Advertisement
-ಹೀಗೆಂದು ಘೋಷಣೆ ಮಾಡಿದ್ದು ಪ್ರಧಾನಿ ನರೇಂದ್ರ ಮೋದಿ. ಎಪ್ರಿಲ್-ಮೇ ತಿಂಗಳಿನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಒಂದು ವಾರದ ಅವಧಿಯಲ್ಲಿ ಎರಡನೇ ಬಾರಿಗೆ ರಾಜ್ಯ ಪ್ರವಾಸ ಕೈಗೊಂಡ ಪ್ರಧಾನಿ, ಯಾದಗಿರಿ ಜಿಲ್ಲೆಯ ಕೊಡೆಕಲ್‌ನಲ್ಲಿ ಬಹುಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು. ಜತೆಗೆ ಕಲಬುರಗಿ ಜಿಲ್ಲೆಯ ಮಳಖೇಡದಲ್ಲಿ 52 ಸಾವಿರ ತಾಂಡಾ ನಿವಾಸಿಗಳಿಗೆ ಹಕ್ಕುಪತ್ರ ವಿತರಿಸಿ ಅವರು ಮಾತನಾಡಿದರು.
Related Articles
Advertisement
ರಾಜ್ಯದಲ್ಲಿ ನೀರಿನ ಸದ್ಬಳಕೆಗೆ ಆದ್ಯತೆ ನೀಡಲಾಗಿದೆ. ನದಿಗಳ ಜೋಡಣೆ ಚಿಂತನೆ ನಡೆದಿದೆ. ಅಂತರ್ಜಲ ವೃದ್ಧಿ ಜತೆಗೆ ಲಭ್ಯ ಜಲಸಂಪನ್ಮೂಲ ಬಳಕೆಗೆ ಸರಕಾರ ಸಾಕಷ್ಟು ಯೋಜನೆ ರೂಪಿಸಿದೆ. ಜಲಜೀವನ ಮಿಶನ್‌ನಡಿಯೂ ರಾಜ್ಯದಲ್ಲಿ ಸಾಕಷ್ಟು ಕೆಲಸವಾಗುತ್ತಿದೆ. ದೇಶದಲ್ಲಿ ಸಣ್ಣ ನೀರಾವರಿಗೆ ಹೆಚ್ಚು ಆದ್ಯತೆ ನೀಡಲಾಗುತ್ತಿದ್ದು, 70 ಲಕ್ಷ ಹೆಕ್ಟೇರ್ ಪ್ರದೇಶವನ್ನು ಒಳಪಡಿಸಲಾಗಿದೆ. “ಪರ್ ಡ್ರಾಪ್ ಮೋರ್ ಕ್ರಾಪ್’ ಕಾರ್ಯಕ್ರಮದಡಿ ಸಣ್ಣ ನೀರಾವರಿ ವಲಯ ಬಲಪಡಿಸಲಾಗುತ್ತಿದೆ ಎಂದು ತಿಳಿಸಿದರು.
ಕೇಂದ್ರ ಸರಕಾರದ ಜತೆ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರಕಾರ ಹೆಜ್ಜೆಗೆ ಹೆಜ್ಜೆ ಜೋಡಿಸುತ್ತಿದೆ. ದೇಶದ ಅಭಿವೃದ್ಧಿಯಲ್ಲಿ ಕರ್ನಾಟಕದ ಪಾಲು ಸಾಕಷ್ಟಿದೆ. ಯಾರಿಗೆ ಸೌಲಭ್ಯ ಸಿಕ್ಕಿಲ್ಲವೋ ಅವರನ್ನು ಮುಂದೆ ತರುವುದೇ ನಮ್ಮ ಸರಕಾರಗಳ ಧ್ಯೇಯವಾಗಿದೆ. ರೈತರಿಗೆ ಕೃಷಿ ಯಂತ್ರೋಪರಣ ವಿತರಣೆಯ ಜತೆಗೆ ಪ್ರಾಕೃತಿಕ ಕೃಷಿಗೂ ಆದ್ಯತೆ ನೀಡಲಾಗುತ್ತಿದೆ. ಎಥೆನಾಲ್, ಬಯೋಗ್ಯಾಸ್ ಉತ್ಪಾದನೆಗೂ ಸರಕಾರ ಒತ್ತು ನೀಡುತ್ತಿದ್ದು, ಕರ್ನಾಟಕದಿಂದಲೂ ಅಗತ್ಯ ಸಹಕಾರದ ನಿರೀಕ್ಷೆ ಇದೆ. ನಮ್ಮ ಸರಕಾರ ಅಧಿಕಾರಕ್ಕೆ ಬಂದಾಗ ದೇಶದಲ್ಲಿ ಕೇವಲ ಮೂರು ಕೋಟಿ ಮನೆಗಳಿಗೆ ನಲ್ಲಿಗಳ ಸಂಪರ್ಕವಿತ್ತು. ಈಗ 11 ಕೋಟಿ ಮನೆಗಳಿಗೆ ನೀರು ತಲುಪಿಸುವ ಕೆಲಸ ಮಾಡಿದ್ದೇವೆ. ರಾಜ್ಯದಲ್ಲೂ 35 ಲಕ್ಷ ಕುಟುಂಬಗಳಿಗೆ ಈ ಸೌಲಭ್ಯ ಕಲ್ಪಿಸಲಾಗಿದೆ. ನಿಮ್ಮ ಮನೆಗೆ ನೀರು ಬಂದ ಮೇಲೆ ಮಾತೆಯರು, ಮಹಿಳೆಯರು ನನ್ನನ್ನು ಆಶೀರ್ವದಿಸಿ ಎಂದು ಪ್ರಧಾನಿ ತಿಳಿಸಿದರು.
ವಿಶ್ವದಾಖಲೆ:
ಮಳಖೇಡದಲ್ಲಿ ಐದು ಜಿಲ್ಲೆಗಳ 342 ಗ್ರಾಮಗಳ 52,072 ತಾಂಡಾ ನಿವಾಸಿಗಳಿಗೆ ಪ್ರಧಾನಿ ಮೋದಿ ಏಕಕಾಲದಲ್ಲಿ ಹಕ್ಕುಪತ್ರ ನೀಡಿರುವುದು ವರ್ಲ್ಡ್ ಬುಕ್ ಆಫ್ ರೆಕಾರ್ಡ್ ಮಾನ್ಯತೆಗೆ ಪಾತ್ರವಾಗಿದೆ. ಹಕ್ಕುಪತ್ರ ವಿತರಣ ಸಮಾರಂಭದಲ್ಲಿಯೇ ರಾಜ್ಯ ಸರಕಾರಕ್ಕೆ ವರ್ಲ್ಡ್ ಬುಕ್ ಆಫ್ ರೆಕಾರ್ಡ್‌ನ ತತ್ಕಾಲೀನ ಪ್ರಮಾಣ ಪತ್ರ ನೀಡಲಾಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯಪಾಲ ಥಾವರಚಂದ್ ಗೆಹೊÉàತ್, ಕೇಂದ್ರ ಸಚಿವ ಭಗವಂತ ಖೂಬಾ, ಸಚಿವರಾದ ಗೋವಿಂದ ಕಾರಜೋಳ, ಮುರುಗೇಶ ನಿರಾಣಿ, ಪ್ರಭು ಬಿ. ಚವ್ಹಾಣ್, ಸಂಸದರಾದ ಡಾ| ಉಮೇಶ ಜಾಧವ ಹಾಗೂ ರಾಜಾ ಅಮರೇಶ್ವರ ನಾಯಕ, ಶಾಸಕರಾದ ರಾಜು ಗೌಡ, ದತ್ತಾತ್ರೇಯ ಪಾಟೀಲ ರೇವೂರ, ರಾಜಕುಮಾರ ಪಾಟೀಲ ತೇಲ್ಕೂರ, ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ. ರಾಜೀವ್ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ದಿಲ್ಲಿಯಲ್ಲಿ ಮಗನಿದ್ದಾನೆ, ಬದುಕು ಕಟ್ಟಿಕೊಳ್ಳಿ…
ಸೌಲಭ್ಯ ವಂಚಿತ ಅಲೆಮಾರಿ, ನಿರ್ಗತಿಕರು ಅದರಲ್ಲೂ ಬಂಜಾರಾ ಸಮುದಾಯದ ಸರ್ವಾಂಗೀಣ ಅಭಿವೃದ್ಧಿಗೆ ನಮ್ಮ ಸರಕಾರ ಬದ್ಧ. ಬಂಜಾರಾ ಸಮುದಾಯದವರು ನಿಶ್ಚಿಂತೆಯಿಂದ ತಮ್ಮ ಬದುಕು ಕಟ್ಟಿಕೊಳ್ಳಬೇಕು. ಸಂಕಷ್ಟಗಳನ್ನು ಪರಿಹರಿಸಲು ನಿಮ್ಮ ಮಗನೊಬ್ಬ ದಿಲ್ಲಿಯಲ್ಲಿ ಕುಳಿತಿದ್ದಾನೆ ಎಂಬುದನ್ನು ಮರೆಯಬೇಡಿ ಎಂದೂ ಮೋದಿ ಹೇಳಿದರು. ಕಂದಾಯ ಗ್ರಾಮಗಳಾಗಿರುವ ಎಲ್ಲ ತಾಂಡಾ, ಹಾಡಿ, ಹಟ್ಟಿ ಮುಂತಾದ ಪ್ರದೇಶಗಳಲ್ಲಿ ಮುಂಬರುವ ದಿನಗಳಲ್ಲಿ ಸರಕಾರದ ವಿವಿಧ ಯೋಜನೆಗಳಡಿ ಪಕ್ಕಾ ಮನೆಗಳನ್ನು ನಿರ್ಮಿಸಿ ಗುಡಿಸಲು ಮುಕ್ತ ಮಾಡಲಾಗುವುದು. ಆ ಮನೆಗಳಿಗೆ ಶೌಚಾಲಯ, ವಿದ್ಯುತ್ ಸಂಪರ್ಕ, ನಲ್ಲಿ ನೀರು, ಅಡುಗೆ ಅನಿಲ ಸಂಪರ್ಕ ಒದಗಿಸಲಾಗುವುದು. ಸಮುದಾಯದ ಯುವ ಪ್ರತಿಭೆಗಳಿಗೆ ಉಚಿತವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕೋಚಿಂಗ್, ಕೌಶಲ ತರಬೇತಿ, ಉದ್ಯೋಗ ದೊರಕಿಸಲು ಶ್ರಮಿಸಲಾಗುವುದು ಎಂದು ಭರವಸೆ ನೀಡಿದರು.
ಮುಂದಿನದು ನೀರಾವರಿ ದಶಕ: ಸಿಎಂ :
ಮುಂದಿನ ಹತ್ತು ವರ್ಷಗಳನ್ನು ನೀರಾವರಿ ದಶಕ ಎಂದು ಘೋಷಿಸಲಾಗುತ್ತದೆ. ಈ ಅವಧಿಯಲ್ಲಿ ರಾಜ್ಯದಲ್ಲಿ ಇರುವ ನೀರಾವರಿ ಯೋಜನೆಗಳನ್ನು ಕ್ಲಪ್ತವಾಗಿ ಪೂರ್ಣಗೊಳಿಸಿ ರೈತರ ಉಪಯೋಗಕ್ಕೆ ನೀಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಕೊಡೇಕಲ್ ಹೊರವಲಯದಲ್ಲಿ ಪ್ರಧಾನಿ ಮೋದಿ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 40.66ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಒದಗಿಸುವ ಗುರಿ ಹಾಕಿಕೊಳ್ಳಲಾಗಿದೆ. ಸದ್ಯ 30 ಲಕ್ಷ ಹೆಕ್ಟೇರ್ ಭೂಮಿಗೆ ನೀರುಣಿಸಲಾಗುತ್ತಿದೆ. ಬಾಕಿ ಉಳಿದ 10.66 ಲಕ್ಷ ಹೆಕ್ಟೇರ್ ಭೂಮಿಗೆ ನೀರಾವರಿ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ರಾಜ್ಯ ಸರಕಾರಕ್ಕೆ ತಾರೀಫು:
ಮಳಖೇಡದಲ್ಲಿ ತಾಂಡಾ ನಿವಾಸಿಗಳಿಗೆ ಕಂದಾಯ ಗ್ರಾಮದ ಹಕ್ಕುಪತ್ರ ವಿತರಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಅವರ ತಂಡ ಉತ್ತಮ ಕಾರ್ಯಗಳನ್ನು ಮಾಡುತ್ತಿದೆ ಎಂದು ಶ್ಲಾ ಸಿದರು. ತಾಂಡಾ ನಿವಾಸಿಗಳು, ನಿರ್ಗತಿಕರು ಹಾಗೂ ಅಲೆಮಾರಿ ಸಮುದಾಯದವರಿಗೆ ಸಾಮಾಜಿಕ ನ್ಯಾಯದ ನಿಟ್ಟಿನಲ್ಲಿ ಹಕ್ಕುಪತ್ರ ನೀಡಿರುವುದು ಅತ್ಯಂತ ಖುಷಿ ತಂದಿದೆ. ಏಕಕಾಲಕ್ಕೆ 52 ಸಾವಿರ ಜನರಿಗೆ ಹಕ್ಕುಪತ್ರ ವಿತರಿಸಿರುವ ಮಹೋನ್ನತ ಕಾರ್ಯ ಡಬಲ್ ಎಂಜಿನ್ ಸರಕಾರದಿಂದ ಮಾತ್ರ ಸಾಧ್ಯ. ಬಂಜಾರಾ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಕಲ್ಪಿಸುವಲ್ಲಿ ದೊಡ್ಡ ಕೊಡುಗೆ ನೀಡಿದೆ. ಜತೆಗೆ ಅವರ ಮಕ್ಕಳ ಉಜ್ವಲ ಭವಿಷ್ಯಕ್ಕೆ ನಾಂದಿ ಹಾಡಿದಂತಾಗಿದೆ ಎಂದು ಹೊಗಳಿದರು.
ಹಕ್ಕುಪತ್ರ ವಿತರಣೆ ಮೂಲಕ ಈಗ ಕಲ್ಯಾಣ ಕರ್ನಾಟಕದ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು ಹಾಗೂ ವಿಜಯಪುರ ಜಿಲ್ಲೆಗಳ ಬಂಜಾರಾ ಸಮುದಾಯದವರ ಹೃದಯಲ್ಲಿ ಸ್ಥಾನ ಪಡೆಯುವಂತಾಗಿದೆ. ರಾಜ್ಯದ ಮೂರು ಸಾವಿರ ತಾಂಡಾಗಳನ್ನು ಕಂದಾಯ ಗ್ರಾಮವನ್ನಾಗಿಸಿರುವುದು ಪ್ರಶಂಸನೀಯವಾಗಿದೆ. ಇದಕ್ಕೆಲ್ಲ ಸಿಎಂ ಹಾಗೂ ಅವರ ಸಂಪೂರ್ಣ ತಂಡವನ್ನು ಅಭಿನಂದಿಸುತ್ತೇನೆ ಎಂದು ಪ್ರಧಾನಿ ಹೇಳಿದರು.