Advertisement
ಮೊನ್ನೆ ಒಂದು ಪುಸ್ತಕ ಬಿಡುಗಡೆಗೆ ಹೋಗಿದ್ದೆ. ಕಾರ್ಯಕ್ರಮ ಶುರುವಾಗುವ ಮೊದಲು ಆಯೋಜಕರು - ‘ಸಮಾರಂಭಕ್ಕೆ ಬರುವವರು ಕಾರು ತರಬೇಡಿ. ದಯಮಾಡಿ, ವೋಲಾ, ಮೆಟ್ರೋನಲ್ಲಿ ಬನ್ನಿ. ಇಲ್ಲಿ ಪಾರ್ಕಿಂಗ್ ಸಿಗುತ್ತಿಲ್ಲ. ಟ್ರಾಫಿಕ್ಕೂ ಜಾಸ್ತಿ ಇದೆ ‘ ಅಂತ ಎಲ್ಲರಿಗೂ ಮೆಸೇಜು ಕಳುಹಿಸುತ್ತಿದ್ದರು. ನಾನು ಟ್ರಾಫಿಕ್‌ನಲ್ಲೇ ನಿಂತಿದ್ದೆ. ಪಕ್ಕದ ಕಾರಿನವನು “ಥೂತ್, ಏನ್ರೀ ಬೆಂಗಳೂರ ಟ್ರಾಫಿಕ್. ಎಲ್ರೂ ಕಾರುಗಳನ್ನ ತಂದ್ರೆ ಏನಾಗುತ್ತೆ?’ ಅಂತ ಬೈಯುತ್ತಿದ್ದ. ಅವನ ಹಿಂದೆ ಇದ್ದ ಕಾರಿನವನು ಇವನನ್ನು ಇದೇ ಧ್ವನಿಯೊಳಗೆ ಬೇರೆ ರೀತಿ ಬಯ್ಯುತ್ತಿದ್ದ. ಮತ್ತೂಬ್ಬ ಮಗದೊಬ್ಬನನ್ನು…ಹೀಗೆ ಸಾಲುಗಟ್ಟಿದ ಬೈಗುಳಗಳು ನನ್ನ ಕಿವಿಯಲ್ಲಿ ಜಾಮ್ ಆಗುತ್ತಿದ್ದವು. ಹೀಗೆಲ್ಲಾ ಬೈದಾಡುತ್ತಿದ್ದವರು ಪಾರ್ಟ್ ಆಫ್ ದಿ ಟ್ರಾಫಿಕ್ ಅಲ್ವೇ? ಆದರೂ ಆಕಾಶಕ್ಕೆ ಎಂಜಲು ಉಗಿದಂತೆ ಏಕೆ ಬೈಯ್ಯುತ್ತಿದ್ದರು? ಮತ್ತೆ ಅದು ತಮ್ಮ ಮುಖಕ್ಕೇ ಬಂದು ಬೀಳುತ್ತಿದೆ ಅನ್ನೋದು ಅವರಿಗೆ ತಿಳಿದಂತಿರಲಿಲ್ಲ.
Related Articles
ತೀಟೆ ಅಂದರೇನೆ ಹಾಗೇ, ಇದು ಈಗ ಹಳ್ಳಿಹಳ್ಳಿಗೂ ಸರಬರಾಜಾಗಿಬಿಟ್ಟು, ನೆಮ್ಮದಿಯಾಗಿದ್ದ ಮನೆಯಲ್ಲಿ ಅಶಾಂತಿಯ ಕೊಳ್ಳಿ ಇಟ್ಟುಬಿಟ್ಟಿದೆ. ಸಿಟಿಗಳಿಗೆ ಹೋದಾಗೆಲ್ಲಾ, ನನಗೊಂದು ಕುತೂಹಲ. ಅದಕ್ಕೆ ಅಲ್ಲಿನ ಮಕ್ಕಳಿಗೆ – ‘ನೀವು ಏನು ತರಕಾರಿ ತಿಂತೀರಿ?’ ಅಂತೀನಿ.
ಅವರು- ಕ್ಯಾಪ್ಸಿಕಮ್, ಕ್ಯಾರೆಟ್, ಸೊಪ್ಪು ಹೀಗೆ 4 ತರಕಾರಿ ಹೆಸರು ಹೇಳಿ ತಲೆ ಗೀರಿಕೊಳ್ಳುತ್ತಾರೆ.
“ನಿಮಗೆ ಒನಗೊನೆ ಸೊಪ್ಪು ಗೊತ್ತಾ, ಚಕ್ಕೋತ? ಈರುಳ್ಳಿ ಹೇಗೆ ಬೆಳೀತಾರೆ?’ ಹೀಗೆಲ್ಲ ಕೇಳ್ತಾ ಹೋಗ್ತೀನಿ. ನಾಲ್ಕೈದು ತರಕಾರಿ ಹೆಸರು ಆದ ಮೇಲೆ ಯಾವುದೋ ಅನ್ಯಗ್ರಹದ ಬಗ್ಗೆ ಮಾತನಾಡುತ್ತಿದ್ದೀನಿ ಅನ್ನೋ ರೀತಿ ಬೆರಗಾಗುತ್ತಾರೆ. ಏಕೆಂದರೆ ಅವರಪಾಲಿಗೆ ಈ ಭೂಮಿ ಮೇಲೆ ಅಸ್ತಿತ್ವದಲ್ಲಿರೋದೇ 5 ತರಕಾರಿ. ಅವುಗಳು ಹೇಗೆ ಬೆಳೆಯುತ್ತವೆ, ಯಾರು ಬೆಳೆಯುತ್ತಾರೆ ಅಂತ ಕೇಳಿ? ಬೆಬ್ಬರು ಬಿಧ್ದೋಗ್ತಾರೆ. ನಮ್ಮ ಹಣೆಬರಹ- ಮಾರ್ಕೆಟ್‌ನಲ್ಲೂ ಇಷ್ಟೇ ತರಕಾರಿಗಳು ಇರ್ತವೆ. ಇದನ್ನು ನೋಡಿಕೊಂಡೇ ಮಕ್ಕಳು ಬೆಳೀತಾರೆ. ಒಂದು ಕಡೆ ಬಳಸುವುದೂ ಇಲ್ಲ, ಆ ಕಡೆ ಬೆಳೆಸುವುದೂ ಇಲ್ಲ ಅಂದ ಮೇಲೆ ಅವಕ್ಕೆ ಹೇಗೆ ತಾನೆ ತಿಳೀಬೇಕು?
Advertisement
ಒಂದು ಸಲ ಒಬ್ಬ ಹುಡುಗನನ್ನು- ನಿಮ್ಮ ಮನೆಗೆ ನೀರು ಎಲ್ಲಿಂದ ಬರುತ್ತೆ ಪುಟ್ಟಾ? ಅಂದೆ.ಅವನು ತಟಕ್ಕಂತ “ನಲ್ಲಿಯಿಂದ ಅಂಕಲ್’ ಅಂದ.
“ನಲ್ಲಿಗೆ ನೀರು ಎಲ್ಲಿಂದ ಬರುತ್ತೆ?’
“ಸಂಪ್‌ನಿಂದ.’
“ಸಂಪಿಗೆ?’
“ಟ್ಯಾಂಕ್‌ನಿಂದ ‘
“ಟ್ಯಾಂಕಿಗೆ?’
“ಸರ್ಕಾರದೋರು ತಂದು ಹಾಕ್ತಾರೆ’ ಅಂದುಬಿಡೋದೇ?!
ನಿಜ, ಮನೆಗೆ ನೀರು ಬರಲಿಲ್ಲ ಅಂದರೆ ಅವರನ್ನು ತಾನೇ ಕೇಳೋದು! ಆಕಾಶವನ್ನಾಗಲೀ, ಭೂಮಿಯನ್ನಾಗಲೀ ಕೇಳೊ ನೈತಿಕ ಹಕ್ಕೇ ನಮಗಿಲ್ವಲ್ಲ. ಹೇಗೆ ಬೆಳೆಸಿದ್ದೀವಿ ನೋಡಿ ನಮ್ಮ ಮಕ್ಕಳನ್ನ? ಮರ ನೋಡದೆ ತೆಂಗಿನ ಕಾಯಿ ಬಳಸೋದು, ಗಿಡ ನೋಡದೆ ದೇವರಿಗೆ ಹೂ ಮುಡಿಸೋದು, ಭತ್ತದ ಬಗ್ಗೆ ತಿಳಿಯದೇ ಅನ್ನ ತಿನ್ನೋದು, ತೆನೆ ನೋಡದೇ ರಾಗಿಮುದ್ದೆ ಮುರಿಯೋದು, ಮುಖ ನೋಡದೇ ಇಂಟರ್‌ನೆಟ್‌ನಲ್ಲಿ ಮದುವೆಯಾಗೋದು…ಒಟ್ಟಾರೆ ನಾವು ತಿನ್ನೋ ಆಹಾರ ಎಲ್ಲಿಂದ ಬರುತ್ತದೆ, ಹೇಗೆ ಬೆಳೆಯುತ್ತದೆ ಅಂತ ತಿಳಿಯದೇ ಬದುಕಬೇಕು ಅನ್ನೋದೆಲ್ಲಾ ನಮ್ಮ ಪಟ್ಟಣಗಳು ಹೇಳಿಕೊಟ್ಟ ಪಾಠ. ವಾರದ ರಾತ್ರಿ, ಬೆಳಗುಗಳನ್ನು ಕಂಪೆನಿಗಳಿಗೆ ಅಡವಿಟ್ಟು, ದುಡಿದು ವೀಕೆಂಡ್, ವೀಕೆಂಡ್ ಅಂತ ರೆಸಾರ್ಟಿನಲ್ಲಿ ಒತ್ತಡ ನಿವಾರಿಸಿಕೊಳ್ಳೋದು ಸಿಟಿಗರ ಸಂವಿಧಾನ. ಆಯ್ತಪ್ಪ, ರೆಸಾರ್ಟಿನ ದಾರಿಬಿಟ್ಟು ಹಳ್ಳಿಗೆ ಹೋಗಿ, ಅಲ್ಲಿನ ಜನರ ಜೀವನವನ್ನು ಯಾವತ್ತಾದರು ಇಣುಕಿದ್ದೀರಾ? ಇಲ್ಲ, ಮಾಡೋಲ್ಲ. ಒಂದು ಸತ್ಯ ಹೇಳ್ತೀನಿ. ನಾವು ಪಟ್ಟಣದಲ್ಲಿರೋರು. ಹಳ್ಳಿಗಳಿಗೆ ಹೋಗಿ, ಪಟ್ಟಣದ ಬದುಕು ಕಷ್ಟ ಆಗ್ತಿದೆ. ಒಂದು ತಿಂಗಳ ಮಟ್ಟಿಗೆ ನಿಮ್ಮ ಮನೇಲಿ ಇರಬಹುದಾ ಅನ್ನಿ, “ಅಂಬಲಿನೋ, ಗಂಜೀನೋ ಕೊಡ್ತೀವಿ, ಮೊದಲು ಬನ್ನಿ ಒಳಗೆ’ ಅಂತಾರೆ ನಮ್ಮ ರೈತರು. ಅದೇ, ರೈತರು “ನಮ್ಮಕಡೆ ಮಳೆ ಬರ್ತಿಲ್ಲಾ, ಬೆಳೆ ಆಗ್ತಿಲ್ಲ. ಒಸಿ ಕಷ್ಟ ಇದೆ. ನಿಮ್ಮ ಮನೇಲಿ ತಿಂಗ್ಳು ಇರಬಹುದಾ?’ ಅಂದರೆ ನಾವು ಮನೆಗಳಲ್ಲಿ ಅವರನ್ನು ಇಟ್ಟುಕೊಳ್ಳೋಕೆ ಆಗುತ್ತಾ? ಇದೇನು ಬಡತನದ ಪ್ರಶ್ನೆಯಲ್ಲ; ಮನಸ್ಸಿನ ಪ್ರಶ್ನೆ, ಔದಾರ್ಯದ ಪ್ರಶ್ನೆ. ಸದಾ ಬೇರೆಯವರನ್ನು ಮೆಚ್ಚಿಸುವ ಭರಾಟೆಯಲ್ಲಿ ತೀಟೆಗಳ ಹಿಂದೆ ಬಿದ್ದು, ಇಂಥ ಗುಣಗಳನ್ನೆಲ್ಲಾ ಕಳೆದುಕೊಂಡಿದ್ದೇವೆ. ಆದರೆ ಹಳ್ಳಿಗಳಲ್ಲಿ ಇನ್ನೂ ಅಲ್ಲಲ್ಲಿ ಪಾಚಿಯಂತೆ ಅಂಟುಕೊಂಡಿದೆ. ಹಾಗಂತ, ತೀಟೆಗಳನ್ನು ಮಟ್ಟ ಹಾಕೋದಕ್ಕೆ ಕಾನೂನು ಮಾಡೋಕೆ ಆಗೋಲ್ಲ. ನಿನ್ನ ಬದುಕನ್ನು ನೀನೇ ಬದುಕಬೇಕು, ಅವನ ಬದುಕನ್ನು ಅವನೇ ಬದುಕಬೇಕು. ಹೀಗೂ ಬದುಕಬಹುದು ಅಂತ ಬದುಕಿ ತೋರಿಸುವ ಮೂಲಕ ತೀಟೆಗಳ ತೀರುವಳಿ ಮಾಡಬಹುದು. ಈ ಪಟ್ಟಣದ ಆಕರ್ಷಣೆಗೂ ತೀಟೆಗಳೆ ಕಾರಣ. ಎಲ್ಲರೂ ಹಳ್ಳಿಗಳಿಂದ ನಗರಗಳಿಗೆ ಬಂದು ಲಂಗರು ಹಾಕಿದರೆ ನಮ್ಮ ಹಸಿವಿನ ವಾರಸುದಾರರು ಯಾರು? ಇವತ್ತಿನ ನಮ್ಮ ಸಾಲದ ಉಸಿರಾಟಕ್ಕೆ ಯಾರು ಕಾರಣ ಅಂತೀರಿ, ಇದೇ ತೀಟೆ. ಹೆಂಡತಿ ಜೊತೆಗಿಂತ ಸಾಲದ ಜೊತೆಗೇ ಸಂಸಾರ ಮಾಡುತ್ತಿದ್ದೇವೆ. ನಮ್ಮ ಅರ್ಥವ್ಯವಸ್ಥೆಗೂ ತೀಟೆಗಳೇ ಮೂಲ ಬಂಡವಾಳ. ಒಂದ್ಸಲ ಯೋಚ್ನೆ ಮಾಡಿ. ಇಎಂಐನಲ್ಲಿ ಕಾರು ಕೊಂಡವರೆಲ್ಲ- ಒಂದು ದಿನ, “ನಮ್ಮ ಕೈಲಿ ನಾಳೆಯಿಂದ ಸಾಲ ಕಟ್ಟೋಕೆ ಆಗೋಲ್ಲ. ಕಾರುಗಳನ್ನು ನೀವೇ ಇಟ್ಕೊ ಹೋಗಿ’ ಅಂತ ಹೇಳಿನೋಡಲಿ. ಬ್ಯಾಂಕಿಗೆ ಚಳಿ ಜ್ವರ ಬರದೇ ಇದ್ದರೆ ಕೇಳಿ! ಕೋಟ್ಯಂತರ ಸಾಲದ ಕಾರುಗಳನ್ನು ನಿಲ್ಲಿಸಲು ಜಾಗ ಎಲ್ಲಿದೆ? ಬ್ಯಾಂಕ್‌ಗಳು ಬಾಗಿಲು ಹಾಕಿಕೊಳ್ಳುತ್ತವೆ. ನಮ್ಮ ಎಕಾನಮಿ ಬುಡಮೇಲಾಗುತ್ತದೆ. ಅಷ್ಟರ ಮಟ್ಟಿಗೆ ಸಾಲಗಳನ್ನು ಮಾಡಿ ತೀಟೆ ತೀರಿಸಿಕೊಂಡಿದ್ದೇವೆ. ಮೊನ್ನೆ ಕಾಡಿಗೆ ಹೋದಾಗ ಯಾರೋ ಒಬ್ಬರು ಕೇಳಿದರು. “ಇಷ್ಟೆಲ್ಲಾ ಹೇಳ್ತಿರಲ್ಲಾ ಸಾರ್, ನಾವು ಸಿಟಿಗೆ ಬರಬೇಕು, ನಮಗೂ ಫ್ಲೈಟ್, ಮೆಟ್ರೋದಲ್ಲಿ ಓಡಾಡಬೇಕು ಅಂತ ಆಸೆ ಇರೋಲ್ವೇ?’ ಅಂತ. ಖಂಡಿತ. ಆದರೆ ನಿಮಗೆ ಅನಿವಾರ್ಯ, ಅವಶ್ಯಕತೆ ಇದ್ದರೆ ಓಡಾಡಿ. ನಾನು ದಿನಕ್ಕೆ 15ಗಂಟೆ ಕೆಲಸ ಮಾಡಬೇಕು. ಜಾಸ್ತಿ ಸಮಯ ಖರ್ಚು ಮಾಡೋಕೆ ಆಗೋಲ್ಲ. ಅದಕ್ಕೆ ಫ್ಲೈಟ್‌ನಲ್ಲಿ ಹೋಗ್ತಿನಿ. ನಿಮಗೂ ಇಂಥ ಅನಿವಾರ್ಯ ಇದ್ದರೆ ಬಳಸಿ, ತಪ್ಪೇನಿಲ್ಲ. ಆದರೆ, ಅನಿವಾರ್ಯವಿಲ್ಲದೇ ಇದ್ದರೂ ಬೆಂಗಳೂರಲ್ಲಿ ಕೂರೋದು, ಪಟ್ಟಣದಲ್ಲಿ ಕೂತು ಏನೋ ಮಾಡ್ತಾ ಇದ್ದೀನಿ ಅಂತ ತೋರಿಸ್ಕೊಳ್ಳೋಕೆ ಬದುಕೋ ತೀಟೆಗಳಿವೆಯಲ್ಲಾ, ಇವೆಲ್ಲಾ ಏಕೆ? ಅಂದೆ. ಆ ಕಡೆಯಿಂದ ಉತ್ತರ ಬರಲಿಲ್ಲ. ತೀಟೆ ಒಂಥರ ಹನುಮನ ಬಾಲದ ಬೆಂಕಿಯಂತೆ.. ಹೋದಲೆಲ್ಲಾ, ಹೋದವರನ್ನೆಲ್ಲಾ ಸುಟ್ಟು ಲಂಕೆ ಮಾಡಿಬಿಡುತ್ತೆ. ಅದಕ್ಕೆ ನಮ್ಮೊಳಗಿರೋ ತೀಟೆ ಆರಿಸಿದರೆ, ಈ ಬೆಂಕಿಯೂ ನಂದುಹೋಗುತ್ತದೆ. ಮನುಷ್ಯ ಅನ್ನೋನು ಇದ್ದು, ಕೊಟ್ಟು ಬದುಕ ಬೇಕು. ಇಂದು ನಾವು ಬರೀ ಗಂಟುಕಟ್ಟಿ “ಇಟ್ಟು’ ಬದುಕುತ್ತಿದ್ದೇವೆ. ಕಾಡು ಪ್ರಾಣಿಗಳನ್ನು ನೋಡಿ. ಹಸಿವಾದಾಗ ಒಂದು ಹುಲ್ಲುಗಾವಲಲ್ಲಿ ಮೇಯುತ್ತಾ ಮತ್ತೂಂದಕ್ಕೆ ಹೋಗುತ್ತವೆ. ಅದು ಮತ್ತೆ
ಈ ಹುಲ್ಲುಗಾವಲಿಗೆ ವಾಪಸು ಬರುವ ಹೊತ್ತಿಗೆ ಅಲ್ಲಿ ಹುಲ್ಲುಚಿಗುರಿರುತ್ತದೆ. ಯಾಕೆಂದರೆ, ಭವಿಷ್ಯದ ಹಸಿವಿಗೆ ಭೂಮಿ ಮೇಲಿನ ಹುಲ್ಲನ್ನಷ್ಟೇ ತಿಂದು, ಬೇರುಗಳನ್ನು ಹಾಗೇ ಬಿಟ್ಟಿರುತ್ತದೆ. ಆದರೆ ಮನುಷ್ಯ? ಹುಲ್ಲು, ಅದರ ಬುಡ, ಬೇರುಗಳನ್ನು ಕಿತ್ತು, ಮತ್ತೆ ಅಲ್ಲಿ ಏನೂ ಬೆಳೆಯದ ಹಾಗೆ ಮಾಡುವ ಭಸ್ಮಾಸುರ. ಈ ಎಲ್ಲದಕ್ಕೂ ಅವನ ತೀಟೆ, ಆ ತೀಟೆಯ ಡ್ರೈವರ್ ಆಗಿರುವ ದುರಾಸೆಯೇ ಕಾರಣ. ನಮ್ಮ ಮರಗಳು ಕೇಳ್ತವೆ. “ನಾವು ಎರಡು ಸಾವಿರ ವರ್ಷಗಳಿಂದ ಶಿಲುಬೆಗಳನ್ನು ಕೊಡ್ತಾನೇ ಇದ್ದೀವಿ. ನಿಮ್ಮಿಂದ ಒಬ್ಬೇ ಒಬ್ಬ ಏಸುವನ್ನು ಕೊಡಲು ಸಾಧ್ಯವಾಗಿಲ್ವಲ್ಲ ಏಕೆ?’ ಅಂತ. ಪ್ರಕೃತಿಯ ಈ ಪ್ರಶ್ನೆಗೆ ಉತ್ತರ ಹೇಳಿ ನೋಡೋಣ. – ಪ್ರಕಾಶ್ ರೈ Also Read this:
– ಸಿಕ್ಕಲ್ಲೆಲ್ಲ ಬಿಲ್ಡಿಂಗ್ ಕಟ್ಟಿ ಹಸಿವು ನೀಗಿಸಿಕೊಳ್ಳೋಕ್ಕೆ ಆಗೋಲ್ಲ: //bit.ly/2uwEKFm
– ತೋಟದಲ್ಲಿ ಕೂತರೆ ಆಹಾ, ಮನಸ್ಸು ಗಾಂಧಿ ಬಜಾರ್!: //bit.ly/2tU70WV
– ಬಾವಿಯ ಪಾಚಿ, ಲಂಕೇಶರ ಮಾತು…: //bit.ly/2tAnnb3
– ಇದೊಳ್ಳೆ ರಾಮಾಯಣ ಅಲ್ಲ; ಇದುವೇ ನಾನು, ನನ್ನ ಕನಸು: //bit.ly/2uNtyb0