ಕಲಬುರಗಿ: ದೇಶದಲ್ಲಿರುವ ಅಂಗನ ವಾಡಿಗಳನ್ನು ಮುಚ್ಚುವ ಕೇಂದ್ರ ಸರ್ಕಾರದ ಹುನ್ನಾರವನ್ನು ನಾವು ವಿರೋಧಿಸಬೇಕು. ಇಲ್ಲದಿದ್ದರೇ ಮಕ್ಕಳ ಭವಿಷ್ಯಕ್ಕೆ ನಾವೇ ಅಪಾಯ ತಂದೊಡ್ಡಿದಂತಾಗುತ್ತದೆ ಎಂದು ಅಂಗನವಾಡಿ ನೌಕರರ ಸಂಘದ ರಾಜ್ಯಾಧ್ಯಕ್ಷೆ ವರಲಕ್ಷ್ಮೀ ಎಚ್ಚರಿಸಿದರು.
ನಗರದ ಕನ್ನಡ ಭವನದಲ್ಲಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ಹಮ್ಮಿಕೊಂಡಿದ್ದ 9ನೇ ಜಿಲ್ಲಾ ಸಮ್ಮೇಳನಕ್ಕೆ ಚಾಲನೆ ನೀಡಿ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.
ಹೊಸ ಶಿಕ್ಷಣ ನೀತಿ ಅಡಿಯಲ್ಲಿ ಅಂಗನವಾಡಿಗಳನ್ನು ಪೂರ್ತಿಯಾಗಿ ಇಲ್ಲವಾಗಿಸುವ ಸಂಚು ನಡೆದಿದೆ. ಆರಂಭಿಕ ಶಿಕ್ಷಣ ತರಬೇತಿ ಅಂಗನವಾಡಿಗಳಿಂದ ಪಡೆಯುವ ಮಕ್ಕಳ ವಿಕಾಸಕ್ಕೆ ಅನುಕೂಲ ಎನ್ನುವುದನ್ನು ಒಪ್ಪದಿರುವ ಸರ್ಕಾರದ ನಿಲುವನ್ನು ವಿರೋಧಿಸಬೇಕು ಎಂದರು.
ಅಂಗನವಾಡಿ ನೌಕರರನ್ನು ಕಾಯಂ ಮಾಡಲು ಸರ್ಕಾರ ಹಲವಾರು ವರ್ಷಗಳಿಂದ ಮೀನಾಮೇಷ ಎಣಿಸುತ್ತಿದೆ. ಅಂಗನವಾಡಿ ನೌಕರರಿಗೆ ಪಿಂಚಣಿ ಕೊಡಿ ಎಂದರು. ಸಂಘದ ರಾಜ್ಯ ಕಾರ್ಯಾಧ್ಯಕ್ಷೆ ಶಾಂತಾ ಘಂಟಿ ಮಾತನಾಡಿ, ಜಿಲ್ಲಾ ಮಟ್ಟದಲ್ಲಿ ಸಮ್ಮೇಳನ ಮಾಡುವ ಮೂಲಕ ಸಂಘಟಿತ ಹೋರಾಟ ಮಾಡುತ್ತಿದ್ದೇವೆ. ಹೋರಾಟ ಮಾಡದೇ ಇದ್ದರೆ ನಮಗೆ ಉಳಿಗಾಲವಿಲ್ಲ ಎಂದರು.
ಜನವಾದಿ ಮಹಿಳಾ ಸಂಘಟನೆ ರಾಜ್ಯ ಉಪಾಧ್ಯಕ್ಷೆ ಕೆ.ನೀಲಾ ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ಆಶಾ ಮತ್ತು ಅಂಗನವಾಡಿ ನೌಕರರ ಎದೆಗಾರಿಕೆ ಮತ್ತು ಧೈರ್ಯ ಮೆಚ್ಚುವಂತಹದ್ದು. ಇಂತಹವರಿಗೆ ಸರ್ಕಾರ ಬರಿಗೈಯಲ್ಲಿ ಸನ್ಮಾನಿಸಿತೇ ವಿನಃ ಹಸಿದ ಹೊಟ್ಟೆ ತುಂಬಿಸುವ ನಿಟ್ಟಿನಲ್ಲಿ ಬೋನಸ್, ಹೆಚ್ಚುವರಿ ಸಂಬಳ ನೀಡುವ ಪ್ರಯತ್ನ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾಧ್ಯಕ್ಷೆ ಕಾ.ಗೌರಮ್ಮ ಪಾಟೀಲ ಮಾತನಾಡಿದರು. ಜಿಲ್ಲಾ ಖಜಾಂಚಿ ಮಹಾದೇವಿ ಕೆ, ಪುಷ್ಪಾ ಆಳಂದ, ದೇವಮ್ಮ ಚಿತ್ತಾಪುರ, ಸಾಬಮ್ಮ ಶಹಾಬಾದ್, ಗಜರಾಬಾಯಿ ಜೇವರ್ಗಿ, ಗೌರಮ್ಮ ಪಾಟೀಲ ಕಲಬುರಗಿ, ರತ್ನ ಕಲಬುರಗಿ ನಗರ, ಬಿಸಮಿಲ್ಲಾ ಇದ್ದರು. ಜಿಲ್ಲೆಯ ಎಲ್ಲ ತಾಲೂಕಿನಿಂದ ಅಂಗನವಾಡಿ ಕಾರ್ಯಕರ್ತೆಯರು ಆಗಮಿಸಿದ್ದರು.