Advertisement

Digital ಮಾಧ್ಯಮಗಳಿಗೆ ಒಟಿಟಿ ರೀತಿ ನೋಂದಣಿ?

12:32 AM Aug 04, 2024 | Team Udayavani |

ಹೊಸದಿಲ್ಲಿ: ಇನ್‌ಸ್ಟಾಗ್ರಾಂ ಇನ್‌ಫ್ಲೂಯೆನ್ಸರ್‌ಗಳು ಮತ್ತು ಯುಟ್ಯೂಬರ್‌ಗಳನ್ನು “ಡಿಜಿಟಲ್‌ ನ್ಯೂಸ್‌ ಬ್ರಾಡ್‌ಕಾಸ್ಟರ್ಸ್‌’ ಎಂದು ವರ್ಗೀಕರಿಸಲು ನಿರ್ಧರಿಸಲಾಗಿದೆ. ಪ್ರಸಾರ ಸೇವೆಗಳಿಗೆ ಸಂಬಂಧಿಸಿದಂತೆ ರಚಿಸಲಾಗಿರುವ ಹೊಸ ಮಸೂದೆಯಲ್ಲಿ ಈ ಅಂಶಗಳಿವೆ ಎನ್ನಲಾಗಿದೆ.

Advertisement

ಈ ಕರಡಿನ ಪ್ರಕಾರ ಕಾನೂನು ಜಾರಿಯಾದ ಒಂದು ತಿಂಗಳ ಒಳಗಾಗಿ ಎಲ್ಲ ಕಂಟೆಂಟ್‌ ಕ್ರಿಯೇಟರ್‌ಗಳು ತಮ್ಮ ಅಸ್ತಿತ್ವದ ಬಗ್ಗೆ ಸರಕಾರಕ್ಕೆ ಮಾಹಿತಿ ನೀಡಬೇಕು. ಒಟಿಟಿ ಮಾದರಿಯಲ್ಲೇ ನೋಂದಣಿಯನ್ನೂ ಮಾಡಿಕೊಳ್ಳಬೇಕು. ಅಲ್ಲದೆ ತಮ್ಮ ಕಂಟೆಂಟ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಅಥವಾ ಲೈವ್‌ ಹೋಗುವ ಮುನ್ನ ತಮ್ಮದೇ ಖರ್ಚಿನಲ್ಲಿ ರೂಪಿಸಲಾದ “ಕಂಟೆಂಟ್‌ ಮೌಲ್ಯಮಾಪನ ಸಮಿತಿ’ಯ ಮುಂದೆ ಅದನ್ನು ಪರಿಶೀಲನೆಗೆ ಒಳಪಡಿಸಬೇಕು. ಉಲ್ಲಂ ಸಿದರೆ ಕ್ರಿಮಿನಲ್‌ ಕೇಸು ಮತ್ತು ದಂಡ ವಿಧಿಸಲಾಗುತ್ತದೆ ಎಂದು ಪ್ರಸ್ತಾವಿಸಲಾಗಿದೆ.

ಮಧ್ಯವರ್ತಿ ಸಂಸ್ಥೆಗಳೇ ಅಪರಾಧ ಹೊಣೆ ಹೊರಬೇಕು
ಸಾಮಾಜಿಕ ಮಾಧ್ಯಮ ಸಂಸ್ಥೆಗಳಾದ ಮೆಟಾ, ಯುಟ್ಯೂಬ್‌ ಹಾಗೂ ಎಕ್ಸ್‌(ಟ್ವಿಟರ್‌)ಗಳು ಮಧ್ಯವರ್ತಿಗಳಾಗಿದ್ದು, ಸರಕಾರ ಕೋರಿದ ಯಾವುದೇ ಮಾಹಿತಿ ಒದಗಿಸದೇ ಇದ್ದಲ್ಲಿ ಅಪರಾಧಗಳ ಹೊಣೆಗಾರಿಕೆ ಹೊರಬೇಕಾಗುತ್ತದೆ. ಅಲ್ಲದೇ ಈ ಕರಡು ಮಸೂದೆಯು ಮಧ್ಯವರ್ತಿ ಸಂಸ್ಥೆಗಿಂತ ಹೆಚ್ಚು ಬಳಕೆದಾರರು ನಿಯಮಗಳಿಗೆ ಜವಾಬ್ದಾರರಾಗುವಂತೆ ಮಾಡು ತ್ತದೆ. ಜತೆಗೆ ಗೂಗಲ್‌ ಆ್ಯಡ್‌ಸೆನ್ಸ್‌, ಫೇಸ್‌ಬುಕ್‌ ಆಡಿಯೆನ್ಸ್‌ ನೆಟ್‌ವರ್ಕ್‌ ಜಾಹಿರಾತು ನೆಟ್‌ವರ್ಕ್‌ ಗಳನ್ನು ಕಾನೂನಿನ ಅಡಿಯಲ್ಲಿ ತಂದು ಇವುಗಳನ್ನು “ಜಾಹಿರಾತು ಮಧ್ಯವರ್ತಿಗಳು’ ಎಂದು ವರ್ಗೀಕರಿಸಲಾಗಿದೆ. ಅವುಗಳನ್ನು “ಅಂತರ್ಜಾಲದಲ್ಲಿ ಜಾಹೀರಾತು ಜಾಗವನ್ನು ಕೊಳ್ಳಲು ಅಥವಾ ಮಾರಾಟ ಮಾಡಲು ಮತ್ತು ಆನ್‌ಲೈನ್‌ ಪ್ಲಾಟ್‌ಫಾರ್ಮ್ಗಳಲ್ಲಿ ಅನುಮೋದನೆ ನಡೆಸದೇ ಇರಿಸಲು ಅನುವು ಮಾಡಿಕೊಡುವಂತಹ ಮಧ್ಯವರ್ತಿಗಳು’ ಎಂದು ಹೇಳಲಾಗಿದೆ.

ಮಸೂದೆ ಹಂಚಿದ ಕೇಂದ್ರ: ಟಿಎಂಸಿ ಆರೋಪ
ಪ್ರಸಾರ ಸೇವೆಗಳ(ನಿಯಂತ್ರಣ) ಮಸೂದೆಯ ಪರಿಷ್ಕೃತ ಕರಡು ಪ್ರತಿಯನ್ನು ರಹಸ್ಯವಾಗಿ ಕೆಲವು ಉದ್ಯಮಿ ಗಳು ಹಾಗೂ ಸಂಸ್ಥೆಗಳಿಗೆ ಹಂಚಲಾಗಿದೆ ಎಂದು ಟಿಎಂಸಿ ಆರೋಪಿಸಿದೆ. ಮೋದಿ ಸರಕಾರವು ಸಂಸತ್‌ನಿಂದ ಸತ್ಯವನ್ನು ದೂರವಿಡುತ್ತದೆ. ಆದರೆ ಮಸೂದೆಯ ಪ್ರತಿಯನ್ನು ಉದ್ಯಮ ಸಂಸ್ಥೆಗಳೊಂದಿಗೆ ಹಂಚಿಕೊಳ್ಳುತ್ತದೆ ಎಂದು ಟಿಎಂಸಿ ರಾಜ್ಯಸಭಾ ಸಂಸದ ಜವಾಹರ್‌ ಸರ್ಕಾರ್‌ ಕಿಡಿಕಾರಿದ್ದಾರೆ. ಇದಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪರಿಷ್ಕೃತ ಕರಡು ಮಸೂದೆಯ ಬಗ್ಗೆ ಭಾರೀ ಟೀಕೆಗಳೂ ವ್ಯಕ್ತವಾಗತೊಡಗಿವೆ.

Advertisement

Udayavani is now on Telegram. Click here to join our channel and stay updated with the latest news.

Next