ಕುಷ್ಟಗಿ: ದಾಳಿಂಬೆ ಬೆಳೆ ಸಾಲ ಮುಕ್ತಿಗೆ ಒನ್ ಟೈಮ್ ಸೆಟ್ಲಮೆಂಟ್ (ಓಟಿಎಸ್) ಯೋಜನೆ ಸ್ಟೇಟ್ ಬ್ಯಾಂಕ್ ನಲ್ಲಿ ಜಾರಿಯಲ್ಲಿದೆ. ಈ ಯೋಜನೆಯನ್ನು ಎಲ್ಲಾ ಬ್ಯಾಂಕುಗಳಿಗೆ ಅನ್ವಯಗೊಳಿಸಬೇಕೆಂದು ರಾಜ್ಯ ದಾಳಿಂಬೆ ಬೆಳೆಳೆಗಾರರ ಹೋರಾಟ ಸಮಿತಿ ಪಟ್ಟಣದ ವಿವಿಧ ಬ್ಯಾಂಕುಗಳಿಗೆ ಮನವಿ ಸಲ್ಲಿಸಿದರು.
ದಾಳಿಂಬೆ ಬೆಳೆಗಾರರ ಹೋರಾಟ ಸಮಿತಿ ಅಧ್ಯಕ್ಷ ಅಬ್ದುಲ್ ನಯೀಮ್ ನೇತೃತ್ವದಲ್ಲಿ ದಾಳಿಂಬೆ ಬೆಳೆಗಾರರು, ಮೆರವಣಿಗೆಯ ಮೂಲಕ ಪಟ್ಟಣದ ಸ್ಟೇಟ್ ಬ್ಯಾಂಕ್ ಇಂಡಿಯ, ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್, ಕೆನರಾ ಬ್ಯಾಂಕ್ ಗೆ ತೆರಳಿ ಮನವಿ ಸಲ್ಲಿಸಿದರು.
ಇದೇ ವೇಳೆ ಮಾತನಾಡಿದ ಅವರು, ದಾಳಿಂಬೆ ಬೆಳೆಗಾರ ಮೂಲ ಸಾಲಕ್ಕೆ ಶೇ.10ರಷ್ಟು ಪಾವತಿಸಿದರೆ ಶೇ.90ರಷ್ಟು ಸಾಲದ ಮೊತ್ತವನ್ನು ಡಿಸ್ಕೌಂಟ್ ನೀಡುವ ಋಣಮುಕ್ತ ಯೋಜನೆ ಜಾರಿಯಲ್ಲಿದೆ. ರೈತರು ಮೂಲ ಸಾಲದ ಮೊತ್ತದಲ್ಲಿ ಶೇ.10ರಷ್ಟು ಪಾವತಿಸಿದರೆ ಬೆಳೆಗಾರರು, ಸಾಲದಿಂದ ಮುಕ್ತಿ ಹೊಂದುವ ಈ ಯೋಜನೆ ಬರೀ ಸ್ಟೇಟ್ ಬ್ಯಾಂಕ್ ಇಂಡಿಯ ಬ್ಯಾಂಕಿನಲ್ಲಿ ಜಾರಿಯಲ್ಲಿದೆ. ಆದರೆ ಈ ಬ್ಯಾಂಕಿನಲ್ಲಿ ದಾಳಿಂಬೆ ಬೆಳೆಗಾರರು ಹೆಚ್ಚು ಸಾಲ ಪಡೆದಿಲ್ಲ. ಕೆಲ ರೈತರಿಗೆ ಮಾತ್ರ ಋಣಮುಕ್ತರಾಗುವ ಅವಕಾಶವಿದೆ. ಸರ್ಕಾರದ ನಿರ್ದೇಶನದಂತೆ ಉಳಿದ ಬ್ಯಾಂಕುಗಳು ಓಟಿಎಸ್ ಜಾರಿಗೊಳಿಸಬೇಕೆಂದು ಒತ್ತಾಯಿಸಿ, ಎಲ್ಲಾ ಬ್ಯಾಂಕುಗಳಿಗೆ ಮನವಿ ಸಲ್ಲಿಸಲಾಗಿದೆ. ಓಟಿಎಸ್ ಜಾರಿಯಲ್ಲಿರುವ ಸ್ಟೇಟ್ ಬ್ಯಾಂಕ್ ಇಂಡಿಯ ಬ್ಯಾಂಕಿನಲ್ಲಿ ಇದೇ ಡಿ.18 ಅಂತಿಮ ದಿನಾಂಕವಿದ್ದು, ಸದರಿ ದಿನಾಂಕ ವಿಸ್ತರಿಸಿ ರೈತರಿಗೆ ಅನುಕೂಲ ಕಲ್ಪಿಸಬೇಕೆಂದು ಮನವಿ ಮಾಡಿದರು.
ಮಹಾಂತೇಶ ಐಲಿ, ಲಕ್ಷ್ಮಣ ಉಪ್ಪಳ, ಶರಣಪ್ಪ ತಾವರಗೇರಿ, ಬಸವರಾಜ್ ಗುರಿಕಾರ, ಮಲ್ಲಣ್ಣ ಹಲರಾಪೂರ, ಸುರೇಶ ಮಂಗಳೂರು, ಅಯ್ಯಪ್ಪ ಯಡ್ಡೋಣಿ, ಸುರೇಶ ಬಡಿಗೇರ, ಸಂಗಪ್ಪ ಅಗತೀರ್ಥ, ರವಿ ಕೆಸಲಾಪೂರ, ರಡ್ಡೆಪ್ಪ ಸಿಂಧನೂರು, ಷಣ್ಮುಖ ಐಲಿ, ಶಿವಾನಂದಯ್ಯ ಇದ್ದರು.