Advertisement

ಬಸವನಾಡಲ್ಲಿ ಸಾವಯವ ಬೆಲ್ಲ ಉತ್ಪಾದನೆ

05:12 PM Feb 22, 2021 | Nagendra Trasi |

ವಿಜಯಪುರ: ಬರ-ನೆರೆಗಳಂಥ ಪ್ರಕೃತಿ ವಿಕೋಪಗಳ ಮಧ್ಯೆಯೂ ಜಿಲ್ಲೆಯ ರೈತರು ಕೃಷಿಯಲ್ಲಿ ಪ್ರಯೋಗಶೀಲತೆ, ಹೊಸತನಗಳ ಹುಡುಕಾಟದಲ್ಲಿ ತೊಡಗಿದ್ದಾರೆ. ಇದೀಗ ಸಾವಯವದಲ್ಲಿ ಕೃಷಿ-ತೋಟಗಾರಿಕೆ ಕ್ಷೇತ್ರದಲ್ಲಿ ಹತ್ತು ಹಲವು ಪ್ರಯೋಗ ನಡೆಸಿದ್ದು, ಅದರಲ್ಲೂ ಸಾವಯವ ಕಬ್ಬು, ವಿಷಮುಕ್ತ ಬೆಲ್ಲ ಉತ್ಪಾನೆಗೂ ಮುಂದಾಗಿದ್ದಾರೆ. ಪರಿಣಾಮ ಜಿಲ್ಲೆಯ ಸಾವಯವ ಬೆಲ್ಲಕ್ಕೆ ದೇಶದ ಮೂಲೆ ಮೂಲೆಯ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿದೆ.

Advertisement

ಭೀಕರ ಬರದನಾಡಾದ ಕಾರಣಕ್ಕೆ ವಿಜಯಪುರ ಜಿಲ್ಲೆಯಲ್ಲಿ ಬ್ರಿಟಿಷ್‌ ಕಾಲದಲ್ಲಿ ಬರ ನಿವಾರಣೆ ಕೇಂದ್ರ ಸ್ಥಾಪನೆಗೊಂಡಿದೆ. ಆದರೆ ಕಳೆದ ದಶಕದಿಂದ ಜಿಲ್ಲೆಯ ರೈತರ ಜಮೀನಿಗೆ ಕೃಷ್ಣಾ ಮೇಲ್ದಂಡೆ ಯೋಜನೆ ಭಾಗ್ಯದಿಂದಾಗಿ ಕೃಷ್ಣೆ ಹರಿಯುತ್ತಿದ್ದಾಳೆ. ಪರಿಣಾಮ ಜಿಲ್ಲೆಯ ಸುಮಾರು 4 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ
ಭೂದೇವಿ ಹಸಿರು ಸೀರೆಯನ್ನುಡಲು ಕಾರಣಗಳಲ್ಲಿ ಕಬ್ಬು ಬೆಳೆಯೂ ಒಂದು.

ವಿಜಯಪುರ ಜಿಲ್ಲೆಯ ನೀರಾವರಿ ಪ್ರದೇಶದಲ್ಲಿ ಪ್ರಮುಖವಾಗಿ ಕಬ್ಬು ಬೆಳೆಗೆ ಆದ್ಯತೆ ನೀಡಿದ್ದು ಸುಮಾರು 60 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗುತ್ತಿದೆ. ಪರಿಣಾಮ ಜಿಲ್ಲೆಯಲ್ಲೀಗ ಸಹಕಾರಿ ಕ್ಷೇತ್ರದಲ್ಲಿ 2 ಹಾಗೂ ಖಾಸಗಿ ಕ್ಷೇತ್ರದಲ್ಲಿ 6 ಸಕ್ಕರೆ ಕಾರ್ಖಾನೆಗಳು ಸಕ್ಕರೆ ಉತ್ಪಾದಿಸುತ್ತಿವೆ. ಇನ್ನೂ ನಾಲ್ಕಾರು ಸಕ್ಕರೆ ಕಾರ್ಖಾನೆಗಳು ಆರಂಭಕ್ಕೆ ಸಿದ್ಧತೆ ನಡೆಸಿವೆ. ಇದರ ಮಧ್ಯೆಯೂ ಜಿಲ್ಲೆಯಲ್ಲಿ ಸಾವಯವ ಕಬ್ಬು ಉತ್ಪಾದನೆ, ಸಾವಯವ ಹಾಗೂ ರಸಾಯನಿಕ ರಹಿತ ಬೆಲ್ಲ ಉತ್ಪಾದಿಸುವ ಸುಮಾರು 10 ಆಲೆಮಗಳು ಜಿಲ್ಲೆಯಲ್ಲಿ ವಿಷಮುಕ್ತ ಬೆಲ್ಲದ ಸವಿ ಉಣಬಡಿಸುತ್ತಿವೆ.

ವಿಜಯಪುರ ಜಿಲ್ಲೆಯಲ್ಲಿ ಎರಡು ದಶಕದ ಹಿಂದೆ ರಸಗೊಬ್ಬರದ ಅಬ್ಬರಕ್ಕೆ ಹೈರಾಣಾಗಿದ್ದ ರೈತರಿಗೆ ಸುಭಾಷ್‌ ಪಾಳೇಕರ ಅವರ ಪರಿಚಯ ಸಾಯವ
ಕ್ರಾಂತಿಗೆ ಕಾರಣವಾಗಿದೆ. ಪರಿಣಾಮ ಸುಮಾರು 2005ರಲ್ಲಿ ಸಾವಯವ ಕೃಷಿಯಲ್ಲಿ ತೊಡಗಿಸಿಕೊಂಡ ಸಿಂದಗಿ ತಾಲೂಕು ಆಹೇರಿ ಗ್ರಾಮದ ಪ್ರಗತಿಪರ ರೈತ
ಗಂಗಾಧರ ಚಿಂಚೋಳಿ ಮೊಟ್ಟ ಮೊದಲು ವಿಷಮುಕ್ತ ಬೆಲ್ಲ ಉತ್ಪಾದನೆಗಾಗಿ ಆಲೆಮನೆ ಕಟ್ಟಿದರು. ಲಕ್ಷಾಂತರ ರೂ. ಸಾಲಮಾಡಿ ನಿರ್ಮಿಸಿದ ಆಲೆಮನೆಯಲ್ಲಿ
ವಿಷಮುಕ್ತವಾಗಿ ಸಾವಯವ ಪದ್ಧತಿಯಲ್ಲೇ ಬೆಳೆದ ಕಬ್ಬು ಬಳಸಿ ವಿಷಮುಕ್ತ ಬೆಲ್ಲ ತಯಾರಿಸಿದರು. ಆದರೆ ಮಾರುಕಟ್ಟೆ ಸಮಸ್ಯೆಯ ಪರಿಣಾಮ ಹೈರಾಣಾಗಿದ್ದಾರೆ.

ತಾವು ಉತ್ಪಾದಿಸಿದ ಸಾವಯವ ಬೆಲ್ಲಕ್ಕೆ ಮಾರುಕಟ್ಟೆ ಸಮಸ್ಯೆ ಉಂಟಾದರೂ ಅಂಜದ ಗಂಗಾಧರ ಮಾರುಕಟ್ಟೆ ಸಿಗದಿದ್ದಾಗ ಸಾಮಾನ್ಯ ಮಾರುಕಟ್ಟೆಯಲ್ಲೇ ಅಗ್ಗದ ದರಕ್ಕೆ ಸಾವಯವ ಬೆಲ್ಲ ಮಾರಿದ್ದಾರೆ. ಜಿಲ್ಲೆಯಲ್ಲಿ ಸಾವಯವ ಕಬ್ಬು ಬೆಳೆಗಾರರ ಸಂಖ್ಯೆ ಹೆಚ್ಚುತ್ತ ಸಾಗಿದ್ದು ದಶಕದಿಂದ ಮತ್ತೆ ಸ್ಫೂರ್ತಿಗೊಂಡು ಸುಮಾರು 2500 ರೈತರು ಸುಮಾರು 5000 ಹೆಕ್ಟೇರ್‌ ಪ್ರದೇಶದಲ್ಲಿ ಸಾವಯವ ಕಬ್ಬು ಬೆಳೆಯುತ್ತಿದ್ದಾರೆ. ಮತ್ತೂಂದೆಡೆ ಜಿಲ್ಲೆಯ ಇಂಡಿ, ಸಿಂದಗಿ, ಮುದ್ದೇಬಿಹಾಳ ತಾಲೂಕಗಳಲ್ಲಿ ಸಾವಯವ ಬೆಲ್ಲ ಉತ್ಪಾದನೆಗೆ ಮುಂದಾಗಿರುವ 5 ಆಲೆಮನೆಗಳು ದೇಶದ ವಿವಿಧ ರಾಜ್ಯ ಗಳಿಗೆ ಸಾಯವ ಬೆಲ್ಲದ ಮಾರುಕಟ್ಟೆ
ಕಂಡು ಕೊಂಡಿವೆ.

Advertisement

ಆಹೇರಿ ಗಂಗಾಧರ ಚಿಂಚೋಳಿ ಅವರೊಂದಿಗೆ ಇದೀಗ ಇಂಡಿ ಭಾಗದಲ್ಲಿ ಬರಗುಡಿಯ ಮಲಕನಗೌಡ ಬಿರಾದಾರ, ಗಣಿಹಾರದ ಶಿವಪ್ಪ ನೇಗಿನಾಳ, ಸುಭಾಷ್‌, ಆಲಮೇಲದ ನಾರಾಯಣಕರ ಇವರು ಸಾಯವ ಕಬ್ಬಿನ ಸಾವಯವ ಬೆಲ್ಲ ತಯಾರಿಕೆ ಮಾಡುತ್ತಿದ್ದಾರೆ. ಇದೀಗ ಮುದ್ಧೇಬಿಹಾಳದ ಬಲದಿನ್ನಿ ಜಿ.ಎಸ್‌.ನಾಡಗೌಡ
ಅವರು ತಮ್ಮೂರಲ್ಲಿ ಸಾವಯವ ಕಬ್ಬಿನ ಬೆಲ್ಲದ ಉತ್ಪಾದನೆಗೆ ಆಲೆಮನೆ ತಯಾರಿಸಿದ್ದು, ಉತ್ಪಾದನೆಗೆ ಸಿದ್ಧವಾಗುತ್ತಿದೆ.

ಜಿಲ್ಲೆಯ ಸಾವಯವ ಆಲೆಮನೆಯಲ್ಲಿ ಉತ್ಪಾದನೆ ಆಗುತ್ತಿರುವ ಸುಮಾರು 100 ಟನ್‌ ಸಾವಯವ ಬೆಲ್ಲದ ಪುಡಿಗೆ ರಾಜ್ಯದ ರಾಜಧಾನಿಯಲ್ಲಿ ಭಾರಿ ಬೇಡಿಕೆ ಇದ್ದು, 50 ಟನ್‌ ಬೆಲ್ಲದ ಪುಡಿ ಮಾರಾಟ ವಾಗುತ್ತಿದೆ. ನೆರೆ ರಾಜ್ಯಗಳ ರಾಜಧಾನಿಗಳಾದ ಮುಂಬೈ, ಹೈದರಾಬಾದ್‌ ಮಹಾನಗರಗಳಲ್ಲೂ ತಲಾ 20 ಟನ್‌ ಸಾವಯವ ಬೆಲ್ಲದ ಮಾರುಕಟ್ಟೆ ಇದ್ದು, ಜಿಲ್ಲೆಯ ವಿಷಮುಕ್ತ ಬೆಲ್ಲದ ಸವಿ ದೇಶದಾದ್ಯಂತ ಹರಡಲಾರಂಭಿಸಿದೆ. ಪ್ರತಿ ಕೆಜಿ ಬೆಲ್ಲಕ್ಕೆ ಸ್ಥಳೀಯ ಮಾರುಕಟ್ಟೆಯಲ್ಲಿ 35-45 ರೂ. ಬೆಲೆ ಇದ್ದರೆ, ಹೊರ ರಾಜ್ಯದಲ್ಲಿ 60-65 ರೂ. ಬೆಲೆ ಇದೆ. ಆದರೆ ಜಿಲ್ಲೆಯಲ್ಲಿ ಉತ್ಪಾದಿಸುವ ಸಾವಯವ ಬೆಲ್ಲಕ್ಕೆ ನಿ ರ್ದಿಷ್ಟ ಬ್ರಾಂಡಿಂಗ್‌ ಇಲ್ಲದ ಕಾರಣ ಅಗ್ಗದ ದರಕ್ಕೆ ಮಾರಾಟವಾಗುತ್ತಿದೆ. ನಿ ರ್ದಿಷ್ಟ ಬ್ರಾಂಡ್‌ ದೊರೆತಲ್ಲಿ ಜಿಲ್ಲೆಯ ಉತ್ಕೃಷ್ಟ ಗುಣಮಟ್ಟದ ಬೆಲ್ಲಕ್ಕೆ ವಿದೇಶಿ ಮಾರುಕಟ್ಟೆಯೂ ದೊರೆಯುವ ಸಾಧ್ಯತೆ ಇದೆ.

ಇನ್ನು ಸಾವಯವ ಕಬ್ಬು ಮಾತ್ರವಲ್ಲದೇ ರಸಾಯನಿಕ ಪದ್ಧತಿಯಲ್ಲಿ ಬೆಳೆದ ಕಬ್ಬಿನಿಂದ ರಸಾಯನಿಕ-ವಿಷಮುಕ್ತ ಬೆಲ್ಲ ತಯಾರಿಕೆಗೆ ಜಿಲ್ಲೆಯ ಯುವಕರ ತಂಡವೊಂದು ಈಗಷ್ಟೇ ಉತ್ಪಾದನೆ ಆರಂಭಿಸಿದೆ. ಕೊಲ್ಹಾರ ತಾಲೂಕಿನ ಮಲಘಾಣ ಗ್ರಾಮದಲ್ಲಿ ನಿಂಗನೂರು ಕುಟುಂಬದ ಚಂದ್ರಶೇಖರ, ರಮೇಶ ಹಾಗೂ ಸುರೇಶ ಸಹೋದರರು ಸುಮಾರು 1 ಕೋಟಿ ರೂ. ವೆಚ್ಚದಲ್ಲಿ ರಸಾಯನಿಕ ಮುಕ್ತವಾದ ಬೆಲ್ಲ ತಯಾರಿಸುವ ಆಲೆಮನೆ ಆರಂಭಿಸಿದ್ದಾರೆ.

ಲಾಕ್‌ಡೌನ್‌ ಸಂದರ್ಭದಲ್ಲಿ ಉದ್ಯೋಗದ ಸಂಕಷ್ಟ ಎದುರಾಗಿ ಊರು ಸೇರಿದ್ದ ಚಂದ್ರಶೇಖರ ಇವರ ಮಾರ್ಗದರ್ಶನದಲ್ಲಿ ಹಲವೆಡೆ ಆಲಮನೆ, ಬೆಲ್ಲದ
ಮಾರುಕಟ್ಟೆ ಅಧ್ಯಯನ ನಡೆಸಿದ್ದಾರೆ. ಬಳಿಕ ತಮ್ಮೂರಲ್ಲೇ ಸುಮಾರು 80 ಸಾವಿರ ಟನ್‌ ಕಬ್ಬು ಬೆಳೆಯುವ ಪ್ರದೇಶ ಇದ್ದುದರಿಂದ ತಿಂಗಳ ಹಿಂದೆ ಆಲೆಮನೆ ಆರಂಭಿಸಿದ್ದಾರೆ. ಕೇವಲ 25 ದಿನಗಳಲ್ಲಿ ಇವರು ಉತ್ಪಾದಿಸಿದ 25 ಟನ್‌ ಬೆಲ್ಲದಲ್ಲಿ 20 ಟನ್‌ ಬೆಲ್ಲ ವಿಜಯಪುರ, ಬಳ್ಳಾರಿ, ಬಾಗಲಕೋಟೆ ಜಿಲ್ಲೆಗಳಲ್ಲಿ ಬಿಕರಿ ಆಗಿದ್ದು, ಮಾರುಕಟ್ಟೆ ಪ್ರವೇಶ ಶುಭಾರಂಭವಾಗಿದೆ.

ಈ ಆಲಮನೆಯಲ್ಲಿ ಜಿಲ್ಲೆಯಲ್ಲೇ ಮೊದಲ ಬಾರಿಗೆ ವರ್ಷದ 10 ತಿಂಗಳು ಕಬ್ಬು ನುರಿಸುವ ಸಾಮರ್ಥ್ಯದ ತಂತ್ರಜ್ಞಾನದ ಡ್ರೈಯರ್‌ ಘಟಕ ಸ್ಥಾಪಿಸಿದ್ದಾರೆ.
ಜಿಲ್ಲೆಯಲ್ಲೇ ಸಾಹಸದ ಪ್ರಯೋಗಕ್ಕೆ ಮುಂದಾಗಿರುವ ಯುವಕರ ತಂಡ ಮುಂದಿನ ವರ್ಷದಿಂದ ಜಿಲ್ಲೆಯ ವಿಷಮುಕ್ತ ಬೆಲ್ಲಕ್ಕೆ ವಿದೇಶಿ ಮಾರುಕಟ್ಟೆ ಕಲ್ಪಿಸುವ
ಗುರಿ ಹೊಂದಿದೆ. ಒಂದೊಮ್ಮೆ ಜಿಲ್ಲೆಯಲ್ಲಿ ಸಾಯವ ಕೃಷಿ ವಿಶ್ವವಿದ್ಯಾಲಯ ಆರಂಭಗೊಂಡಲ್ಲಿ ಜಿಲ್ಲೆಯಲ್ಲಿ ಬೆಳೆಯುವ ಬಹುತೇಕ ಎಲ್ಲ ಕಬ್ಬು ಪ್ರದೇಶ ಸಾಯವಕ್ಕೆ
ಪರಿವರ್ತನೆಗೊಳ್ಳಲು ಅವಕಾಶವಿದೆ. ಅಲ್ಲದೇ ದೇಶ-ವಿದೇಶಕ್ಕೆ ವಿಷಮುಕ್ತ ಕಬ್ಬು, ಬೆಲ್ಲ, ಸಕ್ಕರೆ ಉತ್ಪಾದಿಸಿ ಆರೋಗ್ಯಯುಕ್ತ ಬೆಲ್ಲದ ಸವಿ ಹಂಚಲು ನೆರವಾಗಲಿದೆ ಎಂಬುದು ರೈತರ ಆಶಯ.

ಸುಭಾಷ್‌ ಪಾಳೇಕರ ಪ್ರಭಾವದಿಂದ ಎರಡು ದಶಕದಿಂದ ಸಾವಯವ ಕೃಷಿಯಲ್ಲಿ ತೊಡಗಿರುವ ನಾನು 2005ರಲ್ಲಿ ಸಾವಯವ ಕಬ್ಬು ಬೆಳೆದು, ಬೆಲ್ಲ ಉತ್ಪಾದಿಸುತ್ತಿದ್ದೇನೆ. ಸರ್ಕಾರ ಹಾಗೂ ವಿಶ್ವವಿದ್ಯಾಲಯಗಳ ಸಹಕಾರ ಸಿಗದೇ, ಮಾರುಕಟ್ಟೆಯೂ ಸಿಗದೇ ಇನ್ನಿಲ್ಲದ ಸಂಕಷ್ಟ ಎದುರಿಸಿದ್ದೇನೆ. ಹಲವು ವರ್ಷ
ಆಲೆಮನೆಯಲ್ಲಿ ಮುಳ್ಳುಕಂಟಿ ಬೆಳೆದದ್ದೂ ಇದೆ. ಸರ್ಕಾರ ಜಿಲ್ಲೆಯಲ್ಲಿ ಸಾವಯವ ಕೃಷಿ ವಿಶ್ವವಿದ್ಯಾಲಯ ಸ್ಥಾಪಿಸಿದಲ್ಲಿ ವಿಜಯಪುರ ಜಿಲ್ಲೆ ಎಲ್ಲ ಆಹಾರ ಪದಾರ್ಥಗಳೂ ವಿಷಮುಕ್ತವಾಗಿ ಬೆಳೆಯಲ್ಪಡುತ್ತವೆ.

ಗಂಗಾಧರ ಚಿಂಚೋಳಿ ಜಿಲ್ಲೆಯ ಸಾವಯವ ಪ್ರಥಮ ಆಲೆಮನೆ ಸ್ಥಾಪಕ
ಆಹೇರಿ (ಮಲಘಾಣ) ತಾ| ಸಿಂದಗಿ

ರಸಗೊಬ್ಬರ ಬಳಸಿ ಕಬ್ಬು ಉತ್ಪಾದಿಸಿದರೂ ನಮ್ಮ ಆಲೆಮನೆಯಲ್ಲಿ ರಸಾಯನಿಕ ರಹಿತ ಬೆಲ್ಲ ಉತ್ಪಾದಿಸುವ ಬೆಲ್ಲ ತಯಾರಿಸಲಾಗುತ್ತದೆ. ಮುಂದಿನ ವರ್ಷದಿಂದ ಸಂಪೂರ್ಣ ವಿಷಮುಕ್ತ ಸಾವಯವ ಕಬ್ಬಿನಿಂದ ಬೆಲ್ಲ ತಯಾರಿಸಿ, ವಿದೇಶಕ್ಕೆ ರಫ್ತು ಮಾಡುವ ಗುರಿ ಹೊಂದಿದ್ದೇವೆ.
ಚಂದ್ರಶೇಖರ, ರಮೇಶ, ಸುರೇಶ, ನಿಂಗನೂರು
ಸಹೋದರರು ವಿಷಮುಕ್ತ ಬೆಲ್ಲ ತಯಾರಕರು ಮಲಘಾಣ

*ಜಿ.ಎಸ್‌. ಕಮತರ

Advertisement

Udayavani is now on Telegram. Click here to join our channel and stay updated with the latest news.

Next