Advertisement

ಸಾವಿರಾರು ಕೋಟಿ ಉಳಿಸಿದ ನಮ್ಮ ಮೆಟ್ರೋ “ಜಾಣ ನಡೆ’

06:34 AM Feb 03, 2019 | |

ಬೆಂಗಳೂರು: “ನಮ್ಮ ಮೆಟ್ರೋ’ ಯೋಜನೆಯ ಎರಡನೇ ಹಂತದ ಸುರಂಗ ಮಾರ್ಗ ನಿರ್ಮಾಣಕ್ಕೆ ಸಂಬಂಧಿಸಿದ ಟೆಂಡರ್‌ ವಿಚಾರದಲ್ಲಿ ಬೆಂಗಳೂರು ಮೆಟ್ರೋ ರೈಲು ನಿಗಮದ (ಬಿಎಂಆರ್‌ಸಿಲ್‌) “ಜಾಣ ನಡೆ’ ಸುಮಾರು 1,850 ಕೋಟಿ ರೂ. ಉಳಿತಾಯಕ್ಕೆ ಕಾರಣವಾಗಿದೆ!

Advertisement

ಡೈರಿ ವೃತ್ತದಿಂದ ನಾಗವಾರದವರೆಗೆ ಏಕಕಾಲದಲ್ಲಿ ನಾಲ್ಕು ಪ್ಯಾಕೇಜ್‌ಗಳನ್ನು ಮಾಡಿ, ಮೆಟ್ರೋ ಸುರಂಗ ಮಾರ್ಗಕ್ಕೆ ಈ ಹಿಂದೆ ಟೆಂಡರ್‌ ಕರೆಯಲಾಗಿತ್ತು. ಆಗ ಬಿಎಂಆರ್‌ಸಿಯು ಮಾಡಿದ್ದ ಅಂದಾಜು ವೆಚ್ಚಕ್ಕಿಂತ ಶೇ.67ರಿಂದ 75ರಷ್ಟು ಹೆಚ್ಚು ಮೊತ್ತಕ್ಕೆ ಬಿಡ್‌ ಮಾಡಿದ್ದ ಕಂಪನಿಗಳೇ ಈಗ ಹೆಚ್ಚು-ಕಡಿಮೆ ನಿಗಮ ಲೆಕ್ಕಹಾಕಿದ ವೆಚ್ಚದಲ್ಲೇ (ಶೇ.17.5ರಷ್ಟು ಮಾತ್ರ ಅಧಿಕ) ಕಾಮಗಾರಿ ಪೂರ್ಣಮಾಡಿಕೊಡಲು ಮುಂದಾಗಿವೆ.

ಇದು ಬಿಎಂಆರ್‌ಸಿ ಐಡಿಯಾದ ಎಫೆಕ್ಟ್ ಎನ್ನಲಾಗಿದೆ. 2018ರ ಫೆಬ್ರವರಿಯಲ್ಲಿ 13.92 ಕಿ.ಮೀ. ಉದ್ದದ ಸುರಂಗ ಮಾರ್ಗಕ್ಕೆ ನಾಲ್ಕು ಪ್ಯಾಕೇಜ್‌ಗಳಲ್ಲಿ ಟೆಂಡರ್‌ ಕರೆಯಲಾಗಿತ್ತು. ಅದರಲ್ಲಿ ನಾಲ್ಕು ಕಂಪನಿಗಳು ಭಾಗವಹಿಸಿದ್ದವು. ವಿಚಿತ್ರವೆಂದರೆ ಆ ಕಂಪನಿಗಳಿಗೆ ಸಮನಾಗಿ ಹಂಚಿಕೆ ಆಗಿದ್ದವು. ಅಂದರೆ ಪ್ರತಿ ಪ್ಯಾಕೇಜ್‌ನಲ್ಲಿ ಒಂದೊಂದು ಕಂಪನಿ ಕನಿಷ್ಠ ಮೊತ್ತದ ಬಿಡ್‌ ಮಾಡಿತ್ತು.

ಇದು ನಿಗಮದ ಅನುಮಾನಕ್ಕೂ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಟೆಂಡರ್‌ ಪ್ರಕ್ರಿಯೆಯನ್ನೇ ರದ್ದುಗೊಳಿಸಿ, ವೆಲ್ಲಾರ್‌ ಜಂಕ್ಷನ್‌ನಿಂದ ಶಿವಾಜಿನಗರ (2.76 ಕಿ.ಮೀ.) ಹಾಗೂ ಶಿವಾಜಿನಗರದಿಂದ ಪಾಟರಿಟೌನ್‌ (2.88 ಕಿ.ಮೀ.) ನಡುವಿನ ಪ್ಯಾಕೇಜ್‌ 2 ಮತ್ತು 3ಕ್ಕೆ ಟೆಂಡರ್‌ ಸೀಮಿತಗೊಳಿಸಲಾಗಿತ್ತು. ಉಳಿದ ಮಾರ್ಗಗಳು ಎತ್ತರಿಸಿದ ಮಾರ್ಗವೋ ಅಥವಾ ಸುರಂಗ ಮಾರ್ಗವೋ ಎನ್ನುವುದನ್ನು ಗೌಪ್ಯವಾಗಿ ಇಟ್ಟಿತು. 

ಫ‌ಲ ನೀಡಿದ ಸ್ಪರ್ಧೆ: ಇದರ ಪರಿಣಾಮ ಕಂಪನಿಗಳ ನಡುವೆಯೇ ಸ್ಪರ್ಧೆ ಏರ್ಪಟ್ಟಿತು. ಅಂತಿಮವಾಗಿ ಈಚೆಗೆ ತೆರೆಯಲಾದ ಹಣಕಾಸು ಬಿಡ್‌ನ‌ಲ್ಲಿ ಎರಡೂ ಪ್ಯಾಕೇಜ್‌ಗಳು, ಅತ್ಯಂತ ಕನಿಷ್ಠ ಬಿಡ್‌ ಮಾಡಿದ ಎಲ್‌ ಆಂಡ್‌ ಟಿ ಪಾಲಾದವು. ಕಂಪನಿಯು ಪ್ಯಾಕೇಜ್‌-2 ಅನ್ನು 1,329.14 ಕೋಟಿ ರೂ. ಹಾಗೂ ಪ್ಯಾಕೇಜ್‌-3ಕ್ಕೆ 1,299.23 ಕೋಟಿ ರೂ. ಬಿಡ್‌ ಮಾಡಿದೆ. ಹಿಂದಿನ ಟೆಂಡರ್‌ನಲ್ಲಿ ಇವೆರಡೂ ಪ್ಯಾಕೇಜ್‌ಗಳ ಕನಿಷ್ಠ ಬಿಡ್‌ ಕ್ರಮವಾಗಿ 2,219.86 ಕೋಟಿ ಹಾಗೂ 2,237.58 ಕೋಟಿ ರೂ. ಆಗಿತ್ತು.

Advertisement

ಆಗ ಬಿಡ್‌ ಮಾಡಿದ ಕಂಪನಿಗಳಲ್ಲಿ ಆಗ ಎಲ್‌ ಆಂಡ್‌ ಟಿ ಕೂಡ ಇತ್ತು. ಈ ಹಿಂದೆ ಉದ್ದೇಶಿತ ಸುರಂಗ ಮಾರ್ಗದ ಅಂದಾಜು ವೆಚ್ಚ (ನಾಲ್ಕೂ ಪ್ಯಾಕೇಜ್‌ ಸೇರಿ) 5 ಸಾವಿರ ಕೋಟಿ ರೂ. ಇತ್ತು. ಆದರೆ, 8 ಸಾವಿರ ಕೋಟಿ ರೂ. ಬಿಡ್‌ ಮಾಡಲಾಗಿತ್ತು. ಮರುಟೆಂಡರ್‌ನಿಂದ ಸುಮಾರು 1,850 ಕೋಟಿ ರೂ. ಉಳಿತಾಯ ಆಗಿದೆ ಎಂದು ಬಿಎಂಆರ್‌ಸಿ ಅಧಿಕಾರಿಗಳು “ಉದಯವಾಣಿ’ಗೆ ತಿಳಿಸಿದರು. ಆದರೆ, ಈ ರೀತಿಯ ವ್ಯತ್ಯಾಸಗಳಿಗೆ ಕಂಪೆನಿಗಳ ನಡುವೆ ಏರ್ಪಟ್ಟ ಸ್ಪರ್ಧೆಯೊಂದೇ ಕಾರಣ ಆಗಿರುವುದಿಲ್ಲ.

ಸಕಾಲಿಕವಾಗಿ ಟೆಂಡರ್‌ ಕರೆದಿರುವುದೂ ಕಾರಣವಾಗಿರುತ್ತದೆ. ಯಾಕೆಂದರೆ ಬೆಂಗಳೂರು ಮಾತ್ರವಲ್ಲ; ಚೆನ್ನೈ, ಜೈಪುರ, ದೆಹಲಿ ಮತ್ತಿತರ ಕಡೆಗಳಲ್ಲೂ ಮೆಟ್ರೋ ಕಾಮಗಾರಿಗಳು ಪ್ರಗತಿಯಲ್ಲಿವೆ. ಅಲ್ಲಿ ಭಾಗವಹಿಸಿ ಕಂಪೆನಿಗಳೇ “ನಮ್ಮ ಮೆಟ್ರೋ’ದಲ್ಲೂ ಪಾಲ್ಗೊಳ್ಳುತ್ತವೆ. ಜತೆಗೆ ಕಾಮಗಾರಿ ನಿರ್ಮಾಣಕ್ಕೆ ಬೇಕಾದ ವಸ್ತುಗಳ ಮಾರುಕಟ್ಟೆ ಬೆಲೆ, ಕೆಲವೊಮ್ಮೆ ಕಂಪೆನಿಗಳಿಗೆ ಗುರಿ ಸಾಧನೆಯ ಅನಿವಾರ್ಯತೆ ಸೇರಿದಂತೆ ಹಲವು ಅಂಶಗಳು ಇದರ ಮೇಲೆ ಪರಿಣಾಮ ಬೀರುತ್ತವೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. 

ಬಾಕಿ ಉಳಿದಿರುವ ಮಾರ್ಗ: ಈ ಮಧ್ಯೆ ಟೆಂಡರ್‌ ರದ್ದತಿಯಿಂದ ಸುರಂಗ ಮಾರ್ಗ ನಿರ್ಮಾಣ ಯೋಜನೆ ಒಂದು ವರ್ಷ ತಡವಾಯಿತು. ಇನ್ನೂ ಪ್ಯಾಕೇಜ್‌-1 ಡೈರಿವೃತ್ತದಿಂದ ಲ್ಯಾಂಗ್‌ಫೋರ್ಡ್‌ ಟೌನ್‌ (3.65 ಕಿ.ಮೀ.) ಹಾಗೂ ಪ್ಯಾಕೇಜ್‌-4 ಟ್ಯಾನರಿ ರಸ್ತೆಯಿಂದ ನಾಗವಾರ (4.59 ಕಿ.ಮೀ.) ನಡುವಿನ ಕಾಮಗಾರಿಗೆ ಈಚೆಗಷ್ಟೇ ಟೆಂಡರ್‌ ಕರೆಯಲಾಗಿದೆ.

2018ರ ಬಿಡ್‌ (ಆವರಣದಲ್ಲಿರುವುದು ಕನಿಷ್ಠ ಬಿಡ್‌ ಮಾಡಿದ ಕಂಪೆನಿ ಹೆಸರು)
ಮಾರ್ಗ    ಕನಿಷ್ಠ ಬಿಡ್‌ 

-ಪ್ಯಾಕೇಜ್‌-2    2,219.86 ಕೋಟಿ ರೂ. (Gulemark)
-ಪ್ಯಾಕೇಜ್‌-3    2,237.58 ಕೋಟಿ ರೂ. (L and T)

ಮರುಟೆಂಡರ್‌ ಬಿಡ್‌
ಮಾರ್ಗ    ಕನಿಷ್ಠ ಬಿಡ್‌

-ಪ್ಯಾಕೇಜ್‌-2    1,329.14 ಕೋಟಿ ರೂ.
-ಪ್ಯಾಕೇಜ್‌-3    1,299.23 ಕೋಟಿ ರೂ.

* ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next