ಮಹಾನಗರ: ಉದಯವಾಣಿ ಹಾಗೂ ಮಂಗಳೂರಿನ ಸಾವಯವ ಕೃಷಿಕ ಗ್ರಾಹಕ ಬಳಗ ವತಿಯಿಂದ ಸಾವಯವ ಕೃಷಿ-ಸ್ವಾವಲಂಬನೆಯ ಖುಷಿ ಎಂಬ ವಿಶಿಷ್ಟ ಸರಣಿ ತರಬೇತಿ ಕಾರ್ಯಕ್ರಮಕ್ಕೆ ಆ. 16ರಂದು ಚಾಲನೆ ಸಿಗಲಿದೆ.
ನಗರದಲ್ಲೂ ಕೈತೋಟವನ್ನು ಸುಂದರವಾಗಿ ಬೆಳೆಸಿ, ಸಾವಯವ ವಿಧಾನದಲ್ಲಿ ಹಣ್ಣು, ತರಕಾರಿಯನ್ನು ಬೆಳೆದು ನಮ್ಮ ಅನ್ನದ ಬಟ್ಟಲನ್ನು ವಿಷಮುಕ್ತವಾಗಿಸಬಹುದು ಎಂಬ ಯೋಚನೆಯೊಂದಿಗೆ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಮೊದಲ ಕಾರ್ಯಕ್ರಮ ಆ. 16ರಂದು ಅಪ ರಾಹ್ನ ಶಾರದಾ ಕಾಲೇಜಿನ ಧ್ಯಾನ ಮಂದಿರದಲ್ಲಿ ಶಾರದಾ ಕಾಲೇಜಿನ ಸಹಯೋಗದೊಂದಿಗೆ ನಡೆಯುತ್ತಿದೆ. ಅ ಪ ರಾಹ್ನ 3.30ಕ್ಕೆ ಕಾರ್ಯಕ್ರಮವನ್ನು ಮೇಯರ್ ಪ್ರೇಮಾನಂದ ಶೆಟ್ಟಿ ಉದ್ಘಾಟಿಸಲಿದ್ದಾರೆ. ರಾಮಕೃಷ್ಣ ಮಿಷನ್‌ನ ಏಕ ಗಮ್ಯಾನಂದಜೀ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಶಾರದಾ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಪ್ರೊ| ಎಂ.ಬಿ. ಪುರಾಣಿಕ್ ಅಧ್ಯಕ್ಷತೆ ವಹಿಸುವರು. ಇದೇ ವೇಳೆ ಸಾವಯವ ಕೃಷಿಕ ಗ್ರಾಹಕ ಬಳಗದವರು ಹೊರತಂದ, ಕೈತೋಟ ಕೈಪಿಡಿ ಎಂಬ ಕಿರುಹೊತ್ತಗೆಯನ್ನೂ ಬಿಡುಗಡೆ ಗೊಳಿಸಲಾಗುವುದು.
ಸಾವಯವ ಕೃಷಿಕ, ತಜ್ಞ ಹರಿಕೃಷ್ಣ ಕಾಮತ್ ಅವರು ಸಾವಯವ ಆಹಾರ, ಕೈತೋಟದ ಬಗ್ಗೆ ಮತ್ತು ದಾಕ್ಷಾಯಿಣಿ ವಿಶ್ವೇಶ್ವರ ಭಟ್ ಅವರು ನಗರದಲ್ಲಿ ಅಲಂಕಾರಿಕ ಗಿಡಗಳನ್ನು ಬೆಳೆಸುವ ಬಗ್ಗೆ ತರಬೇತಿ ನೀಡಲಿದ್ದಾರೆ.
ಈ ಸರಣಿ ಮಾಹಿತಿ ತರಬೇತಿ ಕಾರ್ಯ ಕ್ರಮವು ಮುಂದೆ ಶಾಲಾ ಕಾಲೇಜು, ಬಡಾವಣೆ, ಅಪಾರ್ಟ್‌ಮೆಂಟ್, ಯುವಕ ಮಂಡಲ ಮುಂತಾದೆಡೆ ಹಮ್ಮಿಕೊಳ್ಳಲಾಗುತ್ತದೆ. ಸಾವಯವ ಕೃಷಿಕ ಗ್ರಾಹಕ ಬಳಗದಿಂದ ಈ ತರಬೇತಿ ನೀಡಲಾಗುತ್ತದೆ.