Advertisement

ನಮ್ಮ ಬೆಂಗಳೂರು ನಮ್ಮ ಹೆಮ್ಮೆ ಯಾತ್ರೆ ಆರಂಭ

12:23 PM Mar 22, 2018 | Team Udayavani |

ಬೆಂಗಳೂರು/ಕೆ.ಆರ್‌.ಪುರ: ಬಿಜೆಪಿಯ “ಬೆಂಗಳೂರು ರಕ್ಷಿಸಿ ಯಾತ್ರೆ’ಗೆ ವಿರುದ್ಧವಾಗಿ ಕಾಂಗ್ರೆಸ್‌ “ನಮ್ಮ ಬೆಂಗಳೂರು ನಮ್ಮ ಹೆಮ್ಮೆ ಯಾತ್ರೆ’ಗೆ ಚಾಲನೆ ನೀಡಿದೆ. ಕೆ.ಆರ್‌.ಪುರ ಕ್ಷೇತ್ರದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸ್ಥಳೀಯ ಬಿಜೆಪಿ ಮುಖಂಡರ ಪುಂಡಾಟಿಕೆ ಪ್ರಕರಣಗಳು ಹಾಗೂ ಬಿಜೆಪಿ ಅಧಿಕಾರದಲ್ಲಿನ ಭ್ರಷ್ಟಾಚಾರದ ಬಗ್ಗೆ ಚಾರ್ಜ್‌ಶೀಟ್‌ ಬಿಡುಗಡೆ ಮಾಡುವ ಮೂಲಕ ಗೃಹ ಸಚಿವ ರಾಮಲಿಂಗಾ ರೆಡ್ಡಿ ಯಾತ್ರೆಗೆ ಚಾಲನೆ ನೀಡಿದರು. 

Advertisement

ನಂತರ ನಡೆದ ಸಮಾವೇಶದಲ್ಲಿ ಮಾತನಾಡಿದ ರಾಮಲಿಂಗಾರೆಡ್ಡಿ, ಮತಕ್ಕಾಗಿ ಬಿಜೆಪಿಯವರು ನಾಟಕ ಆಡುತ್ತಿದ್ದಾರೆ. ನಗರದಲ್ಲಿ ಮಳೆ ಬಂದಾಗ ಸ್ಲಂಗಳಿಗೆ ಹೋಗದೇ ಈಗ ಸ್ಲಂಗಳಿಗೆ ಹೋಗಿ ಮಲಗುತ್ತಿದ್ದಾರೆ. ಗಣಿ ಹಣದಲ್ಲಿ ರೆಸಾರ್ಟ್‌ನಲ್ಲಿ ಇರುವವರಿಗೆ ಸ್ಲಂ ಜನರ ನೆನಪು ಹೇಗೆ ಆಯಿತೋ ಗೊತ್ತಿಲ್ಲ ಎಂದು ಹೇಳಿದರು.

ಪ್ರಧಾನಿ ನರೇದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ, ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಕರ್ನಾಟಕಕ್ಕೆ ಬಂದು ಕಾನೂನು ಸುವ್ಯವಸ್ಥೆಯ ಬಗ್ಗೆ ಮಾತನಾಡುತ್ತಾರೆ. ಬಿಜೆಪಿ ಅಧಿಕಾರದ ಅವಧಿಯಲ್ಲಿಯೇ ಹೆಚ್ಚಿನ ಕೊಲೆ, ಸುಲಿಗೆ ದರೋಡೆ ಪ್ರಕರಣಗಳಾಗಿವೆ. ರಾಜ್ಯ ಬಿಜೆಪಿಯವರು ಪ್ರಧಾನಿ ಬಾಯಿಂದಲೇ ಸುಳ್ಳು ಹೇಳಿಸಿದ್ದಾರೆ. ಇವರಿಗೆ ನಾಚಿಕೆ, ಮಾನ, ಮರ್ಯಾದೆ ಏನೂ ಇಲ್ಲ ಎಂದು ವಾಗ್ಧಾಳಿ ನಡೆಸಿದರು. 

ಬಿಜೆಪಿಯಿಂದ ರಕ್ಷಿಸಬೇಕಿದೆ: ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್‌ ಮಾತನಾಡಿ, ಬೆಂಗಳೂರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿದೆ. ಅಂತಹ ಬೆಂಗಳೂರನ್ನು ಬಿಜೆಪಿಯವರು ಹಿಂದಿನ ಬಾಗಿಲಿನಿಂದ ಅಧಿಕಾರಕ್ಕೆ ಬಂದು ಹಾಳು ಮಾಡಿದ್ದಾರೆ. ಅಧಿಕಾರದಲ್ಲಿದ್ದಾಗ ಬೆಂಗಳೂರು ಲೂಟಿ ಮಾಡಿ, ಈಗ ಬೆಂಗಳೂರು ರಕ್ಷಿಸಿ ಎಂದು ಜನರ ಮುಂದೆ ಬಂದಿದ್ದಾರೆ. ಬಿಜೆಪಿಯವರಿಂದ ಬೆಂಗಳೂರು ರಕ್ಷಿಸಬೇಕಿದೆ ಎಂದು ಜಾರ್ಜ್‌ ಹೇಳಿದರು. 

ಸಿಂಹಸ್ವಪ್ನ: ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರು ಅಭಿವೃದ್ಧಿಗೆ ಸಾಕಷ್ಟು ಹಣ ನೀಡಿದ್ದಾರೆ. ಬಿಜೆಪಿಯ ದುರಾಡಳಿತದ ಬಗ್ಗೆ ಜನರು  ಕಾಂಗ್ರೆಸ್‌ ಬಿಡುಗಡೆ ಮಾಡಿರುವ ಚಾರ್ಜ್‌ಶೀಟ್‌ ಓದಬೇಕು. ಅಕ್ರಮವಾಗಿ ಡಿನೊಟಿಫಿಕೇಶನ್‌ ಮಾಡಿದವರು ಬಿಜೆಪಿಯವರೇ ಹೊರತು ಕಾಂಗ್ರೆಸ್‌ನವರಲ್ಲಾ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿದ್ದು,  ರಾಮಲಿಂಗಾ ರೆಡ್ಡಿ ಬಿಜೆಪಿಯವರಿಗೆ ಸಿಂಹ ಸ್ವಪ್ನವಾಗಿದ್ದಾರೆ ಎಂದರು. 

Advertisement

ಕರ್ನಾಟಕ ಕಾಂಗ್ರೆಸ್‌ ಭದ್ರಕೋಟೆಯಾಗಿದ್ದು, ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ಜವಾಬ್ದಾರಿ ನಿಮ್ಮ ಮೇಲಿದೆ. ಬೆಂಗಳೂರಿನ 28 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲ್ಲಲಿದೆ. ಹೀಗಾಗಿ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದರು.

ಶಾಸಕ ಭೈರತಿ ಬಸವರಾಜ, ವಿಧಾನಪರಿಷತ್‌ ಸದಸ್ಯ ಎಂ.ನಾರಾಯಣಸ್ವಾಮಿ, ಮೇಯರ್‌ ಕೆ.ಸಂಪತ್‌ರಾಜ್‌, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಶೇಖರ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಮುನೇಗೌಡ, ಮನೋಜ್‌ ಕುಮಾರ್‌, ಬಿಬಿಎಂಪಿ ಸದಸ್ಯರು ಸೇರಿದಂತೆ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.

ಅಧಿಕಾರದಲ್ಲಿದ್ದಾಗ ಒಂದು ದಿನವೂ ಸ್ಲಂಗಳ ಕಡೆ ಮುಖಮಾಡದ ಬಿಜೆಪಿ ನಾಯಕರಾದ ಯಡಿಯೂರಪ್ಪ, ಶೋಬಾ ಕರಂದ್ಲಾಜೆ, ಜಗದೀಶ್‌ ಶೆಟ್ಟರ್‌ ಸೇರಿದಂತೆ ಇನ್ನಿತರರು ಈಗ ಹೊಸ ಹಾಸಿಗೆ, ಕಮೋಡ್‌ ಹಾಕಿಸಿ ಸ್ಲಂಗಳಲ್ಲಿ ವಾಸ್ತವ್ಯ  ಹೂಡುವ ನಾಟಕ ಮಾಡುತ್ತಿದ್ದಾರೆ 
-ರಾಮಲಿಂಗಾರೆಡ್ಡಿ, ಗೃಹ ಸಚಿವ 

ಬಿಬಿಎಂಪಿಗೆ ಮುಖ್ಯಮಂತ್ರಿ 14 ಸಾವಿರ ಕೋಟಿ ರೂ.ಅನುದಾನ ನೀಡಿದ್ದಾರೆ. ಬಿಡಿಎ ನಿರ್ಮಿಸಿರುವ ಕೆಂಪೇಗೌಡ ಬಡಾವಣೆಯಲ್ಲಿ ನಿವೇಶಗಳನ್ನು ಹಂಚಿಕೆ ಮಾಡಿದ್ದೇವೆ. ಮೆಟ್ರೋ ಎರಡನೆ ಹಂತದ ಕಾಮಗಾರಿಯು ಪ್ರಗತಿಯಲ್ಲಿದೆ
-ಕೆ.ಜೆ.ಜಾರ್ಜ್‌, ಬೆಂಗಳೂರು ನಗರಾಭಿವೃದ್ಧಿ ಸಚಿವ 

ಬೆಂಗಳೂರಿನ ತ್ಯಾಜ್ಯ ನೀರನ್ನು ಸಂಸ್ಕರಿಸಿ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಕೆರೆಗಳನ್ನು ತುಂಬಿಸುವ ಕೆಲಸ ನಡೆಯುತ್ತಿದೆ. ಕಾವೇರಿ ಐದನೆ ಹಂತದ ಯೋಜನೆಗೆ ಕ್ರಮ ಕೈಗೊಳ್ಳಲಾಗಿದೆ. ನಗರದ ಆರು ಕಡೆ ಕಸ ಸಂಸ್ಕರಣೆ ಘಟಕವನ್ನು ಆರಂಭಿಸಿದ್ದೇವೆ. ಕಲ್ಲಿನ ಕ್ವಾರಿಯಲ್ಲಿ ವೈಜಾnನಿಕ ಕಸ ವಿಲೇವಾರಿ ಮಾಡುತ್ತಿದ್ದೇವೆ.
-ದಿನೇಶ್‌ಗುಂಡೂರಾವ್‌, ಕೆಪಿಸಿಸಿ ಕಾರ್ಯಾಧ್ಯಕ್ಷ 

ಚಾರ್ಜ್‌ ಶೀಟ್‌ನಲ್ಲೇನಿದೆ?: 2008 ರಿಂದ 2012 ರವರೆಗಿನ ಬಿಜೆಪಿ ಪಕ್ಷದ ಅವಧಿಯಲ್ಲಿ  ದಾಖಲಾಗಿರುವ  ಹೆಚ್ಚಿನ ಸಂಖ್ಯೆಯಲ್ಲಿ ಅಪರಾಧಗಳ  ಪ್ರಕರಣಗಳ ಸಂಖ್ಯೆ  ಅಂಕಿ ಅಂಶಗಳ ಚಾರ್ಜ್‌ಶೀಟ್‌ ಗೃಹ ಮಂತ್ರಿ ರಾಮಲಿಂಗರೆಡ್ಡಿ ಬಿಡುಗಡೆ ಮಾಡಿದರು.

ಕೊಲೆಗಳು: 8885 ದರೋಡೆ: 9648 ಅತ್ಯಾಚಾರ: 2922 ಸರಗಳ್ಳತನ: 4675 ಹಲ್ಲೆ ಪ್ರಕರಣ: 106342 ಖೋಟಾ ನೋಟು ಪ್ರಕರಣ;660
2013 ರಿಂದ 2017 ರವರೆಗಿನ ಕಾಂಗ್ರೇಸ್‌ ಪಕ್ಷದ ಅವಧಿಯಲ್ಲಿ  ದಾಖಲಾಗಿರುವ  ಹೆಚ್ಚಿನ ಸಂಖ್ಯೆಯಲ್ಲಿ ಅಪರಾಧಗಳ  ಪ್ರಕರಣಗಳ ಸಂಖ್ಯೆ  ಅಂಕಿ ಅಂಶಗಳ ಚಾರ್ಜ್‌ಶೀಟ್‌.

ಕೊಲೆಗಳು: 7759 ದರೋಡೆ: 5542 ಅತ್ಯಚಾರ:3833 ಸರಗಳ್ಳತನ:5359 ಹಲ್ಲೆಪ್ರಕರಣಗಳು;93886 ಖೋಟಾನೋಟು ಪ್ರಕರಣ:306

Advertisement

Udayavani is now on Telegram. Click here to join our channel and stay updated with the latest news.

Next