ಮಂಡ್ಯ: ಅಧಿಕಾರಿಗಳ ಕಿರುಕುಳ, ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ, ಜಿಲ್ಲೆ ಮತ್ತು ರಾಜ್ಯದಲ್ಲಿ ಲಾರಿ ಮಾಲೀಕರು ಪ್ರತಿಭಟನೆ ನಡೆಸಬೇಕಿದೆ. ಈ ಬಗ್ಗೆ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಫೆಡರೇಷನ್ ಆಫ್ ಕರ್ನಾಟಕ ಲಾರಿ ಓನರ್ ಅಸೋಸಿಯೇಷನ್ ಗೌರವಾಧ್ಯಕ್ಷ ಚೆನ್ನಾರೆಡ್ಡಿ ತಿಳಿಸಿದರು.
ನಗರದ ಎಸ್.ಬಿ.ಸಮುದಾಯ ಭವನದಲ್ಲಿ ಫೆಡರೇಷನ್ ಆಫ್ ಕರ್ನಾಟಕ ಲಾರಿ ಓನರ್ ಅಸೋಸಿಯೇಷನ್ ವತಿಯಿಂದ ನಡೆದ ರಸ್ತೆ ಸುರಕ್ಷತಾ ಸಪ್ತಾಹ ಮತ್ತು ರಾಜ್ಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತನಾಡಿ, ಸಾಲ ಮಾಡಿ ಲಾರಿ ಖರೀದಿಸುತ್ತೇವೆ. ಒಂದು ಕಡೆ ಸಾಲಕ್ಕೆ ಕಂತು, ಬಡ್ಡಿ ಪಾವತಿಸಬೇಕಿದೆ. ಇದರ ನಡುವೆ ಅಧಿಕಾರಿಗಳ ಕಿರು ಕುಳ ಹೆಚ್ಚಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಂಘಟಿತರಾಗಿ ಪ್ರತಿಭಟನೆ ಅನಿವಾರ್ಯ: ಸಾರಿಗೆ ನಿಯಮ ಉಲ್ಲಂಘಿಸಿ ಲಾರಿ ಚಾಲನೆ ಮಾಡು ವುದು. ಅಪಘಾತ ಸೇರಿದಂತೆ ಇತರೆ ಪ್ರಕರಣಗಳಲ್ಲಿ ಚಾಲಕನ ಮೇಲೆ ಪ್ರಕರಣ ದಾಖಲಿಸುತ್ತಾರೆ. ಜೊತೆಗೆ ದಿನ, ವಾರಗಳ ಕಾಲ ಲಾರಿಯನ್ನು ಠಾಣೆ ಬಳಿ ನಿಲ್ಲಿಸಿರುತ್ತಾರೆ. ಚಾಲಕ ತಪ್ಪು ಮಾಡಿರುತ್ತಾನೆ. ಆದರೆ, ಲಾರಿ ಮಾಲೀಕರು ತೊಂದರೆ ಅನುಭವಿಸಬೇಕಾಗಿದೆ. ಕಾನೂನಿನಲ್ಲಿ ಇಂತಹದ್ದು ಇಲ್ಲದಿದ್ದರೂ, ಅಧಿಕಾರಿಗಳು ಕಿರುಕುಳ ನೀಡಲು, ಲಂಚ ಪಡೆಯುವುದಕ್ಕೆ ಇಂತಹ ಧೋರಣೆ ಅನುಸರಿಸುತ್ತಾರೆ. ಈ ಬಗ್ಗೆ ನಾವು ಒಗ್ಗಟ್ಟಾಗಿ ಸಂಘಟಿತರಾಗುವ ಮೂಲಕ ಪ್ರತಿಭಟನೆ ನಡೆಸುವುದು ಅನಿವಾರ್ಯ ಎಂದರು.
ಈ ಬಗ್ಗೆ ಸಭೆ ಸೇರಿ ಜಿಲ್ಲಾ ಕೇಂದ್ರಗಳಲ್ಲಿ ಒಂದು ದಿನ ಎಲ್ಲರೂ ಒಗ್ಗೂಡಿ ಪ್ರತಿಭಟನೆ ನಡೆಸಿ, ಸಂಬಂಧಿಸಿದವರಿಗೆ ಮನವಿ ಸಲ್ಲಿಸುವುದು. ಬೆಂಗಳೂರಿನಲ್ಲೂ ಒಂದು ದಿನಗಳ ರಾಜ್ಯಾದ್ಯಂತ ಎಲ್ಲ ಲಾರಿ ಮಾಲೀಕರೂ ಒಟ್ಟಾಗಿ ಪ್ರತಿಭಟಿಸಿ ಮನವಿ ಸಲ್ಲಿಸಬೇಕು. ಈ ಬಗ್ಗೆ ನಿರ್ಣಯ ಕೈಗೊಂಡು ತಿಳಿಸಲಾಗುವುದು ಎಂದು ಹೇಳಿದರು.
ನಮಗೆ ಸಮಯ ನೀಡಿಲ್ಲ: ಸಮಸ್ಯೆ ಮತ್ತು ಬೇಡಿಕೆ ಕುರಿತಂತೆ ಸರ್ಕಾರದ ಗಮನಕ್ಕೆ ತರಲು ಸಂಬಂಧಿಸಿದ ಸಾರಿಗೆ ಸಚಿವರು, ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಅವರು ಇನ್ನೂ ನಮಗೆ ಸಮಯ ನೀಡಿಲ್ಲ. ನಾವು ಅವರೊಂದಿಗೆ ಚರ್ಚಿಸಿ, ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲೂ ಕಾರ್ಯೋನ್ಮುಖರಾಗಿದ್ದೇವೆ ಎಂದು ತಿಳಿಸಿದರು.
ಟೋಲ್ ಸಂಗ್ರಹಕ್ಕೆ ಆಕ್ಷೇಪವಿಲ್ಲ: ಇತ್ತೀಚಿನ ದಿನಗಳಲ್ಲಿ ಡೀಸೆಲ್‌ಗಿಂತಲೂ ಟೋಲ್ ಬೆಲೆ ದುಬಾರಿಯಾಗಿದೆ. ಟೋಲ್ ಸಂಗ್ರಹದಲ್ಲಿ ನಮ್ಮ ಆಕ್ಷೇಪವಿಲ್ಲ. ಆದರೆ, ಕೆಲ ನಿಯಮ ಸಡಿಲಗೊಳಿಸುವ ಮೂಲಕ ನಮಗೂ ಅನುಕೂಲ ಕಲ್ಪಿಸಬೇಕು. ನಾವೂ ಅಗತ್ಯ ವಸ್ತುಗಳ ಕಾಯ್ದೆ ಒಳಪಡುತ್ತೇವೆ. ಸಾರ್ವಜನಿಕವಾಗಿ ನಮಗೂ ಜವಾಬ್ದಾರಿ ಇರುತ್ತದೆ. ಇದನ್ನು ಮನಗಂಡು ನಿರ್ಧಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಹಿರಿಯ ಲಾರಿ ಮಾಲೀಕರನ್ನು ಅಭಿನಂದಿಸಲಾಯಿತು. ಮಾಜಿ ಸಚಿವ ಎಂ.ಎಸ್.ಆತ್ಮಾನಂದ, ಫೆಡರೇಷನ್ ಅಧ್ಯಕ್ಷ ಸಿ.ನವೀನ್‌ರೆಡ್ಡಿ, ಲಾರಿ ಮಾಲೀಕರ ಸಂಘದ ಅಧ್ಯಕ್ಷ ಎಂ.ಎಸ್.ಸತ್ಯಾನಂದ, ಉಪಾಧ್ಯಕ್ಷ ಎಚ್.ಎಸ್.ಸಂಜಯ್ ಕುಮಾರ್, ಎಸ್.ಯೋಗೇಶ್, ಪದಾಧಿಕಾರಿಗಳಾದ ಎಂ.ಎಸ್. ವೆಂಕಟೇಶ್ ಬಾಬು, ಶ್ರೀನಿವಾಸ್, ಸುರೇಶ, ಮನ್ಸೂರ್ ಅಹಮದ್, ಓಂ ಪ್ರಕಾಶ್, ಚಂದ್ರ, ಕೃಷ್ಣಮೂರ್ತಿ, ಮಂಚೇಗೌಡ ಹಾಜರಿದ್ದರು.