Advertisement

ಜನಸ್ನೇಹಿ ಆಗಲಿದೆ ನಿಮ್ಮೂರ ಗ್ರಂಥಾಲಯ

12:25 AM Mar 10, 2020 | Lakshmi GovindaRaj |

ಬೆಂಗಳೂರು: ಗ್ರಾಮೀಣ ಭಾಗದ ಗ್ರಂಥಾಲಯಗಳನ್ನು ಸಂಪೂರ್ಣ ಜನಸ್ನೇಹಿಗೊಳಿಸುವ ಕಾರ್ಯಕ್ಕೆ ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಮುಂದಾಗಿದೆ. ಆ ಹಿನ್ನೆಲೆಯಲ್ಲಿ ಗ್ರಾ.ಪಂ.ಗಳಲ್ಲಿರುವ ಗ್ರಂಥಾಲಯಗಳ ಪರಿಣಾಮಕಾರಿ ನಿರ್ವಹಣೆಗೆ ಪಂಚಾಯಿತಿ ಮಟ್ಟದಲ್ಲಿ ಸಲಹಾ ಸಮಿತಿಗಳನ್ನು ರಚಿಸಲು ನಿರ್ಧರಿಸಿದೆ.

Advertisement

ಬೆಂಗಳೂರು ದಕ್ಷಿಣ, ಉತ್ತರ, ಪೂರ್ವ ಮತ್ತು ಆನೇಕಲ್‌ ತಾಲೂಕುಗಳು ನಗರ ಜಿ.ಪಂ ವ್ಯಾಪ್ತಿಗೆ ಬರುತ್ತವೆ. ಈ ನಾಲ್ಕೂ ತಾಲೂಕುಗಳಲ್ಲಿ 96 ಗ್ರಾ.ಪಂ.ಗಳಿವೆ. ಈ ಎಲ್ಲಾ ಪಂಚಾಯಿತಿಗಳಲ್ಲಿ ಗ್ರಾ.ಪಂ ಮಟ್ಟದ ಸಲಹಾ ಸಮಿತಿ ರಚಿಸಲಾಗುತ್ತಿದೆ. ಆಯಾ ಪಂಚಾಯಿತಿ ಅಧ್ಯಕ್ಷರು ಸಲಹಾ ಸಮಿತಿ ಅಧ್ಯಕ್ಷರಾಗಿರುತ್ತಾರೆ.

ಜತೆಗೆ ಸ್ಥಳೀಯ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕರು, ಯುವಕ ಮತ್ತು ಯುವತಿ ಮಂಡಲದ ಪ್ರತಿನಿಧಿಗಳು, ಹಿರಿಯ ನಾಗರಿಕರು ಮತ್ತು ಸ್ಥಳೀಯ ಶಿಕ್ಷಣ ತಜ್ಞರು ಅಥವಾ ಸಾಹಿತಿಗಳು ಈ ಸಮಿತಿ ಸದಸ್ಯರಾಗಿರುತ್ತಾರೆ. ಆಯಾ ಗ್ರಂಥಾಲಯದ ಮೇಲ್ವಿಚಾರಕರು ಸಮಿತಿ ಸಂಚಾಲಕರಾಗಿ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು (ಪಿಡಿಒ) ಸದಸ್ಯ ಕಾರ್ಯದರ್ಶಿಗಳಾಗಿ ಕಾರ್ಯನಿರ್ವಹಿಸಲಿದ್ದಾರೆ.

ಈ ಸಮಿತಿ ತಿಂಗಳಿಗೊಮ್ಮೆ ಸಭೆ ಸೇರಿ ಗ್ರಂಥಾಲಯಗಳ ಸರ್ವಾಂಗೀಣ ಅಭಿವೃದ್ಧಿಗೆ ಹಾಗೂ ಪರಿಣಾಮಕಾರಿ ನಿರ್ವಹಣೆಗೆ ಅಗತ್ಯವಿರುವ ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದು ಆನೇಕಲ್‌ ತಾಲೂಕಿನ ಹೂಸ್ಕೂರು ಗ್ರಾ.ಪಂ ಹಿರಿಯ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಸಲಹಾ ಸಮಿತಿ ಜವಾಬ್ದಾರಿಗಳೇನು?: ಗ್ರಾ.ಪಂ ಮಟ್ಟದ ಸಲಹಾ ಸಮಿತಿಗೆ ಈಗಾಗಲೇ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಕೆಲವು ಜವಾಬ್ದಾರಿಗಳನ್ನು ನೀಡಿದೆ. ಅದರಂತೆ ಗ್ರಂಥಾಲಯಗಳಿಗೆ ಸಮರ್ಪಕ ಕಟ್ಟಡದ ವ್ಯವಸ್ಥೆ, ಅಗತ್ಯ ಪಿಠೊಪಕರಣ ಕಲ್ಪಿಸುವುದು, ಪುಸ್ತಕಗಳ ಕೊರತೆ ನೀಗಿಸುವುದು ಹಾಗೂ ಪುಸ್ತಕಗಳನ್ನು ಒದಗಿಸುವ ಹಣೆ ಸಮಿತಿ ಮೇಲಿದೆ.

Advertisement

ಇವುಗಳ ಜತೆಗೆ ದಿನಪತ್ರಿಕೆಗಳು, ನಿಯತಕಾಲಿಕೆಗಳು ಲಭ್ಯವಿರುವಂತೆ ನೋಡಿಕೊಳ್ಳುವುದು. ಗ್ರಂಥಾಲಯಗಳಲ್ಲಿ ಉದ್ಯೋಗ ಮಾಹಿತಿ ಲಭ್ಯವಿರುವಂತೆ ಮಾಡುವುದು. ಓದುಗರೊಡನೆ ವಿಷಯವಾರು ಸಂವಾದ ಏರ್ಪಡಿಸುವುದು, ಮಕ್ಕಳಿಗಾಗಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನ ನೀಡುವ ಕೆಲಸವನ್ನೂ ಸಲಹಾ ಸಮಿತಿ ಮಾಡಬೇಕಿದೆ.

ಗ್ರಾ.ಪಂ. ನಿರ್ವಹಣೆಗೆ ಅನುದಾನ: ಗ್ರಂಥಾಲಯ ಲೆಕ್ಕದಲ್ಲಿ ಸರ್ಕಾರದಿಂದ ಬಿಡುಗೆ ಮಾಡುವ ಅನುದಾನವನ್ನು ಗ್ರಾಮ ಪಂಚಾಯಿತಿಗಳ ನಿರ್ವಹಣೆಗಾಗಿ ಬಳಸಬಹುದಾಗಿದೆ. ಆಸ್ತಿ ತೆರಿಗೆ ಜತೆಗೆ ಸಂಗ್ರಹಿಸಿರುವ ಗ್ರಂಥಾಲಯ ಸೆಸ್‌ (ಉಪಕರ) ಹಣವನ್ನು ಬಳಸಬಹುದು. ಅಲ್ಲದೆ, ಸ್ವಂತ ಸಂಪನ್ಮೂಲದಿಂದ, ದಾನಿಗಳಿಂದ ಕೂಡ ಹಣ, ಪುಸ್ತಕ, ಪೀಠೊಪಕರಣ, ಕಂಪ್ಯೂಟರ್‌ ರೂಪದಲ್ಲೂ ನೆರವು ಪಡೆಯಬಹುದಾಗಿದೆ.

ಹಾಗೇ ಸಲಹಾ ಸಮಿತಿಗಳ ಕಾರ್ಯಚಟುವಟಿಕೆಗಳಿಗೆ ತಗಲುವ ಸಾಂದರ್ಭಿಕ ವೆಚ್ಚವನ್ನು ಗ್ರಾ.ಪಂ ನಿಧಿಯಿಂದ ಭರಿಸಬಹುದಾಗಿದೆ. ಈ ಹಿಂದೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವಾಲಯದ ಅಧೀನದಲ್ಲಿ ಸಾರ್ವಜನಿಕ ಗ್ರಂಥಾಲಯ ಇಲಾಖೆ ಇತ್ತು. ಆದರೆ ಇತ್ತೀಚೆಗೆ ಗ್ರಂಥಾಲಯಗಳನ್ನು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಗೆ ನೀಡಲಾಗಿದೆ.

ಆ ಹಿನ್ನೆಲೆಯಲ್ಲಿ ಗ್ರಂಥಾಲಯಗಳಲ್ಲಿ ಮೂಲ ಸೌಕರ್ಯ ಹೆಚ್ಚಿಸಿ, ಹೊಸ ಪೀಠೊಪಕರಣಗಳ ಜತೆಗೆ ಪರಿಣಾಮಕಾರಿ ನಿರ್ವಹಣೆಗಾಗಿ ಗ್ರಾ.ಪಂ ಮಟ್ಟದಲ್ಲಿ ಸಲಹಾ ಸಮಿತಿ ರಚಿಸುವ ಬಗ್ಗೆ ಈಗಾಗಲೇ ಪಂಚಾಯತ್‌ ರಾಜ್‌ ಇಲಾಖೆ ಸುತ್ತೋಲೆ ಹೊರಡಿಸಿದೆ ಎಂದು ಹಿರಿಯ ಅಧಿಕಾರಿ ಮಾಹಿತಿ ನೀಡಿದ್ದಾರೆ. ಗ್ರಾ.ಪಂ ವ್ಯಾಪ್ತಿಯ ಗ್ರಂಥಾಲಯಗಳನ್ನು ಜ್ಞಾನ ಕೇಂದ್ರಗಳಾಗಿ ಮಾರ್ಪಡಿಸಿದರೆ ಎಲ್ಲಾ ವರ್ಗದ ಜನರಿಗೆ ಅಗತ್ಯವಿರುವ ಮಾಹಿತಿ ಸ್ಥಳೀಯವಾಗೇ ಲಭ್ಯವಾಗುವಂತೆ ಮಾಡಬಹುದಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.

ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಂಥಾಲಯಗಳನ್ನು ಜನಸ್ನೇಹಿ ಆಗಿಸಲು ಹಾಗೂ ಗ್ರಂಥಾಲಯಗಳ ಪರಿಣಾಮಕಾರಿ ನಿರ್ವಹಣೆಗಾಗಿ ಗ್ರಾ.ಪಂ ಮಟ್ಟದಲ್ಲಿ ಸಲಹಾ ಸಮಿತಿ ರಚನೆ ಸಂಬಂಧ ಸುತ್ತೋಲೆ ಹೊರಡಿಸಲಾಗಿದೆ.
-ಡಿ.ಮುರಳಿ, ಹೂಸ್ಕೂರು ಗ್ರಾ.ಪಂ ಪಿಡಿಒ

* ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next