ಮುಂಬಯಿ: ನಿತೇಶ್ ತಿವಾರಿ ಅವರ ಬಿಗ್ ಬಜೆಟ್ ʼರಾಮಾಯಣʼ ಸಟ್ಟೇರಲು ಸಿದ್ದವಾಗಿದೆ. ಭಾರತೀಯ ಸಿನಿಮಾರಂಗದಲ್ಲೇ ಬಹು ನಿರೀಕ್ಷಿತ ಸಿನಿಮಾವೆಂದು ಹೇಳಲಾಗುತ್ತಿರುವ ʼರಾಮಾಯಣʼ ಇದೇ ಏಪ್ರಿಲ್ 17 ರ ʼರಾಮ ನವಮಿʼ ದಿನದಂದು ಅಧಿಕೃತವಾಗಿ ಅನೌನ್ಸ್ ಆಗುವ ಸಾಧ್ಯತೆಯಿದೆ.
ಇಷ್ಟು ದಿನ ಪಾತ್ರವರ್ಗದ ವಿಚಾರದಲ್ಲಿ ಸುದ್ದಿಯಾಗುತ್ತಿದ್ದ ʼರಾಮಾಯಣʼ ಸಿನಿಮಾದ ಬಗ್ಗೆ ಮತ್ತೊಂದು ಬಿಗ್ ಇನ್ ಸೈಡ್ ಅಪ್ಡೇಟ್ ವೊಂದನ್ನು ʼಪಿಂಕ್ ವಿಲ್ಲಾʼ ವರದಿ ಮಾಡಿದೆ.
ನಿರ್ಮಾಪಕ ನಮಿತ್ ಮಲ್ಹೋತ್ರಾ ಮತ್ತು ನಿರ್ದೇಶಕ ನಿತೇಶ್ ತಿವಾರಿ ಅವರ ʼರಾಮಾಯಣʼ ಕ್ಕೆ ಆಸ್ಕರ್ ವಿಜೇತರ ಸಾಥ್ ಸಿಕ್ಕಿದೆ. ಅಂತಾರಾಷ್ಟ್ರೀಯವಾಗಿ ಮನ್ನಣೆಗಳಿಸಿರುವ ಖ್ಯಾತ ಸಂಗೀತ ಸಂಯೋಜಕ ಮತ್ತು ಸಂಗೀತ ನಿರ್ಮಾಪಕ ಜರ್ಮನ್ ಮೂಲದ ಹ್ಯಾನ್ಸ್ ಜಿಮ್ಮರ್ ಇದೇ ಮೊದಲ ಬಾರಿಗೆ ಇಂಡಿಯನ್ ಸಿನಿಮಾಕ್ಕೆ ಕಾಲಿಡಲಿದ್ದಾರೆ. ಅದು ʼರಾಮಾಯಣʼ ಸಿನಿಮಾಕ್ಕಾಗಿ.
ಎರಡು ಆಸ್ಕರ್ ಹಾಗೂ ನಾಲ್ಕು ಗ್ರ್ಯಾಮಿ ಪ್ರಶಸ್ತಿಗಳನ್ನು ಗೆದ್ದಿರುವ ಹ್ಯಾನ್ಸ್ ಜಿಮ್ಮರ್ ಭಾರತದ ಖ್ಯಾತ ಸಂಗೀತ ಸಂಯೋಜಕ ಆಸ್ಕರ್ ವಿಜೇತ ಎಆರ್ ರೆಹಮಾನ್ ಜೊತೆಯಾಗಿ ʼರಾಮಾಯಣʼಕ್ಕೆ ಮ್ಯೂಸಿಕ್ ನೀಡಲಿದ್ದಾರೆ ಎಂದು ʼಪಿಂಕ್ ವಿಲ್ಲಾʼ ವರದಿ ಮಾಡಿದೆ.
ಹ್ಯಾನ್ಸ್ ಜಿಮ್ಮರ್ ಅವರು ರಾಮನ ಕಥೆಯಿಂದ ಆಕರ್ಷಿತರಾಗಿದ್ದಾರೆ ಮತ್ತು ರಾಮಾಯಣದ ಸ್ಕೋರ್ ರಚಿಸಲು ಸಿದ್ಧರಾಗಿದ್ದಾರೆ. ಜಿಮ್ಮರ್ ಅವರೊಂದಿಗೆ ಅಂತಿಮ ಹಂತದ ಚರ್ಚೆಗಳು ಪ್ರಗತಿಯಲ್ಲಿವೆ ಎಂದು ಮೂಲಗಳು ಹೇಳಿರುವುದಾಗಿ ʼಪಿಂಕ್ ವಿಲ್ಲಾʼ ವರದಿ ಮಾಡಿದೆ.
ಹ್ಯಾನ್ಸ್ ಜಿಮ್ಮರ್ ಅವರು ʼದಿ ಲಯನ್ ಕಿಂಗ್ʼ, ʼಗ್ಲಾಡಿಯೇಟರ್ʼ, ʼಪೈರೇಟ್ಸ್ ಆಫ್ ದಿ ಕೆರಿಬಿಯನ್ʼ, ʼದಿ ಡಾರ್ಕ್ ನೈಟ್ ಟ್ರೈಲಾಜಿʼ, ʼಇನ್ಸೆಪ್ಶನ್ʼ, ʼಮ್ಯಾನ್ ಆಫ್ ಸ್ಟೀಲ್ʼ, ʼಇಂಟರ್ ಸ್ಟೆಲ್ಲರ್ʼ, ʼಡನ್‌ಕಿರ್ಕ್ʼ ಮತ್ತು ʼನೋ ಟೈಮ್ ಟು ಡೈʼ ಮುಂತಾದ ಹಲವಾರು ಸೂಪರ್ ಹಿಟ್ ಸಿನಿಮಾಗಳಿಗೆ ಸಂಗೀತ ಸಂಯೋಜನೆಯನ್ನು ಮಾಡಿದ್ದಾರೆ.
ಈ ಹಿಂದೆ ಹ್ಯಾನ್ಸ್ ಅವರು ಎಆರ್ ರೆಹಮಾನ್ ಅವರೊಂದಿಗೆ ಕೈಜೋಡಿಸುವ ಬಗ್ಗೆ ಮಾತನಾಡಿದ್ದರು.
ʼರಾಮಾಯಣʼದಲ್ಲಿ ರಾಮನ ಪಾತ್ರದಲ್ಲಿ ರಣಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ, ಹನುಮಂತನಾಗಿ ಸನ್ನಿ ಡಿಯೋಲ್ ಮತ್ತು ರಾವಣನಾಗಿ ಯಶ್ ಕಾಣಿಸಿಕೊಳ್ಳಲಿದ್ದಾರೆ. 2025 ರ ಹಬ್ಬದ ವೇಳೆ ಸಿನಿಮಾ ತೆರೆಗೆ ಬರುವ ಸಾಧ್ಯತೆಯಿದೆ.