Advertisement
2017ರ ಜೂನ್ 17ರಂದು 42.3 ಕಿ.ಮೀ ಉದ್ದದ ಮೊದಲ ಹಂತದ ಮೆಟ್ರೋ ಸೇವೆಯನ್ನು ಅಂದಿನ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಲೋಕಾರ್ಪಣೆ ಮಾಡಿದ್ದರು. ಈಗ ಆ ಸೇವೆಗೆ ಒಂದು ವರ್ಷ ತುಂಬಿದ್ದು, ಸಂಭ್ರಮಾಚರಣೆಗೆ ಭರದ ಸಿದ್ಧತೆ ನಡೆದಿದೆ. ಈ ಮಧ್ಯೆ ಮೆಟ್ರೋ ರೈಲು ಮತ್ತು ನಿಲ್ದಾಣಗಳಲ್ಲಿ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿ)ದಿಂದ ಪ್ರಯಾಣಿಕರಿಗೆ ಕೃತಜ್ಞತೆ ಸಲ್ಲಿಸುವ ಫಲಕಗಳು ಕೂಡ ರಾಜಾಜಿಸುತ್ತಿವೆ.
Related Articles
Advertisement
ಮೂರ್‍ನಾಲ್ಕು ದಿನದಲ್ಲಿ ಆರು ಬೋಗಿ?: ಬಹುನಿರೀಕ್ಷಿತ ಆರು ಬೋಗಿಯ ಮೆಟ್ರೋ ರೈಲು ಮುಂದಿನ ಮೂರ್‍ನಾಲ್ಕು ದಿನಗಳಲ್ಲಿ ಸಾರ್ವಜನಿಕ ಸೇವೆ ಆರಂಭಿಸಲಿದೆ. ವರ್ಷ ತುಂಬಿದ ಸಂಭ್ರಮದಲ್ಲೇ ಮತ್ತೆ ಮೂರು ಬೋಗಿಗಳು ಸೇರ್ಪಡೆಗೊಳ್ಳುತ್ತಿರುವುದರಿಂದ “ನಮ್ಮ ಮೆಟ್ರೋ’ ಸಾಮರ್ಥ್ಯ ದುಪ್ಪಟ್ಟುಗೊಳ್ಳುತ್ತಿದೆ. ಈ ಮೂಲಕ ಸಂಭ್ರಮ ಕೂಡ ಇಮ್ಮಡಿ ಆಗಲಿದೆ.
ಪ್ರೇಮಿಗಳ ದಿನಾಚರಣೆಯಂದು (ಫೆ. 14) ಹೆಚ್ಚುವರಿ ಮೂರು ಬೋಗಿಗಳು ಬಿಇಎಂಎಲ್‌ನಿಂದ ಬಿಎಂಆರ್‌ಸಿಗೆ ಹಸ್ತಾಂತರಗೊಂಡಿದ್ದವು. ಇದಾದ ನಂತರ ಪರೀಕ್ಷಾರ್ಥ ಸಂಚಾರ ಪೂರ್ಣಗೊಂಡು ರೈಲ್ವೆ ಸುರಕ್ಷತಾ ಆಯುಕ್ತರ ಅನುಮೋದನೆ ಕೂಡಿ ಸಿಕ್ಕಿದೆ. ಆದರೆ, ಈ ಮಧ್ಯೆ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂತು. ಈಗ ನೂತನ ಸಚಿವರಿಂದ ಲೋಕಾರ್ಪಣೆಗೊಳಿಸಲು ಸಿದ್ಧತೆ ನಡೆಸಿದೆ.
ಪ್ರಯಾಣಿಕರು, ಆದಾಯ ಹೆಚ್ಚಳ: ಕಳೆದ ಒಂದು ವರ್ಷದಲ್ಲಿ ಮೆಟ್ರೋದಲ್ಲಿ ಸಂಚರಿಸಿದ ಪ್ರಯಾಣಿಕರ ಸಂಖ್ಯೆ 12.77 ಕೋಟಿಯಾಗಿದ್ದು, ಇದರಿಂದ ಸಂಗ್ರಹವಾದ ಆದಾಯ 310.25 ಕೋಟಿ ರೂ. ಎಂದು ಬಿಎಂಆರ್‌ಸಿ ಅಂದಾಜಿಸಿದೆ. ಮೆಟ್ರೋದಲ್ಲಿ ನಿತ್ಯ ಸರಾಸರಿ 3.50 ಲಕ್ಷ ಜನ ಸಂಚರಿಸುತ್ತಿದ್ದು, ಇದರಿಂದ 85 ಲಕ್ಷ ರೂ. ಆದಾಯ ಸಂಗ್ರಹ ಆಗುತ್ತಿದೆ. ವಾರ್ಷಿಕವಾಗಿ 310.25 ಕೋಟಿ ಆದಾಯ ಹರಿದುಬಂದಿದೆ. ಆದಾಗ್ಯೂ ಪ್ರಸಕ್ತ ಸಾಲಿನಲ್ಲಿ 538 ಕೋಟಿ ನಷ್ಟದಲ್ಲೇ ಮೆಟ್ರೋ ಸಾಗುತ್ತಿದೆ.
ಒಂದು ವರ್ಷದಲ್ಲಿ ನಡೆದ ಘಟನೆಗಳು-2017ರ ಜುಲೈ 7ರಂದು ನೌಕರರ ಮುಷ್ಕರದಿಂದ ಮೆಟ್ರೋ ಸ್ತಬ್ಧಗೊಂಡಿತ್ತು
-1.9 ಲಕ್ಷ ಇದ್ದ ಮೆಟ್ರೋ ಪ್ರಯಾಣಿಕರ ಸಂಖ್ಯೆ 3.50 ಲಕ್ಷಕ್ಕೆ ಏರಿಕೆ
-25 ಬಾರಿ ಮೆಟ್ರೋ ದಿನದ ಆದಾಯ ಒಂದು ಕೋಟಿ ರೂ. ದಾಟಿದೆ
-ನಾಲ್ಕು ಬಾರಿ ನಿತ್ಯ ಸಂಚರಿಸಿದ ಪ್ರಯಾಣಿಕರ ಸಂಖ್ಯೆ ನಾಲ್ಕು ಲಕ್ಷ ದಾಟಿದೆ
-ಬಿಎಂಆರ್‌ಸಿ ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ ಮಹೇಂದ್ರ ಜೈನ್ ನೇಮಕ