ಸಿರವಾರ: ನಾವು ಜನರ ಏಳಿಗೆಗಾಗಿ ದುಡಿಯುತ್ತಿವೆ. ಎಲ್ಲ ವರ್ಗದವರ ಅಭಿವೃದ್ಧಿಯೇ ನಮ್ಮ ಗುರಿ ಎಂದು ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಣ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ತನ್ವೀರ್ ಸೇಠ್ಠ್… ಹೇಳಿದರು.
ಪಟ್ಟಣದಲ್ಲಿ ಶುಕ್ರವಾರ ನೂತನ ತಾಲೂಕು ಕೇಂದ್ರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಸರ್ಕಾರ ಗ್ರಾಮಗಳ ಅಭಿವೃದ್ಧಿ ದೂರ ದೃಷ್ಟಿಯಿಂದ 49 ನೂತನ ತಾಲೂಕು ಕೇಂದ್ರ ಪ್ರಾರಂಭಿಸಿದೆ. ಪ್ರಥಮ ಕೇಂದ್ರವಾಗಿ ಸಿರವಾರ ಅಸ್ತಿತ್ವಕ್ಕೆ ಬಂದಿರುವುದು ಗ್ರಾಮಸ್ಥರ ಹೆಗ್ಗಳಿಕೆ ಎಂದು ಹೇಳಿದರು.
ರಾಜ್ಯ ಸರ್ಕಾರದ ಅಭಿವೃದ್ಧಿ ಕಾರ್ಯ ಸಹಿಸದ ವಿರೋಧಿಗಳಿಗೆ ಜಿಲ್ಲೆಯಲ್ಲಿಯೇ ತಾಲೂಕನ್ನು ಅಭಿವೃದ್ಧಿಪಡಿಸಿ ತಕ್ಕ ಪಾಠ ಕಲಿಸಲಾಗುವುದು ಎಂದು ಹೇಳಿದರು. ತಾಲೂಕು ರಚನೆಯಲ್ಲಿ ಯಾವುದೇ ರಾಜಕೀಯ ದುರುದ್ದೇಶವಿಲ್ಲ ಅಗತ್ಯಕ್ಕೆ ತಕ್ಕಂತೆ ಕಂದಾಯ ಇಲಾಖೆಯೇ 57 ಗ್ರಾಮ ಸೇರಿಸಿ ಹೋಬಳಿಗಳಿಗೆ ತೊಂದರೆಯಾಗದಂತೆ ರಚನೆ ಮಾಡಿದೆ ಎಂದು ಹೇಳಿದರು.
ಸಿರಿವಾರಕ್ಕೆ ಈಗಾಗಲೇ ಪದವಿ ಕಾಲೇಜು ಮಂಜೂರು ಮಾಡಲಾಗಿದೆ. ಇನ್ನುಳಿದ ಅಗತ್ಯ ಸೌಲಭ್ಯ ಒದಗಿಸಲಾಗುವುದು ಎಂದು ಹೇಳಿದರು. ವಿಧಾನ ಪರಿಷತ್ ಸದಸ್ಯ ಎನ್.ಎಸ್. ಭೋಸರಾಜ ಮಾತನಾಡಿ, ಬಿಜೆಪಿ ಸರ್ಕಾರ ಚುನಾವಣೆ ದೃಷ್ಟಿಯಿಂದ ಕೇವಲ ಘೋಷಣೆ ಮಾಡಿ ಕೈಬಿಟ್ಟಿತ್ತು. ತಾಲೂಕು ಘೋಷಣೆ ಮೊದಲ ಪಟ್ಟಿಯಲ್ಲಿ ಸಿರವಾರ ಇಲ್ಲದಿದ್ದರೂ ನಾನು ಮತ್ತು ಶಾಸಕರ ಶ್ರಮದಿಂದ ಸಿರವಾರ ತಾಲೂಕು ಕೇಂದ್ರವಾಗಲು ಸಾಧ್ಯವಾಯಿತು ಎಂದು ಹೇಳಿದರು.
ರಸ್ತೆ ಅಗಲೀಕರಣ ಕಾರ್ಯ ಮುಗಿಯುತ್ತಿದೆ. ಶಾಶ್ವತ ಕುಡಿಯುವ ನೀರಿನ ಯೋಜನೆ, ತಾಲೂಕು ಕೇಂದ್ರದ ಎಲ್ಲ ಇಲಾಖೆಗಳಿಗೆ ಅಧಿಕಾರಿ ಮತ್ತು ಸಿಬ್ಬಂದಿ ನೇಮಕ , ನೂತನ ಬಸ್ ನಿಲ್ದಾಣ, ಮಿನಿ ವಿಧಾನಸೌಧ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿಯೇ ನಮ್ಮ ಹೈ-ಕ ಭಾಗವನ್ನು 371ನೇ(ಜೆ) ಸೌಲಭ್ಯ ನೀಡಲಾಗಿದೆ. ತಾಲೂಕು ಕೇಂದ್ರಗಳು ಕೂಡ ನಮ್ಮ ಅಭಿವೃದ್ಧಿ ಕಾರ್ಯಗಳ ಕನ್ನಡಿಯಾಗಿವೆ ಎಂದು ಹೇಳಿದರು.