ಕಲಬುರಗಿ: ಇಲ್ಲಿನ ವಿದ್ಯಾರ್ಥಿ ವಸತಿ ನಿಲಯಗಳಲ್ಲಿ ಕೆಲಸ ಮಾಡುತ್ತಿರುವ ಅಡುಗೆ ಮಾಡುವವರು, ಸಹಾಯಕರಿಗೆ ಹಾಗೂ ಕಾವಲುಗಾರರಿಗೆ ಬಾಕಿ ಇರುವ ವೇತನ ಪಾವತಿ ಮಾಡುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಕರ್ನಾಟಕ ರಾಜ್ಯ ಸಂಯುಕ್ತ ವಸತಿ ನಿಲಯ ಕಾರ್ಮಿಕರ ಸಂಘ ಧರಣಿ ನಡೆಸಿತು.
ಕಳೆದ ಹತ್ತು ತಿಂಗಳಿಂದ ವಿವಿ ಆಡಳಿತ ಮಂಡಳಿ ಸಂಬಳ ನೀಡುತ್ತಿಲ್ಲ. ಈ ಕುರಿತು ಹಲವಾರು ಬಾರಿ ಕುಲಸಚಿವರಿಗೆ ಹಾಗೂ ಕುಲಪತಿಗಳಿಗೆ ನಮ್ಮ ಸಮಸ್ಯೆ ಹೇಳಿದರೂ ಪ್ರಯೋಜನವಾಗಿಲ್ಲ. ಸಂಬಳ ಕೊಡಿ ಎಂದರೆ ಸಿಂಡಿಕೇಟ್ ಸಭೆಯಲ್ಲಿ ಇಟ್ಟು ಪಾಸು ಮಾಡಬೇಕು ಎನ್ನುತ್ತಾರೆ.
ಹಾಗಿದ್ದರೆ ಇಷ್ಟು ತಿಂಗಳು ಸುಮ್ಮನಿದ್ದಿದ್ಯಾಕೆ, ಸಿಂಡಿಕೇಟ್ ಸಭೆಯಲ್ಲಿ ಇಡಲು ಯಾರು ಬೇಡ ಎಂದರು ಎನ್ನುವ ಪ್ರಶ್ನೆಗಳು ಉಂಟಾಗುತ್ತವೆ. ಆದ್ದರಿಂದ ಕೂಡಲೇ ಕಾರ್ಮಿಕರಿಗೆ ಸಂಬಳ ನೀಡುವಂತೆ ಸಂಘದ ರಾಜ್ಯ ಕಾರ್ಯದರ್ಶಿ ಕಾಮ್ರೆಡ್ ಕೆ.ವಿ.ಭಟ್ಟ ಆಗ್ರಹಿಸಿದರು.
10 ತಿಂಗಳಿಂದ ಸಂಬಳ ಇಲ್ಲದೆ ಹೋದರೆ ಪರಿಸ್ಥಿತಿ ಏನಾಗುತ್ತದೆ ಎನ್ನುವುದು ಇನ್ನೂ ವಿವಿ ಕುಲಪತಿಗಳಿಗೆ ಮನವರಿಕೆ ಆದಂತಿಲ್ಲ, ಆದ್ದರಿಂದ ಜಿಲ್ಲಾಡಳಿತ ಮಧ್ಯ ಪ್ರವೇಶಿಸಿ ಕೂಡಲೇ ಕಾರ್ಮಿಕರಿಗೆ ಸಂಬಳ ಕೊಡಿಸಬೇಕು. ಇಲ್ಲದೆ ಹೋದಲ್ಲಿ ಮುಂದಿನ ದಿನಗಳಲ್ಲಿ ಬೀದಿಗಿಳಿದು ಉಗ್ರವಾಗಿ ಹೋರಾಟ ಮಾಡಲಾಗುವುದು ಎಂದು ಜಿಲ್ಲಾಧಿಕಾರಿಗಳಿಗೆ ನೀಡಿದ ಮನವಿಯಲ್ಲಿ ತಿಳಿಸಿದ್ದಾರೆ.
ಧರಣಿಯಲ್ಲಿ ಜಿಲ್ಲಾ ಮುಖಂಡರಾದ ಎಸ್.ಎಂ. ಶರ್ಮಾ, ರಾಜು ಮಾಪಣ್ಣ, ಉದಯ, ಮಾರುತಿ, ಅನುಸೂಯಾ ಹಾಗೂ ಮತ್ತಿತರರು ಇದ್ದರು.