ಸ್ಟಾರ್ ನಟರ ಅಭಿಮಾನಿಗಳಿಗೊಂದು ಭಯ ಶುರುವಾಗಿದೆ. ಅದೇನೆಂದರೆ ತಮ್ಮ ನೆಚ್ಚಿನ ನಟನ ಸಿನಿಮಾಗಳನ್ನು ಓಟಿಟಿಯಲ್ಲಿ ಬಿಡುಗಡೆ ಮಾಡುತ್ತಾರಾ ಎಂದು. ಅದೇ ಕಾರಣದಿಂದ ಈಗ ಸ್ಟಾರ್ ನಟರ ಸಿನಿಮಾ ತಂಡಗಳು ತಾವು ಓಟಿಟಿಯಲ್ಲಿ ರಿಲೀಸ್ ಮಾಡಲ್ಲ ಎನ್ನುವ ಮೂಲಕ ಅಭಿಮಾನಿಗಳಿಗೆ ಧೈರ್ಯ ತುಂಬುತ್ತಿದ್ದಾರೆ. ಅಷ್ಟಕ್ಕೂ ಅಭಿಮಾನಿಗಳಿಗೆ ಯಾಕೆ ಓಟಿಟಿ ಭಯ ಎಂದು ನೀವು ಕೇಳಬಹುದು. ಸದ್ಯ ಕನ್ನಡ ಚಿತ್ರರಂಗದಲ್ಲಿ ಓಟಿಟಿ ಸದ್ದು ಮಾಡುತ್ತಿದೆ. ಈಗಾಗಲೇ ಕೆಲವು ಸಿನಿಮಾಗಳು ಓಟಿಟಿ ಬಿಡುಗಡೆಗೆ ಅಣಿಯಾಗಿವೆ. ಇನ್ನೊಂದಿಷ್ಟು ನಿರ್ಮಾಪಕರು ಆ ಬಗ್ಗೆ ವಿಚಾರಿಸುತ್ತಿದ್ದಾರೆ.
ಹೊಸ ನಿರ್ಮಾಪಕರಂತೂ ಈ ಬಗ್ಗೆ ಹೆಚ್ಚು ಆಸಕ್ತರಾಗಿದ್ದಾರೆ. ಒಂದು ವೇಳೆ ಸ್ಟಾರ್ ಸಿನಿಮಾಗಳು ಓಟಿಟಿಯಲ್ಲಿ ಬಿಡುಗಡೆಯಾದರೆ, ಅಭಿಮಾನಿಗಳಿಗೆ ಚಿತ್ರಮಂದಿರದ ಸಂಭ್ರಮ, ಆ ಮಜಾ ಮಿಸ್ ಆಗುತ್ತದೆ. ಅದೇ ಕಾರಣದಿಂದ ಅಭಿಮಾನಿಗಳು ಓಟಿಟಿ ಬಗ್ಗೆ ಭಯ ಪಡುತ್ತಿದ್ದಾರೆ. ಸದ್ಯ ಕನ್ನಡ ಚಿತ್ರರಂಗದಲ್ಲಿ ಈ ವರ್ಷ ಒಂದಷ್ಟು ಸ್ಟಾರ್‍ಗಳ ಸಿನಿಮಾಗಳು ಬಿಡುಗಡೆಗೆ ಅಣಿಯಾಗಿವೆ. ದರ್ಶನ್ ಅವರ ರಾಬರ್ಟ್, ಸುದೀಪ್ ನಟನೆಯ ಕೋಟಿಗೊಬ್ಬ-3, ಪುನೀತ್ ಯುವರತ್ನ, ಧ್ರುವ ಸರ್ಜಾ ನಟನೆಯ ಪೊಗರು ಸೇರಿದಂತೆ ಅನೇಕ ಚಿತ್ರಗಳು ಬಿಡುಗಡೆಯ ಹಾದಿಯಲ್ಲಿವೆ.
ಆದರೆ, ಸದ್ಯಕ್ಕೆ ಚಿತ್ರಮಂದಿರ ತೆರೆಯುವ, ಸಿನಿಮಾ ಬಿಡುಗಡೆಯಾಗುವ ಯಾವ ಲಕ್ಷಣಗಳು ಕಾಣುತ್ತಿಲ್ಲ. ಹಾಗಾಗಿ, ಅನೇಕರು ಓಟಿಟಿ ಮೊರೆ ಹೋಗಲು ನಿರ್ಧರಿಸಿದ್ದಾರೆ. ಇದೇ ತರಹ ಸ್ಟಾರ್ ಸಿನಿಮಾಗಳೇನಾದರೂ ಓಟಿಟಿ ರಿಲೀಸ್ ಮನಸ್ಸು ಮಾಡಿದರೆ ಎಂಬ ಭಯ ಅಭಿಮಾನಿಗಳನ್ನು ಕಾಡುತ್ತಿದೆ. ಅದಕ್ಕೆ ಪೂರಕವಾಗಿ ದರ್ಶನ್ ನಾಯಕರಾಗಿರುವ ರಾಬರ್ಟ್ ಚಿತ್ರಕ್ಕೆ ಓಟಿಟಿ ಪ್ಲಾಟ್ ಫಾರ್ಮ್‍ವೊಂದು ದೊಡ್ಡಮೊತ್ತದ ಬೆಲೆಯನ್ನು ಆಫರ್ ಮಾಡಿತ್ತೆಂದು.
ಮೂಲಗಳ ಪ್ರಕಾರ, 70 ಕೋಟಿ ರೂಪಾಯಿಯ ಆಫರ್ ನೀಡಿತ್ತು ಎನ್ನಲಾಗಿದೆ. ಆದರೆ, ಚಿತ್ರದ ನಿರ್ಮಾಪಕರು ಓಟಿಟಿ ಆಫರ್ ಅನ್ನು ತಿರಸ್ಕರಿಸಿ, ಸಿನಿಮಾವನ್ನು ಚಿತ್ರಮಂದಿರದಲ್ಲೇ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ. ದರ್ಶನ್ ಅಭಿಮಾನಿಗಳಿಗೆ ಖುಷಿ ನೀಡಿದೆ. ಏಕೆಂದರೆ ದರ್ಶನ್ ಸಿನಿಮಾ ಬಿಡುಗಡೆ ಎಂದರೆ ಅದು ಹಬ್ಬದಂತಿರುತ್ತದೆ. ಅಭಿಮಾನಿಗಳು ಅದನ್ನು ಸಂಭ್ರಮಿಸುತ್ತಾರೆ. ಒಂದು ವೇಳೆ ಓಟಿಟಿಯಲ್ಲಿ ಚಿತ್ರ ಬಿಡುಗಡೆಯಾದರೆ ಆ ಸಂಭ್ರಮ ಮಿಸ್ ಆಗುತ್ತದೆ.
ಇನ್ನು ಚಿತ್ರಮಂದಿರಗಳು ಕೂಡಾ ಖುಷಿಯಾಗಿವೆಯಂತೆ. ಸ್ಟಾರ್‍ಗಳ ಚಿತ್ರ ರಿಲೀಸ್ ಆದಾಗ ಚಿತ್ರಮಂದಿರಕ್ಕೆ ಜನ ದೊಡ್ಡ ಮಟ್ಟದಲ್ಲಿ ಬರುತ್ತಾರೆ ಮತ್ತು ಕಲೆಕ್ಷನ್ ಕೂಡಾ ಜೋರಾಗಿರುತ್ತದೆ. ಈ ಎಲ್ಲಾ ಕಾರಣಗಳಿಂದಾಗಿ ರಾಬರ್ಟ್ ನಿರ್ಮಾಪಕರ ನಿರ್ಧಾರವನ್ನು ಅನೇಕರು ಮೆಚ್ಚಿಕೊಂಡಿದ್ದಾರೆ. ಇನ್ನು, ಪೊಗರು ಚಿತ್ರತಂಡ ಕೂಡಾ ಯಾವುದೇ ಕಾರಣಕ್ಕೂ ಚಿತ್ರವನ್ನು ಓಟಿಟಿಯಲ್ಲಿ ಬಿಡುಗಡೆಮಾಡುವುದಿಲ್ಲ ಎಂದು ಹೇಳಿದೆ.