ಮುದ್ದೇಬಿಹಾಳ: ಮಕ್ಕಳ ಬಗ್ಗೆ ಪ್ರಾಮಾಣಿಕ ಕಳಕಳಿ, ಕಾಳಜಿ ಇರುವ ಶಿಕ್ಷಕರನ್ನು ಈ ನಾಡು ಪಡೆದಿರುವುದರಿಂದಲೇ ದೇಶದ ಸಂಸ್ಕಾರಯುತ ಶಿಕ್ಷಣ ವ್ಯವಸ್ಥೆ ಪ್ರಶಂಶೆಗೊಳಗಾಗಿದೆ ಎಂದು ಹಿರಿಯ ಸಾಹಿತಿ ಪ್ರೊ| ಬಿ.ಎಂ. ಹಿರೇಮಠ ಹೇಳಿದರು.
ಮುದ್ದೇಬಿಹಾಳ ತಾಲೂಕಿನ ಬಸರಕೋಡದಲ್ಲಿ ಏರ್ಪಡಿಸಿದ್ದ ಪವಾಡ ಬಸವೇಶ್ವರ ಪ್ರೌಢಶಾಲೆ ಮತ್ತು ಮಾತೋಶ್ರೀ ಶಿವಲಿಂಗಮ್ಮ ನಾಡಗೌಡರ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಹಳೇ ವಿದ್ಯಾರ್ಥಿಗಳ ಸಂಘ ಉದ್ಘಾಟನೆ, ಪದಗ್ರಹಣ ಮತ್ತು ಗುರುವಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ನಿಜವಾದ ಶಿಕ್ಷಕರು ತಮಗೆ ಎಷ್ಟೇ ಕಷ್ಟ, ಕಾರ್ಪಣ್ಯ, ದುಃಖ, ನೋವುಗಳಿದ್ದರೂ ತೋರಿಸಿಕೊಳ್ಳದೇ ನಿಷ್ಠೆಯಿಂದ ಮಕ್ಕಳಿಗೆ ಮನ ಮುಟ್ಟುವಂತೆ ಬೋಧಿಸುತ್ತಾರೆ. ಇವರು ಸಂಬಳಕ್ಕಾಗಿ ಕೆಲಸ ಮಾಡುವವರಲ್ಲ. ಇಂಥ ಶಿಕ್ಷಕರೇ ಮಕ್ಕಳ ಹೃದಯದಲ್ಲಿ ಶಾಶ್ವತವಾಗಿ ಮತ್ತು ಜನಮಾನಸದಲ್ಲಿ ಸ್ಥಿರವಾಗಿ ಉಳಿಯುತ್ತಾರೆ ಎಂದು ಹೇಳಿದರು.
ಚಡಚಣ ಕಾಲೇಜು ಪ್ರಾಧ್ಯಾಪಕ ಡಾ| ಎಸ್. ಎಸ್. ದೇಸಾಯಿ ಮಾತನಾಡಿದರು. ಪವಾಡ ಬಸವೇಶ್ವರ ಪ್ರೌಢಶಾಲೆ ಚೇರ್ಮನ್ ಎಂ.ಆರ್. ನಾಡಗೌಡ್ರ ಉದ್ಘಾಟಿಸಿದರು. ಸಂಸ್ಥೆ ಅಧ್ಯಕ್ಷ ಕೆ.ವೈ. ಬಿರಾದಾರ ಅಧ್ಯಕ್ಷತೆ ವಹಿಸಿದ್ದರು. ಶರಣ ಸೋಮನಾಳದ ಮಹದೇವಯ್ಯ ಶಾಸ್ತ್ರೀ ಸಾನ್ನಿಧ್ಯ ವಹಿಸಿದ್ದರು. ಗ್ರಾಪಂ ಅಧ್ಯಕ್ಷೆ ಕವಿತಾ ಮೇಟಿ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ನವಲಿ, ಎಚ್.ಆರ್. ಪತ್ತಾರ, ಪ್ರೌಢಶಾಲಾ ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ವಿರುಪಾಕ್ಷಯ್ಯ ಹಿರೇಮಠ, ಕಾರ್ಯದರ್ಶಿ ಅಶೋಕ ಮಣಿ, ಪ್ರಾಥಮಿಕ ಶಾಲಾ ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ವಿಜಯಕುಮಾರ ವಣಿಕ್ಯಾಳ, ಕಾರ್ಯದರ್ಶಿ ವಿ.ಜಿ. ಹಿರೇಮಠ, ಪವಾಡ ಬಸವೇಶ್ವರ ವಿದ್ಯಾವರ್ಧಕ ಸಂಘದ ಆಡಳಿತ ಮಂಡಳಿ ಸದಸ್ಯರು, ಮುಖ್ಯಗುರುಗಳು, ನಿವೃತ್ತ ಶಿಕ್ಷಕರು ವೇದಿಕೆಯಲ್ಲಿದ್ದರು.
ಹಳೇ ವಿದ್ಯಾರ್ಥಿಗಳು ತಮಗೆ ವಿದ್ಯಾದಾನ ಮಾಡಿದ ನಿವೃತ್ತ ಮತ್ತು ಸದ್ಯ ಸೇವೆಯಲ್ಲಿರುವ ಗುರುಗಳಿಗೆ ಗುರುವಂದನಾ ಕಾರ್ಯಕ್ರಮ ನಡೆಸಿಕೊಟ್ಟರು. ಹಳೆ ವಿದ್ಯಾರ್ಥಿ ಸಂಘಗಳ ಪದಾಧಿಕಾರಿಗಳು ಮತ್ತು ಸದಸ್ಯರಿಗೆ ಪ್ರಮಾಣ ವಚನ ಬೋಧಿಸಲಾಯಿತು. ವೈಶಾಲಿ ಬೇಲಾಳ ಮತ್ತು ವೀಣಾ ಪಾಟೀಲ ಭರತನಾಟ್ಯ ಪ್ರದರ್ಶಿಸಿದರು.
ವಿದ್ಯಾರ್ಥಿನಿಯರಾದ ಶೃತಿ, ಶಾಂತಾ, ಕಾವೇರಿ, ಅಶ್ವಿನಿ, ಸುವರ್ಣಾ ನಾಡಗೀತೆ ಹಾಡಿದರು. ಶಿಕ್ಷಕ ವಿ.ಪಿ. ಮೇಲಿನಮನಿ ಸ್ವಾಗತಿಸಿದರು. ಪ್ರೌಢಶಾಲೆ ಮುಖ್ಯಾಧ್ಯಾಪಕ ಎ.ಪಿ. ಮಣಿ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕ ಎಸ್.ಬಿ. ಬಿದ್ನಾಳಮಠ ನಿರೂಪಿಸಿದರು. ಶಿಕ್ಷಕ ಗುರಿಕಾರ ವಂದಿಸಿದರು