Advertisement
ಮಂಗಳೂರಲ್ಲಿ ಪ್ಲಾಸ್ಟಿಕ್ ನಿಷೇಧ ಮಾಡಿದಾಗ ಮೊದಲು ಕಂಗಾಲಾಗಿದ್ದು ಈ ಅಶ್ವತ್ಥ್ ಹೆಗ್ಡೆಬ್ಯಾಚುಲರ್ ಆಗಿದ್ದರಿಂದ ಊಟ, ತಿಂಡಿ ಇತ್ಯಾದಿ ಇತ್ಯಾದಿಗೆಲ್ಲಾ ಪ್ಲಾಸ್ಟಿಕ್ ಇಲ್ಲದೇ ಹೇಗೆ? ಕೈಗೆ ಚೀಲ ಬಂತು, ಪೇಪರ್ ಬ್ಯಾಗು ಕಂಡಿತು. ಆದರೆ ಸಮಸ್ಯೆ ಏನೂ ಕಡಿಮೆಯಾಗಲಿಲ್ಲ. ಪ್ಲಾಸ್ಟಿಕ್ ಮೇಲಿನ ಅವಲಂಬನೆ ಹಾಗೇನೇ ಇತ್ತು.
Related Articles
Advertisement
ತ್ಯಾಜ್ಯಗಳಿಂದಲೇ ವಸ್ತುಗಳನ್ನು ಏಕೆ ತಯಾರು ಮಾಡಬಾರದು? ಸರಿ, ಮರಗೆಣಸು, ಬಾಳೆ ಹಣ್ಣುಗಳು, ಸೇಬು, ಕಿತ್ತಳೆ ಹಣ್ಣಿನ ಸಿಪ್ಪೆಗೆಲ್ಲಾ ಬೆಲೆ ಬಂದದ್ದು ಆಗಲೇ. ದಿನನಿತ್ಯ ಬಳಸುವ ತ್ಯಾಜ್ಯಗಳೇ ಬ್ಯಾಗುಗಳು ಆದಾಗ ಸಂತೋಷವಾಯಿತು. ಜೊತೆಗೆ ಹೆಗ್ಡೆ ಆಸೆಗೆ ತಣ್ಣೀರು ಬಿತ್ತು. ಅದೇನೆಂದರೆ ಉತ್ಪನ್ನದ ಬೆಲೆ. ಸಾಮಾನ್ಯ ಪ್ಲಾಸ್ಟಿಕ್ ಬ್ಯಾಗಿಂತಲೂ ನೂರು- ಇನ್ನೂರು ಪಟ್ಟು ಉತ್ಪಾದನ ವೆಚ್ಚ ಹೆಚ್ಚಾಯಿತು.
ಆದರೇನಂತೆ- ಮತ್ತೆ ಮತ್ತೆ ಆರ್‌ಎನ್‌ಡಿ ವಿಭಾಗದ ವಿಜ್ಞಾನಿಗಳು ಹುಡುಕಾಟ ನಡೆಸಿದರು. ಆಗ ತ್ಯಾಜ್ಯದ ಬ್ಯಾಗುಗಳ ಬೆಲೆ ಸಾಮಾನ್ಯ ಪ್ಲಾಸ್ಟಿಕ್ ಬ್ಯಾಗಿಗಿಂತ ಶೇ. 20-30ರಷ್ಟು ಹೆಚ್ಚಿಗೆ ಮಾತ್ರ ಆಯ್ತು.
ಇಡೀ ದೇಶಕ್ಕೆ ಇದನ್ನು ತಿಳಿಹೇಳಲು ನಿಂತರು ಅಶ್ವತ್ಥ್. ನಿಜವಾಗಿ ಕೇಳಿಸಿಕೊಂಡದ್ದು ದುಬೈ, ಖತಾರ್ ದೇಶಗಳಲ್ಲಿ. “ಅರೆ, ನೀವು ಏನೇನು ಮಾಡ್ತೀರ ಸ್ವಲ್ಪ ಹೇಳಿ’ ಅಂತ ಕೇಳಿಕೊಂಡು ಖತಾರ್‌ನಲ್ಲಿ ಮೂರು ದಿನಗಳ ಗೋ ಗ್ರೀನ್ ಅಭಿಯಾನ ಶುಮಾಡಿದರು. ಜಗತ್ತೇ ಇವರ ಕಡೆ ನೋಡಲು ಶುರುಮಾಡಿದ್ದು ಆಗಲೇ. ಆಮೇಲೆ ನಮ್ಮ ಮೆಟ್ರೋ, ರಿಲಯನ್ಸ್ ಕಂಪೆನಿಗಳು ಇವರ ಬ್ಯಾಗ್‌ಗಳನ್ನು ಬಳಸಲು ಶುರುಮಾಡಿತು.
ಇವರ ಬ್ಯಾಗು, ಕೈಚೀಲಗಳು ಬಿಸಿ ನೀರಿಗೆ ಹಾಕಿದರೆ ಸುಲಭವಾಗಿ ಕರಗುತ್ತದೆ. ಮಣ್ಣಲ್ಲಿ ಮಣ್ಣಾಗಿ ಹೋದರೂ ಯಾವುದೇ ಅಪಾಯವಿಲ್ಲ. ಒಂದು ಪಕ್ಷ ತಿಂದು ಬಿಟ್ಟರೂ ಇದರಿಂದ ಯಾವುದೇ ತೊಂದರೆ ಇಲ್ಲ. ಏಕೆಂದರೆ ಇದರಲ್ಲಿ ಟಾಕ್ಸಿಕ್‌ನಂತ ವಿಷಕಾರಿ ಅಂಶ ಇಲ್ಲವೇ ಇಲ್ಲ. ಉತ್ಪನ್ನಗಳು ಮಾಡಿರುವುದು ತರಕಾರಿ, ಹಣ್ಣಿನ ತ್ಯಾಜ್ಯದಿಂದ. ಅರ್ಥಾತ್ ಸಾವಯವ ಬ್ಯಾಗು.
ನಮ್ಮಲ್ಲಿ ಹೆಚ್ಚಾ ಕಡಿಮೆ ದಿನಕ್ಕೆ 15ಸಾವಿರ ಟನ್‌ನಷ್ಟು ಪ್ಲಾಸ್ಟಿಕ್ ತ್ಯಾಜ್ಯ ಉತ್ಪಾದನೆಯಾಗುತ್ತಿದೆ. ಇದರಲ್ಲಿ 10ಸಾವಿರ ಟನ್ ಭೂಮಿಗೆ ಸೇರುತ್ತಿದೆ. ಹೀಗಾಗಿ ಭೂಮಿಗೆ ಟಾಕ್ಸಿಕ್ ಇಳಿದು ಇಡೀ ವಾತಾವರಣವನ್ನೇ ಹಾಳುಗೆಡುವುತ್ತಿರುವ ಹೊತ್ತಲ್ಲಿ ಹೆಗ್ಡೆ ಅವರ ಈ ಪ್ರಯತ್ನ ಹೊಸ ಆಶಾವಾದಕ್ಕೆ ಕಾರಣವಾಗಿದೆ. ಇದಕ್ಕಾಗಿ ಗ್ರೀನ್ ಕಾರ್ಪೋರೇಷನ್ ಸಂಸ್ಥೆ ಕಟ್ಟಿದ್ದಾರೆ. ಅದರಲ್ಲಿ ಎನ್ವಿ ಗ್ರೀನ್ ಅನ್ನೋ ಹೆಸರಲ್ಲಿ ಬ್ಯಾಗುಗಳು ತಯಾರು ಮಾಡುತ್ತಿದ್ದಾರೆ. ನಮ್ಮ ವಾಯುಮಾಲಿನ್ಯ ನಿಯಂತ್ರಣ ಮಂಡಳಿ ಭೇಷ್, ಭೇಷ್ ಅಂತ ಅನುಮೋದಿಸಿದೆ.
“ಬಿಡದಿಯಲ್ಲಿ ನಮ್ಮ ಘಟಕವಿದೆ. ಅಲ್ಲಿ ಈಗಾಗಲೇ ಉತ್ಪನ್ನಗಳನ್ನು ಮಾಡುತ್ತಿದ್ದೇವೆ. ಪರಿಸರ ಸ್ನೇಹಿ ಕೆಲಸಗಳನ್ನು ಮಾಡುವ ಮೂಲಕ ಸ್ವತ್ಛ ಭಾರತ ನಿರ್ಮಾಣ ಮಾಡಬೇಕು ಅನ್ನೋದು ಗುರಿ. ಅದರ ಮೊದಲು ಮೆಟ್ಟಿಲು ಇದು’ ಅಂತಾರೆ ಅಶ್ವತ್ಥ್. ಅಂದಹಾಗೇ, ಕಸದಿಂದ ರಸಮಾಡುವ ಅಶ್ವತ್ಥ್ ಹೆಗ್ಡೆಯ ಸಾವಯವ ಕೆಲಸಕ್ಕೆ ಈ ಬಾರಿ ಅಮೆರಿಕದ ಪ್ರತಿಷ್ಠಿತ ಫೋಬ್ಸ್ì ಪ್ರಶಸ್ತಿ ಲಭಿಸಿದೆ. ಅಂಡರ್ 30 ಸಾಧಕರಲ್ಲಿ ಅಶ್ವತ್ಥ್ ಹೆಗ್ಡೆ ಮುಂಚೂಣಿಯಲ್ಲಿದ್ದಾರೆ.
ಕಟ್ಟೆ ಗುರುರಾಜ್