Advertisement

ಪದವೀಧರನ ಸೆಳೆದ ಸಾವಯವ ಮಣ್ಣಿನ ಕಂಪು

01:12 PM Aug 14, 2021 | Team Udayavani |

ವರದಿ: ಅಮರೇಗೌಡ ಗೋನವಾರ

Advertisement

ಹುಬ್ಬಳ್ಳಿ: ಅನೇಕ ರೈತರು ಕೃಷಿಯಿಂದ ವಿಮುಖರಾಗುವ ಇಂದಿನ ದಿನಗಳಲ್ಲಿ ರೈತನಲ್ಲದಿದ್ದರೂ ಒಕ್ಕಲುತನದ “ಹುಚ್ಚು’ ಹಚ್ಚಿಕೊಂಡ ವ್ಯಕ್ತಿಯೊಬ್ಬರು ಜನರಿಗೆ ವಿಷಮುಕ್ತ ತರಕಾರಿ, ಪಲ್ಯ ನೀಡಬೇಕೆಂಬ ಉದ್ದೇಶ ಸಾಕಾರಕ್ಕೆ ಮುಂದಾಗಿದ್ದಾರೆ. ಎರಡುವರೆ ಎಕರೆ ಜಮೀನು ಗುತ್ತಿಗೆ ಪಡೆದು ಸಾವಯವ ಪದ್ಧತಿಯಲ್ಲಿ ತರಕಾರಿ-ಪಲ್ಯ ಬೆಳೆದು ಯಶಸ್ಸಿನ ಹೆಜ್ಜೆ ಇರಿಸಿದ್ದಾರೆ.

ದೇಸಿ ಹಸು ಸಾಕುವ ಚಿಂತನೆಯನ್ನೂ ಹೊಂದಿದ್ದಾರೆ. ನಾಗರಾಜ ಸವದತ್ತಿ ಎನ್ನುವವರು ಇಲ್ಲಿನ ಬುಡರಸಿಂಗಿಯಲ್ಲಿ ಸುಮಾರು ಎರಡುವರೆ ಎಕರೆ ಜಮೀನು ಗುತ್ತಿಗೆ ಪಡೆದು ವಿಷಮುಕ್ತ ಕೃಷಿಗೆ ಮುಂದಾಗಿದ್ದಾರೆ. ರಸಗೊಬ್ಬರ, ಕ್ರಿಮಿನಾಶಕ ಬಳಕೆ ಮಾಡದಿದ್ದರೆ ಇಲ್ಲಿ ಬೆಳೆ ಎಲ್ಲಿಂದ ಬರಬೇಕು, ಈ ಮನುಷ್ಯನಿಗೆ ಹುಚ್ಚು ಹಿಡಿದಿದೆ ಎಂದರೂ, ಸುಮ್ಮನೆ ಯಾಕೆ ಹಣ ನಷ್ಟ ಮಾಡಿಕೊಳ್ಳುತ್ತೀಯ ಎಲ್ಲರಂತೆ ಕೃಷಿ ಮಾಡು ಎಂಬ ಸಲಹೆ, ಅನಿಸಿಕೆಗಳು ಬಂದರೂ, ಮತ್ತೂಂದು ಯೋಚನೆ ಮಾಡದೆ ಮನದೊಳಗಿನ ಚಿಂತನೆಯಂತೆ ವಿಷಮುಕ್ತ ಕೃಷಿಯಲ್ಲಿ ಕಳೆದೆರಡು ವರ್ಷಗಳಿಂದ ತೊಡಗಿದ್ದಾರೆ. ನಾಗರಾಜ ಸವದತ್ತಿ ರೈತರಲ್ಲ, ಬಿಎ ಪದವೀಧರರು. ವಿಆರ್‌ಎಲ್‌ ಸಂಸ್ಥೆಯಲ್ಲಿ ಸುಮಾರು 10 ವರ್ಷಗಳ ವರೆಗೆ ಕೆಲಸ ಮಾಡಿದ್ದು, ದೇಸಿ ಹಸು ಸಾಕಣೆ ಚಿಂತನೆಯಲ್ಲಿದ್ದರಾದರೂ, ನಂತರ ವಾಲಿದ್ದು ಕೃಷಿ ಕಡೆಗೆ.

ಕನೇರಿ ಮಠದ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಅವರ ಕೃಷಿ ಕುರಿತಾಗಿನ ಪ್ರೇರಣಾತ್ಮಕ ಮಾತುಗಳು, ಸುಭಾಸ ಪಾಳೇಕಾರ ಚಿಂತನೆ, ಮಂಡ್ಯದ ಕುಮಾರಸ್ವಾಮಿ ಅವರ ಅನಿಸಿಕೆಗಳಿಂದ ಪ್ರೇರಿತರಾಗಿರುವ ನಾಗರಾಜ ಸವದತ್ತಿ ಮಾಡಿದರೆ ಸಾವಯವ ಕೃಷಿಯನ್ನೇ ಮಾಡಬೇಕೆಂದು ನಿರ್ಧರಿಸಿದ್ದರು. 2019ರಲ್ಲಿ ಬುಡರಸಿಂಗಿಯಲ್ಲಿ ಎರಡುವರೆ ಎಕರೆ ಜಮೀನು ಗುತ್ತಿಗೆ ಪಡೆದು ಸಾವಯವ ಕೃಷಿ ಪ್ರಯೋಗಕ್ಕೆ ಮುಂದಾಗಿದ್ದರು.

ಹೊಲದಲ್ಲಿ ಬೆಳೆ ವೈವಿಧ್ಯ: ಹೊಲ ಗುತ್ತಿಗೆ ಪಡೆದ ಮೊದಲ ವರ್ಷ ಹತ್ತಿ ಹಾಗೂ ಸೋಯಾಬಿನ್‌ ಬಿತ್ತನೆ ಮಾಡಿದ್ದರು. 2020ರಿಂದ ತರಕಾರಿ-ಪಲ್ಯ ಬೆಳೆಯತ್ತ ವಾಲಿದ್ದಾರೆ. ತರಕಾರಿ ಬೆಳೆಗಳಿಗೆ ಪೂರಕವಾಗಿ ಹೊಲದಲ್ಲಿ 30 ಅಡಿ ಅಗಲ, 240 ಅಡಿ ಉದ್ದದ ಮಡಿಗಳನ್ನು ಮಾಡಿದ್ದು, ಹನಿ ನೀರಾವರಿ, ತುಂತುರು ನೀರಾವರಿ ಅಳವಡಿಕೆ ಮಾಡಿದ್ದಾರೆ. ಸದ್ಯಕ್ಕೆ 15 ಮಡಿಗಳನ್ನು ಮಾಡಲಾಗಿದೆ. ಪ್ರತಿ ಮಡಿಯಲ್ಲಿ ಒಂದು ಸಾಲು ಮುಖ್ಯ ಬೆಳೆಯಾಗಿ ಮೆಣಸಿನಕಾಯಿ, ಬದನೆಕಾಯಿ, ಟೊಮೆಟೊ, ಬೀನ್ಸ್‌, ಚವಳಿಕಾಯಿ, ಬೆಂಡೆಕಾಯಿ ಬೆಳೆಯಲಾಗುತ್ತಿದೆ. ಅದೇ ಸಾಲಿನಲ್ಲಿ ಪ್ರತಿ ಮೂರು ಅಡಿ ಅಂತರದಲ್ಲಿ ಅಡ್ಡಲಾಗಿ ಕೊತ್ತಂಬರಿ, ಮೆಂತ್ಯೆ ಇನ್ನಿತರ ಪಲ್ಯಗಳನ್ನು ಹಾಕಲಾಗುತ್ತಿದೆ. ಜತೆಗೆ ದ್ವಿದಳ ಧಾನ್ಯಗಳನ್ನು ಹಾಕಲಾಗುತ್ತಿದೆ. ಪಾಲಕ್‌, ರಾಜಗಿರಿ ಸೇರಿದಂತೆ ಒಟ್ಟು ಆರು ತರಹದ ಪಲ್ಯಗಳನ್ನು ಬೆಳೆಯಲಾಗುತ್ತಿದೆ. ಜತೆಗೆ ಬೆಳ್ಳೊಳ್ಳಿ, ಗಜ್ಜರಿ, ಬೀಟ್‌ರೂಟ್‌, ಮೂಲಂಗಿಯಂತಹ ಗಡ್ಡೆ ತರಕಾರಿ ಬೆಳೆಯಲಾಗುತ್ತದೆ. ಹಾಗಲಕಾಯಿ, ಸವತೆಕಾಯಿ, ಹೀರೆಕಾಯಿ, ತುಪ್ಪದ ಹೀರೆಕಾಯಿ, ಪಡವಲಕಾಯಿಯಂತಹ ಬಳ್ಳಿ ವರ್ಗದ ತರಕಾರಿಗಳನ್ನು ಬೆಳೆಯಲು ಬೇಕಾದ ವ್ಯವಸ್ಥೆ ಮಾಡಲಾಗಿದೆ. ಸದ್ಯಕ್ಕೆ 15-20 ಗುಂಟೆ ಜಮೀನಿನಲ್ಲಿ ತರಕಾರಿ-ಪಲ್ಯ ಕೃಷಿ ಮಾಡಲಾಗಿದ್ದು, ಇನ್ನುಳಿದ ಹೊಲದಲ್ಲಿಯೂ ತರಕಾರಿ-ಪಲ್ಯ ಇನ್ನಿತರ ಬೆಳೆಗಳ ಬಿತ್ತನೆ ನಿಟ್ಟಿನಲ್ಲಿ ಹೊಲವನ್ನು ಸಿದ್ಧಪಡಿಸಲಾಗಿದೆ.

Advertisement

ಹೊಲದ ಸುತ್ತಲೂ ಕರಿಬೇವು, ಚೆಂಡು ಹೂ, ಹಸಿರುಎಲೆ ಗೊಬ್ಬರ ಗಿಡಗಳನ್ನು ಬೆಳೆಯಲು ನಿರ್ಧರಿಸಲಾಗಿದೆ. ಜತೆಗೆ ಪಪ್ಪಾಯ, ಬಾಳೆ, ಪೇರುನಂತಹ ಹಣ್ಣಿನ ಗಿಡಗಳನ್ನು ನೆಡಲು ಯೋಜಿಸಲಾಗಿದ್ದು, ಮುಂದಿನ ದಿನಗಳಲ್ಲಿ ಜೇನು ಸಾಕಾಣಿಕೆಗೂ ತಯಾರಿ ನಡೆಸಲಾಗಿದೆ. 9ನೇ ತರಗತಿಯಲ್ಲಿದ್ದಾಗಲೇ ತಂದೆಯನ್ನು ಕಳೆದು ಕೊಂಡ ನಾಗರಾಜ ಅವರು, ಕುಟುಂಬ ಅತ್ಯಂತ ಸಂಕಷ್ಟ ಸ್ಥಿತಿ ಎದುರಿಸಿದ್ದನ್ನು, ತಾಯಿ ಕಷ್ಟ ಪಟ್ಟು ಕುಟುಂಬ ನಿರ್ವಹಣೆ ಮಾಡಿದ್ದನ್ನು ನೆನಪಿಸಿಕೊಳ್ಳುತ್ತಾರೆ. ತಾವು ಸೇರಿದಂತೆ ಮೂವರು ಸಹೋದರರು, ತಾಯಿ ಹಾಗೂ ಸಹೋದರಿಯ ಪತಿ ಎಲ್ಲರೂ ಹೊಲದಲ್ಲಿ ದುಡಿಯುತ್ತೇವೆ. ಮುಂದಿನ ದಿನಗಳಲ್ಲಿ ಎರಡು ದೇಸಿ ಹಸು ಸಾಕಣೆ ಯೋಜನೆ ಹೊಂದಿದ್ದೇನೆ. ಜತೆಗೆ ಅಕ್ಕಪಕ್ಕದ ಹೊಲಗಳನ್ನು ಗುತ್ತಿಗೆ ನೀಡಲು ರೈತರು ಮುಂದಾದರೆ ಅದನ್ನು ಪಡೆದು ಅಲ್ಲಿಯೇ ವಿಷಮುಕ್ತ ಕೃಷಿಗೆ ಮುಂದಾಗುವೆ ಎಂಬುದು ನಾಗರಾಜ ಅನಿಸಿಕೆ.

Advertisement

Udayavani is now on Telegram. Click here to join our channel and stay updated with the latest news.

Next