Advertisement
ವಿವಿಧ ರಾಸಾಯನಿಕ ಗೊಬ್ಬರ ಬಳಸಿ ನಾವು ತಿನ್ನುವ ಎಲ್ಲ ಆಹಾರ ಪದಾರ್ಥಗಳನ್ನು ವಿಷಯುಕ್ತ ಮಾಡುವ ಇತರ ಕೃಷಿಕರಿಗೆ ಇವರು ಮಾದರಿಯಾಗಿದ್ದಾರೆ. ಸಾವಯವ ಗೊಬ್ಬರ ಬಳಸಿ ವಿಷಮುಕ್ತ ತರಕಾರಿ ಬೆಳೆಯುವುದರೊಂದಿಗೆ ಮನೆಯ ಪಕ್ಕದಲ್ಲಿರುವ ದೈವದ ಅಂಗಳದಲ್ಲಿ ತಾಜಾ ತರಕಾರಿ ಬೆಳೆದು ಮಾದರಿ ಕೃಷಿಕ ಎನಿಸಿಕೊಂಡಿದ್ದಾರೆ.
ಕಳೆದ ಹತ್ತು ವರ್ಷಗಳಿಂದ ಸಾವಯವ ಗೊಬ್ಬರ ಬಳಸಿ ತರಕಾರಿ ಕೃಷಿ ಮಾಡುತ್ತಾ ಪರಿಸರದ ಜನತೆಗೆ ಉತ್ತಮ ತರಕಾರಿ ನೀಡುತ್ತಿರುವ ಸಂಜೀವ ಗೌಡ ಅವರು ತಮ್ಮ ಮನೆಯ ಪಕ್ಕ ಇರುವ ಗ್ರಾಮದೈವ ಶ್ರೀದೇವಿ ಉಳ್ಳಾಲ್ತಿ ಉಳ್ಳಾಕ್ಲು ದೈವದ ಅಂಗಳದಲ್ಲಿ ತರಕಾರಿ ಬೆಳೆದಿದ್ದಾರೆ. ದೈವದ ಅಂಗಳದಲ್ಲಿ ಸುಮಾರು 200 ಬುಡ ಬೆಂಡೆಕಾಯಿ ಗಿಡಗಳು ನಳನಳಿಸುತ್ತಿವೆ. ಇದರೊಂದಿಗೆ ಹೀರೆ, ಸೌತೆಕಾಯಿ, ಅಲಸಂಡೆ, ಕುಂಬಳಕಾಯಿ, ಪಡವಲಕಾಯಿ, ಚೀನಿಕಾಯಿ ಮೊದಲಾದ ತರಕಾರಿ ಬೆಳೆಗಳನ್ನು ಬೆಳೆದು ಅದ್ಭುತ ಫಸಲು ಪಡೆಯುತ್ತಿದ್ದಾರೆ. ಆದಾಯ ದೈವದ ತಂಬಿಲ ಸೇವೆಗೆ
ಮನೆಯ ಸುತ್ತಮುತ್ತ ಸುಮಾರು ಒಂದು ಎಕರೆ ಪ್ರದೇಶದಲ್ಲಿ ಮಳೆಗಾಲದಲ್ಲಿ ವಿವಿಧ ಬಗೆಯ ತರಕಾರಿಗಳನ್ನು ಬೆಳೆಸುತ್ತಾರೆ ಸಂಜೀವ ಗೌಡರು. ಈ ಬಾರಿ ಮಾತ್ರ ದೈವದ ಅಂಗಳದಲ್ಲಿ ತರಕಾರಿ ಬೆಳೆದಿದ್ದಾರೆ. ಇಲ್ಲಿ ಬೆಳೆದ ತರಕಾರಿಯಿಂದ ಬರುವ ಆದಾಯವನ್ನು ದೈವದ ತಂಬಿಲ ಸೇವೆಗಳಿಗೆ ಬಳಸುವುದು ಇವರ ಉದ್ದೇಶವಾಗಿದೆ. ದೈವದ ದೀಪಾವಳಿ ಹಾಗೂ ವಾರ್ಷಿಕ ತಂಬಿಲಕ್ಕೆ ತರಕಾರಿ ಆದಾಯವನ್ನೇ ಮೂಲವನ್ನಾಗಿರಿಸಿಕೊಂಡು ಬೆಳೆ ಬೆಳೆದಿದ್ದಾರೆ.
Related Articles
ಮೂರು ಎಕರೆ ಜಾಗವನ್ನೆಲ್ಲ ತೋಟವನ್ನಾಗಿ ಮಾರ್ಪಟು ಮಾಡಿದ್ದಾರೆ. ಎರಡು ಎಕರೆ ಜಾಗದಲ್ಲಿ ಅಡಿಕೆ, ತೆಂಗು, ಗೇರು, ಮಾವು, ಸಾಗುವಾನಿ, ಬಾಳೆ, ಅನಾನಸು, ಕೊಕೊ ಮೊದಲಾದ ಮಿಶ್ರ ಬೆಳೆಗಳನ್ನು ಬೆಳೆಸಿದ್ದಾರೆ. ಉಳಿದ ಒಂದು ಎಕರೆಯಲ್ಲಿ ತರಕಾರಿಗಳ ಬಳ್ಳಿಗಳು ನಳನಳಿಸುತ್ತಲಿದೆ. ಈ ತರಕಾರಿ ತೋಟದಲ್ಲಿ ಸುಮಾರು 30ಕ್ಕೂ ಹೆಚ್ಚು ಬಗೆಯ ತರಕಾರಿಗಳು ಇವೆ. ಬೆಂಡೆಕಾಯಿ (ಬಿಳಿ, ಹಸಿರು, ಬೂದು), ಅಲಸಂಡೆ (ಉದ್ದ, ಗಿಡ್ಡ, ಗಿಡ, ಬಳ್ಳಿ), ಬದನೆ (ಬಿಳಿ, ನೇರಲೆ, ಮುಳ್ಳು ಬದನೆ), ಸೌತೆಕಾಯಿ (ಮುಳ್ಳು ಸೌತೆ, ಗಿಡ್ಡ ಮುಳ್ಳು ಸೌತೆ, ಹಸಿರು, ಬಿಳಿ), ಹಾಗಲಕಾಯಿ (ಉದ್ದ, ಗಿಡ್ಡ, ದಪ್ಪ), ಅರಿವೆ (ಕೆಂಪು, ಬಿಳಿ), ಕುಂಬಳಕಾಯಿ (ಬೂದು, ಹಸಿರು), ಪಡುವಲಕಾಯಿ (ಬಿಳಿ, ಸಣ್ಣ), ಸೋರೆಕಾಯಿ (ಉದ್ದ, ಗಿಡ್ಡ, ಮಹಾರಾಷ್ಟ್ರ ಸೋರೆಕಾಯಿ), ಚೀನಿಕಾಯಿ (ದೊಡ್ಡದು, ಸಣ್ಣದು), ಹೀರೆ (ಉದ್ದ, ಗಿಡ್ಡ, ದಪ್ಪ ಹಾಗೂ ಅತಿ ಸಣ್ಣದು), ಕಾಡು ಹೀರೆ ಹೀಗೆ ತರಹೇವಾರಿ ತರಕಾರಿಗಳು ಕಣ್ಮನ ಸೆಳೆಯುತ್ತವೆ.
Advertisement
ಅಚ್ಚುಕಟ್ಟು ನಾಟಿ ವಿಧಾನತರಕಾರಿಗಳನ್ನು ನಾಟಿ ಮಾಡುವ ವಿಧಾನ ಬಹಳ ಸೂಕ್ಷ್ಮ ಹಾಗೂ ಅಚ್ಚುಕಟ್ಟು. ಆರಂಭದಲ್ಲಿ ಮಣ್ಣನ್ನು ಹದಮಾಡಿ ಅದರಲ್ಲಿನ ಹಾನಿಕಾರಕ ಅಂಶ ಹಾಗೂ ಗೆದ್ದಲುಗಳನ್ನು ಹೋಗಲಾಡಿಸಲು ಸುಣ್ಣ ಹಾಕಿ ಒಂದು ವಾರ ಬಳಿಕ ಮೊದಲೇ ತಯಾರಿಸಿದ ಗಿಡಗಳನ್ನು ನಾಟಿ ಮಾಡಲಾಗುತ್ತದೆ. ಗಿಡಕ್ಕೆ ಜೀವ ಬರುತ್ತಿದ್ದಂತೆ ಮೊದಲ ವಾರದಲ್ಲಿ ಮೇಲ್‌ಗೊಬ್ಬರ ನೀಡುತ್ತಾರೆ. ಎರಡನೇ ವಾರದಲ್ಲಿ ಸಾವಯವ ಗೊಬ್ಬರ ನೀಡುತ್ತಾರೆ. ಕೀಟಗಳ ನಾಶಕ್ಕೆ ಸೀಮ್ ಎನ್ನುವ ಆರ್ಯವೇದಿಕ್ ಎಣ್ಣೆ ಹಾಗೂ ಕಹಿಬೇವಿನ ಎಣ್ಣೆ ಸಿಂಪಡಿಸುತ್ತಾರೆ. ಕೀಟಗಳ ಸಂಹಾರಕ್ಕೆ ಅಲ್ಲಲ್ಲಿ ಮೋಹಕ ಬಲೆಗಳನ್ನು ಇಡುತ್ತಾರೆ. ತರಕಾರಿ ಬೀಜವೂ ಮಾರಾಟ
ಸಾವಯವ ತರಕಾರಿಯಿಂದ ಹೆಸರು ಮಾಡಿರುವ ಗೌಡರು ತರಕಾರಿಗಳ ಬೀಜ ಕೂಡಾ ಮಾರಾಟ ಮಾಡುತ್ತಾರೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖಾಂತರ ಬೀಜಗಳನ್ನು ಮಾರಾಟ ಮಾಡುತ್ತಾರೆ. ಹಲವು ಕೃಷಿ ಮೇಳಗಳಲ್ಲಿ ತರಕಾರಿ ಬೀಜ ಪ್ರದರ್ಶನ ಮಾಡಿದ್ದಾರೆ. ಬೆಂಗಳೂರು, ಮಂಗಳೂರು, ಮಹಾರಾಷ್ಟ್ರ ಮೊದಲಾದೆಡೆ ಕೃಷಿ ಸಮಾವೇಶಗಳಲ್ಲಿ ಭಾಗವಹಿಸಿ ಸಾವಯವ ಕೃಷಿಯ ಬಗ್ಗೆ ಮಾಹಿತಿ ನೀಡಿದ್ದಾರೆ. ರಾಸಾಯನಿಕದ ಬದಲು ಜೀವಾಮೃತ
ಜೀವಾಮೃತ ಸಾವಯವ ಗೊಬ್ಬರ ತಯಾರಿಯನ್ನು ಸಂಜೀವ ಗೌಡರೇ ಮಾಡುತ್ತಾರೆ. ಎರಡು ಕೆ.ಜಿ. ಬೆಲ್ಲ, ಎರಡು ಧಾನ್ಯದ (ಉರ್ದು ಅಥವಾ ಹುರುಳಿ) ಹುಡಿ, 10 ಕೆ.ಜಿ. ಸೆಗಣಿ, 10 ಲೀ. ಗಂಜಳ, 2 ಕೆ.ಜಿ. ಮಣ್ಣಿನ ಹುಡಿ ಇವುಗಳನ್ನೆಲ್ಲ 200 ಲೀ. ನೀರಿನಲ್ಲಿ ಮಿಶ್ರಣ ಮಾಡಿದಾಗ ದ್ರವ ರೂಪದ ಸಾವಯವ ಗೊಬ್ಬರ ತಯಾರಾಗುತ್ತದೆ. ಸಾವಯವ ಗೊಬ್ಬರವನ್ನು ಐದು ದಿನಗಳಿಗೊಮ್ಮೆ ಪ್ರತಿ ಗಿಡಕ್ಕೆ ಅರ್ಧ ಲೀ.ನಷ್ಟು ಹಾಕಿದರೆ ಗಿಡ ಸಮೃದ್ಧವಾಗಿ ಬೆಳೆದು ಉತ್ತಮ ಬೆಳೆ ಬರುತ್ತದೆ. ವಿಶೇಷ ವರದಿ