ಬೆಂಗಳೂರು: ರಾಜ್ಯವೇ ಲಾಕ್‌ಡೌನ್ ಆಗಿರುವುದು ಮುಂದೇನು ಎಂಬ ಪ್ರಶ್ನೆ ಕಾಡುತ್ತಿದೆ. ಇಂತಹ ವಿಷಮ ಸ್ಥಿತಿಯಲ್ಲಿ ಸರ್ಕಾರ ಇಂದಿರಾ ಕ್ಯಾಂಟೀನ್‌ನಲ್ಲಿ ಆಹಾರ ನೀಡುತ್ತಿರುವುದು ಪಕ್ಷಾತೀತವಾಗಿ ಮೆಚ್ಚುಗೆ ಗಳಿಸಿದೆ. ಈ ಸಂದರ್ಭದಲ್ಲಿ ಸರ್ಕಾರದೊಂದಿಗೆ ಹಲವು ಸಂಘಟನೆಗಳು ಪೌರಕಾರ್ಮಿಕರು, ಚಿಂದಿ ಆಯುವವರು ಹಾಗೂ ಬಡ ಮತ್ತು ಮಧ್ಯ ವರ್ಗದವರಿಗೆ ಸಹಾಯ ಮಾಡಲು ಮುಂದೆಬಂದಿದ್ದಾರೆ.
ಈ ನಿಟ್ಟಿನಲ್ಲಿ ಹಸಿರು ದಳ ಸಂಸ್ಥೆಯು ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿ ಬೆಂಗಳೂರು ಹಾಗೂ ಮೈಸೂರು, ದಾವಣಗೆರೆ, ಹುಬ್ಬಳ್ಳಿ-ಧಾರವಾಡ ಹಾಗೂ ಚಿಕ್ಕಬಳ್ಳಾಪುರದಲ್ಲಿನ ಚಿಂದಿ ಆಯುವ ಸಾವಿರ ಕುಟುಂಬಗಳಿಗೆ ಸಹಾಯ ಮಾಡಲು ನಿರ್ಧರಿಸಿದೆ. ಈ ಸಂಬಂಧ “ಉದಯವಾಣಿ’ಯೊಂದಿಗೆ ಮಾತನಾಡಿದ ಹಸಿರು ದಳ ಸಹ ಸಂಸ್ಥಾಪಕಿ ನಳಿನಿ ಶೇಖರ್, ಚಿಂದಿ ಆಯುವವರ ಬಳಿ ಸರ್ಕಾರದ ಸೌಲಭ್ಯ ಪಡೆದುಕೊಳ್ಳಲು ಸೂಕ್ತ ದಾಖಲೆ ಮತ್ತು ವಾಸಿಸಲು ಮನೆ ಸಹ ಇಲ್ಲ (ಜೋಪಡಿ ನಿವಾಸಿಗಳು) ಹೀಗಾಗಿ, ನೆರವಾಗಲು ಮುಂದಾಗಿದ್ದೇವೆ ಎಂದರು.
ಅಕ್ಕಿ 5 ಕೆಜಿ, ಬೇಳೆ 2 ಕೆಜಿ, ಸಾಬೂನು 2 ಒಳಗೊಂಡ ಕಿಟ್ ನೀಡಲಿದ್ದೇವೆ. ಅದೇ ರೀತಿ ಒಣತ್ಯಾಜ್ಯ ಸಂಗ್ರಹಣಾ ಕೇಂದ್ರದಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಕಸ ವಿಲೇವಾರಿ ವೇಳೆ ಮಾಸ್ಕ್ ಹಾಗೂ ಗ್ಲೌಸ್‌ಗಳನ್ನು ಎಚ್ಚರಿಕೆಯಿಂದ ವಿಲೇವಾರಿ ಮಾಡುವ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಮೊದಲ ಹಂತದಲ್ಲಿ 550 ರೂ. ಮೌಲ್ಯದ ಕಿಟ್ ನೀಡಲಾಗುತ್ತಿದೆ. ಮುಂದೆ ದಾನಿಗಳು ಹೆಚ್ಚಾದರೆ ಹೆಚ್ಚು ಜನರಿಗೆ ನೆರವಾಗಲಿದ್ದೇವೆ ಎಂದರು.
ಸಹಾಯ ಮಾಡಲು ಇಚ್ಛಿಸುವವರು: www. hasirudala.in/ 9986808866 ಸಂಪರ್ಕಿಸಬಹುದು.
ನಿರ್ಗತಿಕರ ಮೇಲೂ ನಿಗಾ : ಪಾಲಿಕೆ ವ್ಯಾಪ್ತಿಯಲ್ಲಿ ಅಂದಾಜು 4 ಸಾವಿರ ಜನ ನಿರಾಶ್ರಿತರಿದ್ದಾರೆ ಎಂದು ಇತ್ತೀಚಿನ ಸಮೀಕ್ಷಾ ವರದಿಯೊಂದು ಬಹಿರಂಗಪಡಿಸಿತ್ತು. ಅಲ್ಲದೆ, ನಗರದಲ್ಲಿ ನೂರಾರು ಜನ ಭಿಕ್ಷುಕರು ಇರುವುದು ಈಗ ಕೋವಿಡ್ 19 ಸೋಂಕು ಭೀತಿ ಹಿನ್ನೆಲೆಯಲ್ಲಿ ಆತಂಕ ಶುರುವಾಗಿದೆ. ಈ ಬಗ್ಗೆ ಮಾತನಾಡಿದ ಪಾಲಿಕೆ ಆಯುಕ್ತ ಬಿ.ಎಚ್. ಅನಿಲ್‌ಕುಮಾರ್, ಪಾಲಿಕೆ ವ್ಯಾಪ್ತಿಯಲ್ಲಿ 9 ನಿರಾಶ್ರಿತ ಕೇಂದ್ರಗಳಿದ್ದು, ಇಲ್ಲೂ ಕೋವಿಡ್ 19 ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ನಿರಾಶ್ರಿತರು ಈ ವ್ಯವಸ್ಥೆಯನ್ನು ಸದುಪಯೋಗಪಡಿಸಿಕೊಳ್ಳಬೇಕು. ಇನ್ನು ಬಿಕ್ಷುಕರು ಹಾಗೂ ನಿರಾಶ್ರಿತರ ಮೇಲೂ ನಿಗಾ ಇಡಲಾಗಿದೆ. ಸಾರ್ವಜನಿಕರಿಗೆ ಯಾರಾದರು ಸೋಂಕಿನಿಂದ ಬಳಲುತ್ತಿದ್ದಾರೆ ಎಂದು ತಿಳಿದು ಬಂದರೆ ಕೂಡಲೇ ಪಾಲಿಕೆಯ ಗಮನಕ್ಕೆ ತಂದು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.