ಬೆಂಗಳೂರು: ಬಿಬಿಎಂಪಿಯನ್ನು ತಂಬಾಕು ಮುಕ್ತ ನಗರವಾಗಿ ನಿರ್ಮಿಸುವುದು ನಮ್ಮ ಗುರಿ. ಸಾರ್ವಜನಿಕ ಸ್ಥಳದಲ್ಲಿ ತಂಬಾಕು ಮಾರಾಟ ಹಾಗೂ ಸೇವನೆ ನಿಷೇಧಿಸಿದ್ದೇವೆ. ಮುಂದಿನ ದಿನಗಳಲ್ಲಿ ನಿಯಮವನ್ನು ಇನ್ನಷ್ಟು ಕಟ್ಟುನಿಟ್ಟಾಗಿಸಲಿದ್ದೇವೆ ಎಂದು ಬಿಬಿಎಂಪಿ ಆಯುಕ್ತ ಮುಂಜುನಾಥ್ ಪ್ರಸಾದ್ ಹೇಳಿದರು.
ವಿಶ್ವ ತಂಬಾಕು ಮುಕ್ತದಿನದ ಅಂಗವಾಗಿ ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದಲ್ಲಿ ತಂಬಾಕು ಮುಕ್ತ ಕರ್ನಾಟಕ ಒಕ್ಕೂಟ ಬುಧವಾರ ಹಮ್ಮಿಕೊಂಡಿದ್ದ ತಂಬಾಕು ಮುಕ್ತ ಬೆಂಗಳೂರು ಅಭಿಯಾನದಲ್ಲಿ ಭಾಗವಹಿಸಿ ಮಾತನಾಡಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ ತಂಬಾಕು ಸಂಪೂರ್ಣವಾಗಿ ನಿಷೇಧಿಸಲು ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಸಾರ್ವಜನಿಕ ಸ್ಥಳದಲ್ಲಿ ತಂಬಾಕು ಮಾರಾಟ ಮತ್ತು ಸೇವನೆಯನ್ನು ಈಗಾಗಲೇ ನಿಷೇಧ ಮಾಡಲಾಗಿದೆ. ಸಾರ್ವನಿಕ ಸ್ಥಳದಲ್ಲಿ ತಂಬಾಕು ಸೇವನೆ ಅಥವಾ ಮಾರಾಟ ಕಂಡುಬಂದರೆ ಕಾನೂನು ಪ್ರಕಾರ ದಂಡ ವಿಧಿಸಲಾಗುತ್ತದೆ. ನಿಮಯವನ್ನು ಇನ್ನಷ್ಟು ಬಲಗೊಳಿಸಿ, ತಂಬಾಕು ಮುಕ್ತ ನಗರದ ನಿರ್ಮಾಣ ಮಾಡಲಿದ್ದೇವೆ ಎಂದು ಹೇಳಿದರು.
ಹೃದ್ರೋಗ ತಜ್ಞೆ ಡಾ. ವಿಜಯಲಕ್ಷ್ಮೀ ಬಾಳೇಕುಂದ್ರಿ ಮಾತನಾಡಿ, ತಂಬಾಕಿನ ವಾಸನೆಗೆ ವಿಷಕಾರಿ ಹಾವು ಸುಳಿಯುವುದಿಲ್ಲ. ಆದರೆ, ಮನುಷ್ಯ ಆಕರ್ಷಿತನಾಗಿರುವುದು ವಿಪರ್ಯಾಸ. 30ರಿಂದ 35 ವರ್ಷದ ಯುವಜನತೆ ತಂಬಾಕು ಸೇವನೆಯಿಂದ ಹೃದಯಾಘಾತ ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ಹೆತ್ತವರೇ ಮಕ್ಕಳ ಅಂತ್ಯಸಂಸ್ಕಾರ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಗರ್ಭಿಣಿಯರು ತಂಬಾಕು ಸೇವನೆ ಮಾಡಿದರೆ ಹುಟ್ಟುವ ಮಗುವಿಗೆ ಹೃದ್ರೋಗ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂಬ ಎಚ್ಚರಿಕೆ ನೀಡಿದರು.
ಶಾಲೆಗಳಲ್ಲಿ ಅಭಿಯಾನ: ತಂಬಾಕು ಮುಕ್ತ ಬೆಂಗಳೂರು ನಿರ್ಮಿಸುವ ಉದ್ದೇಶದಿಂದ ಬಿಬಿಎಂಪಿ ವ್ಯಾಪ್ತಿಯ ಶಾಲಾ ಶಿಕ್ಷಕರಿಗೆ 2 ದಿನಗಳ ಕಾರ್ಯಾಗಾರ ಹಾಗೂ ಮಕ್ಕಳಿಗೆ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲು ತಂಬಾಕು ಮುಕ್ತ ಕರ್ನಾಟಕ ಒಕ್ಕೂಟ ನಿರ್ಧರಿಸಿದ್ದು, ಜೂನ್ ಮೂರನೇ ವಾರದಿಂದ ನಗರದ ಸುಮಾರು 50 ಬಿಬಿಎಂಪಿ ಶಾಲೆಗಳಲ್ಲಿ ಅಭಿಯಾನ ಆರಂಭವಾಗಲಿದೆ ಎಂದು ಒಕ್ಕೂಟದ ಮುಖಂಡ ಚಂದರ್ ತಿಳಿಸಿದರು. ತಂಬಾಕು ಮುಕ್ತ ರಾಜ್ಯ ನಿರ್ಮಿಸುವ ಉದ್ದೇಶದಿಂದ ಸರ್ಕಾರ ರೂಪಿಸಿದ 2 ನಿಮಿಷದ ಸಾಕ್ಷ್ಯಚಿತ್ರ ಅನಾವರಣ ಮಾಡಲಾಯಿತು. ಬಿಬಿಎಂಪಿ ಸದಸ್ಯೆ ಕೋಕಿಲ ಚಂದ್ರಶೇಖರ್, ಡಾ. ಲೋಕೇಶ್, ಡಾ. ವಿಶಾಲ್ ರಾವ್ ಮೊದಲಾದವರು ಉಪಸ್ಥಿತರಿದ್ದರು.