Advertisement

“ಬೌಲರ್‌ಗಳ ಪ್ರಯತ್ನ ಶ್ಲಾಘನೀಯ’

08:18 AM Oct 27, 2017 | Team Udayavani |

ಪುಣೆ: ನ್ಯೂಜಿಲ್ಯಾಂಡ್‌ ಎದುರಿನ ದ್ವಿತೀಯ ಏಕದಿನ ಪಂದ್ಯದ ಗೆಲುವಿಗೆ ಬೌಲರ್‌ಗಳೇ ಪ್ರಮುಖ ಕಾರಣ ಎಂದು ಆರಂಭಕಾರ ಶಿಖರ್‌ ಧವನ್‌ ಅಭಿಪ್ರಾಯಪಟ್ಟಿದ್ದಾರೆ. ನ್ಯೂಜಿಲ್ಯಾಂಡನ್ನು ಸಣ್ಣ ಮೊತ್ತಕ್ಕೆ ನಿಯಂತ್ರಿಸಿದ್ದು ದೊಡ್ಡ ಸಾಧನೆಯಾಗಿದೆ ಎಂದು ಅವರು ಪ್ರಶಂಸಿಸಿದರು.

Advertisement

“ಈಗಿನ ದಿನಗಳಲ್ಲಿ 230 ರನ್‌ ಎನ್ನುವುದು ಭಾರೀ ದೊಡ್ಡ ಮೊತ್ತವಲ್ಲ. ನಮ್ಮ ಬೌಲರ್‌ಗಳು ಅಮೋಘ ಪ್ರದರ್ಶನವಿತ್ತರು. ಕ್ಷೇತ್ರರಕ್ಷಕರ ಬೆಂಬಲವೂ ಉತ್ತಮ ಮಟ್ಟದಲ್ಲಿತ್ತು. ಬೌಲರ್‌ಗಳು ನಮ್ಮ ಕೆಲಸವನ್ನು ಸುಲಭಗೊಳಿಸಿದರು. 300ರಷ್ಟು ರನ್‌ ಬೆನ್ನಟ್ಟುವಾಗ ಇರುವ ಒತ್ತಡ 230 ರನ್‌ ಬೆನ್ನಟ್ಟುವಾಗ ಖಂಡಿತ ಇರುವುದಿಲ್ಲ…’ ಎಂದು ಧವನ್‌ ಹೇಳಿದರು.

“ಭಾರತದ ಬೌಲಿಂಗ್‌ ವೇಳೆ ಸೀಮ್‌ ಅಂಶ ಇಲ್ಲದಿದ್ದರೂ ಬಿಗಿ ದಾಳಿ ಮೂಲಕ ನಮ್ಮವರು ಗಮನ ಸೆಳೆದರು. ಅವರ ಪೇಸ್‌ ಬೌಲರ್‌ಗಳನ್ನು ನಾವು ಚೆನ್ನಾಗಿ ನಿಭಾಯಿಸಿದೆವು’ ಎಂಬುದು ಎಡಗೈ ಆರಂಭಿಕನ ಅನಿಸಿಕೆ.

“ಭುವನೇಶ್ವರ್‌ ಕುಮಾರ್‌ ಘಾತಕ ಬೌಲಿಂಗ್‌ ಸಂಘಟಿಸಿದರು. ಎದುರಾಳಿಯನ್ನು ನಿಯಂತ್ರಿಸಿದ ಪರಿ ಅಮೋಘವಾಗಿತ್ತು. ಎಡಗೈ ಆರಂಭಕಾರ ಕಾಲಿನ್‌ ಮುನ್ರೊ ಅವರನ್ನು ಬೌಲ್ಡ್‌ ಮಾಡಿದ ರೀತಿಯೇ ಭುವಿ ಪರಾಕ್ರಮಕ್ಕೆ ಸಾಕ್ಷಿ. ಡೆತ್‌ ಓವರ್‌ಗಳಲ್ಲಿ ಭುವನೇಶ್ವರ್‌ ವಿಶ್ವದಲ್ಲೇ ಶ್ರೇಷ್ಠರು. ಅವರ ಬೌಲಿಂಗನ್ನು ಐಪಿಎಲ್‌ನಲ್ಲಿ ಗಮನಿಸುತ್ತಲೇ ಬಂದಿದ್ದೇನೆ. ಇಗ ಎಷ್ಟೋ ಪಟ್ಟು ಸುಧಾರಿಸಿದೆ’ ಎಂದರು.

ದಿನೇಶ್‌ ಕಾರ್ತಿಕ್‌ ಅವರ ಆಟ ವನ್ನೂ ಧವನ್‌ ಹೊಗಳಿದರು. “ನಾನು ಇಂದು ಸ್ಟ್ರೈಕ್‌ ರೊಟೇಟ್‌ ಮಾಡುವಲ್ಲಿ ಹೆಚ್ಚಿನ ಯಶಸ್ಸು ಸಾಧಿಸಲಿಲ್ಲ. ಆದರೆ ಕಾರ್ತಿಕ್‌ ಇದನ್ನು ಅಚ್ಚುಕಟ್ಟಾಗಿ ನಿಭಾಯಿಸಿದರು. ಹೀಗಾಗಿ ನಾನು ಯಾವುದೇ ಒತ್ತಡಕ್ಕೊಳಗಾಗಲಿಲ್ಲ…’ ಎಂದು 22ನೇ ಅರ್ಧ ಶತಕ ಬಾರಿಸಿದ ಧವನ್‌ ಹೇಳಿದರು.

Advertisement

ಪುಣೆಯಲ್ಲಿ ಧವನ್‌ ಪಂದ್ಯದಲ್ಲೇ ಸರ್ವಾಧಿಕ 68 ರನ್‌ ಹೊಡೆದರೆ, ಕಾರ್ತಿಕ್‌ ಔಟಾಗದೆ 64 ರನ್‌ ಬಾರಿಸಿದರು. 45ಕ್ಕೆ 3 ವಿಕೆಟ್‌ ಕಿತ್ತ ಭುವನೇಶ್ವರ್‌ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

ಎಕ್ಸ್‌ಟ್ರಾ ಇನ್ನಿಂಗ್ಸ್‌
ಇದು ಭಾರತ-ನ್ಯೂಜಿಲ್ಯಾಂಡ್‌ ನಡುವಿನ 100ನೇ ಪಂದ್ಯ. ಇದರಲ್ಲಿ ಭಾರತ 50ನೇ ಗೆಲುವನ್ನಾಚರಿಸಿತು. 44ರಲ್ಲಿ ಸೋತಿದ್ದು, ಒಂದು ಟೈ ಆಗಿದೆ. ಉಳಿದ 5 ಪಂದ್ಯಗಳು ಫ‌ಲಿತಾಂಶ ಕಂಡಿಲ್ಲ.

ನ್ಯೂಜಿಲ್ಯಾಂಡ್‌ ವಿರುದ್ಧ ಭುವನೇಶ್ವರ್‌ ಕುಮಾರ್‌ ಅತ್ಯುತ್ತಮ ಬೌಲಿಂಗ್‌ ಪ್ರದರ್ಶಿಸಿ ದರು (45ಕ್ಕೆ 3). 2014ರ ನೇಪಿಯರ್‌ ಪಂದ್ಯದಲ್ಲಿ 38ಕ್ಕೆ 1 ವಿಕೆಟ್‌ ಉರುಳಿಸಿದ್ದು ಈವರೆಗಿನ ಅತ್ಯುತ್ತಮ ಪ್ರದರ್ಶನ.

ಭುವನೇಶ್ವರ್‌ ಒಟ್ಟು 4ನೇ ಸಲ, ನ್ಯೂಜಿಲ್ಯಾಂಡ್‌ ವಿರುದ್ಧ ಮೊದಲ ಸಲ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಅವರು ಭಾರತದಲ್ಲಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದದ್ದು ಇದೇ ಮೊದಲು.

ಧೋನಿ ಭಾರತದಲ್ಲಿ 200 ಕ್ಯಾಚ್‌ ಪಡೆದ ಮೊದಲ ವಿಕೆಟ್‌ ಕೀಪರ್‌ ಎನಿಸಿದರು.

ಟಿಮ್‌ ಸೌಥಿ 5ನೇ ಸಲ ರೋಹಿತ್‌ ಶರ್ಮ ವಿಕೆಟ್‌ ಕಿತ್ತು 2ನೇ ಸ್ಥಾನದಲ್ಲಿ ಕಾಣಿಸಿ ಕೊಂಡರು. ರೋಹಿತ್‌ ಅವರ ವಿಕೆಟನ್ನು ಅತೀ ಹೆಚ್ಚು ಸಲ ಉರುಳಿಸಿದ ಬೌಲರ್‌ ಏಂಜೆಲೊ ಮ್ಯಾಥ್ಯೂಸ್‌ (7 ಸಲ).

ದಿನೇಶ್‌ ಕಾರ್ತಿಕ್‌ 9ನೇ ಅರ್ಧ ಶತಕ ಹೊಡೆದರು (ಔಟಾಗದೆ 64).

ಟ್ರೆಂಟ್‌ ಬೌಲ್ಟ್ ಭಾರತದೆದುರಿನ ಪಂದ್ಯ ದಲ್ಲಿ 2ನೇ ಸಲ ವಿಕೆಟ್‌ ಕೀಳುವಲ್ಲಿ ವಿಫ‌ಲರಾದರು (10-0-54-0). 2016ರ ಮೊಹಾಲಿ ಪಂದ್ಯದಲ್ಲೂ ಅವರು “ವಿಕೆಟ್‌ ಲೆಸ್‌’ ಆಗಿದ್ದರು (10-0-73-0).

ಶಿಖರ್‌ ಧವನ್‌ ನ್ಯೂಜಿಲ್ಯಾಂಡ್‌ ವಿರುದ್ಧ ಮೊದಲ ಅರ್ಧ ಶತಕ ಹೊಡೆದರು. ಒಟ್ಟಾರೆ ಯಾಗಿ ಇದು ಅವರ 22ನೇ ಅರ್ಧ ಶತಕ.

ಧವನ್‌ ತವರಿನಲ್ಲಿ ಸಾವಿರ ರನ್‌ ಪೂರ್ತಿ ಗೊಳಿಸಿದ ಭಾರತದ 23ನೇ ಆಟಗಾರ ನೆನಿಸಿದರು (25 ಪಂದ್ಯ, 1,045 ರನ್‌, 3 ಶತಕ, 7 ಅರ್ಧ ಶತಕ).

ಭಾರತ 2015ರ ಬಳಿಕ 4ನೇ ಕ್ರಮಾಂಕದಲ್ಲಿ 11 ಮಂದಿ ಆಟಗಾರರನ್ನು ಆಡಿಸಿತು. ಈ ಅವಧಿಯ ಲೆಕ್ಕಾಚಾರದಲ್ಲಿ ಇದೊಂದು ದಾಖಲೆ. ಮುಂಬಯಿ ಪಂದ್ಯದಲ್ಲಿ ಜಾಧವ್‌, ಪುಣೆಯಲ್ಲಿ ದಿನೇಶ್‌ ಕಾರ್ತಿಕ್‌ ಬಂದರು.

ಕೇನ್‌ ವಿಲಿಯಮ್ಸನ್‌ 2013ರ ಬಳಿಕ ಮೊದಲ ಬಾರಿಗೆ ಸತತ 2 ಪಂದ್ಯಗಳಲ್ಲಿ ಎರಡಂಕೆಯ ಸ್ಕೋರ್‌ ದಾಖಲಿಸುವಲ್ಲಿ ವಿಫ‌ಲರಾದರು (ಮುಂಬಯಿಯಲ್ಲಿ 6, ಪುಣೆಯಲ್ಲಿ 3 ರನ್‌).

Advertisement

Udayavani is now on Telegram. Click here to join our channel and stay updated with the latest news.

Next