ಚೆನ್ನೈ/ಕನೌ°ಜ್: ಬಿಎಸ್‌ಪಿ ಜತೆಗಿನ ಸ್ಥಾನ ಹೊಂದಾಣಿಕೆ ಘೋಷಣೆ ಮುನ್ನವೇ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖೀಲೇಶ್ ಯಾದವ್, “ಲೆಕ್ಕಾಚಾರ ಸರಿಯಾಗಲಿದೆ ಮತ್ತು ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲಿದ್ದೇವೆ’ ಎಂದು ಹೇಳಿದ್ದಾರೆ. ಕನೌ°ಜ್‌ನಲ್ಲಿ ಶುಕ್ರವಾರ ಮಾತನಾಡಿದ ಅವರು, ಲೋಕಸಭೆ ಉಪ ಚುನಾವಣೆಗಳಲ್ಲಿ ಜತೆಗೂಡಿ ಬಿಜೆಪಿ ಎದುರಿಸಿ, ಜಯಗಳಿಸಿದ್ದೆವು. ಅದೇ ಲೆಕ್ಕಾಚಾರದಲ್ಲಿ ಮೈತ್ರಿ ಮುಂದು ವರಿಯಲಿದೆ. ನಾವು ಗೆಲ್ಲಲಿದ್ದೇವೆ ಎಂದು ಅಖೀಲೇಶ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸದ್ಯ ಸ್ಥಾನ ಹೊಂದಾಣಿಕೆ ತಾತ್ವಿಕವಾಗಿದೆ. ಶನಿವಾರ ಎಲ್ಲವೂ ವಿವರವಾಗಿ ಬಿಎಸ್‌ಪಿ ನಾಯಕಿ ಮಾಯಾವತಿ ಜತೆಗೂಡಿ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಲಾಗುತ್ತದೆ ಎಂದಿದ್ದಾರೆ. ಮೈತ್ರಿಕೂಟದಲ್ಲಿ ಕಾಂಗ್ರೆಸ್ ಇಲ್ಲ ಎನ್ನುವುದನ್ನು ಪರೋಕ್ಷವಾಗಿ ಖಚಿತಪಡಿಸಿದ ಅಖೀಲೇಶ್, ಅವರಿಗೆ ಕೇವಲ 2 ಸ್ಥಾನ (ಅಮೇಠಿ, ರಾಯ್‌ಬರೇಲಿ) ಮಾತ್ರ ನೀಡುವುದಾಗಿ ಹೇಳಿದ್ದಾರೆ.
ಕುತೂಹಲಕಾರಿ ಅಂಶವೆಂದರೆ ಎಸ್‌ಪಿ-ಬಿಎಸ್‌ಪಿ ಮೈತ್ರಿಕೂಟದ ಭಾಗವಾಗಿದೆ ಎಂದು ಹೇಳಲಾಗಿರುವ ಮಾಜಿ ಸಚಿವ ಅಜಿತ್ ಸಿಂಗ್‌ರ ರಾಷ್ಟ್ರೀಯ ಲೋಕ ದಳಕ್ಕೆ ಪತ್ರಿಕಾಗೋಷ್ಠಿಗೆ ಆಹ್ವಾನಿಸಲಾಗಿಲ್ಲ. ಪಕ್ಷದ ನಾಯಕ ಮಸೂದ್ ಅಹ್ಮದ್ ಹೇಳಿದ ಪ್ರಕಾರ, ಶುಕ್ರವಾರ ಸಂಜೆಯವರೆಗೆ ಆಹ್ವಾನ ಬಂದಿಲ್ಲ ಎನ್ನಲಾಗಿದೆ. 2-3 ಸ್ಥಾನಗಳನ್ನು ಅಜಿತ್ ಸಿಂಗ್ ಪಕ್ಷಕ್ಕೆ ನೀಡುವ ಸಾಧ್ಯತೆ ಇದೆ.
ಡಿಎಂಕೆ ಲೇವಡಿ: ಬಿಜೆಪಿಯು ಎಲ್ಲರ ಜತೆಗೂ ಮೈತ್ರಿ ಮಾಡಿಕೊಳ್ಳಲಿದೆ ಮತ್ತು ಹಳೆಯ ಮಿತ್ರರನ್ನು ಮರೆಯುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಕ್ಕೆ ಡಿಎಂಕೆ ಲೇವಡಿ ಮಾಡಿದೆ. ಜತೆಗೆ ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟನೆ ನೀಡಿದೆ. ಚೆನ್ನೈನಲ್ಲಿ ಮಾತನಾಡಿದ ಪಕ್ಷದ ಅಧ್ಯಕ್ಷ ಎಂ.ಕೆ.ಸ್ಟಾಲಿನ್, ಪ್ರಧಾನಿ ನರೇಂದ್ರ ಮೋದಿ ತಮ್ಮನ್ನು ಅಟಲ್ ಬಿಹಾರಿ ವಾಜಪೇಯಿ ಜತೆ ಹೋಲಿಸಿಕೊಳ್ಳುತ್ತಿದ್ದಾರೆ. ಮೋದಿ ಆಡಳಿತದ ಅವಧಿಯಲ್ಲಿ ಬಿಜೆಪಿ ತಮಿಳುನಾಡಿಗೆ ಯೋಜನೆಗಳನ್ನು ನೀಡುವ ಮೊದಲೇ ಕಿತ್ತುಕೊಂಡದ್ದನ್ನು ಮರೆಯುವುದಿಲ್ಲ ಎಂದಿದ್ದಾರೆ. ವಾಜಪೇಯಿ ಎಲ್ಲಾ ಪಕ್ಷಗಳನ್ನು ಜತೆಗೂಡಿಸಿ ಮುನ್ನಡೆದಿದ್ದರು. ಆದರೆ ಹಾಲಿ ಪ್ರಧಾನಿ ಅವಧಿಯಲ್ಲಿ ಎನ್‌ಡಿಎ ಉತ್ತಮವಾಗಿಲ್ಲ ಎಂದಿದ್ದಾರೆ ಸ್ಟಾಲಿನ್.
ಇದೇ ವೇಳೆ ಪ್ರಧಾನಿ ಹೇಳಿಕೆಗೆ ಸಕಾರಾತ್ಮಕ ಪ್ರತಿಕ್ರಿಯೆ ನೀಡಿರುವ ತಮಿಳುನಾಡು ಮುಖ್ಯಮಂತ್ರಿ ಕೆ.ಪಳನಿಸ್ವಾಮಿ, ರಾಜ್ಯದ ಹಿತಾಸಕ್ತಿ ಕಾಯುವ ಪಕ್ಷಕ್ಕೆ ಎಐಎಡಿಎಂಕೆ ಬೆಂಬಲ ನೀಡಲಿದೆ.
ಮೋಸ ಮಾಡುವವರಿಗೆ ಬೆಂಬಲ ನೀಡುವುದಿಲ್ಲ ಎಂದಿದ್ದಾರೆ. ದಿ.ಜಯಲಲಿತಾ ನೇತೃತ್ವದಲ್ಲಿ ಎಐಎಡಿಎಂಕೆ 2004ರಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟಕ್ಕೆ ಬೆಂಬಲ ನೀಡಿತ್ತು.