Advertisement

ಕೋಟಿಲಿಂಗದಲ್ಲಿ ಗಲಾಟೆ ನಡೆದರೆ ಬಹಿಷ್ಕಾರ

07:47 AM Mar 03, 2019 | Team Udayavani |

ಬಂಗಾರಪೇಟೆ: ತಾಲೂಕಿನ ಕಮ್ಮಸಂದ್ರದ ಶ್ರೀಕೋಟಿಲಿಂಗ ದೇಗುಲದಲ್ಲಿ ಎರಡೂ ಗುಂಪುಗಳನ್ನು ತಾಲೂಕು ಹಾಗೂ ಜಿಲ್ಲಾಡಳಿತ ಮಧ್ಯಪ್ರವೇಶಿಸಿ ನಡೆಸಿದ ಮಾತುಕತೆಯ ಸಂಧಾನದಂತೆ ಮಹಾಶಿವರಾತ್ರಿ ಜಾತ್ರೆ ಪ್ರಾರಂಭವಾಗಿದೆ.

Advertisement

ದೇವಾಲಯದ ಧರ್ಮಾಧಿಕಾರಿಗಳಾಗಿದ್ದ ಶ್ರೀ ಕಮಲ ಸಾಂಭವ ಶಿವಮೂರ್ತಿ ಸ್ವಾಮೀಜಿಗಳು ಆಚರಣೆ ಮಾಡುತ್ತಿದ್ದ ದೇವರ ಉತ್ಸವಮೂರ್ತಿಗಳನ್ನು ದೇವಾಲಯದ ಟ್ರಸ್ಟ್‌ ಅಧ್ಯಕ್ಷ ಕೆ.ಎನ್‌.ನಾರಾಯಣಮೂರ್ತಿ ಹಾಗೂ ಕಾರ್ಯದರ್ಶಿ ಕೆ.ವಿ.ಕುಮಾರಿ ನೇತೃತ್ವದಲ್ಲಿ ದೇವಾಲಯಕ್ಕೆ ಹೊತ್ತು ತಂದು ಮಹಾಶಿವರಾತ್ರಿ ಜಾತ್ರೆಗೆ ಚಾಲನೆ ನೀಡಲಾಯಿತು.

ಡಿವೈಎಸ್‌ಪಿ ಪರಮೇಶ್ವರ ಹೆಗಡೆ ಅಧ್ಯಕ್ಷತೆಯಲ್ಲಿ ನಡೆದ ಸಂಧಾನ ಸಭೆಯ ನಂತರ ಮತ್ತೆ ಕೋಲಾರ ಉಪವಿಭಾಗಾಧಿಕಾರಿ ಸೋಮಶೇಖರ್‌ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಯಿತು. ಈ ಸಭೆಯಲ್ಲಿಯೂ ಶ್ರೀಕೋಟಿಲಿಂಗ ದೇವಾಲಯದಲ್ಲಿ 6 ದಿನಗಳ ಕಾಲ ನಡೆಯುವ ಮಹಾಶಿವರಾತ್ರಿ ಜಾತ್ರೆಯಲ್ಲಿ ಎರಡೂ ಗುಂಪುಗಳು ಒಟ್ಟಿಗೆ ಯಾವುದೇ ಗಲಾಟೆ ನಡೆಯದಂತೆ ಎಚ್ಚರಿಕೆಯಿಂದ ನಡೆಸತಕ್ಕದ್ದು.

ಇಲ್ಲದಿದ್ದಲ್ಲಿ ಜಿಲ್ಲಾಡಳಿತ ಮುಜರಾಯಿ ಇಲಾಖೆ ಮೂಲಕ ಮಧ್ಯಪ್ರವೇಶಿಸುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಈ ಸಭೆಗೆ ಕೆ.ವಿ.ಕುಮಾರಿ ಹಾಜರಿದ್ದು, ಶ್ರೀಗಳ ಪುತ್ರ ಡಾ.ಶಿವಪ್ರಸಾದ್‌ ಗೈರಾಗಿದ್ದರು. ಕೆಜಿಎಫ್ ಡಿವೈಎಸ್‌ಪಿ ಪರಮೇಶ್ವರ್‌ ಹೆಗಡೆ, ಕೆಜಿಎಫ್ ತಹಶೀಲ್ದಾರ್‌ ಕೆ.ರಮೇಶ್‌, ಮುಜರಾಯಿ ತಹಶೀಲ್ದಾರ್‌ ಸೋಮಶೇಖರ್‌, ಬೇತಮಂಗಲ ಸಬ್‌ ಇನ್ಸ್‌ಪೆಕ್ಟರ್‌ ಸುನೀಲ್‌ ಕುಮಾರ್‌ ಹಾಜರಿದ್ದರು.

 ಶ್ರೀಕೋಟಿಲಿಂಗ ದೇವಾಲಯದ ವಿವಾದದ ಬಗ್ಗೆ ಕೋಲಾರ ಸಂಸದ ಕೆ.ಎಚ್‌.ಮುನಿಯಪ್ಪ ಹಾಗೂ ಡಿವೈಎಸ್‌ಪಿ ಪರಮೇಶ್ವರ್‌ ಹೆಗಡೆ ಅಧ್ಯಕ್ಷತೆಯಲ್ಲಿ ನಡೆದ ಸಂಧಾನ ಸಭೆಯಲ್ಲಿ ಪೊಲೀಸ್‌ ಇಲಾಖೆ ಹಾಗೂ ಜಿಲ್ಲಾಡಳಿತಕ್ಕೆ ಕೆ.ವಿ.ಕುಮಾರಿ ಹಾಗೂ ಡಾ.ಶಿವಪ್ರಸಾದ್‌ ಬಗ್ಗೆ ನಂಬಿಕೆ ಬರಲಿಲ್ಲ. ಈ ಹಿನ್ನೆಲೆಯಲ್ಲಿ ಮಹಾಶಿವರಾತ್ರಿ ಸುಗಮವಾಗಿ ನಡೆಯಬೇಕೆನ್ನುವ ಉದ್ದೇಶದಿಂದ ಮುಂಜಾಗ್ರತಾ ಕ್ರಮವಾಗಿ ಮತ್ತೆ ಕೆಜಿಎಫ್ ತಹಶೀಲ್ದಾರ್‌ ಕೆ.ರಮೇಶ್‌ ಅಧ್ಯಕ್ಷತೆಯಲ್ಲಿ ಸಭೆ ನಡೆಸಿದರು.  

Advertisement

ಈ ಸಭೆಯಲ್ಲಿ ದೇವಾಲಯದ ಟ್ರಸ್ಟ್‌ ಅಧ್ಯಕ್ಷ ಕೆ.ಎನ್‌.ನಾರಾಯಣಮೂರ್ತಿ, ಕಾರ್ಯದರ್ಶಿ ಕೆ.ವಿ.ಕುಮಾರಿ, ಶ್ರೀಗಳ ಪುತ್ರ ಡಾ.ಕೆ.ಶಿವಪ್ರಸಾದ್‌ ಹಾಗೂ ಪುತ್ರಿ ಕೆ.ಅನುರಾಧ ವಿರುದ್ಧ ಸೆಕ್ಷನ್‌ 107 ರಂತೆ ಬೇತಮಂಗಲ ಠಾಣೆಯಲ್ಲಿ ಪಿಎಸ್‌ಐ ಸುನೀಲ್‌ ಕುಮಾರ್‌ರಿಂದ ದೂರು ದಾಖಲಾಗಿದೆ. ಮಹಾಶಿವರಾತ್ರಿ ಜಾತ್ರೆ ಅಂಗವಾಗಿ ಯಾವುದೇ ಗೊಂದಲ, ದೊಂಬಿ, ಗುಂಪು ಕಟ್ಟಿಕೊಂಡು ಗಲಭೆ ಮಾಡದಂತೆ ಎಚ್ಚರಿಸಲು ಈ ದೂರು ದಾಖಲಾಗಿದೆ. 

ವಿವಾದ ಏನೇ ಇದ್ದರೂ ಸಿವಿಲ್‌ ಕೋರ್ಟ್‌ಗೆ ಹೋಗಿ…: ಕಮ್ಮಸಂದ್ರದ ಶ್ರೀಕೋಟಿಲಿಂಗ ದೇಗುಲದಲ್ಲಿ 2ಗುಂಪುಗಳ ಮಧ್ಯೆ ವಿವಾದ ಸೃಷ್ಟಿಯಾಗಿರುವುದರಿಂದ ದೇವಾಲಯದ ಪ್ರತಿನಿತ್ಯ ಹಾಗೂ ಮಹಾಶಿವರಾತ್ರಿ ಜಾತ್ರೆ ಅಂಗವಾಗಿ ಪೂಜೆ ಕಾರ್ಯಗಳು ನಡೆಯಲು ಅಡ್ಡಿಯಾಗುವ ಬಗ್ಗೆ ಪೊಲೀಸ್‌ ಇಲಾಖೆಗೆ ಅನುಮಾನ ಹೆಚ್ಚಾಗಿದೆ. ಹೀಗಾಗಿ ದೇವಾಲಯದ ಟ್ರಸ್ಟ್‌ ಅಧ್ಯಕ್ಷ ಕೆ.ಎನ್‌.ನಾರಾಯಣಮೂರ್ತಿ, ಕಾರ್ಯದರ್ಶಿ ಕೆ.ವಿ.ಕುಮಾರಿ, ಶ್ರೀಗಳ ಪುತ್ರ ಡಾ.ಕೆ.ಶಿವಪ್ರಸಾದ್‌ ಹಾಗೂ ಪುತ್ರಿ ಕೆ.ಅನುರಾಧ ವಿರುದ್ಧ ಬೇತಮಂಗಲ-

ಠಾಣೆಯಲ್ಲಿ ಸೆಕ್ಷನ್‌ 107ರಂತೆ ನಾಲ್ವರ ವಿರುದ್ಧ ದೂರು ದಾಖಲಾಗಿದೆ. ತಾಲೂಕು ದಂಡಾಧಿಕಾರಿಯಾದ ತನ್ನ ಮುಂದೆ ಹಾಜರಿಪಡಿಸಿ ಪ್ರತಿಯೊಬ್ಬರಿಂದಲೂ 5 ಲಕ್ಷ ರೂ., ಬಾಂಡ್‌ ಪಡೆಯಲಾಗಿದೆ. ದೇಗುಲದ ವಿವಾದ ಏನೇ ಇದ್ದರೂ ಸಿವಿಲ್‌ ಕೋರ್ಟಿಗೆ ಹೋಗಿ. ದೇಗುಲದಲ್ಲಿ ಯಾವುದೇ ದೊಂಬಿ, ಗಲಭೆ ನಡೆಸಬಾರದು. ಮತ್ತೆ ಏನಾದರೂ ಮಾಡಿದ್ದಲ್ಲಿ ಜಿಲ್ಲೆಯಿಂದಲೇ ಬಹಿಷ್ಕಾರ ಮಾಡಲಾಗುವುದು ಎಂದು ಕೆಜಿಎಫ್ ತಹಶೀಲ್ದಾರ್‌ ಕೆ.ರಮೇಶ್‌ ಎಚ್ಚರಿಕೆ ನೀಡಿದ್ದಾರೆ.

* ಎಂ.ಸಿ.ಮಂಜುನಾಥ್‌ 

Advertisement

Udayavani is now on Telegram. Click here to join our channel and stay updated with the latest news.

Next