ಲಾಕ್‌ಡೌನ್‌ನ ಕಾರಣದಿಂದಾಗಿ, ಹೊಸ ಚಿತ್ರಗಳು ಬಿಡುಗಡೆಯಾಗಿಲ್ಲ. ಈ ಚಿತ್ರಗಳ ನಿರ್ಮಾಪಕರಿಗೆ, ಮಾರುಕಟ್ಟೆಯ ಕುರಿತು ಆತಂಕವಿದೆ. ಹೀಗಾಗಿ, ಆ ಸಿನಿಮಾಗಳು ಆನ್ ಲೈನ್ ಮನರಂಜನಾ ತಾಣಗಳಲ್ಲೇ ಮೊದಲು ಬಿಡುಗಡೆಯಾಗುವ ಸಾಧ್ಯತೆ ಗೋಚರಿಸುತ್ತಿದೆ.
ಲಾಕ್‌ಡೌನ್ ಆಗಿರುವ ಈ ಸಮಯದಲ್ಲಿ, ಮನೆಯಲ್ಲೇ ಕೂತು ಮನರಂಜನೆ ಪಡೆಯುವುದು ಅನಿವಾರ್ಯ. ಈ ಕಾರಣದಿಂದ, ಆನ್ ಲೈನ್ ಮನರಂಜನಾ ತಾಣ (ಓಟಿಟಿ- ಓವರ್ ದಿ ಟಾಪ್ ಸೇವೆ) ಗಳಾದ ಅಮೇಜಾನ್ ಪ್ರೈಮ್, ನೆಟ್‌ಫ್ಲಿಕ್ಸ್, ಝೀ 5, ಹಾಟ್ ಸ್ಟಾರ್‌ಗಳ ಚಂದಾದಾರರು ಶೇ.20ರಷ್ಟು ಹೆಚ್ಚಾಗಿದ್ದಾರೆ. ಇಷ್ಟು ದಿನ ಕೇವಲ ಒಂದು ವರ್ಗದ ಮಂದಿ ಮಾತ್ರವೇ ಓ.ಟಿ.ಟಿ. ತಾಣಗಳಿಗೆ ಚಂದಾದಾರರಾಗುತ್ತಿದ್ದರು. ಲಾಕ್ ಡೌನ್‌ನಿಂದಾಗಿ, ಇತರೆ ವರ್ಗಗಳ ಮಂದಿಯೂ ಈ ತಾಣಗಳ ಕಡೆ ಮುಖ ಮಾಡುವ ಸಾಧ್ಯತೆ ಇದೆ. ಪರಿಣಾಮ, ಹೊಸದೊಂದು ಶಕೆಗೆ ಮನರಂಜನಾ ಉದ್ಯಮ ಸಾಕ್ಷಿಯಾಗುವ ಲಕ್ಷಣ ಕಾಣಿಸುತ್ತಿದೆ.
ಲಾಕ್‌ಡೌನ್ ಆಗುವ ಸೂಚನೆ ಯಾರಿಗೂ ಇರಲಿಲ್ಲ. ಹಾಗಾಗಿ, ಬಹಳಷ್ಟು ಸಿನಿಮಾಗಳು ಸಾಲು ಸಾಲಾಗಿ ಬಿಡುಗಡೆಗೆ ಸಿದ್ಧವಾಗಿದ್ದವು. ಅವೆಲ್ಲವೂ ಬಿಡುಗಡೆಗೆ ಕಾದು ಕುಳಿತಿವೆ. ಮೊದಲನೆಯದಾಗಿ, ಲಾಕ್‌ಡೌನ್ ಯಾವಾಗ ಮುಗಿಯುತ್ತದೆ ಎನ್ನುವುದರ ಬಗ್ಗೆ ಯಾರಿಗೂ ಖಚಿತ ಮಾಹಿತಿ ಇಲ್ಲ. ಲಾಕ್‌ಡೌನ್ ಕೊನೆಗೊಂಡರೂ, ಜನರು ಚಿತ್ರಮಂದಿರಗಳತ್ತ ತಲೆಹಾಕುವರೇ ಎನ್ನುವ ಅನುಮಾನವೂ ಇದೆ.
ಮನೆಯಲ್ಲೇ ಗ್ರ್ಯಾಂಡ್ ರಿಲೀಸ್ : ಇವೆಲ್ಲದರಿಂದಾಗಿ, ಚಿತ್ರ ನಿರ್ಮಾಪಕರಿಗೆ ಮಾರುಕಟ್ಟೆಯ ಕುರಿತು ಆತಂಕವಿದೆ. ಹೀಗಾಗಿ, ಆ ಸಿನಿಮಾಗಳು ಆನ್‌ಲೈನ್ ಮನರಂಜನಾ ತಾಣಗಳಲ್ಲೇ ಮೊದಲು ಬಿಡುಗಡೆಯಾಗುವ ಸಾಧ್ಯತೆಯೂ ಗೋಚರಿಸುತ್ತಿದೆ. ಹಾಲಿವುಡ್ಡಿನಲ್ಲಿ ಈಗಾಗಲೇ 16 ಸಿನಿಮಾಗಳು ಆನ್ ಲೈನ್‌ನಲ್ಲಿ ಮೊದಲು ಬಿಡುಗಡೆಯಾಗುವ ಮೂಲಕ ಈ ಶಕೆಗೆ ಮುನ್ನುಡಿ ಬರೆದಿವೆ. ದೇಶಿ ಸಿನಿಮಾ ಉದ್ಯಮ ಕೂಡಾ ಈ ಹಾದಿಯಲ್ಲಿ ನಡೆದರೆ ಅಚ್ಚರಿಯೇನಿಲ್ಲ. ಅಂಥದೊಂದು ಸಂದರ್ಭ ಬಂದರೆ, ಮುಖ್ಯವಾಹಿನಿ ಸಿನಿಮಾಗಳ ಗ್ರ್ಯಾಂಡ್ ರಿಲೀಸನ್ನು ಮನೆಮಂದಿಯೊಂದಿಗೆ ವೀಕ್ಷಿಸಬಹುದು. ಮನೆಯೇ ಚಿತ್ರಾಲಯಾಗುವ ಬದಲಾವಣೆ ಇಲ್ಲಿಂದಲೇ ಶುರುವಾಗಬಹುದು.
ಹೊಸ ಸಿನಿಮಾಗಳ ಆನ್‌ಲೈನ್ ಹಕ್ಕುಗಳನ್ನು ಪಡೆದುಕೊಳ್ಳುವ ರೇಸಿನಲ್ಲಿ, ಅಮೇಜಾನ್ ಪ್ರೈಮ್ ಮುಂಚೂಣಿಯಲ್ಲಿದೆ. ಸಾಮಾನ್ಯವಾಗಿ, ಬಾಲಿವುಡ್ ಸಿನಿಮಾಗಳು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ 8 ವಾರಗಳ ನಂತರ, ಆನ್‌ಲೈನಿನಲ್ಲಿ ಬಿಡುಗಡೆಯಾಗುತ್ತವೆ. ಕನ್ನಡ, ತಮಿಳು, ತೆಲುಗು ಮುಂತಾದ ಪ್ರಾದೇಶಿಕ ಭಾಷೆಗಳ ಸಿನಿಮಾಗಳು, ನಾಲ್ಕೈದು ವಾರಗಳ ನಂತರ ಆನ್‌ಲೈನಿನಲ್ಲಿ ಬಿಡುಗಡೆ ಕಾಣುತ್ತಿವೆ. ಚಿತ್ರಮಂದಿರ ಮತ್ತು ಆನ್‌ಲೈನ್ ಬಿಡುಗಡೆಯ ನಡುವಿನ ಅಂತರ ತಗ್ಗಿದರೆ ಚಂದಾದಾರರ ಸಂಖ್ಯೆ ಹೆಚ್ಚುವು ದರಲ್ಲಿ ಅನುಮಾನವಿಲ್ಲ.
ಟಿ.ವಿ., ಕಂಪ್ಯೂ ಟರ್, ಸ್ಮಾರ್ಟ್ ಫೋನ್ ಪರದೆ ಮೇಲೆ ಸಿನಿಮಾ ನೋಡುವುದರಿಂದ ಚಿತ್ರಮಂದಿರಗಳಿಗೆ ಹೊಡೆತ ಬೀಳುತ್ತದೆ ಎಂಬುದು, ಇದೇ ಸಂದರ್ಭದಲ್ಲಿ ಕೇಳಿಸುತ್ತಿರುವ ಮಾತು. ಈ ಸಂಬಂಧವಾಗಿ ಚರ್ಚೆಗಳು ನಡೆಯುತ್ತಾ ಇವೆ. ಖ್ಯಾತ ಹಾಲಿವುಡ್ ನಿರ್ದೇಶಕ ಕ್ವೆಂಟಿನ್ ಟರಾಂಟಿನೋ ಹೇಳುವಂತೆ, “ಒಂದು ಸಿನಿಮಾದ ನೀಡುವ ಅನುಭವವನ್ನು ಪಡೆಯಬೇಕೆಂದರೆ, ಸಿನಿಮಾಮಂದಿರದಲ್ಲಿ ವೀಕ್ಷಿಸುವುದೊಂದೇ ಮಾರ್ಗ’. ಹೀಗಾಗಿ, ಹೊಸ ಬದಲಾವಣೆಯಿಂದ, ಸಿನಿಪ್ರಿಯರ ಮಧ್ಯೆ ಕುಳಿತು ಸಿನಿಮಾ ನೋಡುವ ಅನುಭವದಿಂದ ವಂಚಿತರಾಗುವ ಬೇಸರವೂ ಇದೆ.
– ಹವನ