ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಯನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿ ಸೋಮವಾರ(ಸೆಪ್ಟೆಂಬರ್ 27) ಕರೆ ಕೊಟ್ಟಿದ್ದ ಭಾರತ್ ಬಂದ್ ಯಶಸ್ವಿಯಾಗಿದೆ ಎಂದು ಭಾರತೀಯ ಕಿಸಾನ್ ಒಕ್ಕೂಟದ ನಾಯಕ ರಾಕೇಶ್ ಟಿಕಾಯತ್ ತಿಳಿಸಿದ್ದಾರೆ.
ಇದನ್ನೂ ಓದಿ:ಭೂ ಹಗರಣದಲ್ಲಿ ನ್ಯಾಯಾಧೀಶರು ಭಾಗಿ ವಿಷಾದನೀಯ: ಶಾಸಕ ಎ.ಟಿ.ರಾಮಸ್ವಾಮಿ
ಬಂದ್ ಕರೆಗೆ ಇಡೀ ದೇಶಾದ್ಯಂತ ರೈತರು ಪೂರ್ಣ ಪ್ರಮಾಣದಲ್ಲಿ ಬೆಂಬಲ ನೀಡಿರುವುದಾಗಿ ಟಿಕಾಯತ್ ಹೇಳಿದರು. ನಮ್ಮ ಭಾರತ್ ಬಂದ್ ಯಶಸ್ವಿಯಾಗಿದೆ. ನಮಗೆ ರೈತರು ಪೂರ್ಣ ಪ್ರಮಾಣದ ಬೆಂಬಲ ನೀಡಿದ್ದಾರೆ. ಜನರಿಗೆ ತೊಂದರೆಯಾಗಬಾರದೆಂದು ನಾವು ರಸ್ತೆ ತಡೆ, ಸಾರಿಗೆ ಸಂಚಾರಕ್ಕೆ ತಡೆಯೊಡ್ಡಿಲ್ಲ ಎಂದು ತಿಳಿಸಿದ್ದಾರೆ.
ನಾವು ಸರ್ಕಾರದ ಜತೆ ಮಾತುಕತೆ ನಡೆಸಲು ಸಿದ್ದರಾಗಿದ್ದೇವೆ. ಆದರೆ ಈಗ ಮಾತುಕತೆಗೆ ಅವಕಾಶ ದೊರಕಿಲ್ಲ. ಅಲ್ಲದೇ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಯಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರ ಕಬ್ಬಿನ ಬೆಲೆಯನ್ನು ಹೆಚ್ಚಳ ಮಾಡಲು ವಿಫಲವಾಗಿದೆ ಎಂದು ಟಿಕಾಯತ್ ಆರೋಪಿಸಿದರು.
ಬಿಜೆಪಿ ಪ್ರಣಾಳಿಕೆಯಲ್ಲಿ ಕಬ್ಬಿನ ಬೆಲೆಯನ್ನು 375ರಿಂದ 450 ರೂಪಾಯಿವರೆಗೆ ಹೆಚ್ಚಳ ಮಾಡುವುದಾಗಿ ಭರವಸೆ ನೀಡಲಾಗಿತ್ತು. ಆದರೆ ಈಗ ಕೇವಲ 25 ರೂಪಾಯಿ ಮಾತ್ರ ಹೆಚ್ಚಳ ಮಾಡಲಾಗಿದೆ ಎಂದು ಟಿಕಾಯತ್ ದೂರಿದ್ದಾರೆ.