಡಿದೆ ಎಂದರು.

ಟಿಪ್ಪು ನೆನಪಾದರು, ಬಸವಣ್ಣನಲ್ಲ: ಸಂವಿಧಾನದ ಪ್ರತಿರೂಪವಾಗಿರುವ ಬಸವಣ್ಣನ ಸಂದೇಶಗಳನ್ನು ವಿಶ್ವವ್ಯಾಪ್ತಿಯಾಗಿಸಲು ಬಿಜೆಪಿ ಸರ್ಕಾರ ಬಸವಕಲ್ಯಾಣದಲ್ಲಿ 650 ಕೋಟಿ ರೂ. ವೆಚ್ಚದಲ್ಲಿ ಅನುಭವ ಮಂಟಪ ನಿರ್ಮಾಣಕ್ಕೆ ಚಾಲನೆ ನೀಡಿದೆ. ಆದರೆ, ಅಧಿಕಾರದಲ್ಲಿದ್ದಾಗ ಕಾಂಗ್ರೆಸ್‌ಗೆ ಈ ವಿಚಾರ ಬರಲಿಲ್ಲ, ಕೇವಲ ಟಿಪ್ಪು ಸುಲ್ತಾನ ಮಾತ್ರ ನೆನಪಾದರು. ಈಗ ಚುನಾವಣೆ ಹೊಸ್ತಿಲಲ್ಲಿ ಬಸವಣ್ಣ ಮತ್ತು ಅವರ ಅನುಯಾಯಿಗಳು ಅವರಿಗೆ ನೆನಪಿಗೆ ಬರುತ್ತಾರೆ. ಬಿಜೆಪಿ ಸರ್ಕಾರ ಬಸವ ಪಥದಲ್ಲಿ ಸಾಗುತ್ತಿದ್ದು, ಬಸವಣ್ಣನ ಚಿಂತನೆಗಳನ್ನು ನಂಬುವ ಎಲ್ಲ ವರ್ಗದವರು ನಮ್ಮೊಂದಿಗೆ ಇದ್ದಾರೆ ಎಂದರು.

ಸಮಾವೇಶದಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ, ಶಾಸಕ ಶರಣು ಸಲಗರ್, ನಿಗಮ ಮಂಡಳಿ ಅಧ್ಯಕ್ಷ ಮಾರುತಿ ಮೂಳೆ, ಮಹಾರಾಷ್ಟ್ರ ಮಾಜಿ ಮಂತ್ರಿ ಸಂಭಾಜಿ ಪಾಟೀಲ, ಎನ್‌ಎಸ್‌ಎಸ್‌ಕೆ ಅಧ್ಯಕ್ಷ ಡಿ.ಕೆ ಸಿದ್ರಾಮ್ ಮತ್ತು ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಸಿ. ಸೋಮಶೇಖರ ಮತ್ತಿತರರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next