Advertisement

ನಮ್ಮ “ಕರ್ತವ್ಯ’ದ ಪರಿಧಿ ಹಿರಿದಾಗಿಸಿದ “ಸೇವೆ’

12:53 AM Apr 28, 2021 | Team Udayavani |

“ಸೇವೆ’ ಎಂಬ ಶಬ್ದ ಅರ್ಥೈಸಲು ಹೊರಟಾಗಲೆಲ್ಲ “ಬದುಕು’ ಎಂಬುದರ ಬಗೆಗೆ ಆಳವಾಗಿ ಸ್ವಗತದ ಮನೋಮಂಥನಕ್ಕೆ ಮುಂದಾಗ ಬೇಕಾಗುತ್ತದೆ. ಇಲ್ಲಿ “ನಾನು’ ಅಥವಾ ಬಹುವಚನದಲ್ಲಿ “ನಾವು’ ಯಾರು ಎಂಬ ಗಹನವಾದ ಆಧ್ಯಾತ್ಮಿಕ ಕೋಲ್ಮಿಂಚೂ ದೈನಂದಿನ ಜೀವನದ ಕಾರ್ಮೋಡಗಳೆಡೆಯಲ್ಲೇ ಹಾದು ಹೋಗುತ್ತದೆ. ಇಲ್ಲೊಂದು ಹನಿ ಕಥೆಯನ್ನು ಉದಾಹರಣೆಯಾಗಿ ಚಿಮ್ಮಿಸಬಹುದು. ಮಗೂ ಇಲ್ಲಿ ಬಾ; ಆ ದೀಪ ಉರಿಸು- ಗುರುಗಳು ಪುಟ್ಟ ಶಿಷ್ಯನನ್ನು ಸನಿಹಕ್ಕೆ ಕರೆದು ಅರುಹುತ್ತಾರೆ. ಆ ಬಾಲಕ ಹಣತೆ ಉರಿಸಿದ ತತ್‌ಕ್ಷಣ ಗುರುಗಳು ಪ್ರಶ್ನಿಸುತ್ತಾರೆ ಮಗೂ ಆ ಬೆಳಕು ಎಲ್ಲಿಂದ ಬಂತು? ಕ್ಷಣಾರ್ಧದಲ್ಲಿ ಆ ಶಿಷ್ಯ ದೀಪ ಆರಿಸಿ ಗುರುಗಳೇ, ನೀವೇ ಹೇಳಿ ಆ ಬೆಳಕು ಈಗ ಎಲ್ಲಿಗೆ ಹೋಯಿತು? ತತ್‌ಕ್ಷಣ ಗುರುಗಳು ಆ ಎಳೆ ಹರೆಯದ ಬಾಲಕನನ್ನು ಸಂತಸದಿಂದ ಅಪ್ಪಿಕೊಳ್ಳುತ್ತಾರೆ. ಸಮಗ್ರ ಬ್ರಹ್ಮಾಂಡ ಚೇತನದ ಸಿಂಧುವಿನಲ್ಲಿ ನಾವೆಲ್ಲ ಬಿಂದು ಎಂಬ ಮುಗಿಲೆತ್ತರದ ಆಧ್ಯಾತ್ಮಿಕತೆಯನ್ನು ಗುರು- ಶಿಷ್ಯರು ಪರಸ್ಪರ ಸರಳ ಬೆಳಕಿನ ನಿರೂಪಣೆಯಲ್ಲಿ ಪರಿಚಯಿಸಿಕೊಂಡರು.

Advertisement

ಹೌದು; ಈ ನೆಲದಲ್ಲಿ ಓಡಾಡುವ, ಉಸಿರಾಡುವ “ನಾವು’ ಎಂದು ಕರೆಸಿಕೊಳ್ಳುವ ಯಾರೂ ಅರ್ಜಿ ಮೂಲಕ ನಮ್ಮ ತಂದೆ, ತಾಯಿ, ಕುಟುಂಬ, ಜಾತಿ, ಧರ್ಮ, ಭಾಷೆ, ಜನ್ಮಸ್ಥಳ, ದೇಶ, ಅಂತಸ್ತು – ಇವು ಯಾವುದನ್ನೂ ಆರಿಸಿ, ಬಯಸಿ ಬಂದವರಲ್ಲ. ಹಾಗಾಗಿ ಇವೆಲ್ಲವೂ ಒಂದು ಆಕಸ್ಮಿಕ ಹಾಗೂ ನಮ್ಮ ಚಿಂತನೆ, ಜೀವನ ಶೈಲಿ ಎಲ್ಲದರಲ್ಲಿಯೂ, ವಂಶವಾಹಿನಿ, ಸಾಮಾಜಿಕ ಪರಿಸರದ ಹಾಗೂ ರಾಷ್ಟ್ರೀಯತೆಯ ಮೊಹರು ಇದೆ. ಈ ನಿಟ್ಟಿನಲ್ಲಿ ಇದು ನನ್ನ ಜೀವನ ಶೈಲಿ ಎಂದು ಪದೇ ಪದೆ ಹೇಳಿಕೊಳ್ಳುವ ನಮ್ಮ ಮೂಲ ಚಿಂತನೆಯಲ್ಲಿ ವಾಸ್ತವಿಕವಾಗಿ ನಮ್ಮದೇ ಸ್ವಂತಿಕೆ ಎಷ್ಟು ಎಂಬುದೂ ಒಂದು ವಿಜ್ಞಾನದ ವಿಶ್ಲೇಷಣೆಯ ಅಂಶ.

ಈ ಪೀಠಿಕೆಯೊಂದಿಗೆ “ಸೇವೆ’ ಎಂಬ ಶಬ್ದಾರ್ಥ ಶೋಧನಾ ಪಥದಲ್ಲಿ ಸಾಗಿದಾಗ ನಮ್ಮ ಅರಿವಿಕೆಗೆ ಬರುವ ಒಂದು ಸಣ್ಣ ಸತ್ಯ ಬಿಂದು ಇದೆ. “ಸೇವೆ’ ಎಂಬುದು ನಮ್ಮದೇ “ಕರ್ತವ್ಯ’ದ ಪರಿಧಿಯನ್ನು ಹಿರಿದಾಗಿಸಿದ ರೂಪಾಂತರ ಅಷ್ಟೇ. ಈ ಸರಳ ಸತ್ಯವನ್ನು, ಕಣ್ಣರಳಿಸಿ ಸುತ್ತ ನೋಡಿದಾಗ ಪ್ರಕೃತಿಯೇ ನಮಗೆ ಬೋಧಿಸುತ್ತದೆ. ಹರಿಯುವ ನದಿ, ಫ‌ಲ ನೀಡುವ ಮರ, ಹಾಲು ನೀಡುವ ಹಸು- ಹೀಗೆ ನಾವು ಬದುಕುವ ಪರಿಸರದ ಸುತ್ತಲೇ ನಿತ್ಯ ಬೋಧನೆ ನಮಗೊದಗಿ ಬರುತ್ತದೆ. ಇನ್ನೂ ಒಂದು ಹೆಜ್ಜೆ ಮುಂದೆ ಸರಿದಾಗ ಕರಾರುವಕ್ಕಾಗಿ ಚಲಿಸುವ ಬೆಳಕಿನ ಪುಂಜಗಳಾದ ಸೂರ್ಯ, ಚಂದ್ರ, ಉಸಿರು ತುಂಬುವ ಬೀಸು ಗಾಳಿ, ನಾವು ನಡೆದಾಡುವ ಅಂತೆಯೇ ಉದರ ಪೋಷಿಸುವ ಭೂಮಿ – ಇವೆಲ್ಲವುಗಳು ತಂತಮ್ಮ ಕರ್ತವ್ಯಗಳನ್ನು ಮಾಡುತ್ತಿವೆ. ಅದರಲ್ಲಿಯೇ ನಾವು ಅನುದಿನವೂ ಬದುಕು ಕಟ್ಟಿಕೊಳ್ಳುತ್ತಿದ್ದೇವೆ.

ನಾಣ್ಯದ ಎರಡು ಮುಖಗಳು
“ಸೇವೆ’ ಎಂಬುದು “ಕರ್ತವ್ಯ’ಕ್ಕೇ ಇರುವ ಇನ್ನೊಂದು ಪರ್ಯಾಯ ಹೆಸರು. ಇಲ್ಲಿ ನಮ್ಮ ದೈನಂದಿನ ಕಾಯಕದ ಫ‌ಲ ಕೇವಲ ನಾನು, ನನ್ನ ಕುಟುಂಬ – ಅದೂ ಈ ದಿನಗಳಂತೆ ತೀರಾ ಸೀಮಿತವಾಗಿರಬೇಕೇ? ಇಲ್ಲಿಯೇ ಈ “ಸೇವೆ’ ಶಬ್ದದ ಹೊಳಪು ತುಂಬಿದೆ, ಒಂದು ಹೊಸ ನಾಣ್ಯ ಅಥವಾ ಕರೆನ್ಸಿ ನೋಟ್‌ ಎರಡೂ ಕಡೆ ಛಾಪಿಸಿದ್ದರೆ ಮಾತ್ರ ಅದಕ್ಕೆ ಚಲಾವಣೇ ಇದೆ ತಾನೇ? ಅದೇ ರೀತಿ ಒಂದೆಡೆ ನಮ್ಮ ವ್ಯಕ್ತಿಗತ ಬದುಕಿನಲ್ಲಿ – ಅದು ಆರ್ಥಿಕ ಸಂಪನ್ನತೆ, ಶೈಕ್ಷಣಿಕ ಪ್ರಗತಿ, ಕೌಟುಂಬಿಕ ನೆಮ್ಮದಿ, ಆರೋಗ್ಯ ಸಂವರ್ಧನೆ ಹೀಗೆ ನಮ್ಮ ಬಗೆಗೇ ಎತ್ತರಕ್ಕೇರುವ ಯತ್ನ ಸಾಗಬೇಕು. ನಾಣ್ಯದ ಇನ್ನೊಂದು ಮುಖವಾಗಿ ನಾವು ಇತರರ ಬಾಳಿಗೂ ಒಂದಿನಿತು ಬೆಳಕು ಚೆಲ್ಲುವ ವಿಚಾರಧಾರೆ- ಅದು ಆಪ್ತ ಸಲಹೆ ಇರಲೂಬಹುದು. ಈ ವಿಚಾರಧಾರೆ ಇದನ್ನೇ “ಸೇವೆ’ ಎಂದು ವ್ಯಾಖ್ಯಾನಿಸಬಹುದಾಗಿದೆ. ಬೆಳಗಿನಿಂದ -ಬೈಗಿನವರೆಗಿನ ನನ್ನ ಸಮಯ ಇದು ಕೇವಲ ನನಗಾಗಿ ಮಾತ್ರವಲ್ಲ ಇತರರಿಗೂ ಒಂದಿಷ್ಟು ವಿನಿಯೋಗಿಸೋಣ ಎಂಬ ಚಿಂತನೆಯಲ್ಲೇ ಸೇವೆಯ ಹೊಳಪು ಇದೆ; “ತ್ಯಾಗ’ ಎನ್ನುವ ಶಬ್ದದ ಮಕರಂದವಿದೆ; ಅನಿರ್ವಚನೀಯ, ಅಂದರೆ ವಿವರಿಸಲಾಗದ ಸಂತಸವಿದೆ. ಇಲ್ಲೇ ಸಮಾಜದ ಬಹುಪಾಲು ಜನ ತಮ್ಮ ಬದುಕು ಎಂಬ ನಾಣ್ಯ ಒಂದೇ ಬದಿಯಲ್ಲಿ ಮಾತ್ರ ಟಂಕಿಸಿಕೊಂಡ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲು ಮುಂದಾಗುವುದಿಲ್ಲ. ಹಾಗಾಗಿ ಚಲಾವಣೆ “ತೀರಾ ಸೀಮಿತ’ ಎಂಬ ಕಟು ಸತ್ಯದ ಬಗೆಗೂ ಅರಿಯಬೇಕಾಗಿದೆ. ಇಲ್ಲೇ ಜಾಣ ಕುರುಡುತನ, ಸೋಗಲಾಡಿತನ – ಮುಂತಾದ ಪ್ರಕ್ರಿಯೆಗಳು ಬಿಚ್ಚಿಕೊಳ್ಳಲಾರಂಬಿಸುತ್ತದೆ.

ನಮ್ಮ ಪೂರ್ವಜರು “ದೇವ ಋಣ, ಪಿತೃ ಋಣ, ಋಷಿ ಋಣ’ ಎಂಬುದಾಗಿ ಸೇವಾ ಪ್ರಜ್ಞೆಯನ್ನು ಜಾಗೃತಿಗೊಳಿಸಿ¨ªಾರೆ. ಈ ದಿನಗಳಲ್ಲಿ “ಸಮಾಜ ಋಣ, ರಾಷ್ಟ್ರ ಋಣ’ – ಶಬ್ದಗಳೂ ಮಹತ್ವದ ಭೂಮಿಕೆಯನ್ನು ಪಡೆದುಕೊಳ್ಳುತ್ತವೆ.

Advertisement

ಸವಾಲುಗಳು ಹಲವು
ಈ ತೆರನಾಗಿ ಸೇವಾ ದೀಕ್ಷಾ ಬದ್ಧನಾದವನಾಗಿ ಎದುರಾಗುವ ಹಲವು ಸವಾಲುಗಳಿವೆ. ಮೊದಲನೆಯದು, ಪ್ರಚಾರ ಪ್ರಿಯತೆಯ ಪ್ರಬಲ ಸೆಳವನ್ನು ಹಂತಹಂತವಾಗಿ ದಾಟಿ ಪ್ರಬುದ್ಧತೆಯ ಮಜಲು ತಲುಪುವುದೇ ಕಠಿನ ಸವಾಲು. ನೆರಳು ನಮ್ಮನ್ನು ಹಿಂಬಾಲಿಸಿ ಬರಬೇಕೇ ವಿನಾ ನಾವು ನೆರಳಿನ ಹಿಂದೆ ಓಡಬಾರದು, ನಮ್ಮ ಕಾರ್ಯಗಳೇ ನಮ್ಮನ್ನು ಪರಿಚಯಿಸಬೇಕೇ ವಿನಾ ನಾವೇ ಆ ಬಗ್ಗೆ ಹೇಳಿಕೊಂಡು ಸಾಗಬಾರದು, ಆಡದೆಯೇ ಮಾಡುವವ ರೂಢಿಯೊಳಗುತ್ತಮ ಎಂಬ ಸರ್ವಜ್ಞನ ವಚನಗಳನ್ನು ಅಡಿಗಡಿಗೆ ನಮ್ಮದೇ ಮನಸ್ಸಿಗೆ ಬೋಧಿಸಿ ಸಂಸ್ಕಾರ ನೀಡಿ ಎತ್ತರಕ್ಕೇರುವಿಕೆ ಅಷ್ಟೇನೂ ಸುಲಭವಲ್ಲ. ಎರಡನೆಯದು ನಿರಾಶೆ. ಸೇವಾ ಮನೋಭೂಮಿಕೆ ಅಂದರೆ ಮೈಲು ಓಟ ಪ್ರಾರಂಭದಲ್ಲಿ ಏಕªಂ ವೇಗವಾಗಿ ಓಡಿ, ಸ್ವಲ್ಪ ಹೊತ್ತಿನಲ್ಲೇ ಬಸವಳಿದು ಕುಸಿಯುವ ಅಚಾನಕ್‌ ಪ್ರಕ್ರಿಯೆ ಇಲ್ಲ. ಬದಲಾಗಿ ನಮ್ಮ ಇತಿಮಿತಿಯನ್ನು ಗುರುತಿಸಿ ಬದುಕಿನ ಹೆಜ್ಜೆಗಳಲ್ಲಿ ಸಾವಕಾಶವಾಗಿ ಅಳೆದು ಗುರಿಯನ್ನು ತಲುಪುವ ನೆಮ್ಮದಿಯ ಪಯಣ. ಬಿಳಿ ಬಟ್ಟೆಯನ್ನು ಯಾರು ಗುರುತಿಸುವುದಿಲ್ಲ; ಅದರಲ್ಲಿ ಕಲೆ ಇದ್ದರೆ ಅದನ್ನೇ ಗುರುತಿಸುವ ಸಮಾಜ ಸುತ್ತಲಿದೆ ಎಂಬ ನಿರಂತರ ಎಚ್ಚರದ ಹಾದಿ ಇದು. ಇಲ್ಲೇ ರಾಷ್ಟ್ರ ಕವಿ ಗೋವಿಂದ ಪೈ ಅವರ ವೈಶಾಲಿ ಎಂಬ ನೀಳವನದ ಸಾರವನ್ನು ಸುಂದರವಾಗಿ ಪಡಿಮೂಡಿಸಬಹುದು. ಶಿಷ್ಯ ಪ್ರಶ್ನಿಸುತ್ತಾನೆ ಗುರುಗಳೇ ನಿಜವಾದ ಆನಂದ ಯಾವುದು? ಆಗ ಗೌತಮ ಬುದ್ಧ ನಿಂದಾಸ್ತವಮಂ ಸುಖ ದುಃಖಮಂ ಲಾಭಲಾಭಮಂ ಯಶೋಪಯಶೋಮಂ ಸಮನಾಗಿ ಭಾವಿಪುದು ಆನಂದ ಎಂಬುದಾಗಿ ಬೋಧಿಸುತ್ತಾರೆ.

ಸೇವೆ, ನಿಸ್ವಾರ್ಥ ಮನೋಭೂಮಿಕೆ , ತ್ಯಾಗ ಈ ಎಲ್ಲ ದೈವೀ ಚಿಂತನೆಗಳ ಬಗೆಗೆ ಪಾಶ್ಚಾತ್ಯ ಜಗತ್ತಿನಲ್ಲಿಯೂ ಅಮೋಘ ಭಾವ ತರಂಗಗಳು ಪುಟಿದೆದ್ದಿವೆ. ನೊಬೆಲ್‌ ಪ್ರಶಸ್ತಿ ಪಡೆದ ರಾಬರ್ಟ್‌ ಪ್ರಾಸ್ಟ್‌ ತನ್ನ ಕವನವೊಂದರ ಕೊನೆಯ ಸಾಲಿನಲ್ಲಿ But I have promises to keep and miles to go before I sleep ಎಂಬ ಅದ್ಭುತ ಅರ್ಥ ಅರಹುತ್ತಾನೆ. ನಾನು ಈ ದಾರಿಯಾಗಿ ಕೇವಲ ಒಂದೇ ಸಲ ಪಯಣಿಸುತ್ತೇನೆ ಹಾಗಾಗಿ ಏನೆಲ್ಲ ಒಳ್ಳೆಯದನ್ನು ಮಾಡಲು ಸಾಧ್ಯ, ಎಷ್ಟೆಲ್ಲ ಮೃದು ವಚನದಿಂದ ಸಂತೈಸಲು ಸಾಧ್ಯ ಅದನ್ನು ಸಾಧಿಸುತ್ತೇನೆ ಎಂಬ ಭಾವಾರ್ಥ ತುಂಬಿದ ವಿಚಾರವು ಹರಿದಿದೆ. ಕೊನೆಯದಾಗಿ “ಸೇವಾ ಮನೋಭೂಮಿಕೆ ಸೇವಾದೀಕ್ಷೆ’ ಇವೆಲ್ಲ ಭಾಷಣದ ಘೋಷಣೆಯ ಸರಕು ಅಲ್ಲ; ಈ ಭಾವಜಲವನ್ನು ಟ್ಯಾಂಕಿಗೆ ನೀರು ತುಂಬಿಸಿದಂತೆ ಬಾಹ್ಯ ಭೋಧನೆಯಲ್ಲಿ ಸೇರಿಸಲೂ ಸಾಧ್ಯವಿಲ್ಲ; ಬದಲಾಗಿ ಕೊಳದಲ್ಲಿ ಜಲ ಬಿಂದುಗಳು ಉಕ್ಕುವಂತೆ ಅವರವರ ತನು-ಮನದ ದಿನ ದಿನದ ಅನು ಸಂಧಾನದಲ್ಲಿ ಈ ವೈಚಾರಿಕ ಸಲಿಲ ಚಿಮ್ಮಿ ಬರಬೇಕು.

ಬೋಧನೆ, ಸಾಧನೆಯ ಜೀವನ ವ್ರತ
“ಸೇವೆ’ ಎಂಬುದು ಯಾವುದೇ ವಿದೇಶದಿಂದ ಈ ನೆಲಕ್ಕೆ ಆಮದುಗೊಂಡ ಶಬ್ದವಲ್ಲ; ಬದಲಾಗಿ ರಾಜ ಧರ್ಮ , ಋಷಿ ಪರಂಪರೆ, ಧರ್ಮಗ್ರಂಥ ಮಹಾನ್‌ ಚೇತನಗಳ ಬದುಕಿನಲ್ಲಿ ಸೇವೆಯ ಚಿಂತನೆ ಹಾಸು ಹೊಕ್ಕಾಗಿದೆ. ಸ್ವಾಮೀ ವಿವೇಕಾನಂದರು ಇದೇ ಸತ್ಯವನ್ನು, “ದರಿದ್ರ ನಾರಾಯಣನ ಸೇವಾದೀಕ್ಷೆ’ ಎಂಬುದಾಗಿ ಸೋದರಿ ನಿವೇದಿತಾರನ್ನೂ ಒಳಗೊಂಡು ತಮ್ಮ ಶಿಷ್ಯರಿಗೆ ಬೋಧಿಸಿದರು. ಸೇವೆ ಎಂಬುದು ಸರಳ, ಸಜ್ಜನಿಕೆಯ ವಾಸ್ತವಿಕತೆ, ಬೋಧನೆ ಹಾಗೂ ಸಾಧನೆಯ ಜೀವನ ವ್ರತ; ಇದನ್ನು ನಮ್ಮ ಬದುಕಿನಲ್ಲಿ ರೂಢಿಸಿಕೊಳ್ಳುವಲ್ಲಿ ಇಚ್ಛಾಶಕ್ತಿ, ಕ್ರಿಯಾ ಶಕ್ತಿ, ಜ್ಞಾನ ಶಕ್ತಿಗಳ ತ್ರಿವೇಣಿ ಸಂಗಮ ಅಗತ್ಯ.

– ಡಾ| ಪಿ. ಅನಂತಕೃಷ್ಣ ಭಟ್‌

Advertisement

Udayavani is now on Telegram. Click here to join our channel and stay updated with the latest news.

Next