Advertisement

ಸಮಾಜದ ಅಭಿವೃದ್ಧಿಗೆ ಸಂಘಟನೆ ಬಲಗೊಳಿಸಿ: ಬೊಮ್ಮಾಯಿ ಸಲಹೆ

03:50 PM Jun 26, 2017 | Team Udayavani |

ಹುಬ್ಬಳ್ಳಿ: ಸಮಾಜದ ಅಭಿವೃದ್ಧಿಗೆ ಸಂಘಟನೆ ಅತ್ಯವಶ್ಯವಾಗಿದ್ದು, ಸಂಘಟನೆ ಇನ್ನಷ್ಟು ಬಲಗೊಳ್ಳುವ ಅವಶ್ಯಕತೆ ಇದೆ ಎಂದು ಮಾಜಿ ಸಚಿವ, ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು. ಇಲ್ಲಿನ ನ್ಯೂ ಕಾಟನ್‌ ಮಾರ್ಕೆಟ್‌ ನಲ್ಲಿರುವ ಸಾಂಸ್ಕೃತಿಕ ಭವನದಲ್ಲಿ ಕರ್ನಾಟಕ ರಾಜ್ಯ ಗಾಣಿಗ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ರವಿವಾರ ನಡೆದ ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

Advertisement

ಒಂದು ಸಮಾಜ, ಸಂಘಟನೆ ಬೆಳೆಯಬೇಕಾದರೆ ಅಲ್ಲಿ ಇರುವ ಶಕ್ತಿ ಎಂತಹುದು ಎಂಬುದನ್ನು ಎಲ್ಲರೂ ಅರಿಯಬೇಕು. ಅಂದಾಗ ಮಾತ್ರ ಅದರಿಂದ ಎಲ್ಲರಿಗೂ ಸಹಾಯ-ಸಹಕಾರ ಸಿಗುತ್ತದೆ. ಇಂತಹ ಕಾರ್ಯಕ್ಕೆ ರಾಜ್ಯ ಗಾಣಿಗ ನೌಕರರ ಕ್ಷೇಮಾಭಿವೃದ್ಧಿ ಸಂಘ ಕೈ ಹಾಕುವ ಮೂಲಕ ತಮ್ಮ ಶಕ್ತಿ ಪ್ರದರ್ಶನ ಇಲ್ಲಿ ಮಾಡಿದ್ದಾರೆ ಎಂದರೂ ತಪ್ಪಾಗಲಾರದು ಎಂದು ಹೇಳಿದರು. 

ದೇಶಾದ್ಯಂತ ಗಾಣಿಗ ಸಮಾಜದವರಿದ್ದು, ಇದೊಂದು ಅಖೀಲ ಭಾರತ ಸಮಾಜ ಎನ್ನಬಹುದು. ಪ್ರಾಮಾಣಿಕ ಕೆಲಸ ನಿರ್ವಹಿಸುವ ಯಾವುದಾದರೂ ಸಮಾಜ ಎಂದಾದರೆ ಅದು ಗಾಣಿಗ ಸಮಾಜ. ಇದುವರೆಗೂ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದಂತಹ ಪ್ರಾಮಾಣಿಕ ಸಮಾಜ ಗಾಣಿಗ ಸಮಾಜವಾಗಿದೆ. ಇಂತಹ ಸಮಾಜದಲ್ಲಿ ಹಲವಾರು ಪ್ರತಿಭೆಗಳು ಬೆಳೆಯುತ್ತಿದ್ದು, ಅವುಗಳನ್ನು ಗುರುತಿಸುವ ಮೂಲಕ ಅವರೆಲ್ಲರಿಗೂ ಸನ್ಮಾನಿಸಿ ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ  ಕಾರ್ಯ ಎಂದರು. 

ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ನಿರ್ದೇಶಕರಾದ ಸಮಾಜದ ಮುಖಂಡ ಸಿದ್ರಾಮ ಮನಹಳ್ಳಿ ಮಾತನಾಡಿ, ಸಮಾಜದ ಅಭಿವೃದ್ಧಿಗೆ ಎಲ್ಲರೂ ಮುಂದಾಗಬೇಕು. ಮಕ್ಕಳಿಗೆ ಆಸ್ತಿ ಮಾಡುವ ಬದಲಾಗಿ ಮಕ್ಕಳನ್ನು ಆಸ್ತಿಯನ್ನಾಗಿ ಮಾಡಿ. ಇದರಿಂದ ಇಡೀ ಸಮಾಜವೇ ತಲೆ ಎತ್ತುವಂತಾಗುವುದು ಎಂದರು. 

ಸಂಘದ ಕಾರ್ಯಾಧ್ಯಕ್ಷ ಪಿ.ಎಂ. ತಟ್ಟಿಮನಿ ಮಾತನಾಡಿ, ರಾಜ್ಯ ಗಾಣಿಗ ನೌಕರರ ಕ್ಷೇಮಾಭಿವೃದ್ಧಿ ಸಂಘ ಆರಂಭವಾಗಿ ಒಂದು ವರ್ಷವಾಗಿದೆ. ಇನ್ನು ಹೆಚ್ಚಿನ ಅಭಿವೃದ್ಧಿಯಾಗಬೇಕಾಗಿದೆ. ಸಮಾಜದ ಮಕ್ಕಳಿಗೆ ಉನ್ನತ ಶಿಕ್ಷಣ ಸಿಗುವಂತಾಗಲಿ. ಇಂದು ಇಲ್ಲಿ ಸನ್ಮಾನಿಸಿಕೊಳ್ಳುತ್ತಿರುವ ಮಕ್ಕಳು ಉನ್ನತ ಶಿಕ್ಷಣ ಪಡೆಯುವ ಮೂಲಕ ಸಮಾಜದ ಅಭಿವೃದ್ಧಿಗೆ ಮುಂದಾಗಬೇಕು ಎಂದರು. 

Advertisement

ವಿಧಾನಸಭೆ ಸದಸ್ಯರಾದ ಅರವಿಂದ ಬೆಲ್ಲದ, ರಮೇಶ ಭೂಸನೂರ, ವಿಧಾನ ಪರಿಷತ್‌ ಸದಸ್ಯ ಪ್ರದೀಪ ಶೆಟ್ಟರ,ಪಾಲಿಕೆ ಮಾಜಿ ಸದಸ್ಯ ತಿಪ್ಪಣ್ಣ ಮಜ್ಜಗಿ  ಮಾತನಾಡಿದರು. ಇದೇ ಸಂದರ್ಭದಲ್ಲಿ ನೌಕರರ ಸಂಘದ ಸದಸ್ಯತ್ವಕ್ಕೆ ಚಾಲನೆ ನೀಡಲಾಯಿತು. ನಂತರ ಚರಿತ್ರೆಗೊಂದು ಕಿಟಕಿ ಮಕ್ಕಳ ಕಿರುಹೊತ್ತಿಗೆ ಬಿಡುಗಡೆ ಮಾಡಲಾಯಿತು.

ಎಸ್‌ಎಸ್‌ಎಲ್‌ಸಿಯಲ್ಲಿ 625 ಅಂಕ ಪಡೆದ ಬನಹಟ್ಟಿಯ ಪಲ್ಲವಿ ಶಿರಹಟ್ಟಿ ಸೇರಿದಂತೆ ಹಲವರನ್ನು ಹಾಗೂ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವಿಜಯಪುರ ವನಶ್ರೀ ಸಂಸ್ಥಾನಮಠ ಗಾಣಿಗ ಪೀಠದ ಶ್ರೀ ವೀರಭದ್ರ ಸ್ವಾಮೀಜಿ ಹಾಗೂ ಜಗದ್ಗುರು ದಿಗಂಬರೇಶ್ವರ ಸಂಸ್ಥಾನಮಠದ ಶ್ರೀ ಕಲ್ಲಿನಾಥ ದೇವರು ಸಾನ್ನಿಧ್ಯ ವಹಿಸಿದ್ದರು.

ಮಹಾಪೌರ ಡಿ.ಕೆ. ಚವ್ಹಾಣ, ಅರಣ್ಯ ನಿಗಮದ ಅಧ್ಯಕ್ಷ ನಾಗರಾಜ ಛಬ್ಬಿ, ಆರ್‌.ಬಿ.ಪಾಟೀಲ, ಅಮರಗೊಂಡಪ್ಪ ಮೇಟಿ, ಕೆ.ಎಂ. ಗೆದಗೇರಿ, ಮಹಾಲಿಂಗಪ್ಪ ಜಿಗಳೂರ, ಶಿವರಾಜ ಸಜ್ಜನ, ಪಾಲಿಕೆ ಸದಸ್ಯ ಅಶ್ವಿ‌ನಿ ಮಜ್ಜಗಿ, ಅಂದಾನಪ್ಪ ಸಜ್ಜನ, ಆರ್‌.ರಾಜು, ಎಂ. ಸಿದ್ದಶೆಟ್ಟಿ, ರಾಜೇಂದ್ರ ಸಜ್ಜನ,  ಸುರೇಂದ್ರನಾಥ ಸಜ್ಜನ, ಸುರೇಶ ಸಜ್ಜನ ಸೇರಿದಂತೆ ಮೊದಲಾದವರು ಇದ್ದರು.  

Advertisement

Udayavani is now on Telegram. Click here to join our channel and stay updated with the latest news.

Next