Advertisement

ಸಂಸ್ಕೃತಿ ಕಟ್ಟಿ ಬೆಳೆಸಿದ ನಮ್ಮ ಹಿರಿಯರು

06:46 AM Mar 13, 2019 | Team Udayavani |

ಬೆಂಗಳೂರು: ಓದು, ಬರಹ ಬಲ್ಲವರಲ್ಲದ ನಮ್ಮ ಹಿರಿಯರು ಈ ದೇಶದ ಸಂಸ್ಕೃತಿ ಕಟ್ಟಿ ಬೆಳೆಸಿದರು ಎಂದು ಹಿರಿಯ ಸಾಹಿತಿ ಮತ್ತು ವಿಮರ್ಶಕ ಡಾ.ಎಚ್‌.ಎಸ್‌.ಶಿವಪ್ರಕಾಶ್‌ ಅಭಿಪ್ರಾಯಪಟ್ಟರು.

Advertisement

ನಗರದ ಸಂತ ಜೋಸೆಫ‌ರ ಕಾಲೇಜಿನಲ್ಲಿ ಆರಂಭವಾಗಿರುವ “ಸಾಹಿತ್ಯದ ಓದು’ ಕುರಿತ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿ, ಯಾವುದೇ ಸಾಹಿತ್ಯವನ್ನು ಓದದ ನಮ್ಮ ಪೂರ್ವಜರು ಜಾನಪದ ಸಾಹಿತ್ಯ, ವೈದಿಕ ಸಾಹಿತ್ಯ, ಭಕ್ತಿ ಸಾಹಿತ್ಯವನ್ನು ಬಿಟ್ಟುಹೋಗಿದ್ದಾರೆ. ಅವುಗಳಲ್ಲಿ ಸತ್ವ ಅಡಗಿದೆ ಎಂದರು.

ಅಕ್ಷರಗಳ ಅರ್ಥ ಮತ್ತು ಅವುಗಳ ಹಿಂದಿರುವ ಮರ್ಮ ಗೊತ್ತಾಗದೆ ಇದ್ದರೆ ಆ ಓದು ಕೇವಲ ಅಕ್ಷರ ಕಲಿಕೆ ಅಷ್ಟೇ. ಅದರಿಂದ ಏನೂ ಪ್ರಯೋಜನವಿಲ್ಲ. ಓದು ಕಲಿಸುವ ಸಂಬಂಧ ಹಲವು ವಿಶ್ವವಿದ್ಯಾಲಯಗಳು ನಮ್ಮಲ್ಲಿವೆ. ಆದರೆ ಅವುಗಳಿಂದ ಕಲಿತು ಹೋರ ಬಂದವರು ಇನ್ನೂ ಮಾಧ್ಯಮಗಳ ಜಾಹೀರಾತುಗಳಿಗೆ ಮಾರು ಹೋಗುತ್ತಿದ್ದಾರೆ ಎಂದು ದೂರಿದರು.

ಕಾಯುವಿಕೆ ಕವಿಗಳಿಗಿಲ್ಲ: ನಮ್ಮ ಶಿಕ್ಷಣ ಪದ್ಧತಿ ಕಾವ್ಯ, ಕಾವ್ಯತ್ವದ ಗುಣ ಸವಿಯುವುದನ್ನು ಕಳೆದುಕೊಂಡಿದೆ. ಕಾರಣ ಯಾವುದಕ್ಕೂ ಸಮಯವಿಲ್ಲ. ಅಲ್ಲದೆ ಕಾಯುವಿಕೆ ಇಂದಿನ ಯುವ ಕವಿಗಳಿಗೂ ಆಗುತ್ತಿಲ್ಲ. ಪ್ರಥಮ ಸಂಕಲನ ಹೊರಬಂದರೆ ಸಾಕು ಪ್ರಶಸ್ತಿಗಾಗಿ ಎದುರು ನೋಡುತ್ತಾರೆ ಎಂದರು.

ಹಿರಿಯ ಸಾಹಿತಿ ಡಾ.ಎಚ್‌.ಎಸ್‌.ರಾಘವೇಂದ್ರ ರಾವ್‌, ಸಂತ ಜೋಸೆಫ‌ರ ಕಾಲೇಜಿನ ಪ್ರಾಚಾರ್ಯ ಫಾದರ್‌ ಡಾ.ವಿಕ್ಟರ್‌ ಲೋಬೊ, ಉದಯಭಾನು ಕಲಾ ಸಂಘದ ಗೌರವ ಕಾರ್ಯದರ್ಶಿ ಎಂ.ನರಸಿಂಹ, ಡಾ.ಬಿ.ಎನ್‌.ಪೂರ್ಣಿಮಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Advertisement

ಸಾಹಿತ್ಯ ವಿದ್ಯಾರ್ಥಿಗಳು ಭಾಗಿ: ಬೆಳಗ್ಗೆಯಿಂದ ಸಂಜೆವರೆಗೂ ನಡೆದ ವಿಚಾರ ಸಂಕಿರಣದಲ್ಲಿ ವಿವಿಧ ಕಾಲೇಜಿನ ಸಾಹಿತ್ಯ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಭಾಗವಹಿಸಿದ್ದರು. “ಸಾಹಿತ್ಯದ ಓದಿನ ಸ್ವರೂಪ ಉದ್ದೇಶ’ ಕುರಿತ ವಿಚಾರ ಸಂಕಿರಣದಲ್ಲಿ ಬೆಂವಿವಿ ಕನ್ನಡ ಅಧ್ಯನ ಕೇಂದ್ರದ ಡಾ.ಎಚ್‌.ಶಶಿಕಲಾ, ಡಾ.ರಾಮಲಿಂಗಪ್ಪ ಟಿ.ಬೇಗೂರು, ಡಾ.ವಿಕ್ರಂ ವಿಸಾಜಿ ಭಾಗವಹಿಸಿದ್ದರು.

“ಸಾಹಿತ್ಯದ ಪ್ರಕಾರಗಳನ್ನು ಓದುವ ಬಗೆಗಳು’, ಕುರಿತ ವಿಚಾರ ಸಂಕಿರಣದಲ್ಲಿ ವಿಮರ್ಶಕ ಎಸ್‌.ಆರ್‌.ವಿಜಯ ಶಂಕರ್‌, ಡಾ.ನಟರಾಜ ಹುಳಿಯಾರ್‌ ಸೇರಿದಂತೆ ಹಲವು ಮಂದಿ ಪಾಲ್ಗೊಂಡಿದ್ದರು. ಬುಧವಾರ ಕೂಡ ಸಾಹಿತ್ಯದ ಓದು ಕುರಿತ ವಿಚಾರ ಸಂಕಿರಣ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next