Advertisement

ರಾಜ್ಯದ ಸಮಗ್ರ ಬಸ್‌ ಸಾರಿಗೆ ವ್ಯವಸ್ಥೆಗೆ ತಳಹದಿ ನಮ್ಮೀ ಕರಾವಳಿ !

09:55 AM Jun 17, 2023 | Team Udayavani |

ಈಗ ಕರ್ನಾಟಕದಾದ್ಯಂತ ಸರಕಾರಿ ಬಸ್‌ಗಳಲ್ಲಿ ಮಹಿಳಾ ಪ್ರಯಾಣಿಕರಿಗೆ ಉಚಿತ ಟಿಕೆಟ್‌ ಸಂಗತಿಯೇ ಪ್ರಧಾನ ಸುದ್ದಿಯಾಗಿದೆ. ರಾಜ್ಯದ ನೂತನ ಸರಕಾರದ ಈ ಪ್ರಯೋಗ ದೇಶದ ಗಮನವನ್ನೂ ಸೆಳೆದಿದೆ. ಇತರ ಕೆಲವು ರಾಜ್ಯಗಳು ಕೂಡ ತದ್ರೂಪಿ ಪ್ರಯೋಗಕ್ಕೆ ಸಿದ್ಧವಾಗಿವೆ.

Advertisement

ಹಾಗೆ ನೋಡಿದರೆ, ಕರ್ನಾಟಕ (ಆಗ ಮೈಸೂರು) ರಾಜ್ಯದ ಸಮಗ್ರ ಬಸ್‌ ಸಾರಿಗೆ ವ್ಯವಸ್ಥೆಗೆ ತಳಹದಿಯೇ ಈ ಕರಾವಳಿ; ಈಗಿನ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳು. ಬಸ್‌ ಸಂಚಾರ ವ್ಯವಸ್ಥೆ ಆರಂಭವಾದದ್ದು ಖಾಸಗಿ ಉದ್ಯಮ ಸಾಹಸಿಗಳ ಪ್ರಯತ್ನದಿಂದ. ಆ ಬಳಿಕ ರಾಜ್ಯ ಸರಕಾರ ಇದನ್ನು ವಿಸ್ತರಿಸಿತು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಸ್‌ ಸಾರಿಗೆ ವ್ಯವಸ್ಥೆಗೆ ಸಂಬಂಧಿಸಿದಂತೆ ಈಗಲೂ ಖಾಸಗಿಯವರದ್ದೇ ಪಾರಮ್ಯ. ಆಂತರಿಕ ಪ್ರಯಾಣದಲ್ಲಿ ಅವರದ್ದು ಸಿಂಹಪಾಲು.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ವಿವಿಧ ಕೇಂದ್ರಗಳಿಂದ ಈಗ ರಾಜ್ಯದ ಬಹು ಪ್ರದೇಶಗಳಿಗೆ ಸರಕಾರಿ ಬಸ್‌ಗಳ ಸೌಲಭ್ಯವಿದೆ. ಆದ್ದರಿಂದ ಮಹಿಳೆಯರು ಉಚಿತ ಪ್ರಯಾಣದ ಸೌಲಭ್ಯ ಪಡೆಯುವಂತಾಗಿದೆ.

ರಾಜ್ಯದಲ್ಲಿ ಪ್ರಪ್ರಥಮವಾಗಿ ಬಸ್‌ ಸೌಲಭ್ಯ ಆರಂಭವಾದದ್ದು ಮಂಗಳೂರಿನಲ್ಲಿ. ಇಲ್ಲಿನ ಭೌಗೋಳಿಕ ಸ್ವರೂಪ ಈ ಸಾಹಸಕ್ಕೆ ಅನುಕೂಲಕರ ಆಗಿರಲಿಲ್ಲ. ನದಿಗಳು, ಉಪ ನದಿಗಳು, ಏರಿಳಿತ, ತಿರುವು, ಅಲ್ಲಲ್ಲಿ ಜನವಸತಿ ಇತ್ಯಾದಿಗಳೆಲ್ಲ ಕಾರಣವಾಗಿದ್ದವು. ಆದರೂ ವಿಶೇಷವಾಗಿ ಜನತೆಯ ಮತ್ತು ಸಮಗ್ರವಾಗಿ ಸಮಾಜದ ಹಿತಾ ಸಕ್ತಿಯನ್ನು ಆದ್ಯತೆ ಯಾಗಿ ಪರಿಗಣಿಸಿ ಆಸಕ್ತರು ಈ ಸೇವೆಗೆ ಮುಂದಾ ದರು. ಆ ಸಂದರ್ಭದಲ್ಲಿ ಎತ್ತಿನ ಗಾಡಿಗಳು, ಮಿತ ಸಂಖ್ಯೆಯ ಕುದುರೆ ಗಾಡಿಗಳು, ದೋಣಿಗಳು, ಕಾಲ್ನಡಿಗೆಯೇ ಪ್ರಯಾಣದ ಮಾಧ್ಯಮಗಳಾಗಿದ್ದವು.

ಹೀಗೆ, ಮೊದಲು ಬಸ್‌ ಸಂಚಾರ ಆರಂಭವಾದದ್ದು 1914ರಲ್ಲಿ; ಅಂದರೆ ಇಂದಿಗೆ 109 ವರ್ಷ ಗಳಾದವು. ಈ ಆಡಳಿತದ ವ್ಯವಸ್ಥೆ ಕೆನರಾ ಪಬ್ಲಿಕ್‌ ಕನ್ವೆ ಯನ್ಸ್‌ (ಸಿಪಿಸಿ) ಸಂಸ್ಥೆಯ ದ್ದಾಗಿತ್ತು. ಈ ನಿಟ್ಟಿನಲ್ಲಿ ದಿ| ವಿ. ಎಸ್‌. ಕುಡ್ವಾ ಮತ್ತು ಅವರ ಸಹವರ್ತಿಗಳು ಸದಾ ಸ್ಮರಣೀಯರು.

Advertisement

1914ರಲ್ಲಿ ಈ ಪ್ರಥಮ ಮತ್ತು ಆಗಿನ ಏಕೈಕ ಬಸ್‌ನ ಪ್ರಯಾಣ ಮಂಗಳೂರು – ಬಂಟ್ವಾಳಕ್ಕಾಗಿತ್ತು.

ಆ ಕಾಲಘಟ್ಟದಲ್ಲಿ ಸೇತುವೆಗಳಿರಲಿಲ್ಲ. ನದಿಗಳನ್ನು ದಾಟುವುದೇ ಪ್ರಯಾಸಕರ ಮತ್ತು ಸಾಹಸಿಕ ಸಂಗತಿಯಾಗಿತ್ತು. ಆಗ ಅಸ್ತಿತ್ವಕ್ಕೆ ಬಂದದ್ದು ಫೆರಿ ಎಂಬ ಸೌಲಭ್ಯ. ಬಸ್‌ ಈ ಮೂಲಕ ಇನ್ನೊಂದು ಬದಿ ತಲುಪುವುದು ಸಾಧ್ಯವಾಯಿತು. ಮುಂದೆ ಈ ಸಂಸ್ಥೆ ಜಿಲ್ಲೆ ಮತ್ತು ಪಕ್ಕದ ಜಿಲ್ಲೆಗಳಲ್ಲಿ 200 ಬಸ್‌ಗಳನ್ನು ಹೊಂದಿತು. ಮಹಾ ಯುದ್ಧದ ಸಂದರ್ಭದಲ್ಲಿ ವಾಹನಗಳ ಓಡಾಟಕ್ಕೆ ತೊಂದರೆ ಉಂಟಾಗಿತ್ತು. ಆದರೂ ಈ ಸಂಸ್ಥೆಯು ತನ್ನ ವರ್ಕ್‌ ಶಾಪ್‌ ಮೂಲಕ ಪೆಟ್ರೋಲ್‌ ವಾಹನಗಳನ್ನು ಗ್ಯಾಸ್‌ ನಿರ್ವ ಹಿತವನ್ನಾಗಿ ಪರಿವರ್ತಿಸಿತು.

ಸಿಪಿಸಿಯ ಬಳಿಕ ಜಿಲ್ಲೆಯಲ್ಲಿ ಹನುಮಾನ್‌ ಟ್ರಾನ್ಸ್‌ಪೊರ್ಟ್‌ ಕಂಪೆನಿ, ಶಂಕರ್‌ ವಿಟಲ್‌ ಮೋಟಾರ್‌ ಸರ್ವೀಸ್‌, ಮಂಜುನಾಥ ಮೋಟಾರ್‌ ಸರ್ವೀಸ್‌, ಬಲ್ಲಾಳ್‌ ಮೋಟಾರ್‌ ಸರ್ವೀಸ್‌.. (ಪಟ್ಟಿ ಪ್ರಾತಿನಿಧಿಕ) ಮುಂತಾದ ಸಂಸ್ಥೆಗಳು ಬಸ್‌ ಓಡಾಟದ ಸೌಲಭ್ಯ ಕಲ್ಪಿಸಿದವು. ಸಿಪಿಸಿಯು ಪ್ರಪ್ರಥಮವಾಗಿ ಮಂಗಳೂರಿನಿಂದ ಬೆಂಗಳೂರಿಗೆ ರಾತ್ರಿ ಬಸ್‌ ಪ್ರಯಾಣವನ್ನು ಆರಂಭಿಸಿತು.

80ರ ದಶಕದ ಕಾಲಘಟ್ಟದ ವರೆಗೆ ಈ ಬಸ್‌ಗಳು ಪ್ರಯಾಣಿಕರ ಅಥವಾ ಜನಸ್ನೇ ಹಿಯಾಗಿಯೇ ಇದ್ದುದು ಇಲ್ಲಿ ಉಲ್ಲೇಖನೀಯ. ನಿಯಮಿತ ಬಸ್‌ ರೂಟ್‌ಗಳು ಮತ್ತು ಕಡಿಮೆ ಸಂಖ್ಯೆಯ ಬಸ್‌ಗಳು.

ಅಂತೆಯೇ ಸೀಮಿತ ಪ್ರಯಾಣಿಕರು. ಕೆಲವು ಊರುಗಳಲ್ಲಿ ನಿರ್ದಿಷ್ಟ ಬಸ್‌ಗಳು ಅಲ್ಲಿನ ನಿಲ್ದಾಣ ತಲುಪಿದಾಗ – ಈಗ ಇಷ್ಟು ಸಮಯ ಅಂತ ಹೇಳಬಹುದಾಗಿತ್ತು, ಎಲ್ಲವೂ ನಿಖರ. ದೈನಂದಿನ ಪ್ರಯಾಣಿಕರು ವಿಳಂಬಿಸಿದರೆ ಅವರಿಗಾಗಿ ತಾಳ್ಮೆಯಿಂದ ಕಾಯುವ ಚಾಲಕ- ನಿರ್ವಾಹಕರಿದ್ದರು. ವಿಶೇಷವೆಂದರೆ, ಕೆಲವು ಪ್ರಯಾಣಿಕರು ಬರುವುದಿಲ್ಲವಾದರೆ ಹಿಂದಿನ ದಿನವೇ ತಿಳಿಸುತ್ತಿದ್ದರು! ಕೆಲವು ರೂಟ್‌ಗಳು ಆಯಾ ಚಾಲಕರ ಅಥವಾ ಬಸ್‌ಗಳ ಹೆಸರಿ ನಿಂದಲೇ ಪ್ರಸಿದ್ಧವಾಗಿದ್ದವು. ಉದಾ: ನೀರೆ ಬೈಲೂರಿನಲ್ಲಿ ಸಂಜೀವ ಶೆಟ್ರ ಬಸ್‌, ಹೆಬ್ರಿ ಕಡೆ ನಂದು ಬಸ್‌ ಇತ್ಯಾದಿ.

ಈಗ ಕರಾವಳಿಯ ಬಸ್‌ ಸಂಚಾರದ- ಸೌಲಭ್ಯದ- ಕೆಲವೊಮ್ಮೆ ಪರಸ್ಪರ ಸ್ಪರ್ಧೆಯ ಚಿತ್ರಣವೇ ಬದಲಾಗಿದೆ. ಅಷ್ಟು ಸಂಖ್ಯೆಯ ಖಾಸಗಿ ಬಸ್‌ ನಿರ್ವಹಣ ಸಂಸ್ಥೆಗಳು, ಸಿಟಿ ಬಸ್‌ಗಳು, ಬಸ್‌ಗಳ ಸಂಖ್ಯೆ; ಅಧಿಕ ಪ್ರಯಾ ಣಿಕರು. ಈ ನಡುವೆ ಕೆಲವು ಆಯ್ದ ರೂಟ್‌ಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳು ಆರಂಭವಾದರೆ, ಜಿಲ್ಲಾ ಕೇಂದ್ರಗಳಿಂದ ವಿವಿಧ ರಾಜ್ಯಗಳಿಗೆ ಈ ಸಂಪರ್ಕ ಲಭ್ಯವಾಯಿತು.

ಇಲ್ಲೊಂದು ಕುತೂಹಲಕಾರೀ ಮಾಹಿತಿ ಇದೆ: ಮಂಗಳೂರಿನಿಂದ ಉಡುಪಿಗೆ 5 ಗಂಟೆ ಪ್ರಯಾಣ. ಬಸ್‌ ಸೌಲಭ್ಯದ ಆರಂಭಿಕ ದಿನಗಳಲ್ಲಿ ನದಿಗಳಿಗೆ ಸೇತುವೆ ಇಲ್ಲದ ಕಾರಣ, ಮಂಗಳೂರಿನಿಂದ ಉಡು ಪಿಗೆ ಬಸ್‌ನಲ್ಲಿ ಸಂಚರಿಸಬೇಕಾದರೆ ಗುರು ಪುರ ಸೇತುವೆ ಮೂಲಕ ಕಾರ್ಕಳಕ್ಕೆ ಸಾಗಿ ಉಡುಪಿ ಸೇರಬೇಕಿತ್ತು. ಧೂಳಿನಿಂದ ತುಂಬಿದ್ದ ಮಣ್ಣಿನ ರಸ್ತೆಯಲ್ಲಿ 5 ತಾಸುಗಳ ಸುದೀರ್ಘ‌ ಪ್ರಯಾಣ ಇದಾಗಿತ್ತು. ಈ ಸುತ್ತುಬಳಸಿನ ರಸ್ತೆಯಲ್ಲಿ ಖಾಸಗಿ ಬಸ್‌ ಸಂಸ್ಥೆಗಳು ಪರಸ್ಪರ ಸ್ಪರ್ಧೆಯಿಂದ ಸಂಚರಿಸುತ್ತಿದ್ದವು. ಆಗಿನ ಜಿಲ್ಲೆಯ ಕೆಲವು ಖಾಸಗಿ ಬಸ್‌ ಸಂಸ್ಥೆಗಳು ಜತೆಗೂಡಿ ಕಂಬೈಂಡ್‌ ಬುಕಿಂಗ್‌ ಸರ್ವಿಸ್‌ ಎಂದು ಪರಸ್ಪರರ ಸಂಘಟನೆ ಮಾಡಿಕೊಂಡಿದ್ದು ಕೂಡ ಗಮನಾರ್ಹ.

ಸುಬ್ಬಯ್ಯ ಶೆಟ್ಟರ ವಿಲೇವಾರಿ
ಈ ಸಂಗತಿಯನ್ನು ದಾಖಲಿಸಿಕೊಳ್ಳದೆ ಕರಾವಳಿಯ ಬಸ್‌ ಪ್ರಯಾಣದ ಇತಿಹಾಸ ಅಪೂರ್ಣವಾಗಬಹುದು. ಆಗ ಸಾರಿಗೆ ವ್ಯವಸ್ಥೆಯು ಸಂಪೂರ್ಣ ಖಾಸಗಿಯದ್ದಾಗಿತ್ತು. ಜನಸಾಮಾನ್ಯರು ಸಂಚಾರಕ್ಕೆ ಸಾಮಾನ್ಯವಾಗಿ ಕಾಲ್ನಡಿಗೆಯನ್ನೇ ಅವಲಂ ಬಿಸಿದ್ದು, ಎತ್ತಿನ ಬಂಡಿಯೂ ಬಳಕೆಯಲ್ಲಿತ್ತು. ಮಂಗಳೂರು -ಉಡುಪಿ ರಸ್ತೆಯ ಮೇಲೆ ಬೆಳ್ಳೆ ಸುಬ್ಬಯ್ಯ ಶೆಟ್ಟರ ಜಟಕಾಗಾಡಿ ಸರ್ವಿಸ್‌ ಇತ್ತು. ಆ ದಿನಗಳಲ್ಲಿ ಕೂಳೂರು, ಪಾವಂ ಜೆ, ಮೂಲ್ಕಿ ಹಾಗೂ ಉದ್ಯಾವರಗಳ ಬಳಿ ಹರಿಯುತ್ತಿದ್ದ ಹೊಳೆಗಳನ್ನು ದೋಣಿಯಲ್ಲಿ ದಾಟಬೇಕಿತ್ತು. ಆಗ ಬೆಳ್ಳೆ ಸುಬ್ಬ ಯ್ಯ ಶೆಟ್ಟರು ಈ ಹೊಳೆಗಳ ನಡುವಿನ ಮಾರ್ಗದಲ್ಲಿ ಜಟಕಾ ಬಂಡಿಯನ್ನು ಓಡಿ ಸುವ ಮೂಲಕ ಮಂಗಳೂರಿನಿಂದ ಉಡುಪಿಯವರೆಗೆ ಪ್ರಯಾಣಿಕರನ್ನು ವ್ಯವಸ್ಥಿತವಾಗಿ ಸಾಗಿಸುವ ಅಪೂರ್ವ ಸಾಹಸ ನಡೆಸಿದ್ದರು.

ವಿಲೇವಾರಿ ಎಂದರೆ ಸುಬ್ಬಯ್ಯ ಶೆಟ್ಟರ ವಿಲೇವಾರಿ ಎಂಬ ಮಾತು ನಾಣ್ಣುಡಿ ಯಾಗುವಷ್ಟು ಜನಪ್ರಿಯವಾಗಿತ್ತು. ಮಂಗಳೂರಿನಿಂದ ತಮ್ಮ ಜಟಕಾ ಬಂಡಿಯಲ್ಲಿ ಪ್ರಯಾಣಿಕರನ್ನು ತುಂಬಿಕೊಂಡು ಕೂಳೂರು ಹೊಳೆಯ ಬದಿಯಲ್ಲಿ ಇಳಿಸಿ, ಅಲ್ಲಿಂದ ದೋಣಿಯಲ್ಲಿ ಹೊಳೆ ದಾಟಿಸಿ; ಮತ್ತೆ ಹೊಳೆಯ ಆಚೆ ಬದಿ ನಿಲ್ಲಿಸಿದ್ದ ತಮ್ಮ ಜಟಕಾ ಬಂಡಿಯಲ್ಲಿ ಪ್ರಯಾಣಿಕರನ್ನು ಸಾಗಿಸಿ…

ಇಂದು ಮಂಗಳೂರು -ಉಡುಪಿ ನಡುವೆ ನಿಮಿಷಕ್ಕೊಂದು ಬಾರಿ ಬಸ್‌ ಪ್ರಯಾಣ ಸೌಕರ್ಯವಿದೆ. ಈಗ ಒಟ್ಟು ಸರಕಾರಿ- ಖಾಸಗಿ ಸಾರಿಗೆ ವ್ಯವಸ್ಥೆಯ ಬಹುಮುಖ್ಯ ಉದ್ಯಮವಾಗಿ ಬೆಳೆದಿದೆ. ಅಪಾರ ಸಂಖ್ಯೆಯ ಉದ್ಯೋಗ ಅವಕಾಶಗಳನ್ನು ಒದಗಿಸುತ್ತಿದೆ. ಅದರ ಹಿಂದೆ, ಕರಾವಳಿಯ ಈ ಸಾಹಸಿಕ ಇತಿಹಾಸವಿದೆ.

ಅಂದಹಾಗೆ: ಇದು ವಾಟ್ಸ್‌ಆ್ಯಪ್‌ಗಳಲ್ಲೀಗ ಪ್ರಚಲಿತ:
ನಿರ್ವಾಹಕ- ಒಡೆಗ್‌ ಟಿಕೆಟ್‌ ಈರೆಗ್‌?
ಪ್ರಯಾಣಿಕೆ- ಒಡೆಗ್‌ಂದ್‌ ಈರೆಗೆ ದಾಯೆಗ್‌?
ಟಿಕೆಟ್‌ ಕೊರೆಲ. ಎಂಕ್‌ ಕುಶಿ ಬತ್ತಿನಲ್ಪ ಜಪ್ಪುವೆ!

ಮನೋಹರ ಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next