ಬೆಂಗಳೂರು: ಪೇಜ್ ಪ್ರಮುಖ್, ಶಕ್ತಿ ಕೇಂದ್ರ ಇತ್ಯಾದಿ ಹೆಸರುಗಳ ಮೂಲಕ ಸಂಘಟನಾ ವ್ಯವಸ್ಥೆಯಲ್ಲಿ ಹೊಸ ಅಲೆ ಸೃಷ್ಟಿಸಿದ್ದ ಬಿಜೆಪಿ ಈಗ ಪೇಜ್ ಪ್ರಮುಖ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲು ಹೊರಟಿದೆ.
ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಶನಿವಾರ ಈ ವಿಷಯ ತಿಳಿಸಿದರು. ರಾಜ್ಯದಿಂದ ಬೂತ್‌ವರೆಗೂ ಯಾತ್ರೆ ನಡೆಸಲಾಗಿದೆ. ಕಳೆದ ಮೂರು ವರ್ಷಗಳಲ್ಲಿ ಸರ್ವವ್ಯಾಪಿ, ಸರ್ವಸ್ಪರ್ಶಿ ಎಂದು ಎಲ್ಲರನ್ನು ತಲುಪಿದ್ದೇವೆ. ಪೇಜ್ ಪ್ರಮುಖರಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಳ್ಳಲಾಗಿದೆ. ಒಂದು ಪುಟಕ್ಕೆ 6 ಮಂದಿ ಪ್ರಮುಖ್ ನೇಮಕ ಮಾಡಲಾಗಿದೆ ಎಂದು ವಿವರಿಸಿದರು.
ಕೇಂದ್ರ ಸರ್ಕಾರದ ಯೋಜನೆಗಳು ಜನರಿಗೆ ತಲುಪುತ್ತಿದೆ. ಅದನ್ನು ನೋಡಿಕೊಳ್ಳಲು, ಪ್ರತ್ಯೇಕ ತಂಡ ಮಾಡಲಾಗಿದೆ. ಬೂತ್ ಅಧ್ಯಕ್ಷರನ್ನು ಗುರುತಿಸಬೇಕು ಎಂದು ಹೇಳಿದರು.
ಇದನ್ನೂ ಓದಿ:ಆರು ತಿಂಗಳು ಮೊದಲೇ ಕಾಂಗ್ರೆಸ್ ನಿಂದ ಟಿಕೆಟ್ ಘೋಷಣೆ: ಸಿದ್ದರಾಮಯ್ಯ
ಮುಂದಿನ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು, ಮೂರು ತಂಡಗಳಲ್ಲಿ ರಾಜ್ಯ ಪ್ರವಾಸ ಮಾಡಲಾಗಿದೆ. ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮಂಗಳೂರು ವಿಭಾಗದಲ್ಲಿ, ಯಡಿಯೂರಪ್ಪರ ನೇತೃತ್ವದಲ್ಲಿ ಬೆಳಗಾವಿ, ನಾನು ಮತ್ತು ಶೆಟ್ಟರ್ ನೇತೃತ್ವದಲ್ಲಿ ಬಳ್ಳಾರಿ ಭಾಗದಲ್ಲಿ ಯಾತ್ರೆ ನಡೆಸಲಾಗಿದೆ. ಎರಡು ಪ್ರಮುಖ ನಿರ್ಣಯಗಳನ್ನು ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ತೆಗೆದು ಕೊಳ್ಳಲಾಗಿದೆ. ನಮ್ಮ ಸರ್ಕಾರದ ಸಾಧನೆಯನ್ನು ಜನರಿಗೆ ತಲುಪಿಸುವ ಬಗ್ಗೆ ಕಾರ್ಯಕಾರಿಣಿ ಸಭೆಯಲ್ಲಿ ನಿರ್ಣಯ ಮಾಡಲಾಗಿದೆ. ಅಮೃತ ಯೋಜನೆಯನ್ನು ರಾಜ್ಯಾದ್ಯಂತ ತಲುಪಿಸುವ ನಿರ್ಣಯ ಮಾಡಲಾಗಿದೆ ಎಂದು ವಿವರಿಸಿದರು.
ಹಗರಣಗಳಲ್ಲಿ ಕಾಂಗ್ರೆಸ್ ನದ್ದೇ ಸಿಂಹಪಾಲು. ಭ್ರಷ್ಟಾಚಾರದ ಇನ್ನೊಂದು ಹೆಸರು ಕಾಂಗ್ರೆಸ್. ಕಾಂಗ್ರೆಸ್ ಅಧಿಕಾರ ಇಲ್ಲದೇ ಹೋದಾಗ ಚಡಪಡಿಸುತ್ತದೆ. ಕಾಂಗ್ರೆಸ್ ದೇಶದಲ್ಲಿ ಅರಾಜಕತೆ ಸೃಷ್ಠಿಸುತ್ತಿದೆ ಎಂದರು.