Advertisement

“ನಮ್ಮ ಊರು ಸ್ವಚ್ಛ ಊರು’ಅಭಿಯಾನ: ಕೈದೋಟ ನಿರ್ಮಾಣ

07:07 PM Oct 19, 2021 | Team Udayavani |

ಉಡುಪಿ: ಜಿಲ್ಲೆ ಸಾರ್ವಜನಿಕ ಸ್ಥಳದಲ್ಲಿ ಕಸ ಎಸೆಯುವ ಸಂಖ್ಯೆ ದಿನದಿಂದನಕ್ಕೆ ಹೆಚ್ಚಾಗುತ್ತಿದ್ದು, ಅದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಜಿ.ಪಂ. ಸ್ವಚ್ಛ ಭಾರತ ಮಿಷನ್‌ ಯೋಜನೆಯಡಿ ವಿನೂತನ ನಮ್ಮ ಊರು ಸ್ವಚ್ಛ ಊರು ಅಭಿಯಾನಕ್ಕೆ ಕೈ ಹಾಕಿದೆ. ಆ ಮೂಲಕ ಕಸ ಎಸೆಯುವ ಬ್ಲ್ಯಾಕ್‌ ಸ್ಪಾಟ್‌ಗಳಲ್ಲಿ ಮಿನಿ ಗಾರ್ಡನ್‌ ನಿರ್ಮಿಸಿ, ತ್ಯಾಜ್ಯ ಎಸೆದವರಿಗೆ ತಂಡ ವಿಧಿಸಲು ಮುಂದಾಗಿದೆ.

Advertisement

ತ್ಯಾಜ್ಯ ಮುಕ್ತ ಉಡುಪಿಯನ್ನಾಗಿಸುವ ನಿಟ್ಟಿನಲ್ಲಿ ಜಿ.ಪಂ. ಕೆಲದ ಹಲವು ವರ್ಷಗಳಿಂದ ಪ್ರಯತ್ನಿ ಸುತ್ತಾ ಬರುತ್ತಿದ್ದರೂ ಅಷ್ಟಾಗಿ ಯಶಸ್ಸು ಕಾಣುವಲ್ಲಿ ವಿಫ‌ಲ ವಾಗಿದೆ. ಈ ಹಿನ್ನೆಲೆ ಜಿ.ಪಂ. ಜಿಲ್ಲೆಯ ಕಸ ಎಸೆಯುವ ತಾಣಗಳನ್ನು ಗುರುತಿಸಲು ಸಾರ್ವಜನಿಕರಿಂದ ವಾಟ್ಸ್‌ ಆ್ಯಪ್‌ ಮೂಲಕ ಬ್ಲ್ಯಾಕ್‌ ಸ್ಪಾಟ್‌ ಮಾಹಿತಿ ಸಂಗ್ರಹಿಸುವ ವಿಶೇಷ ಯೋಜನೆ ಹಾಕಿಕೊಂಡಿದೆ.

40 ಬ್ಲ್ಯಾಕ್‌ ಸ್ಪಾಟ್‌ ಸ್ವಚ್ಛ
ಜಿ.ಪಂ.ನ ವಾಟ್ಸ್‌ಆ್ಯಪ್‌ ಮೂಲಕ ಬ್ಲ್ಯಾಕ್‌ ಸ್ಪಾಟ್‌ ಮಾಹಿತಿ ನೀಡುವ ಕಾರ್ಯಕ್ರಮದಡಿಯಲ್ಲಿ ಗ್ರಾಮೀಣ ಭಾಗದಿಂದ ಇದುವರೆಗೆ 42 ಕಸ ಎಸೆಯುವ ಪ್ರದೇಶಗಳ ಮಾಹಿತಿ ದೊರಕಿದೆ. ಅವುಗಳಲ್ಲಿ ಇದುವರೆಗೆ 40 ಪ್ರದೇಶಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲಾಗಿದೆ. ಜತೆಗೆ ನಗರಾಡಳಿತ ವ್ಯಾಪ್ತಿಯ ಕಸ ಎಸೆಯುವ ಪ್ರದೇಶದ ಮಾಹಿತಿಯನ್ನು ಸ್ಥಳೀಯಾಡಳಿತಕ್ಕೆ ನೀಡಲಾಗಿದೆ.

ಕಸದ ಕೊಂಪೆ ಕೈದೋಟ
ಪ್ರಸ್ತುತ ತ್ಯಾಜ್ಯ ಎಸೆಯುವ ಜಾಗಗಳನ್ನು ಗುರುತಿಸಿ, ಅಲ್ಲಿನ ಪ್ರದೇಶವನ್ನು ಸ್ವಚ್ಛಗೊಳಿಸಲಾಗುತ್ತದೆ. ತದನಂತರ ಆ ಪ್ರದೇಶದಲ್ಲಿ ಅನುಪಯುಕ್ತ ವಸ್ತುಗಳಾದ ಟೈಯರ್‌ ಹಾಗೂ ಇತರ ವಸ್ತುಗಳಲ್ಲಿ ಸುಂದರವಾಗಿ ಹೂವಿನ ಮತ್ತು ಆಲಂಕಾರಿಕ ಗಿಡಗಳನ್ನು ನೆಡಲಾಗಿದೆ. ಬ್ಯಾನರ್‌, ಸೂಚನಾ ಫ‌ಲಕಗಳನ್ನು ಅಳವಡಿಸಲಾಗಿದೆ. ಕೋಟೇಶ್ವರ, ಕೋಡಿಬೆಟ್ಟು, ಬೊಮ್ಮರಬೆಟ್ಟು ಗ್ರಾ.ಪಂ. ವ್ಯಾಪ್ತಿಯಲ್ಲಿ ಕಸ ಎಸೆಯುವ ಬ್ಲ್ಯಾಕ್‌ ಸ್ಪಾಟ್‌ಗಳನ್ನು ನಿರ್ಮೂಲನ ಗೊಳಿಸಿರುವುದರ ಜತೆಗೆ ಕೈದೋಟ ಪರಿವರ್ತಿಸಿ ಅದಕ್ಕೆ ಕಲಾತ್ಮಕತೆಯ ಸ್ಪರ್ಶ ನೀಡಲಾಗಿದೆ.

ಇದನ್ನೂ ಓದಿ:ಭಾರತೀಯರ ಪ್ರಾಣದ ಜೊತೆ ಪಾಕ್ T-20 ಆಡುತ್ತಿದೆ : ಕೇಂದ್ರದ ವಿರುದ್ಧ ಓವೈಸಿ ವಾಗ್ದಾಳಿ  

Advertisement

ದಂಡದ ಬಿಸಿ
ಜಿ.ಪ. ವ್ಯಾಪ್ತಿಯ ರಾ.ಹೆ. ಸೇರಿದಂತೆ ಗ್ರಾಮೀಣ ಭಾಗದ ರಸ್ತೆ, ಖಾಲಿ ನಿವೇಶನದಲ್ಲಿ ಕಸ ಎಸೆಯುವುದನ್ನು ತಡೆಯುವ ನಿಟ್ಟಿನಲ್ಲಿ ದಂಡ ವಿಧಿಸುವುದನ್ನು ಅನುಷ್ಠಾನಗೊಳಿಸಲಗಿದೆ. ಕಸ ಎಸೆಯುವವರಿಂದ 1,000ದಿಂದ 2,000 ರೂ. ವರೆಗೆ ದಂಡ ಸಂಗ್ರಹಿಸಲಾಗುತ್ತಿದೆ. ಕೆಲವು ಕಡೆಗಳಲ್ಲಿ ತ್ಯಾಜ್ಯ ಎಸೆದವರಿಗೆ ದಂಡದೊಂದಿಗೆ ಅವರಿಂದಲೇ ಸ್ವಚ್ಛತಾ ಕಾರ್ಯ ನಡೆಸುವ ಕಾರ್ಯ ಮಾಡಿಸಲಾಗುತ್ತಿದೆ. ಸಿದ್ಧಾಪುರ, ಸಾಣೂರು, ಬಡಾ, ಅಲೆವೂರು ಗ್ರಾ.ಪಂ.ನಲ್ಲಿ ರಸ್ತೆ ಬದಿಯಲ್ಲಿ ತ್ಯಾಜ್ಯ ಎಸೆದವರನ್ನು ಪತ್ತೆ ಮಾಡಿ ಅವರಿಂದಲೇ ಸ್ವಚ್ಛಗೊಳಿಸಿ ಸುಮಾರು 7,000 ರೂ. ದಂಡ ಸಂಗ್ರಹಿಸಲಾಗಿದೆ.

ಮಾಹಿತಿ ನೀಡಿ –
ಬಹುಮಾನ ಪಡೆಯಿರಿ
ಸಾರ್ವಜನಿಕ ಸ್ಥಳ, ವಾಹನದಲ್ಲಿ ರಸ್ತೆಯ ಸಮೀಪದಲ್ಲಿ, ನದಿಗಳಿಗೆ ಕಸ ಎಸೆಯುವವರು, ಸ್ಥಳ, ವಾಹನ ಸಂಖ್ಯೆ ಮಾಹಿತಿಯನ್ನು ವಾಟ್ಸ್‌ಆ್ಯಪ್‌ ಸಂಖ್ಯೆ ನಂಬರ್‌ 9483330564ಗೆ ಮಾಹಿತಿ ನೀಡಿದ್ದಲ್ಲಿ ಮಾಹಿತಿ ನೀಡಿದವರಿಗೆ ಗ್ರಾ.ಪಂ. ನಿಂದ ಸೂಕ್ತ ಬಹುಮಾನ ನೀಡಲಾಗುತ್ತದೆ. ಮಾಹಿತಿ ನೀಡಿದವರ ಮೊಬೈಲ್‌ ಸಂಖ್ಯೆ, ಹೆಸರನ್ನು ಬಹಿರಂಗಪಡಿಸುವುದಿಲ್ಲ.

ತ್ಯಾಜ್ಯ ಮುಕ್ತ ಜಿಲ್ಲೆಯಾಗಲಿ
ಜಿಲ್ಲೆಯಲ್ಲಿ ಬ್ಲ್ಯಾಕ್‌ ಸ್ಪಾಟ್‌ ನಿರ್ಮೂಲನಾ ಕಾರ್ಯ ನಿರಂತರ ಪ್ರಕ್ರಿಯೆಯಾಗಿದೆ. ಸಾರ್ವಜನಿಕರು ಬ್ಲಾಕ್‌ ಸ್ಪಾಟ್‌ಗಳ ಬಗ್ಗೆ ವಾಟ್ಸ್‌ ಆ್ಯಪ್‌ ಮೂಲಕ ಮಾಹಿತಿ ನೀಡಿ “ನಮ್ಮ ಊರು ಸ್ವಚ್ಛ ಊರು’ ಅಭಿಯಾನವನ್ನು ಮತ್ತಷ್ಟು ಯಶಸ್ವಿಗೊಳಿಸಿ, ಇಡೀ ಜಿಲ್ಲೆಯನ್ನು ತ್ಯಾಜ್ಯ ಮುಕ್ತ ಮಾಡಲು ಸಹಕರಿಸಬೇಕು.
-ಡಾ| ನವೀನ್‌ ಭಟ್‌, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಜಿ.ಪಂ. ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next