Advertisement

ನಮ್ಮ ಕೃಷಿ-ಜೀವನ ಶೈಲಿ ಹದ ತಪ್ಪಿದೆ; ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ

07:03 PM Oct 28, 2021 | Team Udayavani |

ಮೂಡಲಗಿ: ನಮ್ಮ ಜೀವನ ಶೈಲಿ ಮತ್ತು ಕೃಷಿ ಹದ ತಪ್ಪಿವೆ. ಆಧುನಿಕತೆ ಭರಾಟೆಯಲ್ಲಿ ನಮ್ಮನ್ನು ನಾವು ಮರೆತು ಆರೋಗ್ಯವನ್ನು ಹಾಳು ಮಾಡಿಕೊಂಡು ಆಸ್ಪತ್ರೆಗೆ ಖರ್ಚು ಮಾಡುತ್ತಿದ್ದೇವೆ ವಿನಃ ಉತ್ತಮ ಆರೋಗ್ಯಕ್ಕಾಗಿ ಮತ್ತು ಫಲವತ್ತಾದ ಭೂಮಿಗಾಗಿ ಗಮನ ಹರಿಸುತ್ತಿಲ್ಲ ಎಂದು ಕೊಲ್ಹಾಪೂರ- ಕನ್ಹೆàರಿ ಸಿದ್ಧಗಿರಿ ಸಂಸ್ಥಾನ ಮಠದ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಹೇಳಿದರು.

Advertisement

ನಾಗನೂರ ಪಟ್ಟಣದ ಶ್ರೀಮಹಾಲಿಂಗೇಶ್ವರ ಬಸವತೀರ್ಥ ಮಠದ ಆವರಣದಲ್ಲಿ ರೈತ ಸ್ಫೂರ್ತಿ ಕೃಷಿ ವಿಕಾಸ ಸಂಸ್ಥೆ, ತುಕ್ಕಾನಟ್ಟಿ ಬರ್ಡ್ಸ್‌-ಕೃಷಿ ವಿಕಾಸ ವಿಜ್ಞಾನ ಕೇಂದ್ರ ಹಾಗೂ ನಾಗನೂರ ಗ್ರಾಮಸ್ಥರ ಸಹಯೋಗದಲ್ಲಿ ಜರುಗಿದ ಸ್ವಾವಲಂಬಿ ರೈತರ ಕೃಷಿ ಸಮಾವೇಶದಲ್ಲಿ ಮಾತನಾಡಿದ ಅವರು, ಭೂಮಿ ಫಲವತ್ತತೆಗಾಗಿ ಆಕಳ ಮೂತ್ರ, ಸೆಗಣೆಯಿಂದ ಸಾವಯವ ಬೆಳೆ ಮಾಡಬೇಕು. ಉತ್ತಮ ಆರೋಗ್ಯಕ್ಕಾಗಿ ಆಕಳ ಹಾಲು, ಮೊಸರು, ತುಪ್ಪದ ಬಳಕೆಯೊಂದಿಗೆ ಯೋಗ ಮಾಡಬೇಕು. ಪ್ರತಿಯೊಬ್ಬ ರೈತ ತಮ್ಮ ಮನೆ ಉಪಯೋಗಕ್ಕಾಗಿ ಕನಿಷ್ಠ ಎರಡು-ಮೂರು ಗುಂಟೆ ಜಾಗೆಯಲ್ಲಿ ಸುಮಾರು 30 ತರಹದ ಕಾಯಿಪಲ್ಲೆ, ವಿವಿಧ ಬೆಳೆಗಳನ್ನು ಬೆಳೆಯಬೇಕೆಂದರು.

ಮುಂಬರುವ ಗಣೇಶ ಹಬ್ಬಕ್ಕೆ ಸುಮಾರು ಒಂದು ಲಕ್ಷ ಗಣೇಶ ಮೂರ್ತಿಯನ್ನು ಆಕಳ ಸೆಗಣಿಯಿಂದ ತಯಾರಿಸುವ ಗುರಿ ಹೊಂದಲಾಗಿದ್ದು, ರೈತರು ಕೈಜೋಡಿಸಬೇಕೆಂದರು. ಬೇರೆ ಬೇರೆ ನಡಾವಳಿಕೆಗಳಿಂದ ಕೂಡಿದಂತಹ ಜನ ಈ ದೇಶದಲ್ಲಿ ಇದ್ದರೂ ಸಹಿತ ಏಕತೆ ಇದೆ. ದೇಶದಲ್ಲಿ ರೈತರಿಗೆ ಯಾವುದೇ ಜಾತಿ ಇಲ್ಲ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಹೋದರೂ ರೈತರು ಒಂದೇ ತರಹ ಇದ್ದಾರೆ.

ಅವರಿಗೆ ಒಂದೇ ಜಾತಿ-ಅನ್ನದಾತನ ಜಾತಿ. ಎಲ್ಲರಿಗೂ ಅನ್ನ ಉಣ್ಣಿಸುವುದೇ ಧರ್ಮ. ಕಾಯಕ ಮಾಡುವುದಷ್ಟೇ ಕರ್ಮ. ದೇಶದ 140 ಕೋಟಿ ಜನರಿಗೆ ಅನ್ನ ನೀಡುವವರು ನಮ್ಮ ರೈತರು ಎಂದರು. ವೇದಿಕೆಯಲ್ಲಿ ಶ್ರೀ ಮಹಾಲಿಂಗೇಶ್ವರ ಮಠದ ಶ್ರೀ, ಶ್ರೀ ಮಹಾಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಚೇರಮನ್‌ ಬಿ.ಆರ್‌.ಪಾಟೀಲ, ಬರ್ಡ್ಸ್‌ ಸಂಸ್ಥೆ ಅಧ್ಯಕ್ಷ ಆರ್‌.ಎಂ.ಪಾಟೀಲ, ರೈತ ಸ್ಫೂರ್ತಿ ಕೃಷಿ ವಿಕಾಸ ಸಂಸ್ಥೆಯ ಸುರೇಶ ಮಠಪತಿ, ನಾಗನೂರ ಸಹಕಾರಿ ಸೊಸೈಟಿ ಅಧ್ಯಕ್ಷ ಬಸವರಾಜ ತಡಸನ್ನವರ, ಶಂಕರ ಹೊಸಮನಿ, ಪರಸಪ್ಪ ಬಬಲಿ, ಎಂ.ಬಿ.ಹೊಸಮನಿ, ಎ.ಆರ್‌.ಪಾಟೀಲ ಮೊದಲಾದವರು ಇದ್ದರು. ವಿಜ್ಞಾನಿ ಡಾ| ಆದರ್ಶಗೌಡ ಸ್ವಾಗತಿಸಿ, ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next