Advertisement

ಎರಡು ಚಿತ್ರಗಳಿಗೆ ಆಸ್ಕರ್‌, ಹೊಸ ಮೈಲುಗಲ್ಲು ನಿರ್ಮಾಣ

12:29 AM Mar 14, 2023 | Team Udayavani |

ಭಾರತೀಯ ಚಲನ ಚಿತ್ರರಂಗಕ್ಕೆ ಸೋಮವಾರ ಸುವರ್ಣಾಕ್ಷರಗಳಲ್ಲಿ ಬರೆದಿಡ ಬಹುದಾದ ದಿನ. ಕಿರು ಸಾಕ್ಷ್ಯಚಿತ್ರ ವಿಭಾಗದಲ್ಲಿ ದಿ ಎಲಿಫೆಂಟ್‌ ವಿಸ್ಪರರ್ಸ್‌ ಮತ್ತು ಒರಿಜಿನಲ್‌ ಸಾಂಗ್‌ ವಿಭಾಗದಲ್ಲಿ ಆರ್‌ಆರ್‌ಆರ್‌ ಚಿತ್ರದ ನಾಟು ನಾಟು ಗೀತೆಗೆ ಆಸ್ಕರ್‌ ಪ್ರಶಸ್ತಿ ಒಲಿದಿದೆ. ವಿಶೇಷವೆಂದರೆ ಈ ಎರಡೂ ಚಿತ್ರಗಳು ಭಾರತೀಯ ಸಂಸ್ಕೃತಿ ಮತ್ತು ಭಾರತೀಯ ಪರಿಸರದ ನಡುವಿನ ಬಂಧದ ಬಗ್ಗೆ  ಹೇಳುವಂಥವುಗಳಾಗಿವೆ. ಅದರಲ್ಲೂ ದಕ್ಷಿಣ ಭಾರತಕ್ಕೆ ಸೇರಿದ ಚಿತ್ರಗಳು ಎಂಬುದು ಹರ್ಷದ ವಿಚಾರ.

Advertisement

ಈ ಹಿಂದೆ ಭಾರತೀಯ ಸಿನೆಮಾ ಎಂದರೆ ಅದು ಕೇವಲ ಬಾಲಿವುಡ್‌ ಎಂಬ ಮಾತುಗಳಿದ್ದವು. ಇತ್ತೀಚಿನ ದಿನಗಳಲ್ಲಿ ಈ ಅಭಿಪ್ರಾಯ ಸಂಪೂರ್ಣವಾಗಿ ಬದಲಾದಂತಿದೆ. ಇದಕ್ಕೆ ಪ್ರಮುಖ ಉದಾಹರಣೆ  ದಕ್ಷಿಣ ಭಾರತದ ಚಿತ್ರಗಳೇ ಸಾಲು ಸಾಲು ಯಶಸ್ಸು ಕಂಡು, ಭಾರತೀಯ ಚಿತ್ರರಂಗದಲ್ಲಿ ತಮ್ಮ ಪಾತ್ರವನ್ನು ನಿರೂಪಿಸಿರುವುದು. ಅದಷ್ಟೇ ಅಲ್ಲ, ಜಾಗತಿಕ ಮಟ್ಟದಲ್ಲಿಯೂ ಭಾರತದಲ್ಲಿ ಕೇವಲ ಬಾಲಿವುಡ್‌ ಮಾತ್ರ ಇಲ್ಲ, ಇದರ ಜತೆಗೆ ಸ್ಯಾಂಡಲ್‌ವುಡ್‌, ಕಾಲಿವುಡ್‌, ಟಾಲಿವುಡ್‌, ಮಾಲಿವುಡ್‌ನಂಥ ಇತರ ಚಿತ್ರರಂಗಗಳೂ ಇವೆ ಎಂಬುದನ್ನು ತಮ್ಮ ಚಿತ್ರಗಳ ಮೂಲಕವೇ ಬಹಿರಂಗ ಪಡಿಸಿದ್ದವು.

ಅಂದರೆ, ದಕ್ಷಿಣ ಭಾರತದ ಚಿತ್ರಗಳಾದ ಕೆಜಿಎಫ್ 1 ಮತ್ತು 2, ಆರ್‌ಆರ್‌ಆರ್‌, ಪುಷ್ಪಾ, ಕಾಂತಾರ, ವಿಕ್ರಾಂತ್‌ ರೋಣ ಸೇರಿದಂತೆ ಬಹಳಷ್ಟು ಚಿತ್ರಗಳು ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿದವು. ಈ ಚಿತ್ರಗಳ ನಡುವೆ ಬಂದ ಶಾರೂಖ್‌ ಖಾನ್‌ ಅಭಿನಯದ ಚಿತ್ರ ಪಠಾಣ್‌ ಮಾತ್ರ ಯಶಸ್ಸು ಕಂಡಿತು.

ಈಗ ಭಾರತದ ಅದರಲ್ಲೂ, ತೆಲುಗು ಚಿತ್ರವೊಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ವೈಭವವನ್ನು ಸಾರಿ ಹೇಳಿದೆ. ರಾಜಮೌಳಿ ನಿರ್ದೇಶನದ, ಕೀರವಾಣಿ ಸಂಗೀತ ನಿರ್ದೇಶನದ ಆರ್‌ಆರ್‌ಆರ್‌ ಸಿನೆಮಾದ ನಾಟು ನಾಟು ಗೀತೆಗೆ ಪ್ರತಿಷ್ಠಿತ ಆಸ್ಕರ್‌ ಪ್ರಶಸ್ತಿ ಲಭಿಸಿದೆ. ಬಾಲಿವುಡ್‌ ಸೇರಿದಂತೆ ದೇಶದ ಯಾವುದೇ ಭಾಷೆಯ ಚಿತ್ರ ಮಾಡದ ಸಾಧನೆಯನ್ನು ಆರ್‌ಆರ್‌ಆರ್‌ ಚಿತ್ರ ಮಾಡಿದೆ. ಈ ಮೂಲಕ ಭಾರತದ ಕೀರ್ತಿಪತಾಕೆಯನ್ನು ಮುಗಿಲೆತ್ತರಕ್ಕೆ ಹಾರಿಸಿದೆ ಎಂದರೆ ತಪ್ಪಾಗಲಾರದು. ಇದರ ಜತೆಗೆ ತಮಿಳಿನ ಕಿರು ಸಾಕ್ಷ್ಯಚಿತ್ರ ದಿ ಎಲಿಫೆಂಟ್‌ ಪ್ರಾಸ್ಪರ್‌ ಕೂಡ ಪ್ರಶಸ್ತಿ ಗಳಿಸಿದ್ದು, ಭಾರತಕ್ಕೆ ಡಬಲ್‌ ಖುಷಿಯನ್ನು ತಂದುಕೊಟ್ಟಿತು.

ಅಷ್ಟೇ ಅಲ್ಲ, ಶೌನಕ್‌ ಸೇನ್‌ ನಿರ್ದೇಶನದ ಆಲ್‌ ದಿ ಬ್ರಿàಥಸ್‌ ಎಂಬ ಕಿರುಚಿತ್ರವೂ ಆಸ್ಕರ್‌ ಪ್ರಶಸ್ತಿ ರೇಸಿನಲ್ಲಿತ್ತು. ಆದರೆ ಇದೇ ರೇಸ್‌ನಲ್ಲಿದ್ದ ದಿ ಎಲಿಫೆಂಟ್‌ ವಿಸ್ಪರರ್ಸ್‌ ಚಿತ್ರಕ್ಕೆ ಪ್ರಶಸ್ತಿ ಬಂದಿದ್ದರಿಂದ ಈ ಕಿರುಚಿತ್ರಕ್ಕೆ ಪ್ರಶಸ್ತಿ ತಪ್ಪಿದಂತಾಯಿತು. ಈ ಬಾರಿಯ ಆಸ್ಕರ್‌ನಲ್ಲಿ ವಿಶೇಷವೂ ಇದೆ. ಇದೇ ಮೊದಲ ಬಾರಿಗೆ ಭಾರತದ ಮೂರು ಚಿತ್ರಗಳು ಆಸ್ಕರ್‌ ರೇಸಿನಲ್ಲಿದ್ದವು. ಹಾಗೆಯೇ ವೇದಿಕೆಯ ಮೇಲೆ ದೀಪಿಕಾ ಪಡುಕೋಣೆ ಅವರೂ ಕಾಣಿಸಿಕೊಂಡು ನಾಟು ನಾಟು ಹಾಡಿನ ಬಗ್ಗೆ ವಿವರಣೆ ನೀಡಿದರು. ಈ ಮೂಲಕ ಆಸ್ಕರ್‌ ವೇದಿಕೆಯಲ್ಲಿ ಇದೇ ಮೊದಲ ಬಾರಿಗೆ ಭಾರತೀಯ ನಟಿಯೊಬ್ಬರಿಗೆ ಅದ್ಭುತ ಮನ್ನಣೆಯೂ ಸಿಕ್ಕಿತು.

Advertisement

ಮೊದಲೇ ಹೇಳಿದ ಹಾಗೆ, ಭಾರತದ ಚಿತ್ರರಂಗವನ್ನು ಬಾಲಿವುಡ್‌ ಆಧರಿಸಿಯೇ ಗುರುತಿಸುತ್ತಿದ್ದ ಕಾಲವಿತ್ತು. ಬಾಲಿವುಡ್‌ನ‌ ಈ ದೊಡ್ಡ ಹಿಡಿತದಿಂತ ಹೊರಬರಲು ದಕ್ಷಿಣ ಭಾರತದ ಚಿತ್ರರಂಗಗಳು ಸಾಕಷ್ಟು ಪ್ರಯತ್ನ ಹಾಕಿವೆ ಎಂದರೆ ತಪ್ಪಾಗಲಾರದು. ಹಾಗೆಯೇ  ಪ್ಯಾನ್‌ ಇಂಡಿಯಾ ಚಿತ್ರಗಳ ಪರಿಕಲ್ಪನೆ ಬಂದ ಮೇಲೆ ದಕ್ಷಿಣ ಭಾರತ ಚಿತ್ರರಂಗಗಳ ದಿಸೆ ಬದಲಾಯಿತು ಎಂದು ಹೇಳಬಹುದು. ಅಂದರೆ, ಮೊದಲು ದಕ್ಷಿಣ ಭಾರತದಲ್ಲಿ ಗೆದ್ದ ಚಿತ್ರಗಳು, ಬಾಲಿವುಡ್‌ಗೆ ರಿಮೇಕ್‌ ಲೆಕ್ಕಾಚಾರದಲ್ಲಿ ಹೋಗುತ್ತಿದ್ದವು. ಆದರೆ ಈಗ ಉತ್ತಮ ಗುಣಮಟ್ಟದ ಡಬ್ಬಿಂಗ್‌ ವ್ಯವಸ್ಥೆ ಬಂದ ಮೇಲೆ ರಿಮೇಕ್‌ ಹೋಗಿದೆ. ಈಗ ಎಲ್ಲೋ ಒಂದೆರಡು ಚಿತ್ರಗಳು ರಿಮೇಕ್‌ ಆಗುತ್ತಿವೆ.

ಭಾರತೀಯ ಚಿತ್ರಗಳಿಗೆ ಆಸ್ಕರ್‌ ಪ್ರಶಸ್ತಿ ಸಿಕ್ಕಿರುವುದು ಉತ್ತಮ ವಿಚಾರವೇ. ಅಲ್ಲದೆ, ಚಿತ್ರರಂಗ ಜಾಗತಿಕ ಮಟ್ಟದಲ್ಲಿ ಬೆಳವಣಿಗೆ ಕಾಣಲು ಇಂಥ ಪ್ರಶಸ್ತಿಗಳು ಏಣಿಗಳಾಗಿ ನಿಲ್ಲುತ್ತವೆ. ಅಲ್ಲದೆ, ದೇಶೀಯ ಮಟ್ಟದಲ್ಲೂ ಆಸ್ಕರ್‌ಗೆ ಹೋಗಬಹುದಾದ ಚಿತ್ರಗಳ ನಿರ್ಮಾಣ ವಿಚಾರದಲ್ಲೂ ಪೈಪೋಟಿ ಕಾಣಬಹುದು. ಮುಂದಿನ ದಿನಗಳಲ್ಲಿ ಇದೇ ರೀತಿಯಲ್ಲಿ ಉತ್ತಮ ಚಿತ್ರಗಳನ್ನು ನಿರ್ಮಿಸಿ, ಇನ್ನಷ್ಟು  ಪ್ರಶಸ್ತಿಗಳನ್ನು ಗೆಲ್ಲುವಂತಾಗಬೇಕು.

Advertisement

Udayavani is now on Telegram. Click here to join our channel and stay updated with the latest news.

Next