ಕಟಪಾಡಿ: ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣವನ್ನು ನೀಡಲಾಗುತ್ತಿದೆ. ನಿಷ್ಣಾತ ಶಿಕ್ಷಕ ವರ್ಗವಿದೆ. ಸರಕಾರದಿಂದ ಕೊಡಮಾಡಲ್ಪಟ್ಟ ಸೌಲಭ್ಯಗಳಿವೆ. ಇವೆಲ್ಲವನ್ನೂ ಸದು ಪಯೋಗಪಡಿಸಿಕೊಂಡು ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಉನ್ನತ ಸಾಧಕರಾಗಬೇಕು. ಅದರೊಂದಿಗೆ ಪೋಷಕರು ಸಂಸ್ಥೆಯ ಜೊತೆ ಕೈಜೋಡಿಸಿದೆ ವಿದ್ಯಾಸಂಸ್ಥೆಯ ಅಭಿವೃದ್ಧಿ ಸಾಧ್ಯ ಎಂದು ಉದ್ಯಾವರ ಸರಕಾರಿ ಪ.ಪೂ. ಕಾಲೇಜಿನ ಪ್ರೌಢಶಾಲಾ ವಿಭಾಗದ ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಸಂತೋಷ್ ಸುವರ್ಣ ಬೊಳೆj ಹೇಳಿದರು.
ಜೂ.19ರಂದು ಉದ್ಯಾವರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ರಕ್ಷಕ-ಶಿಕ್ಷಕ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ರಕ್ಷಕ-ಶಿಕ್ಷಕ ಸಂಘದ ವಾರ್ಷಿಕ ಆಯ-ವ್ಯಯಗಳ ಲೆಕ್ಕಾಚಾರ ಮಂಡನೆಗೆ ಸಭೆಯು ಸರ್ವಾನುಮತದಿಂದ ಅನುಮೋದನೆ ನೀಡಿತು. ನೂತನ ಕಾರ್ಯಕಾರಿ ಸಮಿತಿ ರಚನೆಯಾಯಿತು.
ಅಧ್ಯಕ್ಷರು, ಉಪಾಧ್ಯಕ್ಷರ ಸಹಿತ ಪದಾಧಿಕಾರಿಗಳ ಆಯ್ಕೆ ಹಾಗೂ ಶಿಕ್ಷಕ ರಕ್ಷಕ ಸಂಘದ ಸದಸ್ಯರುಗಳಾಗಿ 8ನೇ ತರಗತಿ ವಿದ್ಯಾರ್ಥಿಗಳ ಹತ್ತು ಪೋಷಕರು, 9ನೇ ತರಗತಿ ವಿದ್ಯಾರ್ಥಿಗಳ ನಾಲ್ವರು ಪೋಷಕರು, 10ನೇ ತರಗತಿ ವಿದ್ಯಾರ್ಥಿಗಳ ಮೂವರು ಪೋಷಕರು, ಪ್ರಥಮ ಪಿ.ಯು.ಸಿ. ವಿಭಾಗದಿಂದ ನಾಲ್ವರು ಪೋಷಕರು, ದ್ವಿತೀಯ ಪಿಯುಸಿ ವಿಭಾಗದಿಂದ ಮೂವರು ಪೋಷಕರನ್ನು ಆಯ್ಕೆ ಮಾಡಲಾಯಿತು.
ಉದ್ಯಾವರ ಗ್ರಾ.ಪಂ. ಅಧ್ಯಕ್ಷೆ ಸುಗಂಧಿಶೇಖರ್, ತಾಲೂಕು ಪಂಚಾಯತ್ ಸದಸ್ಯೆ ರಜನಿ ಆರ್ ಅಂಚನ್, ಸಿ.ಬಿ.ಸಿ. ಸದಸ್ಯ ಪ್ರತಾಪ್ ಕುಮಾರ್, ಪಿಟಿಎ ಅಧ್ಯಕ್ಷೆ ಪೂರ್ಣಿಮಾ ದಿನೇಶ್, ಉಪಾಧ್ಯಕ್ಷ ಗುರುಚಂದ್ರ ಸಾಲ್ಯಾನ್, ಖಜಾಂಚಿ ರತ್ನಾ ಆಚಾರ್ಯ, ಎಸ್‌ಡಿಎಂಸಿ ಸದಸ್ಯ ಜಗನ್ಮೋಹನ್, ಕಾಲೇಜು ಪ್ರಾಂಶುಪಾಲ ಕಿಶೋರ್ ಕುಮಾರ್ ಎಸ್., ಪ್ರೌಢಶಾಲಾ ಮುಖ್ಯ ಶಿಕ್ಷಕಿ ಮೂಕಾಂಬೆ ವೇದಿಕೆಯಲ್ಲಿದ್ದರು.
ಸುಭಾಸ್ ಚೌಹಾಣ್ ಸ್ವಾಗತಿಸಿ ವರದಿ ಮಂಡಿಸಿದರು. ಶಿಕ್ಷಕ ವೃಂದ, ಉಪಾನ್ಯಾಸಕರು, ಪೋಷಕರು, ಹೆತ್ತವರು ಸಭೆಯಲ್ಲಿ ಉಪಸ್ಥಿತರಿದ್ದರು.