ನವದೆಹಲಿ: ಪ್ರಸಕ್ತ ಸಾಲಿನ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿರುವ ಚಿತ್ರಗಳ ಪಟ್ಟಿಯಲ್ಲಿ ಭಾರತದ ಸಾಕ್ಷ್ಯಚಿತ್ರವೊಂದು ಸ್ಥಾನ ಪಡೆದಿದೆ.
ದೆಹಲಿ ಮೂಲದ ಚಿತ್ರ ನಿರ್ಮಾಪಕರಾದ ರಿಂಟು ಥೋಮಸ್ ಮತ್ತು ಸುಶ್ಮಿತಾ ಘೋಷ್ ಅವರ ಸಾಕ್ಷ್ಯಚಿತ್ರ “ರೈಟಿಂಗ್ ವಿದ್ ಫೈರ್’ ಅತ್ಯುತ್ತಮ ಫೀಚರ್ ಡಾಕ್ಯುಮೆಂಟರಿ ವಿಭಾಗದಲ್ಲಿ ನಾಮನಿರ್ದೇಶನಗೊಂಡಿದೆ.
ಕಳೆದ ವರ್ಷದ ಜನವರಿಯಲ್ಲಿ ಸನ್‌ಡಾನ್ಸ್ ಫಿಲಂ ಫೆಸ್ಟಿವಲ್‌ನಲ್ಲಿ ಇದೇ ಸಾಕ್ಷ್ಯಚಿತ್ರವು ವಿಶೇಷ ತೀರ್ಪುಗಾರರ ಪ್ರಶಸ್ತಿಯನ್ನು ಮತ್ತು ವೀಕ್ಷಕರ ಪ್ರಶಸ್ತಿಯನ್ನು ಪಡೆದು, ಸುದ್ದಿಯಾಗಿತ್ತು. ಅದಾದ ಬಳಿಕ, ಈ ಡಾಕ್ಯುಮೆಂಟರಿಗೆ ಬರೋಬ್ಬರಿ 20 ಅಂತಾರಾಷ್ಟ್ರೀಯ ಪ್ರಶಸ್ತಿಗಳು ಸಂದಿದ್ದವು.
ವಾಷಿಂಗ್ಟನ್ ಪೋಸ್ಟ್ ಕೂಡ “ರೈಟಿಂಗ್ ವಿದ್ ಫೈರ್ ಸಾಕ್ಷ್ಯಚಿತ್ರವು ಈವರೆಗೆ ಬಂದಿರದ ಅತ್ಯಂತ ಪ್ರೇರಣದಾಯಕ ಪತ್ರಿಕೋದ್ಯಮದ ಸಿನಿಮಾ’ ಎಂದು ಬಣ್ಣಿಸಿತ್ತು.
ಆಸ್ಕರ್‌ಗೆ ನಾಮನಿರ್ದೇಶನಗೊಂಡಿರುವ ಕುರಿತು ಪ್ರತಿಕ್ರಿಯಿಸಿರುವ ಸಹ ನಿರ್ದೇಶಕರಾದ ಸುಷ್ಮಿತಾ ಘೋಷ್, “ಭರವಸೆ ಮೂಡಿಸುವ, ಬದಲಾವಣೆಗೆ ಕಾರಣವಾಗುವ ಕಥೆಯೆಂದರೆ ನಮಗೆ ಮೊದಲಿನಿಂದಲೂ ಆಸಕ್ತಿ. ಈಗ ಭಾರತದ ಸಾಕ್ಷ್ಯಚಿತ್ರವೊಂದು ಜಾಗತಿಕ ಮಟ್ಟದಲ್ಲಿ ಪ್ರಶಂಸೆಗೆ ಒಳಗಾಗಿದ್ದು ನೋಡಿ ಸಂತಸವಾಗಿದೆ’ ಎಂದಿದ್ದಾರೆ.