Advertisement

ಅಡೂರು ಜನತೆಯ ಮೂಲ ದಾಖಲೆಗಳೇ ನಾಪತ್ತೆ!

04:20 AM Jan 14, 2019 | Team Udayavani |

ಸುಳ್ಯ : ಸರಕಾರದ ಯಾವುದೇ ಸವಲತ್ತು ಪಡೆಯಬೇಕಿದ್ದರೂ ಮೂಲ ದಾಖಲೆ ಪತ್ರಗಳು ಬೇಕು. ಆದರೆ ಅದು ಎಲ್ಲಿದೆ ಎನ್ನುವುದೇ ಇವರಿಗೆ ಗೊತ್ತಿಲ್ಲ. ಕೇರಳ- ಕರ್ನಾಟಕದ ಗಡಿಭಾಗ ಅಡೂರು ಗ್ರಾಮದ 500ಕ್ಕೂ ಅಧಿಕ ಕುಟುಂಬಗಳು ಇಂದಿಗೂ ಸರಕಾರಿ ಕಚೇರಿಗಳಿಗೆ ಅಲೆದಾಡುತ್ತಲೇ ಇದ್ದಾರೆ. ಗ್ರಾಮದವರ ಮೂಲ ದಾಖಲೆ ಪತ್ರಗಳೇ ನಾಪತ್ತೆಯಾಗಿವೆ!

Advertisement

ಅಡೂರು ಗ್ರಾಮವು ಮೂಲತಃ ಕರ್ನಾಟಕ ರಾಜ್ಯದಲ್ಲಿತ್ತು. ಪ್ರಾಂತ್ಯವಾರು ವಿಭಜನೆಯ ಅನಂತರ ಕೇರಳ ರಾಜ್ಯಕ್ಕೆ ಸೇರ್ಪಡೆಗೊಂಡಿತ್ತು. 1951ರ ಸುಮಾರಿಗೆ ಅಡೂರು ಗ್ರಾಮದ ಎಲ್ಲ ಜಮೀನಿನ ದಾಖಲೆಗಳು ಕರ್ನಾಟಕದಲ್ಲೇ ಇದ್ದವು. ಈ ಗ್ರಾಮವು ಪುತ್ತೂರು ತಾಲೂಕಿನ ಅಧೀನಕ್ಕೆ ಒಳಪಟ್ಟಿತ್ತು. ಅನಂತರ ಸುಳ್ಯ ತಾಲೂಕು ರಚನೆಯಾದಾಗ ಅಡೂರು ಕೇರಳ ರಾಜ್ಯಕ್ಕೆ ಸೇರ್ಪಡೆಗೊಂಡಿತ್ತು. ಆದರೆ ಮೂಲ ದಾಖಲೆಗಳು ಸುಳ್ಯ ತಾಲೂಕು ಕಚೇರಿ ಹಾಗೂ ಉಪನೊಂದಣಾಧಿಕಾರಿಯವರ ಕಚೇರಿಯಲ್ಲಿ ಬಾಕಿಯಾಗಿದ್ದವು.

ಸ್ಪಷ್ಟ ಮಾಹಿತಿಯೇ ಇಲ್ಲ!
ಇದರಿಂದ ಅಡೂರು ಗ್ರಾಮದ ಕೆಲವು ಗ್ರಾಮಸ್ಥರಿಗೆ ತಮ್ಮ ಜಮೀನಿನ ದಾಖಲೆಗಳಿಲ್ಲದೆ ಯಾವುದೇ ಕೆಲಸವನ್ನು ಮಾಡಲು ಸಾಧ್ಯವಾಗುತ್ತಿಲ್ಲ. ಮೂಲ ಜಮೀನು ದಾಖಲೆಗಳು, ಮಂಜೂರಾದ ದರ್ಖಾಸ್ತು, ಮಾರಾಟ ಮಾಡಿ ನೋಂದ ಣಿಗೊಂಡ ದಾಖಲೆಗಳು ಯಾವ ಕಚೇರಿ ಯಲ್ಲಿವೆ ಎಂದು ಸ್ಪಷ್ಟ ಮಾಹಿತಿ ಇಲ್ಲ.

6 ದಶಕಗಳಿಂದ ಅಲೆದಾಟ
ಅಡೂರು ಗ್ರಾಮಸ್ಥರು ತಮ್ಮ ಜಮೀನು ದಾಖಲೆಗಳ ಕುರಿತು ಕೇರಳದ ಕಾಸರ ಗೋಡು ಕಚೇರಿಯನ್ನು ಸಂಪರ್ಕಿ ಸಿದಾಗ ಅಡೂರು ಗ್ರಾಮಕ್ಕೆ ಸೇರಿದ ಕಡತಗಳು ನಮ್ಮ ಕಚೇರಿಯಲ್ಲಿ ಲಭ್ಯವಿಲ್ಲ. ನೀವು ಸುಳ್ಯ ತಾ| ಕಚೇರಿ ಅಥವಾ ಉಪನೋಂದಣಿ ಕಚೇರಿಗೆ ವಿಚಾರಿಸಿ ಎಂದು ಹೇಳುತ್ತಾರೆ. ಸುಳ್ಯ ಕಚೇರಿ ಯಲ್ಲಿ ವಿಚಾರಿಸಿದರೆ ನಿಮ್ಮ ದಾಖಲೆಗಳು ಎಲ್ಲಿವೆ ಎನ್ನುವುದು ಗೊತ್ತಿಲ್ಲ ಎಂಬ ಉತ್ತರ ಸಿಗುತ್ತದೆ. ತಮ್ಮ ದಾಖಲೆ ಪ್ರತಿಗಳು ಎಲ್ಲಿವೆ ಎನ್ನುವುದು ತಿಳಿಯದ ಗ್ರಾಮಸ್ಥರು ಆರು ದಶಕಗಳಿಂದ ಕಾಸರಗೋಡು- ಕರ್ನಾಟಕ ಪ್ರದೇಶಗಳಲ್ಲಿ ಅಲೆದಾಡುತ್ತಲೇ ಇದ್ದಾರೆ.

500ಕ್ಕೂ ಅಧಿಕ ಕುಟುಂಬಗಳು ಸಂಕಷ್ಟದಲ್ಲಿ
ಅಡೂರಿನಿಂದ ಸುಳ್ಯಕ್ಕೆ 25 ಕಿ.ಮೀ. ಕ್ರಮಿಸಬೇಕು. ಬಂದು ಹೋಗಲು ಸೂಕ್ತ ಸಾರಿಗೆ ವ್ಯವಸ್ಥೆಗಳು ಇಲ್ಲಿಲ್ಲ. ದಿನಪೂರ್ತಿ ಅಲೆದಾಡುವುದಕ್ಕೆ ಸಮಯ ಹಿಡಿಯುತ್ತದೆ. ಅಡೂರು ಗ್ರಾಮದ ದೇಲಂಪಾಡಿ, ಕಾಟೆಕಜೆ, ಸಾಮ್ವೆಕೊಚ್ಚಿ, ಪಾಂಡಿ, ದೇವರಡ್ಕ, ಬಳ್ಳೇರಿ, ಬಳೆಯಂತಡ್ಕ, ಬಾವಯ್ಯಮೂಲೆ, ಮಂಡೆಬೆಟ್ಟು ಕಯ್ಯಣ್ಣಿ, ಸಂಜೆಕಡವು, ಏವಂದೂರು, ಕಡುವನ, ಗಂಧದ ಕಾಡು, ಪಯರಡ್ಕ, ಪಲ್ಲಂಗೋಡು, ಅಣ್ಣಪ್ಪಾಡಿ ಮೊದಲಾದ ಗ್ರಾಮಗಳ 500ಕ್ಕೂ ಅಧಿಕ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ.

Advertisement

ಕಂದಾಯ ಸಚಿವರಿಗೆ ಮನವಿ
ಅಡೂರಿನಲ್ಲಿ ಬಹುಜನರು ಮಲಯಾಳಂ ಭಾಷಿಗರಾಗಿದ್ದು, ಸುಳ್ಯದಲ್ಲಿ ಕಚೇರಿ ವ್ಯವಹಾರಗಳು ನಡೆಸಲು ಅಸಮರ್ಥರಾದ ಕಾರಣ ಸುಳ್ಯದಲ್ಲಿ ಲಭ್ಯವಿರುವ ಅಡೂರು ಗ್ರಾಮದ ದಾಖಲೆಗಳನ್ನು ಕಾಸರಗೋಡು ತಾಲೂಕು ಕಚೇರಿಗೆ ವರ್ಗಾಯಿಸಲು ಕರ್ನಾಟಕ ರಾಜ್ಯ ಕಂದಾಯ ಸಚಿವ ಆರ್‌.ವಿ. ದೇಶಪಾಂಡೆ ಅವರಿಗೆ ಗ್ರಾಮಸ್ಥರು ಮನವಿ ಮಾಡಿದ್ದಾರೆ. ಸಂಬಂಧಪಟ್ಟ ಕಂದಾಯ ಅಧಿಕಾರಿಗಳಿಗೂ ಮನವಿ ಕಳಹಿಸಿಕೊಟ್ಟಿದ್ದಾರೆ.

ಸಮಸ್ಯೆ ಬಗೆಹರಿಯಲಿ
ಅಡೂರು ಗ್ರಾಮಗಳ ದಾಖಲೆ ಪತ್ರಗಳು ಸಿಗದೆ ಬಹಳಷ್ಟು ತೊಂದರೆಯಾಗುತ್ತಿದೆ. ಹೀಗಾಗಿ 1952ರ ಹಿಂದಿನ ಅಡೂರು ಗ್ರಾಮಸ್ಥರ ದಾಖಲೆ ಪತ್ರಗಳನ್ನು ಕಾಸರಗೋಡು ತಾಲೂಕು ಕಚೇರಿಗೆ ಹಸ್ತಾಂತರಿಸುವ ಕೆಲಸವಾಗಬೇಕು. ಈ ಕುರಿತು ಕಂದಾಯ ಸಚಿವರು ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರ ಬರೆದು ಒತ್ತಾಯಿಸಿದ್ದೇವೆ. ಇನ್ನಾದರೂ ಸಮಸ್ಯೆ ಬಗೆಹರಿಯಬಹುದು ಎನ್ನುವ ವಿಶ್ವಾಸ ಇರಿಸಿಕೊಂಡಿದ್ದೇವೆ.
 -ಜಿ. ಕುಂಞಿರಾಮನ್‌, ಅಡೂರು

ಅಲೆದಾಟವೇ ಆಯಿತು
ಸುದೀರ್ಘ‌ ಅವಧಿಯಿಂದ ನಮ್ಮ ದಾಖಲೆ ಪತ್ರಗಳಿಗೆ ಅಲೆದಾಡುತ್ತಿದ್ದೇವೆ. ತಿಂಗಳಿಗೆ ಹತ್ತಾರು ಭಾರಿ ಕಾಸರಗೋಡು, ಸುಳ್ಯ ಕಚೇರಿಗೆ ತೆರಳುತ್ತೇವೆ. ಸರಕಾರಿ ಸವಲತ್ತು ಇಲ್ಲ. ಇತ್ತ ಕಡೆ ಕೆಲಸವೂ ಇಲ್ಲ ಎನ್ನುವಂತಾಗಿದೆ. ನಮ್ಮ ಸಮಸ್ಯೆ ಒಂದು ಬಾರಿ ಬಗೆಹರಿಸಿ ಎಂದು ಅಧಿಕಾರಿಗಳ ಬಳಿ ಭಿನ್ನವಿಸಿಕೊಳ್ಳುತ್ತಿದ್ದೇವೆ.
 –ವಾಮನ ನಾಯ್ಕ ಕಾಟಿಕಜೆ,
   ಸಂತ್ರಸ್ತ

ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next