ವಿಧಾನ ಪರಿಷತ್ತು: ಶ್ರೀಮಂತ ದೇವರ ದೇವಸ್ಥಾನಗಳಿಗೆ ಹೆಚ್ಚಿನ ಅನುದಾನ ನೀಡಲಾಗುತ್ತದೆ. ನಮ್ಮ ದೇವರುಗಳು ಏನು ಕರ್ಮ ಮಾಡಿದ್ದಾರೋ ಗೊತ್ತಿಲ್ಲ. ನಮ್ಮ ದೇವರುಗಳ ಬಗ್ಗೆ ಕಣ್ಣು ಬಿಡುತ್ತಿಲ್ಲ! -ಬಡಜನರು ಆರಾಧಿಸುವ ದೇವರುಗಳ ದೇವಾಲಯಗಳಿಗೆ ಮುಜರಾಯಿ ಇಲಾಖೆ ಅನುದಾನ ನೀಡುತ್ತಿಲ್ಲ ಎಂಬುದನ್ನು ಕಾಂಗ್ರೆಸ್‌ನ ಆರ್.ಧರ್ಮಸೇನ ಪ್ರಸ್ತಾಪಿಸಿದ ಬಗೆ ಇದು.
ಮೇಲ್ಮನೆಯಲ್ಲಿ ಬುಧವಾರ ಪ್ರಶ್ನೋತ್ತರ ವೇಳೆ ಮಾತನಾಡಿದ ಅವರು, ವಿಧಾನ ಪರಿಷತ್ ಸದಸ್ಯರು ನೀಡುವ ಯಾವ ಪತ್ರಗಳನ್ನೂ ಇಲಾಖೆ ಪರಿಗಣಿಸಿ ಅನುದಾನ ನೀಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದಕ್ಕೆ ಉತ್ತರಿಸಿದ ಸಚಿವ ರಾಜಶೇಖರ್ ಪಾಟೀಲ್, ರಾಜ್ಯದಲ್ಲಿ 34,556 ದೇವಸ್ಥಾನಗಳಿವೆ. ಇದರಲ್ಲಿ 25 ಲಕ್ಷ ರೂ.ಗಿಂತ ಹೆಚ್ಚು ಆದಾಯವಿರುವ “ಎ’ ದರ್ಜೆ ದೇವಸ್ಥಾನ 192, 5 ಲಕ್ಷ ರೂ.ನಿಂದ 25 ಲಕ್ಷ ರೂ.ವರೆಗಿನ ಆದಾಯವಿರುವ “ಬಿ’ ದರ್ಜೆ ದೇವಾಲಯ 151 ಹಾಗೂ 5 ಲಕ್ಷ ರೂ.ಗಿಂತ ಕಡಿಮೆ ಆದಾಯವಿರುವ “ಸಿ’ ದರ್ಜೆ ದೇವಾಲಯ 34,123 ಇವೆ. ಬಜೆಟ್‌ನಲ್ಲಿ 126 ಕೋಟಿ ರೂ. ಅನುದಾನ ಕಾಯ್ದಿರಿಸಿದ್ದು, ಲಭ್ಯವಿರುವ ಅನುದಾನದಲ್ಲಿ ಹಂಚಿಕೆ ಮಾಡಲಾಗುವುದು ಎಂದು ಹೇಳಿದರು.
ಆಗ ಬಿಜೆಪಿಯ ಕೆ.ಬಿ.ಶಾಣಪ್ಪ, ದೇವರುಗಳನ್ನೇ “ಎ’, “ಬಿ’ ಎಂದು ವರ್ಗೀಕರಿಸಿ ಶ್ರೀಮಂತ ದೇವರೆಂದು ಗುರುತಿಸಿದ್ದೇವೆ. ಆದರೆ ಬಡ ಜನರು ಪೂಜಿಸುವ 34,123 ದೇವಾಲಯಗಳನ್ನು ಕೇಳುವವರಿಲ್ಲದಂತಾಗಿದೆ. ಸಣ್ಣ ದೇವರ ಮೇಲೆ ಕರುಣೆ ಇರಲಿ ಎಂದು ಸಲಹೆ ನೀಡಿದರು.
ಜೆಡಿಎಸ್‌ನ ಸಂದೇಶ್ ನಾಗರಾಜ್, ಶ್ರೀಮಂತ ದೇವಸ್ಥಾನಗಳ ಬದಲಿಗೆ “ಸಿ’ ದೇವಾಲಯಗಳಿಗೆ ಹೆಚ್ಚಿನ ಅನುದಾನ ನೀಡಬೇಕು. ಮುಜರಾಯಿ ಖಾತೆ ತೆಗೆದುಕೊಂಡರೆ ಸಚಿವ ಸ್ಥಾನ ಹೋಗುತ್ತದೆ ಎಂಬ ಮಾತಿದೆ. ಹಾಗಾಗಿ ಸಣ್ಣ ದೇವಸ್ಥಾನಗಳಿಗೆ ಅನುದಾನ ಕೊಟ್ಟು ಕೃಪೆಗೆ ಪಾತ್ರರಾಗಿ ಎಂದು ಹೇಳಿದರು.
ಸಚಿವ ರಾಜಶೇಖರ್ ಪಾಟೀಲ್ ಪ್ರತಿಕ್ರಿಯಿಸಿ, ಸಚಿವ ಸ್ಥಾನ ಇರಲಿ, ಹೋಗಲಿ. ನನ್ನನ್ನು ಗೆಲ್ಲಿಸಿದ್ದು ಹುಮ್ನಾಬಾದ್ ಜನ. “ಸಿ’ ದರ್ಜೆ ದೇವಸ್ಥಾನಗಳಿಗೆ ಅನುದಾನ ಒದಗಿಸುವ ಭರವಸೆ ನೀಡಿದರು.
ರಾಜ್ಯ ಖಾದಿ ಮಂಡಳಿಯಿಂದ ಬಿಪಿಎಲ್ ಕುಟುಂಬಗಳು ಮರುಪಾವತಿಸಬೇಕಿರುವ ಬಾಕಿ ಸಾಲ ಮನ್ನಾ ಮಾಡಲಾಗುವುದು ಎಂದು 2018-19ನೇ ಸಾಲಿನ ಬಜೆಟ್‌ನಲ್ಲಿ ಘೋಷಣೆಯಾಗಿದ್ದು, ವಾಣಿಜ್ಯ ಮತ್ತು
ಕೈಗಾರಿಕಾ ಇಲಾಖೆಯಿಂದ ಈ ಸಾಲ ಮನ್ನಾಗೆ ಕ್ರಮ ಕೈಗೊಳ್ಳಲಾಗುವುದು.
ಎಸ್.ಆರ್.ಶ್ರೀನಿವಾಸ್. ಸಣ್ಣ ಕೈಗಾರಿಕೆ ಸಚಿವ
ಅರಣ್ಯ ಭೂಮಿ ಸಕ್ರಮಕ್ಕೆ ಸಂಬಂಧಪಟ್ಟಂತೆ ಬಾಕಿಯಿರುವ ಅರ್ಜಿಗಳ ಶೀಘ್ರ ಇತ್ಯರ್ಥಕ್ಕೆ ಒತ್ತು ನೀಡಲಾಗುವುದು. ಅಧಿಕಾರಿಗಳು ಕಾನೂನು ಚೌಕಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಕಿರುಕುಳ ನೀಡುವುದು ಕಂಡು ಬಂದರೆ ಪರಿಶೀಲಿಸಲಾಗುವುದು.
ಆರ್.ಶಂಕರ್, ಅರಣ್ಯ ಸಚಿವ