Advertisement
ಈ ಆರ್ಥೊಡಾಂಟಿಕ್ ಚಿಕಿತ್ಸಾ ವಸ್ತುಗಳು ಬಾಳಿಕೆ ಬರುತ್ತವಾದರೂ ಕ್ರೀಡೆಗಳಲ್ಲಿ ಪಾಲ್ಗೊಳ್ಳುವ ವೇಳೆ ಅವುಗಳಿಗೆ ಅಥವಾ ಅವುಗಳಿಂದ ಹಾನಿಯಾಗುವ ಸಾಧ್ಯತೆ ಇರುತ್ತದೆ. ಆಟೋಟಗಳ ಪರಿಣಾಮ ಅಥವಾ ಗಾಯಗಳಿಂದ ಬ್ರೇಸ್‌ನ ಬ್ರ್ಯಾಕೆಟ್ ಅಥವಾ ತಂತಿಗಳಿಗೆ ಪ್ರತಿಕೂಲ ಪರಿಣಾಮ ಉಂಟಾಗುವ ಸಾಧ್ಯತೆ ಇರುತ್ತದೆ. ಉದಾಹರಣೆಗೆ, ಆಟೋಟಗಳಲ್ಲಿ ಪಾಲ್ಗೊಂಡಾಗ ಮುಖಕ್ಕೆ ಪೆಟ್ಟು ಬಿದ್ದರೆ ಆಗ ಬ್ರ್ಯಾಕೆಟ್ ಸ್ಥಾನಪಲ್ಲಟಗೊಳ್ಳುವ ಅಥವಾ ಅದರ ತಂತಿಗಳು ಬಾಗಿಹೋಗುವ ಅಥವಾ ಇತರ ಆರ್ಥೊಡಾಂಟಿಕ್ ಸಾಮಗ್ರಗಳಿಗೆ ಹಾನಿ ಉಂಟಾಗುವ ಸಾಧ್ಯತೆ ಇರುತ್ತದೆ. ಹಲ್ಲುಗಳಿಗೆ ಬ್ರೇಸ್ ಹಾಕಿಸಿಕೊಂಡ ಕ್ರೀಡಾಳುಗಳಿಗೆ ಬಾಯಿಯ ಮೃದು ಅಂಗಾಂಶ ಗಾಯಗಳು ಉಂಟಾಗುವ ಸಾಧ್ಯತೆ ಇದ್ದು, ಇದು ಗಂಭೀರ ಪರಿಣಾಮಗಳಿಗೆ ಕಾರಣವಾಗಬಹುದು. ಇಂತಹ ಆರ್ಥೊಡಾಂಟಿಕ್ ತುರ್ತುಪರಿಸ್ಥಿತಿಗಳು ರೋಗಿಗಳಿಗೆ ಕಿರಿಕಿರಿ ಉಂಟು ಮಾಡುವುದು ಮಾತ್ರವೇ ಅಲ್ಲದೆ ಆರ್ಥೊಡಾಂಟಿಕ್ ಚಿಕಿತ್ಸಾ ಪ್ರಗತಿಯನ್ನು ಬಾಧಿಸಬಹುದಾಗಿದೆ.
Related Articles
Advertisement
ಅತ್ಯಂತ ಹೆಚ್ಚು ವೇಗದ ಚಲನೆಯನ್ನು ಒಳಗೊಳ್ಳುವ ಬಾಸ್ಕೆಟ್‌ಬಾಲ್, ವಾಲಿಬಾಲ್, ಸೈಕ್ಲಿಂಗ್ ಅಥವಾ ಸ್ಕೇಟಿಂಗ್‌ನಂತಹ ಆಟಗಳಲ್ಲಿ ಪಾಲ್ಗೊಳ್ಳುವಾಗ ಇಂತಹ ರಕ್ಷಣಾತ್ಮಕ ಕವಚಗಳು ನಮ್ಮ ಕಣ್ಣುಗಳು, ಮೂಗು, ಬಾಯಿಗಳಿಗೆ ರಕ್ಷಣೆ ಒದಗಿಸುವ ಮೂಲಕ ಗಾಯಗಳು ಉಂಟಾಗುವ ಅಪಾಯವನ್ನು ತಗ್ಗಿಸುತ್ತವೆ. ಹೆಲ್ಮೆಟ್ ಖರೀದಿಸುವಾಗ ನಿಮ್ಮ ಆರ್ಥೊಡಾಂಟಿಕ್ ಸಾಮಗ್ರಿಗಳಿಗೂ ಸ್ಥಳಾವಕಾಶ ಇರುವಷ್ಟು ದೊಡ್ಡದನ್ನೇ ಆರಿಸಿದರೆ ಸಂಭಾವ್ಯ ಕಿರಿಕಿರಿ ಅಥವಾ ಬ್ರೇಸ್‌ಗಳಿಗೆ ಹಾನಿಯನ್ನು ತಪ್ಪಿಸಬಹುದಾಗಿದೆ.
ಬ್ರ್ಯಾಕೆಟ್ ಅಥವಾ ತಂತಿ ತುಂಡಾದಂತಹ ಆರ್ಥೊಡಾಂಟಿಕ್ ತುರ್ತುಪರಿಸ್ಥಿತಿಗಳಲ್ಲಿ ಅಗತ್ಯ ಮುಂಜಾಗ್ರತೆಗಳನ್ನು ಅನುಸರಿಸುವುದನ್ನು ಕ್ರೀಡಾಳುಗಳು ಮರೆಯಬಾರದು. ಬ್ರೇಸ್ ಗಳ ಮೊನಚಾದ ಅಂಚುಗಳಿಂದ ಹಾನಿ, ಗಾಯ ಉಂಟಾಗುವುದನ್ನು ತಾತ್ಕಾಲಿಕವಾಗಿ ತಡೆಯಲು ಆರ್ಥೊಡಾಂಟಿಕ್ ವ್ಯಾಕ್ಸ್ ಉಪಯೋಗಿಸಬಹುದಾಗಿದೆ. ಇದರಿಂದ ಬಾಯಿಯ ಮೃದು ಅಂಗಾಂಶಗಳಿಗೆ ಗಾಯ ಉಂಟಾಗುವುದನ್ನು ತಡೆಯಬಹುದಾಗಿದೆ.
ಆರ್ಥೊಡಾಂಟಿಕ್ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿರುವ ಕ್ರೀಡಾಳುಗಳು ತಮ್ಮ ಆರ್ಥೊಡಾಂಟಿಸ್ಟ್‌ರಿಂದ ನಿಯಮಿತವಾಗಿ ತಪಾಸಣೆಗೆ ಒಳಗಾಗುವುದು ಮುಖ್ಯ. ಇಂತಹ ತಪಾಸಣೆಗಳ ವೇಳೆ ಆರ್ಥೊಡಾಂಟಿಸ್ಟ್ ಚಿಕಿತ್ಸೆಯಲ್ಲಿ ಆಗಿರುವ ಪ್ರಗತಿ ಮತ್ತು ಉಂಟಾಗಿರಬಹುದಾದ ಯಾವುದೇ ಸಮಸ್ಯೆಗಳನ್ನು ಸರಿಪಡಿಸಲು ಸಾಧ್ಯವಾಗುತ್ತದೆ. ಯಾವುದೇ ತೊಂದರೆ ಅಥವಾ ಅಸಹಜ ಅನುಭವ ಉಂಟಾಗಿದ್ದಲ್ಲಿ ನಿರ್ಲಕ್ಷಿಸಬಾರದು ಮತ್ತು ಕೂಡಲೇ ಆರ್ಥೊಡಾಂಟಿಸ್ಟ್‌ರಿಗೆ ತಿಳಿಸಬೇಕು, ಹೀಗೆ ಮಾಡುವುದರಿಂದ ಸಮಸ್ಯೆ ಉಲ್ಬಣಗೊಳ್ಳದಂತೆ ಕೂಡಲೇ ಚಿಕಿತ್ಸೆ ಒದಗಿಸುವುದು ಅಥವಾ ಆಗಿರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಸಾಧ್ಯವಾಗುತ್ತದೆ.
ಬ್ರೇಸ್ ಧರಿಸಿರುವ ಕ್ರೀಡಾಳುಗಳು ಬಾಯಿಯ ನೈರ್ಮಲ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳಬೇಕು. ನಿಯಮಿತವಾಗಿ ಹಲ್ಲುಜ್ಜುವುದು, ಫ್ಲಾಸ್ ಮಾಡುವುದು ಮತ್ತು ಆರ್ಥೊಡಾಂಟಿಕ್ ಸ್ನೇಹಿ ಬಾಯಿಯ ಆರೈಕೆ ಉತ್ಪನ್ನಗಳ ಬಳಕೆಯಿಂದ ಹಲ್ಲು ಹುಳುಕು, ವಸಡುಗಳ ಕಾಯಿಲೆ ಅಥವಾ ಹಲ್ಲುಗಳ ಮೇಲೆ ಬಿಳಿ ಕಲೆಗಳು ಉಂಟಾಗುವುದಕ್ಕೆ ಕಾರಣವಾಗಬಹುದಾದ ಕೊಳೆ ಮತ್ತು ಬ್ಯಾಕ್ಟೀರಿಯಾ ಶೇಖರಣೆಯಾಗುವುದು ತಪ್ಪುತ್ತದೆ.
ಸರಿಯಾದ ಪೌಷ್ಟಿಕಾಂಶಯುಕ್ತ ಆಹಾರ ಸೇವನೆ ಮತ್ತು ನೀರು ಸಹಿತ ಸಾಕಷ್ಟು ದ್ರವಾಹಾರಗಳ ಸೇವನೆ ಉತ್ತಮ ಕ್ರೀಡಾ ಪ್ರದರ್ಶನ ಮತ್ತು ಬಾಯಿಯ ಆರೋಗ್ಯವೆರಡರ ದೃಷ್ಟಿಯಿಂದಲೂ ಅತ್ಯಗತ್ಯವಾಗಿದೆ. ಸಕ್ಕರೆ ಬೆರೆತ ಮತ್ತು ಆಮ್ಲೀಯ ಪಾನೀಯಗಳ ಸೇವನೆಯಿಂದ ಹಲ್ಲು ಹುಳುಕು ಮತ್ತು ಖನಿಜಾಂಶ ನಷ್ಟ ಉಂಟಾಗುವ ಸಾಧ್ಯತೆ ಇರುವುದರಿಂದ ಇವುಗಳನ್ನು ತ್ಯಜಿಸಬೇಕು. ಅದರ ಬದಲಾಗಿ ಬಾಯಿಯಲ್ಲಿ ಉಳಿದಿರಬಹುದಾದ ಆಹಾರದ ತುಣುಕುಗಳನ್ನು ನಿವಾರಿಸಬಲ್ಲ ಶುದ್ದ ನೀರನ್ನು ಕುಡಿಯುವುದರಿಂದ ದೇಹದಲ್ಲಿ ನೀರಿನಂಶವೂ ಚೆನ್ನಾಗಿರುತ್ತದೆ, ಬಾಯಿಯ ಆರೋಗ್ಯವೂ ಕಾಪಾಡಲ್ಪಡುತ್ತದೆ. ಗಟ್ಟಿಯಾದ, ಅಂಟಾದ ಅಥವಾ ಗರಿಗರಿಯಾದ ಆಹಾರ ವಸ್ತುಗಳು ಬ್ರೇಸ್‌ಗಳಿಗೆ ಹಾನಿ ಉಂಟು ಮಾಡುವ ಸಾಧ್ಯತೆ ಇದ್ದು, ಇವುಗಳನ್ನು ವರ್ಜಿಸಬೇಕು.
ಅಂತಿಮವಾಗಿ ಆರ್ಥೊಡಾಂಟಿಕ್ಸ್ ಮತ್ತು ಕ್ರೀಡೆ ಜತೆಗೂಡಿ ಸುಂದರ ಮುಖ ಮತ್ತು ನಗುವಿಗೆ ಕಾರಣವಾಗುವುದು ಮಾತ್ರವಲ್ಲದೆ ಆಟದ ಅಂಗಣದ ಒಳಗೆ ಮತ್ತು ಹೊರಗೆ ಕ್ರೀಡಾಳುವಿನ ಆತ್ಮವಿಶ್ವಾಸ ವರ್ಧನೆ, ಗರಿಷ್ಠ ಮಟ್ಟದ ದಂತ ಆರೋಗ್ಯಕ್ಕೆ ಕಾರಣವಾಗುತ್ತವೆ.
ಇಷ್ಟು ಮಾತ್ರವಲ್ಲದೆ ನಿಮ್ಮ ತರಬೇತಿದಾರರು ಮತ್ತು ತಂಡದ ಸದಸ್ಯರ ಜತೆಗೆ ನಿಮ್ಮ ಆರ್ಥೊಡಾಂಟಿಕ್ ಚಿಕಿತ್ಸೆ ಮತ್ತು ನೀವು ಧರಿಸಿರುವ ಆರ್ಥೊಡಾಂಟಿಕ್ ಸಾಮಗ್ರಿಗಳ ಬಗ್ಗೆ ಮುಕ್ತವಾದ ಮಾತುಕತೆ ನಡೆಸುವುದರಿಂದ ಅವರ ತಿಳಿವಳಿಕೆ ಹೆಚ್ಚುತ್ತದೆ, ನಿಮಗೆ ಹೆಚ್ಚುವರಿ ಬೆಂಬಲ ಸಿಗುತ್ತದೆ; ಇವೆಲ್ಲವೂ ಜತೆಗೂಡಿ ಸುರಕ್ಷೆಯೇ ಮೊದಲ ಆದ್ಯತೆಯಾಗಿರುವ ವಾತಾವರಣ ನಿರ್ಮಾಣಕ್ಕೆ ಕಾರಣವಾಗುತ್ತದೆ. ಆರ್ಥೊಡಾಂಟಿಕ್ ಚಿಕಿತ್ಸೆ ಪಡೆಯುತ್ತಿರುವ ಸಂದರ್ಭದಲ್ಲಿ ಆಟೋಟಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದೇ ಆದರೆ ನೀವು ನಿಮ್ಮ ಸುರಕ್ಷೆಯನ್ನು ಕಾಯ್ದುಕೊಂಡು ಬಾಯಿಯ ಆರೋಗ್ಯವನ್ನು ರಕ್ಷಿಸಿಕೊಳ್ಳಲು ಸ್ವಲ್ಪ ಹೆಚ್ಚುವರಿ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಆರ್ಥೊಡಾಂಟಿಕ್ ಆರೈಕೆಯನ್ನು ಮೊದಲ ಆದ್ಯತೆಯಾಗಿ ಇರಿಸಿಕೊಂಡು ರಕ್ಷಣಾತ್ಮಕ ಕ್ರಮಗಳನ್ನು ಮತ್ತು ಪರಿಣತರ ಮಾರ್ಗದರ್ಶನವನ್ನು ಅನುಸರಿಸುವ ಮೂಲಕ ಕ್ರೀಡಾಳುಗಳು ಆಟೋಟಗಳ ಲಾಭಗಳನ್ನು ಪಡೆಯುವುದರ ಜತೆಗೆ ವಿಜಯ ನಗುವನ್ನು ಅರಳಿಸಬಹುದಾಗಿದೆ.
– ಡಾ| ರಮ್ಯಾ ವಿಜೇತಾ ಜತ್ತನ್ನ ರೀಡರ್, ಆರ್ಥೊಡಾಂಟಿಕ್ಸ್ ಮತ್ತು ಡೆಂಟೊಫೇಶಿಯಲ್ ಆರ್ಥೊಡಾಂಟಿಕ್ಸ್ ವಿಭಾಗ, ಎಂಸಿಒಡಿಎಸ್, ಮಾಹೆ, ಮಣಿಪಾಲ