Advertisement

ಹಾಸ್ಯ ಲೇಪನದಲ್ಲಿ ಗಂಭೀರ ಕತೆ ನಮ್ಮ ಅಮ್ಮ ಶಾರದೆ

07:48 PM Oct 10, 2019 | mahesh |

ತುಳು ನಾಟಕಗಳು ದಿ. ಕೆ. ಎನ್‌. ಟೈಲರ್‌ ಜಮಾನದಿಂದಲೂ ಹಾಸ್ಯಕ್ಕೆ ಹೆಸರುವಾಸಿ. ಅಂತಹದ್ದೇ ಸಂಸ್ಕೃತಿ ಮರುಕಳಿಸುವತ್ತ ಕಾಪು ರಂಗತರಂಗ ಕಲಾವಿದರು ದಾಪುಗಾಲು ಇಡುತ್ತಿದ್ದಾರೆ. ಅದೇ ಜಾಡಿನಲ್ಲಿ ಸಾಗುತ್ತ ಹಲವಾರು ನಾಟಕಗಳನ್ನು ತಾಂತ್ರಿಕವಾಗಿ ಗಟ್ಟಿಗೊಳಿಸಿ ನಾಟಕರಂಗ ಬೆಳೆಯುವ ಸೂಚನೆ ನೀಡುತ್ತಿದ್ದಾರೆ. ಅವರ ಈ ವರ್ಷದ ನೂತನ ತುಳು ಹಾಸ್ಯನಾಟಕ “ನಮ್ಮ ಅಮ್ಮ ಶಾರದೆ’ ಈ ನಿಟ್ಟಿನಲ್ಲಿ ಹೊಸ ಹೆಜ್ಜೆ ಎಂದೇ ಹೇಳಬಹುದು.

Advertisement

ಸಾರ್ವಜನಿಕ ಶಾರದೋತ್ಸವ ಸಮಿತಿ, ದಸರಾ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರವåಗಳ ಅಂಗವಾಗಿ ನಮ್ಮ ಅಮ್ಮ ಶಾರದೆ ನಾಟಕ ವನ್ನು ಉಡುಪಿಯ ಕೃಷ್ಣ ಮಠದ ವಠಾರದಲ್ಲಿ ಆಯೋ ಜಿಸಿತ್ತು. ಬಲೇ ತಲಿಪಾಲೆ ರಿಯಾಲಿಟಿ ಶೋ ಮೂಲಕ ಪದಾರ್ಪಣೆಗೈದು ಕಲರ್ಸ್‌ ಕಿರುತೆರೆಯ ಮಜಾಭಾರತದಲ್ಲಿ ರಾಜ್ಯಾದಾದ್ಯಂತ ಜನಪ್ರಿಯರಾದ ಸಂದೀಪ್‌ ಶೆಟ್ಟಿ ಮಾಣಿಬೆಟ್ಟು ಮತ್ತು ಪ್ರಸನ್ನ ಶೆಟ್ಟಿ ಬೈಲೂರು ಜೋಡಿಯು ನಮ್ಮ ಅಮ್ಮ ಶಾರದೆಯ ಮುಖ್ಯ ಹಾಸ್ಯರತ್ನಗಳು. ನಾಟಕದ ರಚನೆ ಮತ್ತು ನಿರ್ದೇಶನ ಕೂಡ ಅವರದೇ ಅಂದ ಮೇಲೆ ಊಹಿಸಲಾಗದ ನಗುವಿನ ನಿರೀಕ್ಷೆಯಿಂದ ಪ್ರೇಕ್ಷಕರು ಕಿಕ್ಕಿರಿದು ಜಮಾಯಿಸಿದ್ದರು.

ನಾಟಕದ ಕತೆಯನ್ನು ಒಬ್ಬ ಸಂಗೀತಗಾರ ಗುರುವಿನ ಸುತ್ತ ಹೆಣೆದು, ಹಾಸ್ಯದ ಲೇಪನದೊಂದಿಗೆ ಒಂದು ಗಂಭೀರ ಸಾಮಾಜಿಕ ವಿಷಯವನ್ನು ಪ್ರಸ್ತುತ ಪಡಿಸಲಾಗಿತ್ತು. ಹಾಸ್ಯನಾಟಕ ಎಂಬ ಹಣೆಪಟ್ಟಿಯಿದ್ದರೂ ನಾಟಕದ ಕತೆಗೆ ಎಲ್ಲೂ ಕುಂದು ಬರದಂತೆ, ಸಂಗೀತಗಾರನ ಮಗಳ ಮತ್ತು ಶಿಷ್ಯನ ಪ್ರೇಮ ಪ್ರಸಂಗವಾಗಲಿ, ಸಂಗೀತಗಾರನ ಸಂಸಾರದ ಹಿನ್ನೆಲೆಯಾಗಲಿ ತುಂಬ ಮನೋಜ್ಞವಾಗಿ ಮೂಡಿಬಂದಿದೆ. ಈ ಸಂದರ್ಭಗಳಲ್ಲಿ ಸಂಗೀತ ಬಾಲಚಂದ್ರ ಮತ್ತು ಲಲಿತ್‌ ಆಚಾರ್ಯ ಅವರ ಹಾಡುಗಾರಿಕೆ, ಶರತ್‌ ಉಚ್ಚಿಲ ಅವರ ಸಂಗೀತ ಹಾಗೂ ಬೆಳಕಿನ ನಿರ್ವಹಣೆ ಅಪ್ಯಾಯಮಾನವಾಗಿತ್ತು. ಹಿಂದಿನ ಕಾಲದ ಕಂಬಗಳ ಚಾವಡಿ ಮನೆಯ ರಂಗಸಜ್ಜಿಕೆಯು ಇದಕ್ಕೆ ಪೂರ‌ಕವಾಗಿತ್ತು.

ನಾಟಕದ ಹೆಚ್ಚಿನ ಭಾಗದಲ್ಲಿ ಕತೆಗೆ ಜೋಶ್‌ ತುಂಬಿದ ತಮಾಷೆಯ ಹೂರಣವಿತ್ತು. ನಾಟಕ ರಚನೆಕಾರರಿಗೆ ಎಂಥ ಗಂಭೀರ ವಿಷಯವನ್ನೂ ಪ್ರೇಕ್ಷಕರ ಮನ ಮುಟ್ಟುವಂತೆ, ಎಲ್ಲೂ ಬೋರ್‌ ಆಗದಂತೆ ರಂಜನೀಯವಾಗಿ ಹೇಳುವ ಕಲೆ ಕರಗತವಾಗಿದೆ. ಸಂಗೀತದ ಗಂಧಗಾಳಿ ತಿಳಿಯದ, ಪ್ರೀತಿಯ ಅನಿವಾರ್ಯತೆಯಿಂದ ಸಂಗೀತ ಕಲಿಯಲು ಬಂದ ರೌಡಿ ಮತ್ತವನ ಚೇಲಾಗಳಿಬ್ಬರ ಪ್ರವೇಶವಾದ ನಂತರ ಚುರುಕಿನ ಸಂಭಾಷಣೆ ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸುತ್ತದೆ. ಹಾಗೇ ನಾಟಕದ ಮತ್ತೂಂದು ಹೈಲೈಟ್‌ ಇಬ್ಬರು ನರ್ತಕಿಯರು. ತಂಡದ ಎಂದಿನ ಸುಂದರ ಹೆಣ್ಣುವೇಷಧಾರಿ (ಮಾರ್ವಿನ್‌ ಶಿರ್ವ) ಮತ್ತು ಉಬ್ಬುಹಲ್ಲು ಹುಡುಗಿ ನಗುವಿನ ಅಲೆಗಳನ್ನು ಇಮ್ಮಡಿಗೊಳಿಸುತ್ತಾರೆ. ಎಲ್ಲಾ ಪಾತ್ರಗಳು ಪ್ರಬುದ್ಧ ಅಭಿನಯ ನೀಡಿದ್ದು ಮಾತ್ರವಲ್ಲ ಟೈಮಿಂಗ್‌ ಕೂಡ ಮೆಚ್ಚುವಂತದ್ದೇ.

ಜೀವನ್‌ ಶೆಟ್ಟಿ

Advertisement
Advertisement

Udayavani is now on Telegram. Click here to join our channel and stay updated with the latest news.

Next